Friday, 14 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ..

"ಕಿ(ಇ)ತನಾ ಬದಲ್ ಗಯಾ  ಇನ್ಸಾನ್"  ..     
             
               ಮೋಸ, ವಂಚನೆ ಮನುಷ್ಯನಷ್ಟೇ ಹಳೆಯದು......ಆದರೆ  ಅದರ ರೀತಿ ಕಾಲ ಕಾಲಕ್ಕೆ  ಬೇರೆಬೇರೆ...'ಮೈಯೆಲ್ಲಾ ಕಣ್ಣಾಗಿರು'- ಎಂಬ ನುಡಿಗಟ್ಟು ಬಂದದ್ದೇ ಇಂಥವರನ್ನು ನೋಡಿಯೇ..ಮೊದಲು ಇಷ್ಟೊಂದು ಪ್ರಕರಣಗಳು ಇರಲಿಲ್ಲ...ಎಲ್ಲೋ ಅಲ್ಲೋ ಇಲ್ಲೋ ಒಂದೊಂದು ಪ್ರಕರಣ ಕೇಳುತ್ತಿದ್ದೆವು....ಬಹುಶಃ ರೆಡಿಯೋ,ಟೀವಿ,ಹತ್ತಾರು ದಿನಪತ್ರಿಕೆಗಳಿಲ್ಲದ್ದೂ ಪ್ರಮುಖ ಕಾರಣವಿರಬಹುದು...ಅಂಥ ಪ್ರಕರಣಗಳು ಸ್ಥಾನಿಕ ಮಹತ್ವ ಪಡೆದು,ಒಂದೆರಡು ದಿನಗಳ  ವರೆಗೆ ಮಾತ್ರ ಅವರಿವರ ಬಾಯಿಗೆ  ಬಿದ್ದು ನೆನಪಿನಾಳಕ್ಕೆ ಸೇರಿ ಕ್ರಮೇಣ ಮರೆಯಾಗಿಬಿಡುತ್ತಿದ್ದವು..ಈಗ ಸುದ್ದಿ ಮಾಧ್ಯಮಗಳು,ವೃತ್ತ ಪತ್ರಿಕೆಗಳು,ಯಾವುದೇ ವಿಷಯವನ್ನು ಕ್ಷಣಮಾತ್ರದಲ್ಲಿ  ವಿಶ್ವದ ತುಂಬ ಏಕಕಾಲಕ್ಕೆ ಬಿತ್ತರಿಸಿ ಮಿಂಚಿನ ವೇಗದಲ್ಲಿ
ಜನಸಮೂಹಕ್ಕೆ ತಿಳಿಸುತ್ತವೆ...
           ‌ಈಗ ಇಪ್ಪತೈದು ವರ್ಷಗಳ ಹಿಂದೆ "ಸಂಚಯನಿ" ಎಂಬ ಹಣಕಾಸು ಸಂಸ್ಥೆಯಲ್ಲಿ ನಾನೂ ಹಣ ಕಳೆದುಕೊಂಡಿದ್ದೆ..ಗೆಳತಿಯೊಬ್ಬರ ಅಗ್ರಹಕ್ಕೆ ಮಣಿದು ಮನಸ್ಸಿಲ್ಲದೇ ಮಾಡಿದ ಅನಧಿಕ್ರತ ಉಳಿತಾಯ ಯೋಜನೆಯಾಗಿತ್ತದು...ನಂತರ ತಾತ್ಕಾಲಿಕವಾಗಿ ಧಿಡೀರ್ ಎಂದು ಗ್ರಹೋಪಯೋಗಿ ಸಾಮಾನುಗಳನ್ನು ಕಡಿಮೆ ದುಡ್ಡಿಗೆ ಕೊಡುವದೇನೋ scheme ಶುರುವಾಗಿ ಹಣ ಕಳೆದುಕೊಳ್ಳುವದು ಸಾಮಾನ್ಯ ವಾಯಿತು..ಮೊದಮೊದಲು ಅತ್ಯಂತ ಪ್ರಾಮಾಣಿಕತೆಯಿಂದ ವ್ಯಾಪಾರ ನಡೆಸಿ, ಜನರ ವಿಶ್ವಾಸ ಗಳಿಸಿ ಅವರು ಹೆಚ್ಚು ಹೆಚ್ಚು ಹಣ ಹೂಡಿ ಬ್ರಹತ್ ಪ್ರಮಾಣದಲ್ಲಿ  ಸಂಗ್ರಹವಾದ ಒಂದೆರಡು ದಿನಗಳಲ್ಲಿ ರಾತ್ರೋರಾತ್ರಿ ಅಂಗಡಿಗೆ ಬೀಗ ಬೀಳುತ್ತಿತ್ತು.... ಭಂಡರು, ಧೈರ್ಯವಂತರು,ಗಟ್ಟಿಗರು ಆ ಮನೆ ಬಾಗಿಲ ಕೀಲಿ ಮುರಿದು ಇದ್ದ ಬಿದ್ದ ಸಾಮಾನುಗಳನ್ನು ಮನೆಗೆ ಸಾಗಿಸುವ ಪ್ರಕರಣಗಳೂ ನಡೆದವು..ಬೆಂಗಳೂರಿನಂಥ ಮಹಾನಗರಗಳಲ್ಲಂತೂ ಅನಧಿಕೃತ ,ಚೀಟಿ ವ್ಯವಹಾರಗಳಿಗೆ  ಯಾವುದೇ ಅಂಕುಶವೇ ಇಲ್ಲ..ಯಾವು ಯಾವುದೋ ಮೂಲೆಯಿಂದ ಕನಸುಗಳನ್ನು ಬೆನ್ನೇರಿಸಿಕೊಂಡು ಬಂದ ಬಡ ಕುಟುಂಬಗಳು ಇಂಥವಕ್ಕೆ ಮೊದಲ ಬಲಿ...ತಮ್ಮವೇ ಕಾರಣಕ್ಕೆ ಯಾರಿಗೂ ಹೇಳದೇ ಗಳಿಸಿದ್ದರಲ್ಲಿ ಹೊಟ್ಟೆ ಬಟ್ಟೆ ಕಟ್ಟಿ ,ಮುರುಕು ಧರ್ಮಶಾಲೆಯಲ್ಲಿ ಒರಗಿ ಕನಸುಕಾಣುವ ತಿರುಕನಂತೆ  ಆನೆಯಿಂದ ವರಮಾಲೆ ಹಾಕಿಸಿಕೊಂಡು ಕನಸಿನಲ್ಲಿಯೇ ರಾಜರಾಗಿ
ಸುಖಿಸುವ ಬಡಪಾಯಿಗಳಿಗೆ ಎಚ್ಚರವಾದಾಗ ಕಾಣುವದು ದಂಡೆತ್ತಿ ಬಂದ ಸಶಸ್ತ್ರ ಪಡೆಯೇ...
    ‌    ಯಾವುದೋ ರೀತಿ ಒಬ್ಬರ ಬಳಿ ದೊಡ್ಡ ಮೊತ್ತವಿದೆ ಎಂದು ಗೊತ್ತಾದರೆ ಸಾಕು ಅವರ ಮುಂದೆ ಹತ್ತು,ನೂರು ಬಿಡಿ ನೋಟುಗಳನ್ನೋ,ಹೊಲಸನ್ನೋ ತೋರಿಸಿ ಗಮನ ಬೇರೆಡೆ ಸೆಳೆದು ಹಣ ದೋಚಿ ಫರಾರಿಯಾಗುವವರದು ಮತ್ತೊಂದು ತಂಡ...ಒಂಟಿ ಮಹಿಳೆಯರಿಗೆ ಅಭದ್ರತೆ ಭಾವ ಬರಿಸಿ ,ಹೆದರಿಸಿ, ಚಿನ್ನಾಭರಣ ದೋಚುವವರದು ಮಗದೊಂದು ಗುಂಪು...ನಿಶ್ಚಿತ ಅವಧಿಯಲ್ಲಿ ದುಪ್ಪಟ್ಟು ಹಣದ ಆಸೆ ತೋರಿಸುವ ವಂಚನೆಯ ಜಾಲವೂ ಸಣ್ಣದೇನಿಲ್ಲ...ಗೆಳೆತನದ ನಾಟಕವಾಡಿ ಒಳ್ಳೆ ರೀತಿಯಲ್ಲೇ ಸಾಲ ಪಡೆದು ಕೊಟ್ಟ ಸಾಲ  ಗುಳುಂ ಮಾಡುವದಕ್ಕೂ ಸಾಕಷ್ಟು ಹಳೆಯ ಇತಿಹಾಸವಿದೆ...
            ನನಗೆ ಅಚ್ಚರಿಯನಿಸುವದು ಜನರು ಹಣದ ಆಮಿಷಕ್ಕೆ ಬಲಿಯಾಗಿ " ಆ ಬೈಲ್ ಮುಝೆ ಮಾರ್" ಎಂದು ತಾವೇ ವಂಚಕರಿಗೆ ಹಗ್ಗ ಕೊಟ್ಟು  ಕೈಕಟ್ಟಿಕೊಳ್ಳುವದು..ತಿಳಿದವರೇನಾದರೂ ನಾಲ್ಕು ಎಚ್ಚರಿಕೆ ಮಾತು ಹೇಳಿದರೆ ನಂಬದಿರುವದು ಅವರ ದಡ್ಡತನವೋ..ಅವರ ಕೆಟ್ಟ ನಸೀಬವೋ ಅರ್ಥ ವಾಗುವದಿಲ್ಲ...
          ‌‌‌ಉರಿವ ಕೆಂಡ ತನ್ನನ್ನು ಕೈಯಲ್ಲಿ ಹಿಡಿದವರು ಗೊತ್ತಿಲ್ಲದೇ ಹಿಡಿದ ಅಮಾಯಕರೇ/ ಅಲ್ಲವೇ ಎಂದು ನೋಡಿ ಸುಡುವದಿಲ್ಲ..ಸುಡುವದೇ ಅದರ ಗುಣಧರ್ಮ..ಎಚ್ಚರವಿರಬೇಕಾದವರು ನಾವು..
        ‌‌‌‌ಮೂರನೇಯವರಾಗಿ
ಮಾತನಾಡುವದು ಸುಲಭ..ಎಲ್ಲರಿಗೂ ಎಲ್ಲ ವಿವೇಚನೆ ಇದ್ದರೆ ಇಂಥ ಘಟನೆಗಳ ಪುನರಾವರ್ತನೆ ಖಂಡಿತ  ಆಗುವದಿಲ್ಲ...ಆಗುತ್ತಿವೆ ಎಂದಮೇಲೆ ನಾವೆಲ್ಲೋ ತಪ್ಪಿದ್ದೇವೆ... ಅಂತೆಯೇ ಒಮ್ಮಿಲ್ಲ ಒಮ್ಮೆ ಎಲ್ಲರ  ವಿಷಯಗಳಲ್ಲೂ ಇಂಥ ಪ್ರಮಾದಗಳು ಮರುಕಳಿಸುತ್ತಲೇ ಇವೆ..ಸ್ಮಶಾನ ವೈರಾಗ್ಯ,ಪ್ರಸವ ವೈರಾಗ್ಯ,ಅಭಾವ ವೈರಾಗ್ಯಗಳಂತೆ ಆ ಹೊತ್ತಿಗೆ ಬುದ್ಧಿ ಬಂದಂತಾಗಿ ಕ್ರಮೇಣ "ಎಲ್ಲಿದ್ದೀಯೋ ರಂಗ ಅಂದರೆ...ಮೊದಲು ಇದ್ದಲ್ಲೇ" ಅನ್ನುವ ಹಂತಕ್ಕೆ ನಾವಿರುವ ವರೆಗೂ ಬಹಳಷ್ಟು ಬದಲಾವಣೆ ಆಶಿಸುವಂತಿಲ್ಲ...
      ‌        ನಿನ್ನೆ  ನಡೆದ ಒಂದು ಬಹತ್ ಹಗರಣದ ಸುದ್ದಿ    ಓದಿ ,ಕಂಗೆಟ್ಟ ಜನರನ್ನು ನೋಡಿದಾಗ ಇಷ್ಷೆಲ್ಲ ನೆನಪಾಯಿತು....

