Thursday, 18 April 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ....

ಕುಶಲವೇ..?? ಕ್ಷೇಮವೇ....???
‌ ‌
          ‌‌‌        ಒಮ್ಮೆ ನೀವು ಭೇಟಿಯಾದ,ಇಲ್ಲವೇ ನಿಮಗೆ ಎದುರಾದ ಹಿರಿಯರನ್ನು ಮೇಲಿನ ಪ್ರಶ್ನೆಯೊಮ್ಮೆ ಕೇಳಿ ನೋಡಿ...ಅವರ ಉತ್ತರಗಳು  ತುಂಬಾ colourful ಅಷ್ಟೇ ಅಲ್ಲ, ತುಂಬಾ vibrant ಆದವುಗಳಾಗಿರುತ್ತವೆ..

            _ ಏನೋಪಾ, ಹೀಗಿದ್ದೀನಿ  ನೋಡು .ನೀನೇ ಹೇಳಬೇಕು...
            ‌‌‌
            ‌   ‌  _ ಇದ್ದದ್ದss ಆರಾಮ ಅನಕೊಳ್ಳೋದು...ಹೋದ ವಯಸ್ಸಂತೂ ತಿರುಗಿ ಬರೂದುಲ್ಲ?

                   _ ನೀ ಹೇಳೋ ಹೀರೋ....ನಂದೇನ್ ಕೇಳ್ತಿ...ಊರು ಹೋಗನ್ನತ್ತ....ಕಾಡು ಬಾ ಅನ್ನತ್ತ...

‌‌‌‌‌‌           ‌‌‌     ‌_ ದಿನಾ ಬೇಡ್ಕೊತೇನಿ ಆ ದೇವರನ್ನ..ಕರ್ಸಗೋ ಮಾರಾಯಾ...ಎಷ್ಟು ದಿನಾಂತ ಅನುಭವಿಸಲಿ?

                 _ ಆ ದೇವರಾಟಾ ನೋಡು...ಮುಂದ ಆಳಿ,ಬಾಳಿ ಮಾಡಬೇಕಾದವರನ್ನ ಧುತ್ತಂತ ಹೇಳ್ದ ಕೇಳ್ದ ಎತ್ಗೊಂಡು ಹೋಗ್ತಾನ...ನಮ್ಮಂಥ ಮುದಿಜೀವ ಸಾಯಬೇಕಂದ್ರೂ ನಮ್ಮ ಹತ್ರ ಸುಳಿಯೂದಿಲ್ಲ...

                        _ ಇದ್ದೇನ್ ನೋಡು ಭೂಮಿಗೆ ಭಾರಾಗಿ...ಕೂಳಿಗೆ ದಂಡಾಗಿ...

                   _ ಹೋಗಬೇಕಂದ್ರ ಜೀವೇನು ತಗಣೆನಪಾ...ಒರದೆ..ಸತ್ಯು ಅನ್ಲಲಿಕ್ಕೆ...ಮಾಡಿದ ಪಾಪ  ಕಳೀಬೇಕಲ್ಲಾ...ಮಾಡಿದ್ದು ಇಲ್ಲೇ ಉಂಡು ತೀರ್ಸಬೇಕು...ನನ್ನ ಪಾಳಿ ಬರೋತನಾ ಕಾಯಬೇಕು ..ಕಾಯ್ತೇನಿ..

                     _ ಎಲ್ಲದಕ್ಕೂ time ಬರ್ಬೇಕೋ ಬಾಳಾ...ಇದೊಂದು ದೇವರು ತನ್ನ ಕೈಯಾಗಿಟ್ಗೊಂಡಾನ ನೋಡು..

