Sunday, 23 September 2018

ಹಾಗೇ ಸುಮ್ಮನೇ...

(ಅನಾಮಿಕರೊಬ್ಬರ ಡೈರಿಯಿಂದ..)" ತಂದೆಯವರ ಕಾಲಿಗೆ ಏಟು ಬಿದ್ದಿತ್ತು..ಕೆಲವು ದಿನಗಳಿಂದ ಕುಂಟಿ ನಡೆಯುತ್ತಿದ್ದರು..ಆಗನಾನಿನ್ನೂ ತುಂಬಾ ಚಿಕ್ಕವ..ಗಣೇಶ ವಿಸರ್ಜನೆಯಾಗಬೇಕಿತ್ತು.ಎಷ್ಟೇ ಪ್ರಯತ್ನಿಸಿದರೂ ಒಂದು ಗಾಡಿಯ ವ್ಯವಸ್ಥೆ ಯಾಗಲಿಲ್ಲ.ತಂದೆಯವರು ನಮ್ಮ ಮೇಲಿನ ಮಹಡಿಯಲ್ಲಿ ವಾಸವಾಗಿದ್ದ ಜಾವೇದ್ ಭಾಯಿಯ ಸಹಾಯ ಕೇಳಿದರು.ನಮ್ಮಮ್ಮನಿಗೆ ಸರಿಬರದೇ ವಿರೋಧಿಸಿದರೂ ಅನ್ಯ ಮಾರ್ಗಕಾಣದೇ ಸುಮ್ಮನಾಗಬೇಕಾಯಿತು..ಅಷ್ಟರಲ್ಲಿ ಪ್ರತ್ಯಕ್ಷನಾದ ಜಾವೇದ ಭಾಯಿ," ಅರೆ ಸಾಬ್,  ಗಾಡಿ ಇಲ್ಲ ಅಂದ್ರೂ ಹೆಗಲಮೇಲೆ ಹೊತ್ತೊಯ್ಯುತ್ತೇನೆ.ಕಾಳಜಿ ಬಿಡಿ.ನೀವು 'ಹೂ:' ಅನ್ನಿ ಸಾಕು ಅಂದವ ಕೈಯಲ್ಲಿ ಚಾವಿ ತಿರುಗಿಸುತ್ತ ಹಾಜರಾದ..ನಿರ್ವಿಘ್ನವಾಗಿ ವಿಸರ್ಜನೆ ಯಾಯಿತು.ಮರಳಿ ಬಂದ ಮೇಲೇ ಎಷ್ಟೇ ಅಂಗಲಾಚಿದರೂ ಟೆಂಪೋದ ಬಾಡಿಗೆ ಸ್ವೀಕರಿಸಲಿಲ್ಲ.ಕೊಟ್ಟ ಮೋದಕವನ್ನು ಕಣ್ಣಿಗೊತ್ತಿ ಸ್ವೀಕರಿಸಿ ಮನೆಗಿಷ್ಟು ಕೊಂಡೊಯ್ದ..ಅಂದಿನಿಂದ ಗಣಪತಿ ಸ್ಥಾಪನೆ,ಪೂಜೆ,ನಮ್ಮದು,ವಿಸರ್ಜನೆ ಜಾವೇದ್ ಭಾಯಿದು ಎಂಬುದು ಅಲಿಖಿತ ಒಪ್ಪಂದವಾಯ್ತು..  ನಂತರದಲ್ಲಿ ನಾವು ಬಸ್ತಿ ಬದಲಾಯಿಸಿದೆವು...ಚಾಳ್ ಬದಲಾಯಿತು..ಮನೆ ಬದಲಾಯಿತು..ಜಾವೇದನ ಗಾಡಿಗಳು ಬದಲಾದವು..ಆದರೆ ವಿಸರ್ಜನೆಯ ಹೊಣೆಯಿಂದ ಜಾವೇದ ನುಣುಚಿಕೊಳ್ಳುವ ಪ್ರಯತ್ನ ಮಾಡಲಿಲ್ಲ..ನಾವೂ ಅದನ್ನು ಬಯಸಲಿಲ್ಲ..ಆದಿನ ಎಲ್ಲೇ ಇರಲಿ,ಹೇಗೇ ಇರಲಿ, ಹೊತ್ತಿಗೆ ಸರಿಯಾಗಿ ಹಾಜರಾಗುತ್ತಿದ್ದ.ಅಪ್ಪ ಅಮ್ಮನಿಗೆ ಸತಾಯಿಸುತ್ತಿದ್ದರು.."ನಿನ್ನ ಸ್ವಾದಿಷ್ಟ ಮೋದಕಕ್ಕೆಂದೇ ಅವನು ಬರುವದೆಂದು...".." ನಿಮ್ಮ ಗಣಪನಿಂದಲೇ ನಾನಿರುವದು..