Friday, 16 July 2021

ಹಮ್ ಹೋಂಗೆ ಕಾಮಯಾಬ್...



              ಈ ಬದುಕೂ ತುಂಬಾ ವಿಚಿತ್ರ. ಎಷ್ಟೋ ಸಲ ಕಾರಣವಿಲ್ಲದೇ ಎಲ್ಲವೂ ಮುಗಿದು ಹೋಯಿತೇನೋ ಎಂಬ ಭಾವ ಕಾಡುತ್ತದೆ. ಯಾವುದರಲ್ಲಿಯೂ ಆಸಕ್ತಿ ಉತ್ಸಾಹ ಉಳಿಯುವದಿಲ್ಲ. ಆಗ ಸಂಪೂರ್ಣ ಕುಗ್ಗಿಹೋಗುತ್ತೇವೆ. ಇದು ಎಂಥವರನ್ನೂ ಬಿಟ್ಟಿಲ್ಲ. ಅರ್ಜುನನನ್ನು ಕೂಡ...
               ಒಮ್ಮೊಮ್ಮೆ ನಾವು ಕಾರಣವಿಲ್ಲದೇ ಸೋತು ಕೈಯೆತ್ತಿ ಬಿಡುತ್ತೇವೆ. ಶರಣಾಗುತ್ತೇವೆ. ಶಸ್ರಾಸ್ತ್ರ ಚಲ್ಲಿಬಿಡುತ್ತೇವೆ. ಹೋರಾಟಕ್ಕೆ ವಿಮುಖರಾಗುತ್ತೇವೆ. ಏನೂ  ಮಾಡಲೂ ಉತ್ಸಾಹ ಬರುವದೇ ಇಲ್ಲ. ಕೆಲಸಗಳನ್ನು ತಪ್ಪಿಸಿಕೊಳ್ಳುವದು, ಕಾರಣವಿಲ್ಲದೇ ಮುಂದೂಡುವದು ಅನಿವಾರ್ಯ ಅಭ್ಯಾಸವಾಗಿಬಿಡುತ್ತದೆ.

          ಆದರೆ ನೆನಪಿರಲಿ. ಇದೇ ಕೊನೆಯಲ್ಲ. ಕಾರ್ಯಮಧ್ಯದ ಚಿಕ್ಕಚಿಕ್ಕ ವಿಶ್ರಾಂತಿಗಳು ಗುರಿಗಳನ್ನು ಹೆಚ್ಚು ಗಟ್ಟಿಗೊಳಿಸುತ್ತವೆ.  ಮುಂದಿನ ಹಾದಿಯನ್ನು ಸುಗಮಗೊಳಿಸುತ್ತವೆ. ಹೆಚ್ಚು ಉತ್ಸಾಹ ತುಂಬಿಸಿ ಹೋರಾಟಕ್ಕೆ ಸನ್ನದ್ಧಗೊಳಿಸುತ್ತವೆ. ಕಾರಣ ಯಾವುದಾದರೂ ಕಾರಣಕ್ಕೆ ಜೀವನದಲ್ಲಿ 'ಖಾಲಿತನ ಕಾಡಿದರೆ ಖೇದಗೊಳ್ಳಬೇಕಿಲ್ಲ, ಹತಾಶರಾಗಬೇಕಿಲ್ಲ. ಖಾಲಿತನಕ್ಕೂ ತನ್ನದೇ ಆದ ತೂಕವಿದೆ...ಅದು ಅರ್ಥಪೂರ್ಣವೂ ಆಗಿದೆ...

      ಅಂತೆಯೇ ಬದುಕಿಗೊಂದು ಬಿನ್ನಹವಿರಲಿ...ಅದು ತನ್ನ ಕಷ್ಟ ನಷ್ಟ, ಅವಶ್ಯಕತೆಗಳನ್ನು ತಾನೇ ಸರಿದೂಗಿಸುತ್ತ ನಿರಂತರ ಚಲನೆಯಲ್ಲಿರಲಿ...ಅದು ಬತ್ತಲಾರದಂತೆ ಚಂದಗೊಳಿಸುತ್ತಲೇ ಇರೋಣ...ಖಾಲಿ ಅನಿಸಿದರೆ ತುಂಬೋಣ...

                ಇದರಲ್ಲಿ ಏನೂ ತಪ್ಪಿಲ್ಲ . ಹಿಮ್ಮೆಟ್ಟುವದು ಹೇಡಿತನವೇನೂ ಅಲ್ಲ.
ದಣಿವಿನ ಅರ್ಥ ಸಂಪೂರ್ಣ ಬಿಟ್ಟು ಕೊಡುವದಲ್ಲ...ಅದು ಮನಸ್ಸು ಕ್ಷಣಕಾಲ  ಅಸ್ಥಿರವಾಗಿದ್ದರ  ನಿಮಿತ್ತವಾಗಿರಲೂ ಬಹುದು. ಒಂದು ದೊಡ್ಡ ಜಿಗಿತಕ್ಕೆ ಮೊದಲಿಗೆ ಹಾಕುವ ಒಂದೆರಡು ಅವಶ್ಯಕ ಹೆಜ್ಜೆಗಳಿರಬಹುದು.

                ‌ಅಂತೆಯೇ ಬದುಕಿನ ಚಿಕ್ಕ ಪುಟ್ಟ ಅಡ್ಡಿಗಳು ನಮಗೆ ಮುಂದಿನ ಜಿಗಿತಕ್ಕೆ ' ಚಿಮ್ಮು ಹಲಿಗೆ'ಗಳಾಗಲಿ. 

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...