Saturday, 30 March 2019
ಹಾಗೇ ಸುಮ್ಮನೇ... ಇದಾವ ರೋಗ....??? ನಿನ್ನೆ ಪೇಪರ್ ಓದುತ್ತಿದ್ದೆ....print ದೋಷವೋ,ನನ್ನ ಕಣ್ಣಿನ ತೊಂದರೆಯೋ ಕೆಲ ಭಾಗ ಸ್ಪಷ್ಟವೆನಿಸಲಿಲ್ಲ...ಆಭಾಗವನ್ನು ZOOM ಮಾಡಲು ನೋಡಿ ವಿಫಲಳಾದೆ..ಅದು ಪೇಪರ್, zoom ಮಾಡಲಾಗದು ಎಂಬುದು ನಂತರ ಹೊಳೆಯಿತು...ಮೊನ್ನೆ ಒಂದು ದಿನ mobile ಕೈಲಿ ಹಿಡಿದು TV on ಮಾಡುವ ಪ್ರಯತ್ನ ನಡೆದಿತ್ತು...ಹಿಂದೆಂದೋ ಒಂದಿನ ಕೂದಲು ಬಾಚುತ್ತ ಮುಖ ಕಾಣುವದಿಲ್ಲ ಎಂದು ಪೇಚಾಡಿದೆ...ನಿಂತದ್ದು ಕನ್ನಡಿಯ ಮುಂದಲ್ಲ...ಬಟ್ಟೆಯ cupboard ಮುಂದೆ...ಎದುರಿಗಿದ್ದ ಕುಕ್ಕರ್ ಸೀಟಿ ಹೊಡೆದರೆ, ಯಾರಾದರೂ ಕರೆಗಂಟೆ ಬಾರಿಸಿದರೆ mobile ರಿಂಗಣಿಸಿತೆಂದು ಗೋಡೆ ಗೋಡೆ ಹಾಯುವದು.. ಈ ಅಭ್ಯಾಸ ಹೊಸದಲ್ಲ... ನಾನು ನೌಕರಿ ಮಾಡುವಾಗ ನನ್ನ ಶಾಲೆಯಲ್ಲಿ ಮರೆವಿಗೆ ನನ್ನ ಹೆಸರು ಪರ್ಯಾಯವಾಗಿ ಬಳಕೆಯಾಗುತ್ತಿತ್ತು...ಹಲವಾರು ಸಲ ಮೋಜಿಗೆ,ಕೆಲವೊಮ್ಮೆ ಪೇಚಿಗೆ ಸಿಗಿಸುತ್ತಿತ್ತು..ನನ್ನ ಸಣ್ಣ ಪುಟ್ಟ ದೋಷಗಳು ಸಲೀಸಾಗಿ ಮಾನ್ಯವಾಗಿಬಿಡುತ್ತಿದ್ದವು... ನನಗೇ ಮುಜುಗರವಾಗುತ್ತಿತ್ತು..ನನ್ನ ಲೋಪವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದೇನೆಂದು ಅರ್ಥೈಸಿದರೆ ಎಂದು ಒಂದು ರೀತಿಯ ಭಯವೆನಿಸುತ್ತಿತ್ತು...ರಿಟೈರ್ ಆಗುವವರೆಗೂ ಅಂಥ ಅವಘಡ ವೇನೂ ಸಂಭವಿಸದೇ ನನ್ನನ್ನು ಸರಳವಾಗಿ ನಿವೃತ್ತಿಯಾಗುವಂತೆ ಮಾಡಿದ್ದು ನನ್ನ ಪುಣ್ಯ..ಸಹೋದ್ಯೋಗಿಗಳ ದಯೆ.. ಇದೇಕೆ ಹೀಗಾಗುತ್ತದೆ??..ಆಗಿನದು ಅರ್ಥವಾಗುತ್ತದೆ.. ಏಕಾಏಕಿ single parent ಆಗಿ ಮೂರು ಚಿಕ್ಕಚಿಕ್ಕ ಮಕ್ಕಳನ್ನು ನಿಭಾ ಯಿಸಬೇಕಾಗಿ ಬಂದಾಗಿನ ಮಾನಸಿಕ ಗೊಂದಲ,ಅಧೈರ್ಯ, ಅನಿವಾರ್ಯತೆಯಿಂದ ಹಾಗಾಗಿದ್ದು ಸ್ಪಷ್ಟವಾಗಿತ್ತು... ಈಗಿನದೇ ಬೇರೆ...