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ..

MAN AND  THE MACHINE...
 
‌          ‌ನನಗೆ ಚನ್ನಾಗಿ  ನೆನಪಿದೆ, ಈ ಹೆಸರಿನದೊಂದು ಪಾಠ ಎಂಟನೇ ವರ್ಗದ ಇಂಗ್ಲಿಷ ಪಠ್ಯದಲ್ಲಿತ್ತು...ಇವೆರಡರ ನಡುವಿನ  ಸಾಮ್ಯಗಳನ್ನು ಅನೇಕ ಉದಾಹರಣೆಗಳನ್ನು ಕೊಟ್ಟು  ಮನುಷ್ಯನೂ ಒಂದು ಯಂತ್ರವೇ ಎಂದು
ಪ್ರತಿಪಾದಿಸಿದ ಪಾಠವದು...
ಮೆದುಳು- computer, ಕಣ್ಣು- camera, ಕೈಗಳು- levers, ಕಾಲುಗಳು,- wheels, ಹೊಟ್ಟೆ- ಪೆಟ್ರೋಲ್ tank, ಹೀಗೆ ಸಮಾನ ಅಂಶಗಳನ್ನು ವಿಶದವಾಗಿ  ವಿವರಿಸಿ ಹೇಳಲಾಗಿತ್ತು..ಮನುಷ್ಯನ ಜೀವನಶೈಲಿ  machine maintenance ಗೆ ಸಮ...ಚನ್ನಾಗಿ ಆರೋಗ್ಯಸೂತ್ರಗಳನ್ನು ಅನುಸರಿಸಿ ಬದುಕಿದರೆ ಶರೀರ ನಿರ್ವಹಣೆ ಅತ್ಯುತ್ತಮವಾದಂತೆ..
ಅದನ್ನು ಅಲಕ್ಷಿಸಿ ಯರ್ರಾ ಬಿರ್ರಿ ನಿರ್ವಹಣೆ, ಯಂತ್ರಗಳನ್ನು ಶೀಘ್ರ ಗರಾಜು ಸೇರಿಸುವಂತೆ, ದೇಹಾರೋಗ್ಯ ಕಡೆಗಣಿಸಿ ಬದುಕಿನ ಹಳಿ ತಪ್ಪಿಸಿಕೊಂಡರೆ ಅಂಥವರಿಗೆ  ಆಸ್ಪತ್ರೆಯೇ ಗತಿ...ಒಂದು  ವಾಹನವನ್ನು ಅದರ ಮಾಲಿಕನೊಬ್ಬನೇ  ಸರಿಯಾಗಿ ನೋಡಿಕೊಂಡು ಓಡಿಸಿದರೆ/ servicing ಮಾಡಿಸುತ್ತಿದ್ದರೆ ಅದರ ಬಾಳಿಕೆ ಹೆಚ್ಚು...ಹೆಚ್ಚು ಹೆಚ್ಚು  ಅವಧಿಯವರೆಗೆ ಅದು ನಿಮಗೆ ಸೇವೆ ಕೊಟ್ಟು ಒಂದು ತರಹದ attachment ಬೆಳೆಯುವಂತೆ ಮಾಡುವ ಸಾಧ್ಯತೆಯಿದೆ...ಅದೇ ರೀತಿ ನಮ್ಮ ಶರೀರವೂ ಒಂದು ರೀತಿಯಲ್ಲಿ  ಅದೇ ತರಹದ ನಿರ್ವಹಣೆ ಬಯಸುತ್ತದೆ...' ಹಿತ ಭುಕ್..ಮಿತ ಭುಕ್' ಅಂದರೆ ಹಿತವಾದ ಮಿತವಾದ ಆಹಾರಸೇವನೆ
ಆರೋಗ್ಯವರ್ಧನೆಗೆ ಪೂರಕ.. ಸಹಾಯಕ...ಸಮಯ ಸಿಕ್ಕಾಗ ಕೈಲಾದಷ್ಟು ಯೋಗ/ ಪ್ರಾಣಾಯಾಮ/ walking ಗಳಂಥ ನಿಯಮಿತ ಚಟುವಟಿಕೆಗಳು , ಶಾಂತ,ಶುಭ್ರ ಮನಸ್ಥಿತಿ  ದೇಹವೆಂಬ ಯಂತ್ರವನ್ನು ಸುರಕ್ಷಿತ, ಸುಭದ್ರ ಸ್ಥಿತಿಯಲ್ಲಿ ಉಳಿಸುತ್ತವೆ...ಪ್ರತಿಯೊಬ್ಬರೂ ತಮಗೆ  ಸರಿಯನಿಸಿದ ರೀತಿಯಲ್ಲಿ ಗಾಡಿ ಓಡಿಸಿದರೆ ಅದಕ್ಕೆ ಆಗಬಹುದಾದ ಧಕ್ಕೆಗಳೇ
ಮನಬಂದಂತೆ ಬದುಕಿದರೆ
ಶರೀರಕ್ಕೂ ಆಗುವ ಸಾಧ್ಯತೆ ಹೆಚ್ಚು..
ಯಂತ್ರಗಳಿಗೆ ಗರಾಜು, ಮನುಷ್ಯನಿಗೆ  ದವಾಖಾನೆಗಳು ...ಅಷ್ಟೇ ವ್ಯತ್ಯಾಸ...ಅವು  ತಕ್ಕಮಟ್ಟಿಗೆ ಸಮಸ್ಯೆಗಳಿಗೆ ಪರಿಹಾರ ಕೊಡುತ್ತವೆ ನಿಜ...ಆದರೆ ಎಷ್ಟೇ ಪ್ರಯತ್ನಿಸಿದರೂ,ಎಷ್ಟೇ ಹಣ ಸುರಿದರೂ ಯಂತ್ರಗಳಗಲೀ,ಶರೀರವಾಗಲೀ ಒಮ್ಮೆ ಶಿಥಿಲಗೊಂಡರೆ ಪೂರ್ವ ಸ್ಥಿತಿಗೆ ಮರಳಲಾರವು...
  ‌          ‌ಮೇಲೆ ಹೇಳಿದ್ದಾವದೂ ಹೊಸದಿಲ್ಲ..ಯಾರಿಗೂ ತಿಳಿಯದ್ದಿಲ್ಲ...ಆದರೆ ಅವೂ ಸಹ ಎಲ್ಲ ಹಿತನುಡಿಗಳಂತೆ ಒಂದು ರೀತಿ ಒಗರು...ಕಹಿ...ಸುಲಭದಲ್ಲಿ ಪಚನವಾಗುವದಿಲ್ಲ...ಹೊಸ ಗಾಡಿಕೊಂಡವನಿಗೆ ಕಾಣುವದು ಮುಂದೆ ಚಾಚಿದ  ಬ್ರಹತ್ ರಸ್ತೆಗಳು...ತಾನು plan ಮಾಡಿದ Ride ಗಳು...ತತ್ಷಣಕ್ಕೆ ರೋಡುಗಳ ಉಬ್ಬು ತಗ್ಗುಗಳಾಗಲೀ, rideಗೆ ಬೇಕಾದ ವೇಗವಾಗಲೀ  ಮನಸ್ಸಿನಲ್ಲಿರುವದಿಲ್ಲ..ಬೇರೆಯವರ  ಸೂಚನೆಗಳಿಗೂ ದಿವ್ಯ ನಿರ್ಲಕ್ಷ್ಯ.... ಹಾಗೆಯೇ ಹದಿಹರೆಯದ ಭರದಲ್ಲಿ ಯಾವುದೇ ಹಿತನುಡಿಗಳಿಗೆ NO ENTRY board..ಏನಾದರೊಂದು ಅಪಸವ್ಯ ನಡೆದಾಗಲೇ ಗಾಡಿಯ break fail ಆಗುವಂತೆ ,ಮನುಷ್ಯನೂ ಹತಾಶನೂ ಕಂಗಾಲೂ ಆಗುವದನ್ನು ಕಾಣುತ್ತೇವೆ..
  ‌‌‌          ‌‌ಇದೆಲ್ಲ ಆ MAN AND THE MACHINE ಪಾಠದಲ್ಲಿತ್ತು...ಅದನ್ನು ಮಕ್ಕಳಿಗೆ ಕಲಿಸುವಾಗ ನಾನೂ serious ಇರಲಿಲ್ಲ..ಅದು ಪರೀಕ್ಷೆಗೆ  ವಿದ್ಯಾರ್ಥಿಗಳಿಗೆ ಕೆಲ marks ಗಳನ್ನು ಕೊಡಿಸುವ ಒಂದು ಪಾಠ/ chapter ಮಾತ್ರವಾಗಿತ್ತು...ಬದುಕಿನಲ್ಲಿ ಮುಂದುವರಿದಂತೆ ತಲೆಗೆ ಬಡಿದ  ಅನುಭವಗಳ  ತೂಕ ಎಷ್ಟಿದೆ ಅಂದರೆ ಈಗ ನಾನೆಂದೋ ಕಲಿಸಿದ ಪಾಠಗಳನ್ನು ಬದುಕು ನನಗೆ ಕಲಿಸುತ್ತಿದೆ  ನಿರ್ದಾಕ್ಷಿಣ್ಯವಾಗಿ....ಹೌದು ಆದರೆ  ತಡವಾಗಿ...
     YESSSS! ಮಾನವ ಬರಿ ಮೂಳೆ,ಮಾಂಸದ  ತಡಿಕೆ ಮಾತ್ರವಲ್ಲ... ದೇವ ನಿರ್ಮಿತ ಅತ್ಯದ್ಭುತ ಯಂತ್ರ...

