ಹೆಣ್ಣು....
ಎಲೆ ಹೆಣ್ಣೆ,
ನಿನಗೆ ಪುರುಷನಾಗುವ
ಹಂಬಲ ಬೇಡ...
ಎಲ್ಲಿಂದ ತರುವಿ
ಆ ಕಠಿಣ ಮನಸ್ಸು...??!!
ಬುದ್ಧನಾಗುವ ಬಯಕೆಯೇ?
ಜ್ಞಾನದ ಹಸಿವು 'ಬುದ್ಧ'ನಿಗೆ ಮಾತ್ರವೇ?
ನಿನಗೂ ಬೇಕೆನಿಸಿದಾಗ
ಗಂಡ,ನವಜಾತ ಶಿಶುವನ್ನು ತೊರೆದು
ನಡುರಾತ್ರಿ ಹೊರಟು ಬಿಡಬಲ್ಲೆಯಾ?....
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!
ಮರ್ಯಾದೆಪುರುಷ ರಾಮನಾಗುವೆಯಾ?
ಮಾಡದ ತಪ್ಪಿಗೆ ಹೆಂಡತಿಯ
ಅಪರಾಧಿಯನ್ನಾಗಿಸಿ
ಕಾಡಿಗಟ್ಟ ಬಲ್ಲೆಯಾ?
ಪರರ ಮಾತು ಕೇಳಿ ಇಲ್ಲದ
ಸಂಬಂಧ ಆರೋಪಿಸಿ
ಅಗ್ನಿಪರೀಕ್ಷೆಗೆ ಗುರಿಮಾಡಬಲ್ಲೆಯಾ?
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!
ಗೋಪಿಲೋಲ ಕೃಷ್ಣನಾಗುವ ಬಯಕೆಯೇ?
ಕೃಷ್ಣ- ರಾಧೆಯರಂತೆ ಬೇರೆ ಹೆಣ್ಣುಗಳೊಂದಿಗೆ
ಸಂಬಂಧ ಕಲ್ಪಿಸಿದ್ದೇ ಆದರೆ
ನೀನೇ ಚರಿತ್ರ ಹೀನಳಾಗುವಿ...
ಇತರರೊಡನೆ ಎರಡು ಮಾತನಾಡಿದರೂ
ಕಲಂಕ ಹೊರಬೇಕಾದೀತು....
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!
ಧರ್ಮವೇ ಉಸಿರಾದ ಯುಧಿಷ್ಟಿರನಾಗಬೇಕೇ?
ಜೂಜಿನಲ್ಲಿ ಮಡದಿಯನ್ನು
ಪಣಕ್ಕೊಡ್ಡಬಲ್ಲೆಯಾ?
ಅವಳ ವಸ್ತ್ರಾಪಹರಣ
ಎಲ್ಲರೊಂದಿಗೆ ಕುಳಿತು ನೋಡಬಲ್ಲೆಯಾ?
ಎಲ್ಲಿಂದ ತರುವಿ ಆ ಕಠಿನ ಮನಸ್ಸು??!!
ಬೇಡ..ನಿನಗೆ ಪುರುಷನಾಗುವ
ಹಂಬಲ ಬೇಡ...
ನೀನೆಂದರೆ_
ಸೂಕ್ಷ್ಮ..ಸಹಜ,..
ಸರಳ...ಕೋಮಲ...
ನಿರ್ಮಲ...ನಿಶ್ಚಲ...
ನೀನೆಂದರೆ _
ನೀತಿ...ಜೀವನ ಪ್ರೀತಿ..
ಅದಕ್ಕೇ ನೀನು ಹೆಣ್ಣು..
ನಿನಗೆ ಪುರುಷನಾಗುವ ಹಂಬಲ ಬೇಡ..
ಎಲ್ಲಿಂದ ತರುವಿ ಆ ಕಠಿಣ ಮನಸ್ಸು..??!!
(ಹಿಂದಿಯಿಂದ ಕನ್ನಡಕ್ಕೆ__ ಶ್ರೀಮತಿ ,ಕೃಷ್ಣಾ ಕೌಲಗಿ..)
No comments:
Post a Comment