Tuesday, 18 December 2018

ನೀನು

ನೀನ
..

ನೀನೆಂದರೆ ನಿನ್ನ ವಯಸ್ಸಲ್ಲ...
ನೀ ಧರಿಸುವ ಬಟ್ಟೆಗಳಲ್ಲ..
ನಿನ್ನ ಆಕರ್ಷಕ ತೂಕವಲ್ಲ...
ನಿನ್ನ ಕೂದಲಿನ ಬಣ್ಣವಲ್ಲ...
ನಿನ್ನ ಗಲ್ಲದ ಗುಳಿಗಳಲ್ಲ...
ನಿನ್ನ ಹೆಸರು ಸರ್ವಥಾ ಅಲ್ಲ..

ನೀನೆಂದರೆ,

ನೀನು ಓದಿದ ಪುಸ್ತಕಗಳು..
ನೀನು ಆಡುವ ಮಾತುಗಳು..
ನಿನ್ನ ಬೆಳಗಿನ ಗೊಗ್ಗರು ದನಿ...
ನೀನು ಮುಚ್ಚಿಡಲೆತ್ನಿಸುವ ಮುಗುಳ್ನಗೆ..
ನೀನು ಏಕಾಗಿಯಾಗಿದ್ದಾಗ ಗುನುಗುವ ಹಾಡು...
ನೀನೆಲ್ಲೆಡೆ ಸುತ್ತಾಡಿ ಮರಳಿ ಬಂದ ನಿನ್ನದೇ ಮನೆ...
ನೀನೆಂದರೆ ನಿನ್ನವೇ ನಂಬಿಕೆಗಳು...
ನೀನೆಂದರೆ ನಿನ್ನ ಮುಗುಳ್ನಗೆಯ ಮಿಂಚು...
ನೀನೆಂದರೆ ಹನಿಗೂಡುವ ನಿನ್ನ ಕಣ್ಣಂಚು...
ನೀನು ಪ್ರೀತಿಸುವ,ನಿನ್ನನ್ನು ಪ್ರೀತಿಸುವ ಜನ...
ನೀನು ಪ್ರೀತಿಸುವ ನಿನ್ನ ಭವಿಷ್ಯದ ಕನಸುಗಳು...
ನೀನು ನಿನ್ನದೇ 'ಜೀವನ ಸೌಂದರ್ಯ...'

ಆದರೆ 'ನೀನಲ್ಲದ''ನಿನ್ನನ್ನು '
ಇತರರು ಬೇರೆಯಾಗಿ
ಬಣ್ಣಸಿದ್ದನ್ನು 
ನಂಬಿದಾಗಲೇ
ನೀನಾರು ಎಂಬುದನ್ನು
ನೀನು ಮರೆತೇಬಿಟ್ಟೆ...

( ಮೂಲ ಇಂಗ್ಲಿಷ  ಕವನ_Erin Hanson ರವರ NOT
ಭಾವಾನುವಾದ: ಶ್ರೀಮತಿ,ಕೃಷ್ಣಾ ಕೌಲಗಿ
ಕವನ ಕೃಪೆ: ರಾಧಾ ಕುಲಕರ್ಣಿಯವರ ಗೋಡೆಯಿಂದ)

Monday, 17 December 2018

ನಾನೂ ಧಾರವಾಡೀ...

ಹಾಗೇ ಸುಮ್ಮನೇ....

ನಾನು ಧಾರವಾಡೀ...

