ಹಾಗೇ ಸುಮ್ಮನೇ.
ಉಣ್ಣುವದೂ ಒಂದು ಕಲೆ...
" ಅಡಿಗೆ ಮಾಡುವದು ಒಂದು ಕಲೆ"_ ಇದನ್ನು ಸಾಕಷ್ಟು ಸಲ ಕೇಳಿ ಆಗಿದೆ...ಆದರೆ ನನ್ನ ಮಟ್ಟಿಗೆ "ಉಣ್ಣುವದು" ಅದನ್ನೂ ಮೀರಿದ ಕಲೆ...ಅಡಿಗೆ ಮಾಡುವವರಿಗೆ ಪರ್ಯಾಯವಿದೆ.. ಅದನ್ನು ನಮಗಾಗಿ ಯಾರೂ ಮಾಡಬಲ್ಲರು.
ನಮ್ಮೂಟವನ್ನು ಬೇರೆಯವರು ಮಾಡಲಾಗದು.ಅದು ನಮ್ಮದೇ ಕೆಲಸ...ಅಂದಮೇಲೆ ಅದರ ಬಗ್ಗೆ ತಿಳಿದು ಕೊಂಡಷ್ಟೂ ಕಡಿಮೆಯೇ..
ತಟ್ಟೆಯಲ್ಲಿ ಪ್ರತಿಯೊಂದು ವ್ಯಂಜನಕ್ಕೂ ನಿರ್ದೇಶಿತ ಸ್ಥಾನಗಳಿರುತ್ತವೆ..ಗಡಿಯಾರದ ಹತ್ತು ಹೊಡೆದಾಗ ಇರುವ ಮುಳ್ಳಗಳ ಸ್ಥಾನದಲ್ಲಿ ಉಪ್ಪು, ನಂತರ ಉಪ್ಪಿನಕಾಯಿ/ ಚಟ್ನಿ/ ಕೋಸಂಬರಿ/ ಪಲ್ಯಗಳು/ ರಸಗಳು/ ಕೆಳಗೆ ಬಲಗಡೆಗೆ ಪಾಯಸ,ಅದರೆಡಭಾಗಕ್ಕೆ ಅಂದರೆ ಎಲೆಯ ಮಧ್ಯದಲ್ಲಿ ಅನ್ನ,ಅದರ ಎಡಭಾಗಕ್ಕೆ ಅಂದರೆ ಎಡತುದಿಯಲ್ಲಿ ಹಪ್ಪಳ/ ಸಂಡಿಗೆ/ ಚಿತ್ರಾನ್ನ/ ಭಜಿ ಉಳಿದವು..ಪದಾರ್ಥದ ಸ್ಥಾನಗಳೂ ಆಯಾ ಪದಾರ್ಥಗಳ ಉಪಯೋಗದ frequency ಆಧರಿತ..ಅನ್ನ ,ರೊಟ್ಟಿ ಚಪಾತಿಗಳು main course ನಲ್ಲಿ ಬರುವದರಿಂದ ಅವು ಕೈಗೆಟಕುವಂತೆ ಮಧ್ಯ ಭಾಗಕ್ಕೆ...ಅದಕ್ಕಾಗಿಯೇ ಪಾಕಶಾಸ್ತ್ರಕ್ಕೆ ಅಷ್ಟೊಂದು ಮಹತ್ವ...
ನಾವು ಚಿಕ್ಕವರಿದ್ದಾಗ ನಮ್ಮ ಊಟ,ಅದರ ವೇಳೆ,ವೇಗಮಿತಿ,ಆಹಾರದ ಆಯ್ಕೆಯ ಮೇಲೆ ಹಿರಿಯರ ಪೂರ್ತಿ ನಿಯಂತ್ರಣವಿರುತ್ತಿತ್ತು...ಯಾವಾಗ ಕೂಡಬೇಕು,ಹೇಗೆ ಕೂಡಬೇಕು,ಏಳಬೇಕು,ಹೇಗೆ ಉಣ್ಣಬೇಕು ಇದಕ್ಕೆಲ್ಲ ನಿರ್ದೇಶಕರೊಬ್ಬರು ಇರುತ್ತಿದ್ದರು..." ಅನ್ನ ಚಲ್ಲಬ್ಯಾಡ...ಚಲ್ಲಿದ್ರ ನಿನ್ ತಲೀಗೆ ಹಾಕಿ ಕಟ್ತೇನಿ" ಎಂದು ಬರುವ ಗುಟುರಿಗೆ ಮಕ್ಕಳ ಚಡ್ಡಿ ಹಸಿಯಾಗುತ್ತಿತ್ತು..ದಾರಿಯಲ್ಲಿ ಚಲ್ಲಿದ ಧಾನ್ಯಗಳು ಕಂಡರೆ ನಾಲ್ಕಾದರೂ ತೆಗೆದುಕೊಂಡು ಕಣ್ಣಿಗೆ ಒತ್ತಿಕೊಳ್ಳುವ,ನಾಲ್ಕು ಮನೆಗೆ ತರುವ ಪರಿಪಾಠವಿತ್ತು..