                    ಇಂಥ ಹತ್ತು ಹಲವಾರು ಹತಾಶೆಯ, ನಿರಾಶೆಯ, ದೇವರ ಮೇಲಿನ ನಂಬುಗೆಯ,ಅಸಹಾಯಕತೆಯ ನಿಟ್ಟುಸಿರುಗಳನ್ನು ಪ್ರಶ್ನೆ ಕೇಳಿದವರು ಕೇಳಿಸಿಕೊಳ್ಳಬೇಕಾಗುತ್ತದೆ...ಅದರರ್ಥ ಅವರಿಗೆ ಬದುಕು ಅಷ್ಟೇನೂ  ಬೇಸರವೇನೂ  ಆಗಿರುವದಿಲ್ಲ..ಆದರೆ  ವೃದ್ಧಾಪ್ಯ  ಸಾವಿಗಿಂತಲೂ ಭಯಾನಕವೆನಿಸುತ್ತದೆ..ಸಾವು ಆ ಗಳಿಗೆಯಲ್ಲಿ ಎಲ್ಲ ಸಮಸ್ಯೆಗಳ ಏಕೈಕ ಪರಿಹಾರವಾಗಿ ಗೋಚರಿಸುತ್ತದೆ..ಮುಂದೆ ಏನೇನು ಅನುಭವಿಸಬೇಕೋ ಎಂಬ ಅವ್ಯಕ್ತ ಭಯ ,ಅಲ್ಲಲ್ಲಿ,ಅವರಿವರ  ಬದುಕಿನ ಅಪ್ರಿಯ ಸತ್ಯಗಳು ಬೇತಾಳದಂತೆ ಬೆನ್ನೇರುತ್ತವೆ..
ವಯಸ್ಸಿಗೆ ಸಹಜ ಅಶಕ್ತತೆ, ಸ್ವಂತದ ಮೇಲಿನ  ಅಪನಂಬಿಕೆ, ದಿನೇದಿನೇ ಕ್ಷೀಣಿಸುವ ಆರೋಗ್ಯ,ಎಷ್ಟೇ ಜತನದಿಂದ ನೋಡಿಕೊಂಡರೂ ಮಕ್ಕಳ ಮುಂದೆ ಹೇಳಿಕೊಳ್ಳಲಾಗದ  ,ವೇದನೆಗಳು ಮೈ _ ಮನಗಳನ್ನು ಕುಗ್ಗಿಸುತ್ತವೆ...ಸೂಕ್ಷ್ಮ ಪ್ರಕೃತಿಯ ಪಾಲಕರಂತೂ  ಮಕ್ಕಳಿಗೆ ಹೊರೆಯಾಗಲಿಚ್ಛಿಸದೇ  ಎಲ್ಲ ನೋವನ್ನು ಗಂಟಲದಲ್ಲಿಟ್ಟುಕೊಂಡ ನಂಜುಂಡರಾಗುತ್ತಾರೆ..ಮಕ್ಕಳು ಸ್ವ ಇಚ್ಛೆಯಿಂದಲೇ ಚನ್ನಾಗಿ ನೋಡಿಕೊಂಡರೂ ನೋವಿನಲ್ಲಿ  ಪಾಲುದಾರರಾಗುವದು ಅಸಂಭವ..
                    ಬರೀ ದೈಹಿಕ ಸಮಸ್ಯೆಯಾದರೆ ಮಾತು ಬೇರೆ...ಕೆಲವರು ತಮ್ಮ  ಜೀವಿತಕಾಲದಲ್ಲಿಯ  ಸಾಧನೆಗಳು,ಗಳಸಿದ ಹಣ... ಬಳಸಿದ  ಅಧಿಕಾರ,,ಪಡೆದ ಕೀರ್ತಿ_ ಹೆಸರು ಇವುಗಳ ಗುಂಗಿನಿಂದ ಹೊರಬಂದು ವೃದ್ಧಾಪ್ಯವನ್ನು ಒಪ್ಪಿಕೊಂಡು, ಗೌರವದ ಬದುಕು ಸಾಗಿಸುವದು ಸಾಧ್ಯವಿದ್ದರೂ  ಅದನ್ನು ಗಮನಿಸುವದಿಲ್ಲ...ಅವರ ' ವಿಜಯನಗರ ಸಾಮ್ರಾಜ್ಯ' ಕಾಲಗತಿಗೆ ಸಿಕ್ಕು ' ಹಾಳು ಹಂಪೆ' ಯಾಗಿದ್ದು ಅವರಿಗೆ ಬಹುದೊಡ್ಡ ಆಘಾತ...ಹಾಗೆ ಬದುಕನ್ನು ಬದುಕಾಗಿ ಸ್ವೀಕರಿಸುವವರು ಇಲ್ಲವೇ ಇಲ್ಲವೆಂದಲ್ಲ..ಇದ್ದಾರೆ..ಆದರೆ ಅತಿ ಕಡಿಮೆ ಸಂಖ್ಯೆಯಲ್ಲಿ...ಬೆರಳಲ್ಲಿ ಎಣಿಸಬಹುದಾದಷ್ಟು ಸಿಗುತ್ತಾರೇನೋ...
                    ‌ಉಳಿದವರು  ಸಾಮಾನ್ಯರು..ಲೋಭ,ಮೋಹ,ಗಳಿಗೆ ಪಕ್ಕಾದವರು...ಅವರನ್ನು ಸಂಭಾಳಿಸಲು,ಒಂದು ಮಗುವನ್ನು ಬೆಳೆಸಲು ಬೇಕಾದಷ್ಟು ಅಕ್ಕರೆ,ಸಹನೆ, ಕಾಳಜಿ ಎಲ್ಲವೂ ಬೇಕು...ಸಧ್ಯಕ್ಕೆ ಸ್ವಂತಕ್ಕೇ ಸಮಯ ಕೊಟ್ಟುಕೊಳ್ಳಲಾಗದ ಇಂದಿನ ಪೀಳಿಗೆ ಇದೆಲ್ಲವನ್ನೂ ತರುವದಾದರೂ ಹೇಗೆ? ಅಷ್ಟೇ ಏಕೆ ಕೆಲ ಕುಟುಂಬಗಳಲ್ಲಿ  ವೃದ್ಧರೇ ಮಕ್ಕಳ ಬೆನ್ನಿಗೆ ಆಸರೆಯಾದ ಉದಾಹರಣೆಗಳೂ ಹೇರಳ ವಾಗಿವೆ...
    ‌‌‌‌           ‌    ಏನೇ ಹೆಚ್ಚು ಕಡಿಮೆಯಾದರೂ ಕಾಲ ಯಾರಿಗಾಗಿಯೂ ಕಾಯುವದಿಲ್ಲ...ವೃದ್ಧರನ್ನು ಮುಕ್ತಗೊಳಿಸುತ್ತದೆ...ಹರೆಯದವರನ್ನು  ವೃದ್ಧರನ್ನಾಗಿಸುತ್ತದೆ..ಮುಂದಿನ ಮಕ್ಕಳು ಅವರನ್ನು ಕೇಳುತ್ತಾರೆ.
              ಕುಶಲವೇ???...ಕ್ಷೇಮವೇ..???

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...