       ‌‌‌‌         ನಾವು ಧಾರವಾಡದವರು...ಬಹಳೇ ಧಾರಾಳಿಗಳು..ಎಲ್ಲದರಲ್ಲೂ...ಅಂತೆಯೇ ಮಾತಿನಲ್ಲೂ...
ಎತ್ತರದ ಧ್ವನಿಯಲ್ಲಿ,ಅಲ್ಪಪ್ರಾಣ,ಮಹಾ ಪ್ರಾಣಗಳಿಗೆ ಕಿಂಚಿತ್ತೂ ಲೋಪ ಬರದಂತೆ,ಗಂಡು ಕನ್ನಡದಲ್ಲಿ ಹರಟೆ ಹೊಡೆಯುವದೇ  ನಮಗೆ ಹಬ್ಬ..
   ‌‌‌‌                  ನಾನಂತೂ ಶಿಕ್ಷಕಿ ಬೇರೆ..ಬಾಯಿ ತೆಗೆದರೆ ಕನಿಷ್ಠ ಒಂದು ಕೊಠಡಿಯಲ್ಲಿ ಕುಳಿತ ಐವತ್ತು ಹುಡುಗರು ಸದ್ದಿಲ್ಲದೇ ಕುಳಿತು ಕೇಳಬೇಕು,ಅಂಥ ದನಿ..ಅದು ಬೇಕೇಬೇಕು...ಇಲ್ಲದಿದ್ದರೆ ಐವತ್ತು ಚಿಲ್ಲರೆ ಧ್ವನಿಗಳ ಸದ್ದು ಕೇಳಬೇಕಾಗುತ್ತದೆ....ಒಂದು ರೀತಿಯಲ್ಲಿ ನಮ್ಮ ದನಿಯೇ ನಮ್ಮ( ಶಿಕ್ಷಕರ) identity....ಇದು ಎಲ್ಲರಿಗೂ ಗೊತ್ತು.
   ‌‌‌‌       ‌         ಹೀಗಾಗಿ ನನ್ನ ಧ್ವನಿ ಒಂದು ನಿರ್ದಿಷ್ಟ ಮಟ್ಟಕ್ಕೆ fix ಆಗಿತ್ತು..ಧಾರವಾಡದಲ್ಲಿ ಇರುವವರೆಗೆ ಅದು ಸಮಸ್ಯೆಯೂ ಆಗಿರಲಿಲ್ಲ...
          ‌‌‌         ‌‌‌‌‌‌‌‌    2006 ರಲ್ಲಿ ಬೆಂಗಳೂರಿಗೆ ವಲಸೆ ಬಂದಾಗ ಮೊದಲಸಲ ಅರಿವಾಯಿತು...ಬದಲಾವಣೆ ಅನಿವಾರ್ಯ ಎಂದು. Apartment ಸಂಸ್ಕೃತಿಯಿರುವ ಬೆಂಗಳೂರಿನಲ್ಲಿ ' ನಮ್ಮ ಮನೆ ಪೂರ್ತಿಯಾಗಿ ನಮ್ಮದಲ್ಲ.. ಎಡಗೋಡೆ ಅರ್ಧ ಎಡಕ್ಕೆ ಇರುವವರದು.ಬಲಗಡೆಯದು ಬಲಗಡೆಯ ಮನೆಗೂ ಸೇರಿದ್ದು...ನಮ್ಮ ಛತ್ತು ಮೇಲಿನವರ ನೆಲ..ನಮ್ಮ ನೆಲ ಕೆಳಗಿನವರ ಛತ್ತು...ಹೀಗಾಗಿ ಆಡುವ ಮಾತುಗಳೂ ಪೂರ್ತಿ ನಮ್ಮವಲ್ಲ..ಭಾಗಶಃ ಎಲ್ಲರವೂ...
            ‌‌‌‌    ಹೀಗಾಗಿ ನಾನು ಬಾಯಿ ತೆಗೆಯುವ ಮೊದಲೇ ಮಕ್ಕಳು ' ದನಿ ತಗ್ಗಿಸು' ಎಂಬಂತೆ ಕೈಸನ್ನೆ ಮಾಡುತ್ತಿದ್ದರು..
ಅವರಿಗೆ ನನ್ನಿಂದ ಮುಜುಗರಾಗುವದು ನನಗೂ ಇಷ್ಟವಿರದ್ದರಿಂದ voice modulation ಗೆ ನಾನೂ ತಯಾರಾಗಲೇಬೇಕಾಯಿತು...