Sunday, 9 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ..

"ಸಬ್ ಕುಛ್ ಸೀಖಾ ಹಮ್ನೆ..ನಾ ಸೀಖೀ ಹೋಶಿಯಾರೀ..."

               ಈ ಇಡೀ ಜಗತ್ತು ಒಂದು ಸಂಕೀರ್ಣ ವ್ಯವಸ್ಥೆ...ಇಲ್ಲಿ ಚಿಕ್ಕದು_ ದೊಡ್ಡದು, ಒಳ್ಳೆಯದು_ ಕೆಟ್ಟದು, ಜಾಣ- ದಡ್ಡ ,ಶಿಷ್ಟ_ ದುಷ್ಟ,  ಶ್ರೇಷ್ಠ,- ಕನಿಷ್ಠ  ಏನೆಲ್ಲಾ ಇದೆ....ಸಾಮಾನ್ಯ ಸ್ಥಿತಿಯಲ್ಲಿ ಎಲ್ಲವೂ ಸುಸೂತ್ರವಾಗಿ, ವ್ಯವಸ್ಥಿತವಾಗಿ ಇದೆ ಎಂದೆನಿಸಿದರೂ ನಮಗೇ ಗೊತ್ತಿಲ್ಲದೇ  ಲಕ್ಷಗಟ್ಟಲೇ ಸ್ಥಿತ್ಯಂತರಗಳು  ತಂತಾನೇ ಆಗುತ್ತಲೇ  ಇರುತ್ತವೆ...ಅವು ಒಂದು  ಹಂತಮೀರಿದಾಗಲಷ್ಟೇ ನಮಗೆ ಗೋಚರವಾಗುತ್ತವೆ..
        ‌‌‌    ತಮಿಳು ಕವಯತ್ರಿ ಅವೈ ಪ್ರಕಾರ ಜಗತ್ತಿನಲ್ಲಿಯ ಮನುಷ್ಯರನ್ನು ಎರಡೇ ರೀತಿ ವಿಂಗಡಿಸಬಹುದು...HAVES/ HAVE NOTS..
ಇದ್ದುಳ್ಳವರು/ ಇಲ್ಲದವರು...ಆ ಇರಬೇಕಾದ ಸಂಗತಿ ಏನೂ ಆಗಿರಬಹುದು...ಹಣ, ಆರೋಗ್ಯ, ಐಶ್ವರ್ಯ, ಗುಣ ಮುಂತಾಗಿ ಏನೆಲ್ಲವೂ...
                          ಹಣ, ಐಶ್ವರ್ಯ, ಆರೋಗ್ಯ ಇವುಗಳ ಏರಿಳಿತ  ಕೆಲವು ಮಟ್ಟಿಗೆ ವೈಯಕ್ತಿಕ ನೆಲೆಯಲ್ಲಿ ಪರಿಣಾಮ  ಬೀರುತ್ತವೆ..ಆದರೆ ಗುಣದ ಬಗ್ಗೆ ಆ ಮಾತು ಅಷ್ಟು ಸುಲಭದಲ್ಲಿ ಹೇಳಿ ಬಿಡುವಂಥದಲ್ಲ..ಒಬ್ಬ ವ್ಯಕ್ತಿಯ  ವ್ಯಕ್ತಿತ್ವ  ಹಲವು ಬಗೆಯಲ್ಲಿ ಹಲವಾರು ಜನರ ಬದುಕು ಕಟ್ಟಲೂ ಬಹುದು...ಕೆಡವಲೂ ಬಹುದು...
  ‌‌‌        ಕೆಟ್ಟವರು ನಿಜರೂಪದಲ್ಲಿದ್ದರೆ  ಎಷ್ಟೋ ಕ್ಷೇಮ...ಅಂಥವರಿಂದ ಎಷ್ಟು ಬೇಕೋ  ಅಷ್ಟು  ಅಂತರ ಕಾಯ್ದುಕೊಳ್ಳಬಹುದು..
ಸಜ್ಜನರಿದ್ದರಂತೂ  ಪ್ರಶ್ನೆ ಬರುವದೇಯಿಲ್ಲ... ಹೆಜ್ಜೇನು ಸವಿದಂತೆ...ಪ್ರಶ್ನೆ  ಬರುವದು ಹಸುವೇಷದ ಹುಲಿಗಳದು...ಒಳ್ಳೆಯವರಾಗಿ ಕಾಣಿಸಿಕೊಂಡು ಹೆಗಲಮೇಲೆ , ಭುಜದ ಮೇಲೆ ಕೈ ಹಾಕುತ್ತಲೇ, ಜನರಿಗೆ ಮಂಕುಬೂದಿ ಎರಚುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳವವರದು..ಒಂದು ರೀತಿಯಲ್ಲಿ ' ಹೋಶಿಯಾರಿ' ಜನರದ್ದು...ಒಂದು ಕೈಯಲ್ಲಿ ಹೂಗುಚ್ಛ ಕಾಣುವಂತೆ ಹಿಡಿದು, ಇನ್ನೊಂದು ಕಾಣದ ಕೈಯಲ್ಲಿ ಹಿಂದಿನಿಂದ  ಚೂರಿ ಮಸೆಯುವವರದು...
            ಇಂಥವರನ್ನು  ಸಾರಾ ಸಗಟಾಗಿ ಸರಿಸಿ ಇಡುವದೂ ಸಾಧ್ಯವಿಲ್ಲದ ಮಾತು....ಅದೇ ನಂಜನ್ನು  ಬೆಳೆಸಿ, ಪೋಷಿಸಿ, ತಾವೂ. ವಿಷವುಂಡು ಇತರರಿಗೂ ಎಗ್ಗಿಲ್ಲದೇ  ವಿಷ  ಉಣಿಸಬಲ್ಲ ಘಟಾನುಘಟಿಗಳಿವರು...ಇವರ  ದ್ವೇಷಕ್ಕಿಂತ  ಸ್ನೇಹ ಅಪಾಯಕಾರಿ... ಇತರರನ್ನು ಮಣಿಸುವ ಭರದಲ್ಲಿ ಸ್ವಂತದ ಹಾನಿಯೂ ಅವರಿಗೆ  ಗೌಣ... ಏನಕೇನ ಪ್ರಕಾರೇಣ ಮೇಲುಗೈ ಸಾಧಿಸಿ ಮೆರೆಯುವದೇ ಬದುಕಿನ ಗುರಿ ಅವರದು....ಅದನ್ನವರು 'ಚಾಣಾಕ್ಷತನ ' ಎಂದು ಬಿಂಬಿಸುವದೇ ಹೆಚ್ಚು.. ..ಹಾಗಿಲ್ಲದ ಸಭ್ಯರಿಗೆ ' ಹೇಡಿ'  'ಕೈಲಾಗದವ' ನೆಂಬ ಪದವಿಗಳನ್ನೂ ಪ್ರದಾನಮಾಡಬಲ್ಲ ಚತುರರು...'ದುಷ್ಟರಿಂದ ದೂರವಿರೋಣ' ಎಂಬ ಸಜ್ಜನರ  ನಿಲುವನ್ನು ತಮ್ಮದೇ ಹೆಗ್ಗಳಿಕೆ,ತಮ್ಮನ್ನು ಎದುರಿಸಲಾಗದ ನಪುಂಸಕರ ನಿಲುವು  ಎಂದು ಬಿಂಬಿಸಲೂ ಹೇಸದವರು..ಈ ಅಪಾಯಕಾರಿ ನಿಲುವನ್ನು 
ಹೊರಗೆ ಪ್ರಕಟಿಸದೇ ಗೌಪ್ಯವಾಗಿರಿಸಿ  ಜನರ ಮೈದಾನದಲ್ಲಿ ಅವರನ್ನೇ ಬೋರಲು ಬೀಳಿಸುವವರು...ಒಂದು ರೀತಿಯಲ್ಲಿ ಇವೆಲ್ಲ ರಾಜಕೀಯದ ಪಟ್ಟುಗಳಿಗೆ ಸಮ...ತದ್ವಿರುದ್ಧ ರಾಜಕೀಯ ಪಕ್ಷಗಳ  ತಂತ್ರಗಳು..
ರಾ_ ರಾವಣ,
ಜ_ ಜರಾಸಂಧ
ಕೀ_ ಕೀಚಕ
ಯ_ ಯಮ.
ಇವರೆಲ್ಲರ ವಂಶಜರು ಎಂಬ ತಮಾಷೆಯ ಮಾತುಂಟು...
ಎಲ್ಲರೂ ಹಾಗಲ್ಲ...ಸಾಕಷ್ಟು ಸಜ್ಜನರೂ ಇರುತ್ತಾರೆ...ಆದರೆ ಇವರ 'ಹೋಶಿಯಾರಿ 'ಮುಂದೆ ಅಂಥವರು ಸುಲಭದಲ್ಲಿ ಗುರುತಿಸಲ್ಪಡುವದಿಲ್ಲ...Survival of d fittest ಆಗಲೀ, ಜಿಸಕೀ ಲಾಠಿ ಉಸಕಿ ಭೈಸ್_ ಆಗಲೀ ಹೇಳುವದು ಇದನ್ನೇ...
          ‌‌‌ ಆದರೆ ಮಾತಾಡಿದಷ್ಟು ಏನಾದರೂ ಮಾಡುವದು ಸುಲಭವಿಲ್ಲ...ಬೀಸುಕಲ್ಲಿನ ಬುಡದಲ್ಲಿ ಸಿಕ್ಕ ಬೆರಳುಗಳಂತೆ, ಮುಳ್ಳುಕಂಟಿಯ ಮೇಗಣ ರೇಶ್ಮೆ ಸೀರೆ ತೆಗೆದಂತೆ ಇವರಿಂದ ಬಿಡುಗಡೆ ಪಡೆಯಬೇಕು...ನಿಜವಾಗಿ ಮಲಗಿದವರನ್ನು ಎಬ್ಬಿಸಬಹುದು..ಮಲಗಿದಂತೆ ನಟಿಸುವವರನ್ನು ಎಬ್ಬಿಸಲಾರಿರಿ...ನಿಜವಾದ  ಕೆಟ್ಟವರನ್ನು ಸಂಭಾಳಿಸಬಲ್ಲಿರಿ...ಆದರೆ ನಿಮ್ಮ ಬಗಲಲ್ಲೇ ಇದ್ದು ನಿಮ್ಮ ಹಿತೈಷಿಯಂತೆ ನಟಿಸಿ ನಿಮ್ಮನ್ನೇ ದಿವಾಳಿ ಎಬ್ಬಿಸ ಬಿಡಬಹುದಾದ  ಆಷಾಢಭೂತಿಗಳ 'ಹೋಶಿಯಾರಿತನವನ್ನು'  ಅರಿತುಕೊಳ್ಳದಿದ್ದರೆ ಬದುಕು ಮೂರಾಬಟ್ಟೆ ಎಂಬುದು, ಹಾಗಾದಮೇಲೆಯೇ ತಿಳಿಯುವ ಸಂಭವವೇ ಜಾಸ್ತಿ ಎಂಬುದೂ ಒಂದು ವಿಡಂಬನೆ...

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ...

ಜಾನೇ ಕಹಾ ಗಯೇ ವೊ ದಿನ....