ಉಣ್ಣುವದು.ತಿನ್ನುವದು...ಅವನಿಗೆ ಇಷ್ಟೂ ಮಾಡದಿದ್ದರೆ ಹೇಗೆ" - ಜಾವೇದ ಕೈ ಮುಗಿದು ಹೇಳುತ್ತಿದ್ದ...ಅಖಂಡ ಇಪ್ಪತ್ತಾರು ವರ್ಷ ಹೀಗೆಯೇ ನಡೆಯಿತು..ಈ ನಡುವೆ ತಂದೆಯ ದೇಹಾಂತ ವಾಯಿತು..ಆದರೆ ಜಾವೇದ ಭಾಯಿ ಪರಂಪರೆ ನಿಲ್ಲಿಸದೇ ಮುಂದುವರಿಸಿಕೊಂಡು ಹೋದರು.ಮೊದಲಿನಂತೆ ಊಟ ಮಾಡುತ್ತಿರಲಿಲ್ಲ.ಬರಿ ಮೋದಕ ಮನೆಗೆ ಕೊಂಡೊಯ್ಯುತ್ತಿದ್ದರು...ಇಂದಿಗೂ ಒಂದು ಬಾರಿಯೂ ಗಾಡಿಯ ಬಾಡಿಗೆ ಕೇಳುವ ಧೈರ್ಯ ನನಗಾಗುತ್ತಿರಲಿಲ್ಲ....    ಈ ವರ್ಷ ಮಾರ್ಚ ತಿಂಗಳಲ್ಲಿ ಜಾವೇದ ಭಾಯಿ ತೀರಿಕೊಂಡ ಸುದ್ದಿ ಬಂತು.ಈ ದಿನ ವಿಸರ್ಜನೆಯಾಗಬೇಕು...ಏನು ಮಾಡಬೇಕೆಂಬ ವಿಚಾರ ತಲೆ ತಿನ್ನುತ್ತಿತ್ತು..ನನ್ನ ಬಳಿ ಈಗ ಗಾಡಿಯಿದೆ.ಆದರೆ ಜಾವೇದನ ಗಾಡಿ ಬಪ್ಪನಿಗೆ ಬೇಕು..ಅಮ್ಮನ ಧ್ವನಿ ಕೇಳಿತು.ಆರತಿ ಮುಗಿಸಿ ನೊಡುತ್ತೇನೆ.ಮನೆಬಾಗಲಿಲ್ಲೊಬ್ಬ ಅಪರಿಚಿತ ಯುವಕ," ಅಮ್ಮಾ,ಗಣಪತಿ ವಿಸರ್ಜನೆಗೆ ಗಾಡಿ ತಂದಿದ್ದೇನೆ.ನಾನು ಜಾವೇದ ಭಾಯಿಯ ದೊಡ್ಡ ಮಗ. ಅಬ್ಬಾಜಾನ್ ಹೇಳಿ ಸತ್ತಿದ್ದಾರೆ..ನಿಮ್ಮ ಗಣಪ ನಮ್ಮ ಗಾಡಿಯಲ್ಲೇ ಹೋಗಿ ವಿಸರ್ಜನೆಯಾಗತಕ್ಕದ್ದು..ಅದು ಪರಂಪರೆಯಷ್ಟೇ ಅಲ್ಲ ..ನಮಗೆ ಶ್ರೇಯಸ್ಸು ಕೂಡ ಎಂದು..ಅದಕ್ಕೇ ಬಂದಿದ್ದೇನೆ.." ಅಮ್ಮನ ಕಣ್ಣು ತುಂಬಿ ಬಂದವು...ಅಂದು ಕೊಟ್ಟ ಮೋದಕಗಳಲ್ಲಿ ಎರಡು ಹೆಚ್ಚು ಕೊಟ್ಟದ್ದು ಜಾವೇದ ಭಾಯಿಗಾಗಿ.......ಅಂದು ನಾನೆಂದುಕೊಂಡೆ," ದೇವರು ಯಾವುದೇ ಧರ್ಮಕ್ಕೆ ಸೇರಿರಲಿ ,'ಉತ್ಸವ' ಮಾತ್ರ    ಆತ್ಮೀಯ ಸಂಬಂಧಗಳದ್ದು..ಆ ಸಂಬಂಧಗಳಲ್ಲಿರುವ ಮಾನವೀಯತೆಯದು"..( ಮರಾಠಿ ಮೂಲ...)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...