    ‌‌‌                  ಹಾಗೆ ನಿರ್ಧರಿಸಿದ ದಿನವೇ ಧಾರವಾಡದಿಂದ ಒಂದು ಫೋನು ಬಂತು..ಮೈಯೆಲ್ಲಾ ಎಚ್ಚರಿಟ್ಟುಕೊಂಡು ಜೇನು ಧ್ವನಿಯಲ್ಲಿ ' ಹಲೋ 'ಎಂದೆ..
ಆ ಕಡೆಯವರು ಸಂದೇಹದ ಧ್ವನಿಯಲ್ಲಿ,ನಿಧಾನವಾಗಿ 'ಟೀಚರ್ ಇದ್ದಾರಾ? ' ಅಂದರು..
' ಹೇಳಿ ,ಯಾರು ಬೇಕಾಗಿತ್ತು?' _
ಧ್ವನಿಯ ನಿಯಂತ್ರಣ ಬಿಟ್ಟು ಕೊಡಲಿಲ್ಲ...
' ಕೌಲಗಿ ಟೀಚರ್ ಬೇಕಿತ್ತು.'
' ಹೇಳಿ, ನಾನೇ..ಟೀಚರೇ ಮಾತಾಡ್ತಿದ್ದೇನೆ'
ಧ್ವನಿಯ ಸುಳಿವು ಸಿಕ್ಕಿತೇನೋ..
' ಯಾಕ ಶ್ರೀಮತಿ, ಆರಾಮಿಲ್ಲೇನು?'_
ಗೆಳತಿಯ ಧ್ವನಿಯಲ್ಲಿ ಇನ್ನಿಲ್ಲದ ಆತಂಕ..
' ಯಾಕ ನನಗೇನಾಗ್ಬೇಕಿತ್ತು'?
' ಇಲ್ಲ,ನರಸತ್ತ ದನಿ ಬರಲಿಕ್ಹತ್ತದ..ನೀ ಮಾತಾಡ್ತಿ ಅನಿಸೇಒಲ್ಲದು..'
'ಏನಿಲ್ಲ,ನಾ ಇರೋಹಂಗ ಇದ್ದೇನಿ..'
' ಸುಳ್ಳು ಹೇಳಬ್ಯಾಡಾ..ನೀ ಆರಾಮ ತೊಗೋ..ನಾ ಆಮ್ಯಾಲ ಮಾಡ್ತೇನಿ?
'ಇಲ್ಲ ಮಾರಾಯ್ತಿ,ನನಗೇನೇನೂ ಆಗಿಲ್ಲ..ಹೇಳು..ಹೇಳು..'
ಹಿಂಗ ಸ್ವಲ್ಪು ಹಗ್ಗ ಜಗ್ಗಾಟ ಆತು..ನನಗೂ ತಾಳ್ಮೆ ಹೋತು..ಆದದ್ದಾಗಲೀ ಅಂತ ನನ್ನ ಮಾಮೂಲಿ ದನಿ ಒಳಗ ಮಾತಾಡಿದ ಮ್ಯಾಲನ ಅವಳಿಗೆ ನಾ ಆರಾಮ ಇದ್ದದ್ದು ನಂಬಿಕೆಯಾದದ್ದು...
            ‌ 
                     ಈ ಮಾತಿಗೆ ಹದಿಮೂರು ವರ್ಷ ಆಗ್ಲಿಕ್ಕೆ ಬಂತು. ಈಗ ' ವನವಾಸ' ' ಅಜ್ಞಾತವಾಸ' ಎರಡೂ ಮುಗುದ್ವು... ಈಗ ಯಾರದರ ಫೋನ್ ಬಂದ್ರ ಸ್ವಲ್ಪೂ ತ್ರಾಸಾಗುದಿಲ್ಲ..ಯಾಕಂದ್ರ ನನ್ನ ಧ್ವನಿಯ real volume ಉಳಿದವರಿಗೂ ರೂಢಿಯಾಗೇದ ಅಥವಾ ಮಾಡ್ಸೇನಿ ಅನ್ರಿ ಬೇಕಾರ.....ಮತ್ತ ಗೊತ್ತೂ ಆಗೇದ...ಬಾಯಿಷ್ಟ ಜೋರು ಧಾರವಾಡದ ಮಂದೀದು..ಮನಸ್ಸು ಧಾರವಾಡ ಫೇಡೆಗಿಂತಾನೂ sweet ಅಂತ...