             ಒಂದು ವಾರವಾಯಿತು ಮೂರೂ ಮಕ್ಕಳ ಮನೆಯಲ್ಲಿ ಹಬ್ಬದ ಸಡಗರ..ಪರೀಕ್ಷಾ ಫಲಿತಾಂಶ, admission ಗಲಾಟೆ,ಪುಸ್ತಕ ಖರೀದಿ...ಶಾಲೆಯ ಶಿಕ್ಷಕರೊಂದಿಗೆ  ಪಾಲಕರ  ಭೇಟಿ,ಅದೂ ಇದೂ shopping...ನನಗೆ ತಿಳಿದಂತೆ ನನ್ನ ಮಕ್ಕಳ ಮದುವೆಗೂ ಇಷ್ಟು tension ನಲ್ಲಿದ್ದೆ ಎಂಬಂತೆ ನೆನಪಿಲ್ಲ...ಬಹುಶಃ ಜವಾಬ್ದಾರಿಯನ್ನು ಇತರರಿಗೂ ಹಂಚಿಕೊಂಡ ಕಾರಣವಿರಬೇಕು...ಏಳುಗಂಟೆಯಿಂದ ಎಂಟರ ವರೆಗೆ ಎಲ್ಲರೂ ತಮ್ಮತಮ್ಮ ಶಾಲೆ,ಕಾಲೇಜು, ಆಫೀಸು ಎಂದು  ಹೋದಮೇಲೇಯೇ ಮನೆ ಹೆಚ್ಚುಕಡಿಮೆ ಖಾಲಿಯಾದಂತೆ...ಒಂದರ್ಧ ಗಂಟೆ ಸಾಡೇದ ಮನೆಯಿದ್ದ ಹಾಗೇ...ಉಶ್ಶಪ್ಪಾ ಎಂದು
ಆರಾಮಾಗಿ ಸಿಗುವ  ಕೆಲ ಗಳಿಗೆಗಳನ್ನು ಆನಂದಿಸಿದ ಮೇಲೆ  ಮಧ್ಯಂತರ ನಂತರದ ಶೋ...ಇದು ದೊಡ್ಡ class ನ ಮಕ್ಕಳಿದ್ದರೆ ಮಾತ್ರ ಎಂಬ ಭ್ರಮೆ  ಖಂಡಿತ ಬೇಡ..ನರ್ಸರಿ,ಎಲ್ಲ K.G classಗಳು,day careಗಳು,baby sitting ಮಕ್ಕಳು , ನೌಕರಿಗೆ ಹೋಗುವ daddy/ mummy ಗಳು ಇವರೆಲ್ಲರದ್ದೂ ಕುಣಿತ... ಕುಳಿತು ನೋಡುವವರಿಗೂ ಒಂಥರ ಒತ್ತಡ...ಮಾತಿಗೆಲ್ಲಿದೆ ಪುರಸೊತ್ತು? ಹಾ,ಹೂ,ಹಿಡಿ,ತೊಗೋ,ಹೊರಡು,ರೆಡಿನಾ? ಬಂದೆ...ಎಷ್ಟೊತ್ತು? ಲಗೂಲಗೂ, ಇಂಥವೇ ಆಣತಿಗಳು.. ಉದ್ಗಾರಗಳು..warning ಗಳು...ಧಡಧಡ ಹೆಜ್ಜೆಗಳು..ಬೂಟಿನ ಸಪ್ಪಳ...ಕಾರು ಸರಿದು ಹೋದ ಸದ್ದು....
   ‌‌‌         ಇಂಥದೆಲ್ಲ ಏನೇನೋ ನೋಡಿದಾಗ ನಾವು ಶಾಲೆಗೆ ಹೋಗುವ ಹಂತ ನೆನಸಿಯೇ "ನಗೆಯು ಬರುತಿದೆ ಎನಗೆ" ಹಾಡು ಹುಟ್ಟಿರಬೇಕು ಅನಿಸುತ್ತದೆ...ಪ್ರತಿಯೊಬ್ಬರ ಮನೆಯಲ್ಲೂ
ಎಂಟು ಹತ್ತು ಮಕ್ಕಳು...ಹೋದವರು ಹೋದರು..ಬಿಟ್ಟವರು ಬಿಟ್ಟರು...ಮನೆಯಲ್ಲಿ ಹಿರಿಯಣ್ಣ,ಹಿರಿಯಕ್ಕ ಇಲ್ಲ ಅಂದರೆ ಮಾತ್ರ ಹೊಸ ಉಡುಪು ಖರೀದಿ..ಇದ್ದರೆ ಕೊನೆಯವರು ಮುಗಿಯುವವರೆಗೆ ಅದನ್ನು ಹಿಗ್ಗಿಸಿ ,ಕುಗ್ಗಿಸಿ ಅಂತೂ ಹೊಂದಿಸಿ ಹಾಕುವದು..
ಪರೀಕ್ಷೆಗೆ ಮೊದಲೇ ಮೇಲಿನ class ನವರ ಪುಸ್ತಕಗಳು ಬೇಕು  ಎಂದು ಹೇಳಿಟ್ಟಿರಬೇಕು...second hand..
ಅರ್ಧ ಬೆಲೆಗೆ...ರೂ ಇಪ್ಪತೈದು ಬೆಲೆ ಮೀರಿದ ನೆನಪೇಯಿಲ್ಲ...ಹಿಂದಿನ ವರ್ಷದ _notebooks ಗಳ ಖಾಲಿಹಾಳೆಗಳನ್ನು ಹರಿದು cover ಹಾಕಿ  ಹೊಲಿದಿಟ್ಟುಕೊಳ್ಳಬೇಕಿತ್ತು..ಅವು ಮುಗಿದಮೇಲೆಯೇ ಹೊಸ ಖರೀದಿ...ಯಾವ ಕ್ಲಾಸ್?,ಅಭ್ಯಾಸ ಹೇಗೆ?marks ಎಷ್ಟು?ರ್ಯಾಂಕಗಳು  ಬಂದವೇ? ಇಂಥ ಮಾತುಗಳು ಎಲ್ಲೋ ಒಬ್ಬಿಬ್ಬರ ಮನೆಯಲ್ಲಿ ನಡೆಯುತ್ತಿದ್ದವು...pass/ fail ಎರಡೇ ...ಆದರೆ ಆಗ ಮಕ್ಕಳೇ ಹೆಚ್ಚು ಚುರುಕು...ಆಟ,ಓಟ,ಹುಡುಗಾಟ,ಓಡಾಟ ಎಲ್ಲವನ್ನೂ ಸಾಂಗವಾಗಿ ನಡೆಸಿಕೊಂಡೂ ಚನ್ನಾಗಿ ಪಾಸಾಗುತ್ತಿದ್ದರು..ಫಲಿತಾಂಶ ದಿನಪತ್ರಿಕೆಯಲ್ಲಿ ಬರುತ್ತಿದ್ದ ಕಾಲ...ಯಾರೋ ಒಬ್ಬಿಬ್ಬರು ಹೋಗಿ ನೋಡಿ ಬರಕೊಂಡು ಬಂದು ಇತರರಿಗೆ ತಿಳಿಸುತ್ತಿದ್ದರು.ನನ್ನಣ್ಣ SSLC first class ನಲ್ಲಿ ಪಾಸಾದ್ದಕ್ಕೆ ಇಡೀ ಕೇರಿ