ಆಧುನಿಕ ಶೈಲಿಯ ಜೀವನದಿಂದಾಗಿ multi task life style ನ ಪರಿಣಾಮವಿದು...ಇದು ನಾನು ಹೇಳಿದಾಗಲೆಲ್ಲ ನನ್ನ ಪರಿಚಯಸ್ಥರು ಅಚ್ಚರಿಪಡುವದಿಲ್ಲ..ಅಸಡ್ಡೆ ಮಾಡುವದಿಲ್ಲ...ನನ್ನದೂ ಇದೇ ಹಣೆಬರಹ ಎಂದು ಸಮ್ಮತಿಸುತ್ತಾರೆ...ಅದೇ ಸಮಾಧಾನ..ಎಲ್ಲರ ಬದುಕಿಗೂ ತನ್ನದೇ ವೇಗ...ಧಾವಂತ...ಕೆಲಸದ ದರ್ದು...traffic ಬೇಗ ದಾಟುವ ತರಾತುರಿ....ಮಕ್ಕಳ ದಿನಚರಿಯ follow ಮಾಡುವಿಕೆ, ಆಗಾಗ ಕಾಣಿಸಿಕೊಳ್ಳುವ ಅತಿಥಿಗಳ ಉಪಚಾರ.... ಹೀಗಾಗಿ ಬೇಕಾಗಿಯೋ,ಬೇಡವಾಗಿಯೋ ಎಲ್ಲರೂ ಚಕ್ರವ್ಯೂಹದ ಅಭಿಮನ್ಯುಗಳೇ...ಒಳಹೋದವರಿಗೆ ಹೊರಬರುವ ದಾರಿಕಾಣದೇ ಕಂಗಾಲು...ಆಗ ಬೇಡವಾದ ಸರಕುಗಳ ಗೋಡೌನ್ ಆದ ತಲೆ ಕಾರ್ಯ ನಿರ್ವಹಣೆಯಲ್ಲಿ ಎಡುಹುವದು ಸಹಜ.... ಮೇಲಿನ ಯಾವೂ ಕಾರಣಗಳು ನನಗೀಗ ನೆವಗಳಲ್ಲ..ಅದು ನನಗೆ ಗೊತ್ತು..." ಕೃಷ್ಣಾ,ನಿನಗೆ ವಯಸ್ಸಾಯ್ತು"_ ಎಂಬುದರ ಸ್ಪಷ್ಟ ಸೂಚನೆ ಒಂದು ಕಡೆಯಾದರೆ, ಏಕ ಕಾಲಕ್ಕೆ ಹಲವು ಕೆಲಸಮಾಡಬಲ್ಲೆವೆಂಬ over-confidence ಸಮಯಕ್ಕೆ ಸರಿಯಾಗಿ ಕೈ ಕೊಡುವದು ಇನ್ನೊಂದು ಕಾರಣ...ನನಗೆ ಈ ಬಗ್ಗೆ ಅಪಮಾನವಾಗಲಿ,ಅಸಡ್ಡೆಯಾಗಲಿ ಖಂಡಿತ ಇಲ್ಲ...ದೇಹ,ಮನಸ್ಸು,ಇಚ್ಛಾಶಕ್ತಿ,ಮನಸ್ಸಿದ್ದರೂ ಮಾಡಲಾಗದ ಅಸಹಾಯಕತೆ, ದೇಹ- ಮನಸ್ಸುಗಳ 'ಜಗಳ'ಬಂದಿ ಇಂಥ ,ಹೇಳಬಲ್ಲ,ಹೇಳಲಾಗದ ಹತ್ತು ಹಲವು ಕಾರಣಗಳು...ಹೀಗಾದಾಗಲೆಲ್ಲ ನನ್ನ ತಲೆಯನ್ನು ನಾನೇ ಮೊಟಕಿಕೊಂಡು,ಒಮ್ಮೆ ಹುಸಿನಗೆ ನಕ್ಕು, ಹಗುರಾಗಿ ಮುನ್ನಡೆದು ಕಂಡಕ್ಟರನಂತೆ ' right...right..' ಅನ್ನುವದನ್ನು ರೂಢಿಸಿಕೊಂಡಿದ್ದೇನೆ...' ಕಾಲಾಯ ತಸ್ಮೈನಮಃ'...
Sunday, 10 March 2019
ಹಾಗೇ ಸುಮ್ಮನೇ...
ಹಾಗೇ ಸುಮ್ಮನೆ...
ಒಂದು ಮುಷ್ಟಿ ಆಕಾಶ..