Sunday, 16 December 2018

ಮತ್ತೊಂದು ಕಪ್ ಚಹ

ಮತ್ತೊಂದು ಕಪ್ ಚಹ..

ಚಹದ ಕಪ್ ಹಿಡಿದು
ಕಿಟಕಿಯ ಹತ್ತಿರ
ಕುಳಿತಿದ್ದೆ....
ಹೊರಗಿನ ಸುಂದರ
ದೃಶ್ಯಗಳ
ಸವಿಯುತ್ತ
ಗುಟುಕು ಸವಿಯುತ್ತಿದ್ದೆ
ಅರೆ,ಸಕ್ಕರೆ ಮರೆತೇಹೋಗಿದೆ..
ಸಪ್ಪೆ...ಸಪ್ಪೆ...

ಅಯ್ಯೋ! ಮತ್ತಾರು ಹೋಗಬೇಕು ..
ಸಕ್ಕರೆ ತಂದು ಹಾಕಬೇಕು..
ಬೇಏಏಏಜಾರು...
ಇವತ್ತೊಂದು ದಿನ
ಇದೇ ಸಪ್ಪೆ ಚಹ ಕುಡಿದರಾಯಿತು...
....  ....  .... .... .... .... ....
ಖಾಲಿ ಕಪ್ ಕಡೆ
ನೋಡಿದೆ...
ಕಪ್ಪಿನ ಕೆಳಗೆ ಕರಗದೇ
ಉಳಿದ ಸಕ್ಕರೆ...
ನೆನಪು ಬಂದು ನಕ್ಕೆ...
ಹೌದು,ಚಮಚ ಸಿಕ್ಕಿರಲಿಲ್ಲ..
ಆನಂತರ ಮರತೇಬಿಟ್ಟಿದ್ದೆ..

ನಮ್ಮ ಬದುಕೂ ಹೀಗೇ...
ನಮ್ಮ ಸುತ್ತು ಮುತ್ತಲೂ
ಎಷ್ಟೋ ಅಂದದ
ಚಂದದ ಖುಶಿಯ ಕ್ಷಣಗಳು
ಕೈಗೆ ಸಿಗುವಂತೆಯೇ
ಇರುತ್ತವೆ...
ಅದೇ ಕಪ್ಪಿನ ತಳದಲ್ಲಿಯ
ಕರಗದ ಸಕ್ಕರೆಯಂತೆ..

ಸ್ವಲ್ಪು ಯೋಚಿಸಿ..
ಇತರರೊಡನೆ
ನಗುನಗುತ್ತ
ಮಾತಾಡುವಂತೆ
ಹಕ್ಕಿನಿಂದಲೇ ಸಿಟ್ಟಿಗೂ
ಏಳಬೇಕು...ಸಾಧ್ಯವಿದ್ದರೆ
ಅವರ ಕಣ್ಣೀರು
ಒರೆಸಬೇಕು...
ನಮ್ಮವರೇ ಆದವರಲ್ಲಿ
ಮಾನ ಅಪಮಾನವೆಲ್ಲಿ ಬಂತು?!!
ಆದಷ್ಟೂ ' ಸರಳ' ವಾಗಿರೋಣ..
Smart ಆಗಿರಲೇಬೇಕಿಲ್ಲ..
ಯಾಕೆಂದರೆ ನಾವೇನೂ
Samsung phone ಅಲ್ಲ..