ಗೇ ಉಪ್ಪಿಟ್ಟಿನ ಪಾರ್ಟಿ ಕೊಟ್ಟದ್ದು ಈಗಲೂ ನೆನಪಿದೆ...ರೆಡಿಯೋ,ಟೀವಿ,ಸಿನೇಮಾ ದಂಥ ಆಕರ್ಷಣೆಗಳಿರಲಿಲ್ಲ..ರ್ಯಾಂಕ ,ಗ್ರೇಡ್,ಇವುಗಳ ಜಂಜಾಟವಿರಲಿಲ್ಲ...ಮಕ್ಕಳೂ ಸೀದಾ ಸಾದಾ ಶಾಲೆಗೆ ತಪ್ಪದೇ ಹೋಗುವದು,ಹೇಳಿದ್ದನ್ನು ಏಕಚಿತ್ತದಿಂದ ಕೇಳಿ,ಬರೆದು ಪರೀಕ್ಷೆ ಪಾಸಾಗುವದು ಅತಿ ಸಾಮಾನ್ಯ ವಿಷಯ...ಬಹುಶಃ ಕಡ್ಡಾಯ ಸಾಮೂಹಿಕ  ಶಿಕ್ಷಣ ಪದ್ಧತಿ ಇರಲಿಲ್ಲವಾದ್ದರಿಂದ ಆಸಕ್ತಿ,ಯೋಗ್ಯತೆ,ಒಲವು ಇದ್ದವರೇ ಕಲಿಯುತ್ತಿದ್ದುದು ಕಾರಣವಿತ್ತೇನೋ ಎಂಬ ಅನಿಸಿಕೆ ನನ್ನದು..
           ‌‌ಆ ನಂತರ ನಮ್ಮ ಮಕ್ಕಳ ಸರದಿ ಬರುವಹೊತ್ತಿಗಾಗಲೇ ಸಾಕಷ್ಟು ಬದಲಾವಣೆಯಾಗಿತ್ತು .ಸಾಮೂಹಿಕ ಕಡ್ಡಾಯ ಶಿಕ್ಷಣದಿಂದಾಗಿ ಓದುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿತ್ತು..
ಪಾಲಕರಲ್ಲಿಯೂ  awareness ಸಾಕಷ್ಟು ಬಂದು ಮಕ್ಕಳ ಕಡೆ ಹೆಚ್ಚು ಲಕ್ಷ್ಯ ಹಾಗೂ ಕಾಳಜಿ ಕಾಣತೊಡಗಿತ್ತು..ನಾವಿಬ್ಬರು..ನಮಗೆ ಇಬ್ಬರು...ಘೋಷಣೆಗಳು ಮಹತ್ವ ಪಡೆದುದರ ಕಾರಣದಿಂದ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಿತ್ತು...ಶ್ರೇಣಿ,ರ್ಯಾಂಕಗಳ ಪರಿಕಲ್ಪನೆಯಿಂದಾಗಿ ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಾಗಿತ್ತು...ಆದರೂ ವಿದ್ಯಾರ್ಥಿಗಳು ಪಾಲಕರ ಮೇಲೆ ಅತಿಯಾಗಿ ಅವಲಂಬಿತವಾಗುತ್ತಿರಲಿಲ್ಲ..
ಬೇಕೆಂದಾಗ,ಬೇಕಾದಷ್ಟೇ  ಪಾಲ್ಗೊಂಡು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪಾಲಕರು ಶ್ರಮಿಸುವ ಹಂತದಲ್ಲಿತ್ತು..ಅವರಿಗೆ ಬೇಕಾಗುವ ಸಕಲ ಅನುಕೂಲ ಮಾಡಿಕೊಟ್ಟರೆ ಗೆಳೆಯರೊಡಗೂಡಿ ತಮ್ಮನ್ನು ತಾವು ನಿಭಾಯಿಸಿಕೊಳ್ಳುತ್ತಿದ್ದರು.
ಹಾಗೆ ನೋಡಿದರೆ ಅಷ್ಟುಹೊತ್ತಿಗಾಗಲೇ  ಟಿವಿ
ಬಂದಿದ್ದರೂ ಖಾಸಗಿ ಚಾನೆಲ್ ಗಳ ಹಾವಳಿ ಇರಲಿಲ್ಲವಾಗಿ ಅದು ಈಗಿನಷ್ಟು ಗೀಳು ಎಂಬಂತಾಗಿರಲಿಲ್ಲ....ಮಕ್ಕಳು,ಕೆಲವರನ್ನು ಹೊರತುಪಡಿಸಿ, ವಿವೇಕದಿಂದ  ಸ್ಪರ್ಧಾತ್ಮಕ ವಾತಾವರಣದಲ್ಲಿಯೂ ತಮ್ಮನೆಲೆ ತಾವು ಕಂಡುಕೊಂಡುದು ಕಾಲ ಮಹಿಮೆಯೇ ಸರಿ...
      ‌‌‌‌   ‌ಅದರ ಮುಂದಿನ ತಲೆಮಾರೇ ಇಂದಿನದು...software ಕ್ರಾಂತಿಯಿಂದಾಗಿ ಇಡಿ ವಿಶ್ವವೇ global village ಎಂದು ಗುರುತಿಸಿಕೊಂಡಾಗಿದೆ..ಮಕ್ಕಳ ಸಂಖ್ಯೆ ಬಹುತೇಕ ಒಂದಕ್ಕೇ ನೆಲೆನಿಂತು standard of living ಸಿಕ್ಕಾಪಟ್ಟೆ ಏರಿದೆ..ಅರ್ಧಕ್ಕಿಂತ ಹೆಚ್ಚುಜನ ವಿದೇಶವಾಸಿಗಳಾಗಿದ್ದಾರೆ..ಮಧ್ಯಮ ವರ್ಗ ಮೇಲ್ವರ್ಗವಾಗಿ ಬದಲಾವಣೆಯಾಗಿ ಜೀವನ ಮಟ್ಟ ಸುಧಾರಿಸಿದ್ದನ್ನು ಜನ ಹಾಗೂ ಜಗತ್ತು ಸರಿಯಾಗಿಯೇ ಬಳಸಿಕೊಂಡು ಸಹಜ ಜೀವನದಿಂದ ದೂರವಾಗಿ ಪಾಶ್ಚಾತ್ಯ ಜೀವನ ಶೈಲಿಗೆ ಹೆಚ್ಚು ಹತ್ತಿರವಾಗುತ್ತಿದ್ದಾರೆ ....ಮಕ್ಕಳಪಾಲನೆ ಪೋಷಣೆಯಲ್ಲಿ ಹಿಂದೆಂದೂ ಇಲ್ಲದ ವಿಪರೀತವೆನಿಸುವ ಕಾಳಜಿ ಹೆಚ್ಚುತ್ತಿದೆ...
   ‌‌‌   ‌‌ನಾಲ್ಕು ತಲೆಮಾರುಗಳಿಗೆ ಸಾಕ್ಷಿಯಾದ  ನನಗೆ ಅವನ್ನೆಲ್ಲ  ನೆನೆದಾಗ,ಹಳಹಳಿಸಬೇಕೋ...ಸಂಭ್ರಮಿಸಬೇಕೋ,ಕಾಲಾಯ ತಸ್ಮೈ ನಮಃ ಎಂದು ಶರಣಾಗಬೇಕೋ ತಿಳಿಯದಷ್ಟು ಗೊಂದಲ...

