Thursday, 15 July 2021

ಒಂದು ಅಲ್ಬಮ್ ಕಥೆ...

 ಕಳೆದ ಮೇ ತಿಂಗಳಲ್ಲಿ ನನ್ನ ಎರಡನೇ ಮಗಳ ಮದುವೆಯ ಇಪ್ಪತ್ತೊಂದನೆಯ
ವಾರ್ಷಿಕೋತ್ಸವವಿತ್ತು. ಲಾಕ್ ಡೌನ್ ಇದ್ದ ಕಾರಣ ಹೊರಗೆ ಹೋಗುವ ಮಾತೇ ಇರಲಿಲ್ಲ. ಮನೆಯಲ್ಲಿಯೇ ಏನೋ ಕೆಲ ಕಾರ್ಯಕ್ರಮಗಳು plan ಆಗಿತ್ತು.ನಾನು ಅವರ ಮದುವೆಯ ಅಲ್ಬಮ್ ನೋಡಲೆಂದು  ಹೊರಗಿಟ್ಟಿದ್ದೆ. ಇಪ್ಪತ್ತು ವರ್ಷಗಳಲ್ಲಿ  ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡುವದು ನನ್ನ ಉದ್ದೇಶವಾಗಿತ್ತು. ಅದನ್ನು ಸಾಕಷ್ಟು ಮಜಾ ತೆಗೆದುಕೊಂಡು ನೆನಪುಗಳನ್ನು ಮರಳಿ ಮರಳಿ ಹಸಿರಾಗಿಸಿಕೊಂಡದ್ದಾಯಿತು. ಅಲ್ಬಮ್ ತುಂಬಾ ದೊಡ್ಡದಿದ್ದು ಒಂದೇ ಸಲ ನೋಡಲಾಗುವುದಿಲ್ಲ ಎಂಬ ಕಾರಣಕ್ಕೆ
ತೆಗೆದಿಟ್ಟಿರಲಿಲ್ಲ. ಇಂದು ಮತ್ತೊಮ್ಮೆ ಆರಾಮಾಗಿ ನೋಡಲು  ಕುಳಿತರೆ  ಆದದ್ದೇ ಬೇರೆ. ಆ ದಿನ ನಮ್ಮೆಲ್ಲರ ಗಮನ ಮದುಮಕ್ಕಳ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿಯೇ  ಸೀಮಿತ ವಾದ್ದರಿಂದಲೋ ಏನೋ ಬರಿ ಸಂತಸದ ಗಳಿಗೆಗಳನ್ನು ಕೇಂದ್ರೀಕರಿಸಿ ಫೋಟೋ ನೋಡಿರಬಹುದು ನಾವು.
ಇಂದು ತೆಗೆದರೆ ಢಾಳಾಗಿ ಈ ಇಪ್ಪತ್ತು ವರ್ಷಗಳಲ್ಲಿ ನಮ್ಮನ್ನು ಬಿಟ್ಟು ಹೋದವರು ಎದ್ದು ಕಾಣುತ್ತಿದ್ದರು.
ಬಡತನವಿದ್ದರೂ ಸ್ವಾಭಿಮಾನ ಧನನಾದ ಅಪ್ಪ /ಕೈಯಲ್ಲಿ ಏನೂ ನೀಗದಿದ್ದರೂ
 ' ಅವ್ವಾ' ಎಂದು ಕರೆದಾಗ ಹಾಜರಾಗುತ್ತಿದ್ದ ಅವ್ವ,/ ಅವ್ವನ ಚಿಕ್ಕ ಅನುಪಸ್ಥಿತಿಯಲ್ಲಿ ಅವಳ ಕೊರತೆ ಒಂದಿಷ್ಟೂ ಆಗದಂತೆ ನೋಡಿಕೊಂಡ ಚಿಕ್ಕಮ್ಮ/ ಚಿಕ್ಕಪ್ಪಂದಿರು,  ಆಪತ್ಕಾಲದಲ್ಲಿ ಸದಾ ಸಾಥ್ ನೀಡುತ್ತಿದ್ದ ಬಂಧುಗಳು ಎಲ್ಲ ಸೇರಿ ಸಂಖ್ಯೆ ಹತ್ತಿರ ಹತ್ತಿರ
ಇಪ್ಪತ್ತೈದು ಮೀರಿದಾಗ ಒಂದು ರೀತಿಯ