( ಹಿಂದಿ ಮೂಲದಿಂದ ಕನ್ನಡಕ್ಕೆ ಅನುವಾದ_
ಕೃಷ್ಣಾ ಕೌಲಗಿ)

Friday, 7 December 2018

ಹೆಣ್ಣು....

ಎಲೆ ಹೆಣ್ಣೆ,
ನಿನಗೆ ಪುರುಷನಾಗುವ
ಹಂಬಲ ಬೇಡ...
ಎಲ್ಲಿಂದ ತರುವಿ
ಆ ಕಠಿಣ ಮನಸ್ಸು...??!!

ಬುದ್ಧನಾಗುವ ಬಯಕೆಯೇ?
ಜ್ಞಾನದ ಹಸಿವು 'ಬುದ್ಧ'ನಿಗೆ ಮಾತ್ರವೇ?
ನಿನಗೂ ಬೇಕೆನಿಸಿದಾಗ
ಗಂಡ,ನವಜಾತ ಶಿಶುವನ್ನು ತೊರೆದು
ನಡುರಾತ್ರಿ ಹೊರಟು ಬಿಡಬಲ್ಲೆಯಾ?....
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!

ಮರ್ಯಾದೆಪುರುಷ ರಾಮನಾಗುವೆಯಾ?
ಮಾಡದ ತಪ್ಪಿಗೆ ಹೆಂಡತಿಯ
ಅಪರಾಧಿಯನ್ನಾಗಿಸಿ
ಕಾಡಿಗಟ್ಟ ಬಲ್ಲೆಯಾ?
ಪರರ ಮಾತು ಕೇಳಿ ಇಲ್ಲದ
ಸಂಬಂಧ ಆರೋಪಿಸಿ
ಅಗ್ನಿಪರೀಕ್ಷೆಗೆ ಗುರಿಮಾಡಬಲ್ಲೆಯಾ?
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!

ಗೋಪಿಲೋಲ ಕೃಷ್ಣನಾಗುವ ಬಯಕೆಯೇ?
ಕೃಷ್ಣ- ರಾಧೆಯರಂತೆ ಬೇರೆ ಹೆಣ್ಣುಗಳೊಂದಿಗೆ
ಸಂಬಂಧ ಕಲ್ಪಿಸಿದ್ದೇ ಆದರೆ
ನೀನೇ ಚರಿತ್ರ ಹೀನಳಾಗುವಿ...
ಇತರರೊಡನೆ ಎರಡು ಮಾತನಾಡಿದರೂ
ಕಲಂಕ ಹೊರಬೇಕಾದೀತು....
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!

ಧರ್ಮವೇ ಉಸಿರಾದ ಯುಧಿಷ್ಟಿರನಾಗಬೇಕೇ?
ಜೂಜಿನಲ್ಲಿ ಮಡದಿಯನ್ನು
ಪಣಕ್ಕೊಡ್ಡಬಲ್ಲೆಯಾ?
ಅವಳ ವಸ್ತ್ರಾಪಹರಣ
ಎಲ್ಲರೊಂದಿಗೆ ಕುಳಿತು ನೋಡಬಲ್ಲೆಯಾ?
ಎಲ್ಲಿಂದ ತರುವಿ ಆ ಕಠಿನ ಮನಸ್ಸು??!!

ಬೇಡ..ನಿನಗೆ ಪುರುಷನಾಗುವ
ಹಂಬಲ ಬೇಡ...
ನೀನೆಂದರೆ_
ಸೂಕ್ಷ್ಮ..ಸಹಜ,..
ಸರಳ...ಕೋಮಲ...
ನಿರ್ಮಲ...ನಿಶ್ಚಲ...
ನೀನೆಂದರೆ _
ನೀತಿ...ಜೀವನ ಪ್ರೀತಿ..
ಅದಕ್ಕೇ ನೀನು ಹೆಣ್ಣು..

