Thursday 15 March 2018

ಪ್ರಶ್ನೆ

ದೇವ,ನಿನಗೆ ಎನಿತು ಭಕ್ತರು!
ಎನಿತು ಕಾಣಿಕೆ!! ಬೇಡಿಕೆ!!!
ನಿನ್ನ ಪದತಲದಲ್ಲಿ ಸುಖಿಸುವ
ಜನಕೆ ಎಲ್ಲಿಯ ಹೋಲಿಕೆ...
ಗಲ್ಲಿ- ಗಲ್ಲಿಗೂ,ಸೊಲ್ಲುಸೊಲ್ಲಿಗೂ
ನಿಲ್ಲದಿಹ ನಾಮಾಮೃತ...
ಫಲಗಳೆನಿತೋ..ಪುಷ್ಪವೆನಿತೋ
ಅಡಿಯಿಂದ್ಮುಡಿಗೂ ಆವೃತ...
ದೀನ- ದಲಿತರು,ಸಾಧು- ಸಂತರು
ಬಡವ- ಬಲ್ಲಿದರೆಲ್ಲರೂ...
ನಿನ್ನ ನಾಮದಬಲದ ನೆರಳಲೆ
ಮುಕುತಿ ಕನಸನು ಕಾಣ್ವರು...
ಪಾಪ ನಶಿಸಲು,ಪುಣ್ಯ ಫಲಿಸಲು
ನಿನ್ನ ಕೃಪೆಯದು ತಾರಕ...
ಸಗ್ಗ ಸುಖವನೇ ಇತ್ತು ಕರುಣಿಸೆ
ನಿನ್ನ ಅಭಯವೇ ಪೂರಕ...
ಎಂಬ ಮಾತನು ಕೇಳಿಬೆಳೆದಿಹೆ
ಎನಿತು ಸತ್ಯವೋ..ಮಿಥ್ಯವೋ...
ನಿತ್ಯ ಬದುಕಿನ ಹಲವು ಮುಖದಲಿ
ಭ್ರಮಿಸಿ ಮಿಂಚುವ ಚಿತ್ತವೋ..
ಶಂಕೆ ಸಾವಿರ..ಹಲವು ವರ್ಣ..
ನೂರು ಅನಿಸಿಕೆ ..ಹೇಳಿಕೆ...
'ಸರ್ವ ಸಮ್ಮತ ಇರುವ ತೋರು,
ಒಂದೇ ಒಂದು ಕೋರಿಕೆ...
    
                **********

No comments:

Post a Comment

ಹಾಗೇ ಪುಕ್ಕಟೆ 'ಲಹರಿ'

ಎರಡೂವರೆ ತಿಂಗಳ ಹಿಂದೆ ಒಂದು ದಿನ ಏಕದಂ ಬಲಭುಜ ಏಕಾಏಕಿ ವಿಪರೀತ ನೋವೆದ್ದು,ಡಾಕ್ಟರಿಗೆ ತೋರಿಸಿ,‌ MRI ಆಗಿ, Muscle tear ಅಂತ ನಿರ್ಧಾರ ವಾಗಿ, ಮೊದಲು operation ಅಂತ...