ಇದುವರೆಗೆ ಕಳೆದ ವರ್ಷಗಳನ್ನು
ನೆನೆದಾಗಲೇ ' ಉಳಿದುದು ಅತ್ಯಲ್ಪ'
ಎಂದು ಗೊತ್ತಾದದ್ದು...
ಕೈಯ ಪುಡಿಕೆಯಲ್ಲಿ ಪೇರಿಸಿಕೊಟ್ಟ
ಪೆಪ್ಪರಮೆಂಟಗಳನ್ನು ಖುಶಿ ಖುಶಿ ತಿಂದು
ಖಾಲಿಯಾಗುತ್ತ ಬಂದಾಗಲೇ
ಉಳಿದದ್ದು ಕೆಲವೇ ಎಂದು ಹೌಹಾರಿದ್ದು....
ಅರ್ಥರಹಿತ ನಿಯಮ- ನಿಬಂಧನೆಗಳು
ಕಾನೂನು- ಕಾಯದೆಗಳು ಹೆಸರಿಗಷ್ಟೇ...
ಬದುಕಿಗಲ್ಲ ಎಂದು ಅರಿವಾದದ್ದು...
ಬೆಳೆಯುವ ಆಯುಷ್ಯಕ್ಕೂ ಮಾಗುವ
ಬುದ್ಧಿಗೂ ಸಂಬಂಧವಿಲ್ಲದವರ ಜೊತೆ
ಬದುಕುವದು ವ್ಯರ್ಥವೆಂದು ತಿಳಿದದ್ದು...
ನನಗೀಗ ವೇಳೆಯಿಲ್ಲ..ಪುಡಿಕೆಯೊಳಗಿನ
ಸಿಹಿಗಳನ್ನು ತಳಸೋಸಿ ಆಸ್ವಾದಿಸುವದೇ
ಬುದ್ಧಿವಂತಿಕೆ ಎಂಬ ಸತ್ಯದ ಸಾಕ್ಷಾತ್ಕಾರವಾದದ್ದು...
ವಾಸ್ತವ ಜಗತ್ತಿನಲ್ಲಿ ತಮ್ಮ ತಪ್ಪಿಗೆ ತಾವೇ ನಗುವ,
ತಮ್ಮ ಸಂಭ್ರಮಕ್ಕೆ ತಾವೇ ಮನಸಾರೆ ಹಿಗ್ಗುವ,
ತಮ್ಮ ಕರ್ಮಗಳಿಗೆ ತಾವೇ ಹೊಣೆ ಎಂದನ್ನುವ,
ಬದುಕು- ಬವಣೆಗಳೆರಡನ್ನೂ
ಸಮ ಪರಡಿಯಲ್ಲಿ ತೂಗುವ,ಜನರ
ಮಧ್ಯೆ ಬದುಕಬೇಕು ಎಂಬ ಜ್ಞಾನೋದಯವಾದದ್ದು...
ನಮ್ಮ ಬಳಿ ಬದುಕಿನ ಎರಡು ಆಯಾಮಗಳಿವೆ..
ಒಂದು ಕಳೆದದ್ದು__ ಇನ್ನೊಂದು ಕಳೆಯಬಹುದಾದದ್ದು....
ಕಳೆದದ್ದು ಕಳೆದು ಹೋದ ಮೇಲೆಯೇ
ಕಳೆಯಬಹುದಾದದ್ದರ ಅರಿವಾಗುವದು
ಎಂಬ ಸತ್ಯ ದರ್ಶನವಾದದ್ದು...
( Mario de Andrade ಇವರ "My soul has a hat" ಇಂಗ್ಲಿಷ ಕವನದ ಕನ್ನಡ ರೂಪಾಂತರ_ ನನ್ನಿಂದ)
ಸತ್ಯ ದರ್ಶನ
ReplyDelete