ನಿನಗೆ ಪುರುಷನಾಗುವ ಹಂಬಲ ಬೇಡ..
ಎಲ್ಲಿಂದ ತರುವಿ ಆ ಕಠಿಣ ಮನಸ್ಸು..??!!

(ಹಿಂದಿಯಿಂದ ಕನ್ನಡಕ್ಕೆ__ ಶ್ರೀಮತಿ ,ಕೃಷ್ಣಾ ಕೌಲಗಿ..)

Saturday, 1 December 2018

ವಯಸ್ಸೆಷ್ಟು????

ನಿನಗೆಷ್ಟು ವಯಸ್ಸು?????

"ನಿನಗೆಷ್ಟು ವಯಸ್ಸು"
ಉತ್ತರಿಸಲು ನನಗಿಲ್ಲ ಮನಸ್ಸು..
ಹೇಳಬಾರದೆಂದೇನೂ ಇಲ್ಲ..
ಅದೆಂದೂ ನನ್ನ ವಿಚಾರ ಅಲ್ಲವೇ ಅಲ್ಲ...

ವಯಸ್ಸೆಂಬುದು ಕೇವಲ ಒಂದು ಸಂಖ್ಯೆ..
ಬದಲಾಗುವ ಬದುಕಿನ ಎಲ್ಲ ಮಜಲುಗಳನ್ನು
ಅನುಭವಿಸಬೇಕೆಂಬುದೇ ಬದುಕಿನ ವ್ಯಾಖ್ಯೆ..

ಮೊಮ್ಮಕ್ಕಳೊಂದಿಗೆ ಕಾರ್ಟೂನ್ಸ
ನೋಡುವಾಗ ಮಗುವಾಗಬೇಕು...
ಹಾಡಿನ ಗುಂಗಿಗಿಳಿದು ಕಾಲು ಕುಣಿಸುವಾಗ
ಥೇಟ್ ಕಿಶೋರರಾಗಬೇಕು...
ಹಿರಿಯರೊಡನೆ ಹರಟೆಗಿಳಿದರೆ
ಅವರ ವಿಚಾರಗಳನ್ನರಗಿಸಿಕೊಳ್ಳಬೇಕು...

ಇಡಿಯಾಗಿ ಬದುಕುವದೂ ಒಂದು ಕಲೆ...
ಅದರಲ್ಲಿಯೇ ಇದೆ ಬದುಕಿನ ನಿರಂತರ ಸೆಲೆ...
ಸೂರ್ಯನ ಕಿರಣಗಳ,ಚಂದಿರನ ಬೆಳದಿಂಗಳ,
ಕಾಲದ ಪರಿವೆಯಿಲ್ಲದೇ ಹರಿವ ನದಿ ನೀರಿನ
ವಯಸ್ಸೆಂದಾದರೂ ಕೇಳಿದ್ದೀರಾ???

ಹಾಗೆಯೇ ನಮ್ಮ ಬದುಕು...
ಅಂದಮೇಲೆ ಕಳೆದ,ಮುಂದೆ ಕಳೆಯಬೇಕಾದ
ದಿನಗಳ ಲೆಕ್ಕವೇಕೆ ಬೇಕು...????
ಪ್ರತಿ ಗಳಿಗೆಯನ್ನೂ "ನನ್ನದು...ನನ್ನದು ಮಾತ್ರ"
ಎಂಬಂತೆ ಮನಃಪೂರ್ತಿ ಕಳೆದುಬಿಡಬೇಕು..
ಒಂದಿಲ್ಲ ಒಂದು ದಿನ ಇಲ್ಲಿಂದ ಹೊರಡಲೇಬೇಕು...
ಅದುವರೆಗೂ ವಯಸ್ಸು ಲೆಕ್ಕಹಾಕದೇಉಳಿದುಬಿಡಬೇಕು...

( WhatsApp ಸಂದೇಶವೊಂದರ ಭಾವಾನುವಾದ - ಶ್ರೀಮತಿ, ಕೃಷ್ಣಾ ಕೌಲಗಿ..)

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...