Wednesday, 5 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೆ...

Think before you act....

              ‌ಇಂದು ವಿಶ್ವಪರಿಸರ ದಿನವಂತೆ...ಅದರ ಪ್ರಯುಕ್ತ ಸಾಕಷ್ಟು postಗಳು,ಭಾಷಣಗಳ ಮುಖಾಂತರ ಜಾಗ್ರತಿ  ಮೂಡಿಸುವ ಕಾರ್ಯಕ್ರಮಗಳು,  ಸ್ವಚ್ಛತಾ ಕಾರ್ಯಕ್ರಮಗಳ ಆಯೋಜನೆಗಳು,
ಸಾಮಾಜಿಕ ಸೇವೆ ,ಹೀಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಬಗ್ಗೆ ಓದಲು ಸಿಗುತ್ತದೆ...ಒಳ್ಳೆಯ ಬೆಳವಣಿಗೆ...ಇಂಥ ಧನಾತ್ಮಕ ವಿಚಾರಗಳು ಇಂದಿಲ್ಲದಿರೆ ನಾಳೆ ಅಪೇಕ್ಷಿತ ಬದಲಾವಣೆಯ ಕಡೆ ಮುಖ ಮಾಡಿಯೇ ಮಾಡುತ್ತವೆ...
          ‌ಇಂಥದೇ ಬದಲಾವಣೆಯೊಂದನ್ನು ಗುರಿಯಾಗಿಸಿಕೊಂಡು ಫೇಸಬುಕ್ಕಿನ  developers' meeting ನಲ್ಲಿ ಶ್ರೀ ಆಡಮ್ ಮೆಸ್ಸೋರಿ ಯವರು ಮಾನಸಿಕ ಪರಿಸರ ಸ್ವಚ್ಛವಾಗಿರಿಸುವ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ..ಆ್ಯಪ್ ಡೆವಲಪ್ ಮಾಡುವದು ಸರಿ...ಬೇಕಾದ ಹಾಗೆ ಮಾಡೋಣ ಆದರೆ ಅನಾರೋಗ್ಯಕರ ಸ್ಪರ್ಧೆ ಉಂಟುಮಾಡುತ್ತಿರುವ, like options ಗಳನ್ನು ತೆಗೆದುಹಾಕೋಣ ಎಂಬುದಾಗಿ ಚರ್ಚಿಸುತ್ತಿದ್ದಾರೆ...ಮೂಗಿಗಿಂತ ಮೂಗುತಿ ಭಾರ ಎಂಬಂತೆ ವಿಷಯ ಪ್ರಧಾನವಾಗಿರಬೇಕಾದಲ್ಲಿ likes, commentsಗಳು ಪ್ರಧಾನವಾಗಿ ದಾರಿ ತಪ್ಪಿಸುತ್ತಿವೆ...ಇದರಿಂದ ಯಾವುದೇ ವಿಷಯದ ಸರಿಯಾದ ಮೌಲ್ಯ ಮಾಪನವಾಗುವದಿಲ್ಲ...ಜ್ಞಾನ ಪ್ರಧಾನ ವಿಷಯಗಳು ಜನಪರವಾಗಿದ್ದರೂ ಜನಪ್ರಿಯ ವಾಗಿರಲಿಕ್ಕಿಲ್ಲ..
ಮನುಷ್ಯನ ಸೈಕಾಲಜಿ ವೈಯಕ್ತಿಕ- personal ಆಗಿ ಬೇರೆಯೇ ಯಿರುತ್ತದೆ,ಸಾಮೂಹಿಕವಾಗಿ ಬೇರೆಯೇ ಇರುತ್ತದೆ..ಅಂತೆಯೇ ಒಬ್ಬ ವಿದ್ಯಾರ್ಥಿ ಒಬ್ಬನೇ ಭೇಟಿಯಾದಾಗ ಇದ್ದ ನಡವಳಿಕೆ ಗುಂಪಿನಲ್ಲಿ ಇರುವದಿಲ್ಲ.ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣವೂ ವಿಶ್ವಸಾರ್ಹವಲ್ಲ...ಅದರಲ್ಲಿರುವ ಎಲ್ಲವನ್ನೂ ಸಾರಾಸಗಟಾಗಿ ಒಪ್ಪಲಾಗುವದಿಲ್ಲ...ಎಂಬುದು ಅವರು ಅಂಬೋಣ...ಒಬ್ಬ ಉದಯೋನ್ಮುಖ ಬರಹಗಾರನಿಗೆ  ಒಬ್ಬ ನುರಿತ ಬರಹಗಾರನ ಆತ್ಮಸ್ಥೈರ್ಯ,ಜನಬೆಂಬಲ, ತನ್ನನ್ನೇ ತಾನು ಪ್ರಸ್ತುತ
ಪಡಿಸಿಕೊಳ್ಳುವ ಚಾಣಾಕ್ಷತೆ,ಅದಕ್ಕೆ ಬೇಕಾಗಬಹುದಾದ ಕೌಶಲ್ಯ ಅಥವಾ ಮನಸ್ಸು ಇರದಿರುವಿಕೆಯ ಸಾಧ್ಯತೆಯ ಅಭಾವ ಕಾರಣವಾಗಿರಬಹುದು...ಸ್ವಂತಕ್ಕೆ ಟಾಂಟಾಂ ಬೇಕಿಲ್ಲದಿರಬಹುದು...ತನ್ನ ಪಾಡಿಗೆ ತಾನೇ ಏನನ್ನೋ ಮಾಡಿಕೊಂಡಿರುವ  ಹಂಬಲದವರಿರಬಹುದು...ಹೀಗಾಗಿ ಉಳಿದವರ ಗಮನಕ್ಕೆ ಬರುವದು ತಡವಾಗಬಹುದು...ಜನರೂ ತಲೆಗೆ ವಿಚಾರಮಾಡಲು ಹಚ್ಚುವದಕ್ಕಿಂತ, ಹೃದಯ ಹಚ್ಚಗೆ,ಬೆಚ್ಚಗಿರುವ post ಗಳ ಪರವಾಗಿರಬಹುದು..