ಇಂದಿಗೂ ಊಟದ ವಿಷಯಕ್ಕೆ ಹತ್ತಾರು ನಿಬಂಧನೆಗಳನ್ನು ಆರೋಗ್ಯ ಶಾಸ್ತ್ರ ಹೇಳುತ್ತದೆ..
_ ಸರಿಯಾಗಿ ಹಸಿದಿರಲೇಬೇಕು
_ ಊಟಕ್ಕೆ ಮೊದಲು ಕೈಕಾಲು ತೊಳೆಯಲೇ ಬೇಕು
_ ಉಣ್ಣುವಾಗ TV, Mobile ಗಳ ಬಳಕೆ ಸರ್ವಥಾ ಕೂಡದು
_ ಊಟದ ಮಧ್ಯ ಎದ್ದು ಅಡ್ಡಾಡುವ ಹಾಗಿಲ್ಲ..
_ ಊಟಕ್ಕೆ ಮೊದಲು ಜಗಳ, ವಾದ_ ವಿವಾದ,ಸಿಟ್ಟು ಸೆಡವು ಬಿಲ್ಕುಲ್ ಸಲ್ಲದು...
_ ಊಟಕ್ಕೆ ಮೊದಲು ಮನಸ್ಸು ಉಲ್ಲಸಿತವಾಗಿರಬೇಕು
_ ಪ್ರತಿ ಪದಾರ್ಥವನ್ನೂ ಚನ್ನಾಗಿ ನುರಿಸಿ,ಆಸ್ವಾದಿಸಿ ,ಇತರರೊಡನೆ ಹಾಸ್ಯ,ನಗೆಗಳ ಮಧ್ಯ ಸೇವಿಸಿದರೆ ಅರ್ಧ ಪಚನವಾದಂತೆಯೇ..
_ ಆರೋಗ್ಯ ಸಮಸ್ಯೆ ಹೊರತು ಪಡಿಸಿ ,ಒಂದೇ ರುಚಿಗೆ ಅಂಟಿಕೊಳ್ಳದೇ ಎಲ್ಲ ಪದಾರ್ಥಗಳ ರುಚಿಯನ್ನೂ ಸವಿಯಬೇಕು..ಅದಕ್ಕಾಗಿಯೇ ಕಹಿ,ಒಗರುಗಳೂ ಸಹ ' ನವರಸ' ಗಳಲ್ಲಿ ಸ್ಥಾನ ಪಡೆದಿವೆ..
_ ಊಟದ ಜಾಗದಲ್ಲಿ ಸಾಕಷ್ಟು ಗಾಳಿ ಬೆಳಕುಗಳಿರಬೇಕು..
_ ಆದಷ್ಟೂ ಇತರರೊಂದಿಗೆ ಹಂಚಿಕೊಂಡು ಆಹಾರ ವ್ಯರ್ಥವಾಗದಂತೆ ಸಮತೋಲನದ ಊಟ ಮಾಡಿದಾಗ ಆರೋಗ್ಯ ಸಮಸ್ಯೆಗಳು ಕಡಿಮೆ...
ಒಮ್ಮೆ ನಾವೇ ಚನ್ನಾಗಿ ಅವಲೋಕಿಸಿಕೊಂಡರೆ ನಾವು ಮೇಲಿನ ಯಾವುದರ ಮೇಲೂ ಗಮನ ಕೊಡದಿದ್ದುದನ್ನು ಸ್ಪಷ್ಟವಾಗಿ ಕಾಣಬಹುದು..ತರಾತುರಿಯ ಊಟ,ಅಸಮತೋಲನದ ಊಟ, ವೇಳೆ ಸಿಕ್ಕಾಗ,ಎಲ್ಲಿ,ಎಂಥದು ಸಿಗುತ್ತೋ ಅಂಥದು ಅಂದರೆ ಹೊರಗಿನ ಊಟ, ಇವೆಲ್ಲವುಗಳಿಂದಾಗಿ ಇಂದಿನ ಪೀಳಿಗೆಯ ಆರೋಗ್ಯ ಕೆಡಿಸಿಕೊಂಡು ದುಡಿದದ್ದರ ಬಹುಭಾಗ ಆರೋಗ್ಯಸರಿಪಡಿಕೊಳ್ಳಲೆಂದೆ ಖರ್ಚಾಗುತ್ತದೆ..
" ದೈವ ಇದ್ದೂ ಏನೂ ಇಲ್ಲದ ದಾರಿದ್ರ್ಯ ಎಂದರೆ ಇದೇನಾ????
No comments:
Post a Comment