ಸಂಕಟ ಶುರುವಾಯಿತು. ಸಮಾರಂಭಗಳಲ್ಲಿ  ಅವರೆಲ್ಲರ ಸ್ವ ಪ್ರೇರಣೆಯಿಂದ ಭಾಗವಹಿಸುವಿಕೆ/ ಮುಂದಾಳತ್ವ/ ಅಮೂಲ್ಯವಾದ  ಸಲಹೆಗಳು/ ಹಿರಿತನ ಎಲ್ಲ ಕಣ್ಣುಮುಂದೆಯೇ ಸಧ್ಯ ನಡೆದ ಸಿನೆಮಾ ರೀತಿಯಲ್ಲಿ ತೆರೆದು ಕೊಂಡಿತು. ಮದುಮಕ್ಕಳ ಉಪಸ್ಥಿತಿ, ಸಂತಸ, ಹುರುಪು ಸಂಪೂರ್ಣವಾಗಿ ಗಮನ ಕಳೆದುಕೊಂಡು ಯಾವಾವುದೋ ಕಾರಣಗಳಿಗೆ ನಮ್ಮಿಂದ
ಶಾಶ್ವತವಾಗಿ ದೂರವಾಗಿ ಹೋದವರ
ಗುಂಗಿನಲ್ಲಿ ಮನಸ್ಸು ಖಿನ್ನವಾಗತೊಡಗಿತು. ಸುಮಾರು ವರ್ಷವೊಂದು ಮಿಕ್ಕಿ ಸಾವಿನ ಸುದ್ದಿಗಳನ್ನು ಕೇಳುತ್ತಲೇ ಕಳೆಯುತ್ತಿರುವ ಇಂದಿನ ದಿನಗಳಿಗೆ ಮನಸ್ಸು ಮರಳಿತು.
ಕುಟುಂಬ ಸದಸ್ಯರು/ಬಂಧುಗಳು/  ಸ್ನೇಹಿತರು/ ನೆರೆಹೊರೆಯವರು/ ಪರಿಚಯಸ್ಥರು/ ಸಹೋದ್ಯೋಗಿಗಳು/
ಯಾರೆಲ್ಲ ನಮ್ಮನ್ನು ಅಗಲಿದ್ದರೋ ಅವರೆಲ್ಲರ ನೆನಪುಗಳು/ ಒಡನಾಟ ಗಳು/ ಘಟನೆಗಳು/ ಮಾತುಗಳು 
ಮನಸ್ಸನ್ನು ಗಾಸಿಗೊಳಿಸಿ ಹಣ್ಣಾಗಿಸಿದವು. ಮದುವೆಗಳು ಸಾವಿರ ಬರುತ್ತವೆ, ಹೆಚ್ಚು ಹೆಚ್ಚು ಸಂಭ್ರಮದಿಂದ
ಆಚರಿಸಲ್ಪಡುತ್ತವೆ, ವಿಜ್ರಂಭಣೆಯೂ ಹತ್ತಾರು ಪಟ್ಟು ಹೆಚ್ಚೂ ಇರಬಹುದೇನೊ!!! ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ, ತಮ್ಮ ಹೊಣೆಗಾರಿಕೆಯನ್ನು ಹೊರಲೇಬೇಕಾದ 
ಅನಿವಾರ್ಯತೆಯಿಂದಾಗಿ ಕುಟುಂಬದ ಸದಸ್ಯರು ನಿರಾಳವಾಗಿ ಒಂದುಕಡೆ ಹೆಚ್ಚಾಗಿ ಸೇರಲು ಸಮಯದ ಅಭಾವವೂ ಒಂದು ಕಾರಣವಾಗಿದೆ. ಉಪಾಯವಿಲ್ಲದೇ ಸಮಾರಂಭಗಳು Event management ದವರ ಪಾಲಾಗಿ ಆಗಿನ ಮುಕ್ತ ವಾತಾವರಣ ಇಂದಿನ ದಿನಗಳಲ್ಲಿ ಒಂದು ಕನಸು. ಯಾವುದನ್ನೂ ಪ್ರತಿಪಾದಿಸುವದಾಗಲೀ/ ವಿರೋಧಿಸುವದಾಗಲೀ ನನ್ನ ಉದ್ದೇಶ ವಲ್ಲ. ಒಂದೊಂದು ಕಾಲಘಟ್ಟದ ದಿನಗಳು ಸರಿದಂತೆ ಆಗುವ ಬದಲಾವಣೆಗಳನ್ನು ನನ್ನ ನೋಟವಷ್ಟೇ..

  




No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...