ಒಬ್ಬರ ಆಹಾರ ಬೇರೊಬ್ಬರಿಗೆ ವಿಷವಾಗವ ಸಾಧ್ಯತೆಯನ್ನೂ ಅಲ್ಲಗಳೆಯುಂತಿಲ್ಲ...ಕೆಲ.   ‌‌  ಓದುಗರು ಓದದೇ like ಒತ್ತುವಂತೆ,ಕೆಲವುಸಲ ನಿಯಮಿತವಾಗಿ ಓದುವವರು ವಿಷಯಕ್ಕೆ ಮಹತ್ವಕೊಡುವವರಾಗಿದ್ದರೆ ಎರಡುಸಲ ಓದಿದರೂ  likes ಗಳಿಗೆ ಗಮನಕೊಡದಿರಬಹುದು...
     ‌‌‌‌              ಬರೆಯುವವರಿಗೆ ಇಂಥ ವಿಷಯಗಳ ಸೂಕ್ಷ್ಮತೆ ಅರಿವಿರಬೇಕು..
ಇಲ್ಲದಿದ್ದರೆ ತಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು ಮಾನಸಿಕ ಒತ್ತಡ ಅನುಭವಿಸುತ್ತಾರೆ ಎಂಬುದು Adam mosseri ಯವರ ಅನಿಸಿಕೆ..ಇದೇ ಪ್ರವೃತ್ತಿ ಮುಂದುವರೆದರೆ ಮಾರ್ಕೆಂಟಿಂಗ್ / sale ವಿಭಾಗದ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರಬಹುದು..ಕಾರಣ likes/ dislikes ಗೊಡವೆಯನ್ನೇ ಕಿತ್ತು ಹಾಕುವ ಯೋಚನೆ ನಡೆದಿದೆ ಎಂಬುದು ಸುದ್ದಿ ಸಂಕ್ಷೇಪ...
                 ಇದರ ಸತ್ಯಾಸತ್ಯತೆ ಏನೇ ಇರಲಿ, ಬದುಕಿನ likes,/dislikes ಳ ಬಗ್ಗೆಯೂ ಈ ನಿಲುವು ಅತ್ಯುತ್ತಮ ಅನಿಸುತ್ತದೆ ನನಗೆ....ಒಬ್ಬರ ಬಗೆಗಿನ ಇನ್ನೊಬ್ಬರ ಅನಿಸಿಕೆ ಸಂಪೂರ್ಣ ವೈಯಕ್ತಿಕ ನೆಲೆಗಟ್ಟಿನಲ್ಲಿ ಬೇರೆಯಾಗಿ ಇರುವದೇ ಹೆಚ್ಚು...ಆದರೆ ಸಮೂಹ ಸನ್ನಿ ಒಮ್ಮೆ ಏರಿತೋ  ಅದು ಪ್ರಳಯಾಂತಕ...ಜಗನ್ಮಾನ್ಯರಾದ ಅನೇಕ  ಮಹಾನುಭಾವರನ್ನು ಅತ್ಯಂತ ಹೀನಾಯವಾಗಿ ಈ ಜಗತ್ತು ನಡೆಸಿಕೊಂಡಿದೆ..ಗಾಂಧೀಜಿ/ ಇಂದಿರಾಜಿಗೆ ಗುಂಡು,ರಾಜೀವ ಗಾಂಧಿಯವರಿಗೆ ಬಾಂಬ್  ಸ್ಫೋಟ, ಸಾಕ್ರೆಟಿಸ್ ಗೆ ವಿಷಪ್ರಾಸನ, ಜೋನ್ ಆಪ್ ಆರ್ಕ ಇವಳಿಗೆ ಜೀವಂತ ದಹನದ ಶಿಕ್ಷೆ,ಏಸುವನ್ನು ಶಿಲುಬೆಗೇರಿಸಿದ್ದು _ ಇವೆಲ್ಲ ಜನಸಮೂಹದ ' ಸನ್ನಿಯ'
ಪರಿಣಾಮಗಳೇ... ಕಾರಣ  ವಿಶ್ವ ಪರಿಸರಕ್ಕೆ ಕೊಡುವ ಗಮನ,ಮಾನ್ಯತೆಯನ್ನು ಮನುಷ್ಯನ  ಮಾನಸಿಕ ಪರಿಸರಕ್ಕೂ ಅನ್ವಯ ಇರಬೇಕಾದ ಅನಿವಾರ್ಯತೆ ಬಹುಶಃ  ಈ ಕಾಲದಲ್ಲಿ ಅತಿ ಹೆಚ್ಚಾಗಿದೆ...ಆ ನಿಟ್ಟಿನಲ್ಲಿ ಆ್ಯಡಮ್ ಮೆಸ್ಸೊರಿಯ ಈ ಪುಟ್ಟ ಹೆಜ್ಜೆ ಪ್ರಶಂಸಾರ್ಹ....

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ...

...ಈ ಭವರೋಗಕ್ಕೆ ಮದ್ದಿಲ್ಲ....

"ಟ್ರಿಣ್....ಟ್ರಿಣ್....ಟ್ರಿಣ್..."

*ಹಲೋ, ಯಾರು?"

" ನಾನು....."

"ಓ ಏನಿದು ಅಪರೂಪ...ಏನೂ ಸುದ್ದೀನ ಇದ್ದಿದ್ದಿಲ್ಲ....ಪೂರಾ ಗಾಯಬ್.."

"ನನಗ ಆರಾಮss ಇದ್ದಿದ್ದಿಲ್ಲ...ಎರಡು ತಿಂಗಳಿನಿಂದ..."

"ಏನಾಗಿತ್ತು? "

"ಶುಗರ್,ಬಿಪಿ ಎರಡೂ ಏರಿತ್ತು..."

"ಡಾಕ್ಟರಿಗೆ ತೋರ್ಸಿದೇನು? ಏನಂತಾರ?"

ಏನನ್ಬೇಕು?  ನೂರಾಎಂಟು test ಮಾಡ್ಸಿ ರೊಕ್ಕ ಎಳಕೊಂಡು ಆದಮ್ಯಾಲ "Diet ಮಾಡ್ರಿ..walking ಬಿಡಬ್ಯಾಡ್ರಿ...ಔಷಧಿ regular ತೊಗೋರಿ...ಇದsss. ಇದು ನಮಗೂ ಗೊತ್ತಿರ್ತದ.."

" ಗೊತ್ತಿರ್ತದ..ಆದ್ರ ಏನೂ ಪಾಲಿಸೋದಿಲ್ಲ..ಹೌದಲ್ಲೊ?"

" ಹತ್ತು- ಹದಿನೈದು ವರ್ಷದ ಮ್ಯಾಲಾತು...ಎಷ್ಟೂಂತ ಇದೆಲ್ಲ ಮಾಡೋದು..ಬ್ಯಾಸರಾಗೂದಿಲ್ಲನ?"

"ಹಂಗಂದ್ರ ಹೆಂಗ... ಅಕ್ಕೀನೂ ಖರ್ಚ ಆಗಬಾರ್ದು...ನೆಂಟರೂ ಉಣಬೇಕೂ ಅನ್ನೋ ಲೆಕ್ಕದು..
ಮತ್ತ walking ಸುರು ಮಾಡು...ಎಲ್ಲ ಸರಿಹೋಗ್ತದ.."

" ಎಲ್ಲೆ ಹೋಗಲೆವಾ..ಈ ಮೈ ಹೊತ್ಗೊಂಡು...ನಾಕ ಹೆಜ್ಜಿಗೆ ದಮ್ ಹತ್ತದ... ಕಾಲು ಬ್ಯಾರೆ ಬ್ಯಾನಿ ಆಗ್ಯಾವ...ಬಾಯತಾವ.."

" ಮದಿವ್ಯಾಗ್ದ ಹುಚ್ಚು ಬಿಡಂಗಿಲ್ಲ...ಹುಚ್ಚಬಿಡ್ದ ಮದಿವ್ಯಾಗಂಗಿಲ್ಲ..ಆ ಲೆಕ್ಕ ಆತದು...ನನಗೊತ್ತದ ಆ ದರಿದ್ರ serials ಬಿಡಬೇಕಾಗ್ತದ..ಆ ಸಂಕಟ ನಿಂಗ..."

"ಅದರ ಮ್ಯಾಲ್ಯಾಕ ಎಲ್ಲಾರ ಕಣ್ಣೊ ಗೊತ್ತಿಲ್ಲ...ಮನ್ಯಾಗೂ ಇದss ರಾಗ...ಇದss ಹಾಡು"

"ಮತ್ತಬಿಡ್ತಾರೇನು?? ಒಂದ ಕಡೆ ತಾಸಗಟ್ಟಲೇ ಕೂಡೋದು,ಕುರುದಿನಸಿ ಕುರುಕೋದು...ಜಡ್ಡ ಬರಬ್ಯಾಡಂದ್ರ ಹೆಂಗ???ಸಂಜಿಗೆ ಆಗದಿದ್ರ ಬೆಳಿಗ್ಗೇ ಎದ್ದು ಸ್ವಲ್ಪರ walking ಮಾಡದಿದ್ರ ಹೆಂಗ....

" ನನ್ನ ಸಂಕಟ ನನಗ...
ಬ್ಯಾರೆದವ್ರಿಗೆ ಅರ್ಥ ಆಗೂದಿಲ್ಲ..ನಸಕಿನ ತಂಪಿನ್ಯಾಗ ತಲಿಸೂಲಿ ಏಳ್ತದ....ಒಂದ ಸಮನ ಸೀನು ಸುರುವಾಗ್ತಾವ..."
    
" ಹಸ್ತು ಕಾಲೇಳೂದಿಲ್ಲ....ಉಂಡು ಹೊಟ್ಟಿ ಬಗ್ಗೂದಿಲ್ಲ ಅಂದ್ಲಂತ ಹೊಸಾಸೊಸಿ ಮನಿಗೆ ಬಂದಾಗ... ನಾ ಏನೂ ಬದಲಾಗೂದಿಲ್ಲ...ನನಗೆಲ್ಲ ಬದಲಾಗ್ಬೇಕು -ಲೆಕ್ಕ ಆತು ನಿಂದು...ಏನರ ಮಾಡ್ಕೊ ತಾಯಿ...ನನಗೇನೂ ಹೇಳಬ್ಯಾಡ..."

" ನಾ ಆರಾಮ ದಿನ ತಗೀತೇನಿ ಅಂದ್ರ ಎಷ್ಟು ಮಂದಿಗೆ ಹೊಟ್ಟೆ ಉರಿ ಅಂತೇನಿ... ಎಲ್ಲಾ ಬಿಟ್ಟು ಸನ್ಯಾಸಿ ಆಗಲೇನು?...ಎಲ್ಲಾರೂ ಉಪದೇಶ ಮಾಡೋರ...

"ಮಾಡೂದಿಲ್ಲ...ಇನ್ನಮುಂದ ನಮ್ಮ ಮುಂದ ನಿನ್ನ ಜಡ್ಡಿನ ಸುದ್ದಿ ಬಿಲ್ಕುಲ್ ತಗಿಯೋಹಂಗಿಲ್ಲ..."

" ಇದೇನ್ ಹೊಸಾ ವರಸೆ ನಿಂದು...ನಮ್ಮವರು, ತಮ್ಮವರು ಅಂತ ಯಾಕ ಇರ್ಬೇಕು?"

"ನಮ್ಮವರು ಅಂದಮ್ಯಾಲ ಒಂದು ಮಾತ ಹೇಳಿದ್ರ ಕೇಳ್ಬೇಕಿಲ್ಲೋ..ಗಂಡಾ,ಮಕ್ಳು ಎಲ್ಲರ್ನೂ ಹೆದರ್ಸ್ಗೋತಿದಿ...ನಾವು ಹೇಳಿದ್ದೂ ದರ್ದಿಲ್ಲ... ಡಾಕ್ಟರೇನು ಅನ್ನೋ ಉಡಾಫೆ.."

"ಏನss ನಮ್ಮವ್ವಾ ಸುಂಕದವರಮುಂದ ಸುಖಾ ದುಃಖ ಹೇಳ್ಕೊಂಡಂಗಾತು..ಏನೋ ಪಾಪ ಅಂತಿಯನೋ ಅಂದ್ರ ,ಹೇಳಿದ್ದsss  ಪಾಪ ಅನ್ನೋಹಂಗ  ಆತಿದು.."
         
                 ನಾನು ಮಾತಾಡದೇ bye ಹೇಳಿ ಫೋನ್ ಇಟ್ಟೆ..ಇದು ನಮ್ಮಿಬ್ಬರ ನಡುವಿನ ಕಾಯಂ ಬಡದಾಟ...ಹಗ್ಗ ಹರಿಯೋಹಂಗಿಲ್ಲ...ಕೋಲು ಮುರಿಯೋಹಂಗಿಲ್ಲ...ಆಕಿ ಹೇಳಿದ್ದು ಕೇಳೋ ಹಂಗಿಲ್ಲ..ನಾ ಹೇಳೋದು ಬಿಡೋಹಂಗಿಲ್ಲ...ಮಂದೀದು ಬಿಡಲಿ..ಸ್ವಂತ ಕಾಳಜೀನೂ ಇಲ್ಲಂದ್ರ ...." ಎಲ್ಲಾ ಬಿಟ್ಟು ಬದಕ್ಬೇಕರ ಯಾಕ? ಅನುಭವಿಸೇನsss ಹೋಗೋದು " ಅನ್ನೋ ತತ್ವ ಸಿದ್ಧಾಂತ...ಇದೂ ಒಂದು ಭವರೋಗ...

.**** **** **** ****  ****
            ಇಂದು ಇಂಥ ಜನರೇ ಹೆಚ್ಚು.,ಮನಬಂದಂತೆ ಬದುಕು...ನವಮಾಸವಿಲ್ಲ...ಪ್ರಸವ ವೇದನೆಯಿಲ್ಲ...ಧಿಡೀರ್ ಡೆಲಿವರಿಯ ಆಸೆ..ಇರುಳೇ ಇಲ್ಲದ ಹಗಲ್ಗನಸುಗಳ ಅಕ್ಷಯ ಪಾತ್ರೆ ಎಲ್ಲರ ಬಳಿ..ಅವರದೇ ಚಿತ್ರೀಕರಣ..ಅವರದೇ ತಾರಾಗಣ...ಎಲ್ಲೆಲ್ಲೂ ಮುಳ್ಳಿಲ್ಲದ ಗುಲಾಬಿಗಳ ಕನಸುಗಳು....ವಿಲಾಸದ ವಿಳಾಸಗಳು...

( ಕೊನೆಯ ಪ್ಯಾರಾಗ್ರಾಪ್ 'ಎರವಲು')

ಒಳಗು... ವೃದ್ಧ್ಯಾಪ್ಯ- ಅಂದರೆ 'ಮರು ಬಾಲ್ಯ'- ಅಂತ ಕೇಳಿದ್ದೆ/ನೋಡಿದ್ದೆ/ನಕ್ಕಿದ್ದೆ.ಈಗ ಅನುಭವಿಸುತ್ತಿದ್ದೇನೆ...ಓದಬೇಕು- ನನ್ನಣ್ಣ  ಆಗುವುದಿಲ್ಲ.ಬರೆಯಬೇಕು...