( ವಿಜಯಕ್ಕನ ಕ್ಷಮೆ ಕೇಳಿ)
ಅದೊಂದು ಕಾಲವಿತ್ತು..ಈಗಿನ ಮಕ್ಕಳು ಒಂದೆರಡು ಗಂಟೆ ಆಡಲು ಹೊರಹೋಗುವಂತೆ ನಾವುಗಳು ಮನೆಗೆ ಬರುತ್ತಿದ್ದೆವು..ಮನೆಯವರಿಗೂ ಅದು ಅಭ್ಯಾಸವಾಗಿರುತ್ತಿತ್ತು.".ಕತ್ತೆ ತಪ್ಪಿಸಿಕೊಂಡರೆ ಹಾಳುಗೋಡೆ...ಹೊಟ್ಟೆ ಕೆರೆದರೆ ಮನೆಗಲ್ಲದೇ ಎಲ್ಲಿ ಹೋಗುತ್ತವೆ" ಎಂಬ ದಿವ್ಯ ನಿರ್ಲಕ್ಷ್ಯ..ಅಭ್ಯಾಸ,ಶಾಲೆ,ಉದ್ಯೋಗ,ಭವಿಷ್ಯ ಇಂಥವುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಹಳ್ಳಿಯ ವಾತಾವರಣ..ಹಾಗೆಂದು ಮಕ್ಕಳು ದಡ್ಡರಲ್ಲ..ಒಬ್ಬೊಬ್ಬರು ಒಂದೊಂದರಲ್ಲಿ ನಿಪುಣರು...ಬಹಿರಂಗ ಪ್ರಚಾರ,ಬೆನ್ನು ಚಪ್ಪರಿಸುವಿಕೆ,ಮಕ್ಕಳ ಬಗ್ಗೆ ಹೇಳಿಕೊಂಡು ಹೆಮ್ಮೆ ಪಡುವದು ಇಂಥವೆಲ್ಲ ಗಮನಿಸದ ಪಾಲಕವರ್ಗ..ನಮ್ಮ ಮನೆಯಲ್ಲಿ ಓದಿನ ಬಗ್ಗೆ ಸ್ವಲ್ಪು ಒಲವು ಬಹಳವಿತ್ತು..ಕ್ರಮೇಣ ಅಷ್ಟಿಷ್ಟು ತೋರಿದ್ದು ಗೀಚಿ 'ಸ್ತ್ರೀ' ಹಾಗೂ ಹೆಸರು ನೆನಪಿರದ ಕೆಲವು magazines ಕಳಿಸುತ್ತಿದ್ದೆ.. print ಆದಾಗ ಮನೆಯಲ್ಲಿ ತೋರಿಸಲು ಏನೋ ಮುಜುಗರ...ಏನಾದರೂ ಒಂದೆರಡು ಶಭಾಸಗಿರಿ ಬಂದರೆ ಅದು ಹೊರಗಿನವರಿಂದಲೇ..ಈ ಪರಿಸ್ಥಿತಿ ಎಲ್ಲರದೂ..' ಒಳ್ಳೆಯವರಾಗಿರುವದು ಜಾಣರಾಗುವದಕ್ಕಿಂತ
ಮಹತ್ವದ್ದು" ಎಂಬ ಅನಿಸಿಕೆ ಪಕ್ವವಾಗಿದ್ದ ಕಾಲಘಟ್ಟವದು...
ಆದರೂ ಆಗೀಗ ಏನಾದರೂ ಗೀಚುವ ಹಂಬಲ ಉಳಿಸಿಕೊಂಡು ಬಂದ ನನಗೆ
ಅದನ್ನು ಪುರಸ್ಕರಿಸುವುದನ್ನು ಕಲಿಸಿದ್ದು ಧಾರವಾಡ..ಸ್ಕೂಲನಲ್ಲಿ ಹಸ್ತಪ್ರತಿ magazine ಗೆ ಲೇಖನಗಳು ಕಡಿಮೆ ಬಂದಾಗ ನನ್ನ ಲೇಖನಗಳನ್ನು ಬೇರೆಯವರ ಹೆಸರುಗಳಲ್ಲಿ,ನನ್ನ ಒಪ್ಪಿಗೆಯಿಂದ ಪ್ರಕಟಿಸುತ್ತಿದ್ದುದೂ ಒಂದಿಷ್ಟು ಬಲಕೊಟ್ಟದ್ದುಂಟು..ಇಂಥ ಚಿಕ್ಕ ,ಪುಟ್ಟ ಬೆನ್ನು ಚಪ್ಪರಿಸುವಿಕೆಯಿಂದ ಜೀವಂತ ಉಳಿದ ನನ್ನ ಬರವಣಿಗೆ ಸಂದರ್ಭ ಸಿಕ್ಕಿದಾಗಲಷ್ಟೇ ಪ್ರಕಟವಾಗುತ್ತಿದ್ದುದು,ಮದುವೆ,ನೌಕರಿ ಎಂದು
ಹೊರಬಿದ್ದಮೇಲೆ ಸಾಕಷ್ಟು ನೀರು,ಗೊಬ್ಬರ ಉಂಡು ,ಆಕಾಶವಾಣಿಯಲ್ಲಿ ಚಿಂತನ,ಸ್ವರಚಿತ ಕವನ ನಿವೇದನೆ,ರೂಪಕ,ನಾಟಕಗಳಿಗಾಗಿಯಷ್ಟೇ ವಿಸ್ತಾರಗೊಂಡು pot garden ನಂತೆ ಸೀಮಿತ ಕ್ಷೇತ್ರಗಳಲ್ಲಿ ಉಸಿರು ಪಡೆದುಕೊಂಡಿತು...ಬಹುಶಃ ಹಣದ ಅಡಚಣಿಗೆ ಆ ಮೂಲಕವಾಗಿ ಸಿಗುತ್ತಿದ್ದ ಸಂಭಾವನೆಯ ಪೂರಕ ಹಣವೂ ಕಾರಣವಾಗಿರಬಹುದು...
ಬರೆಯುವದು ಹೆಚ್ಚಾದರೂ ಅವುಗಳನ್ನು ಯಾರಿಗೂ ತೋರಿಸದೇ ಮುಚ್ಚಿಡುತ್ತಿದ್ದೆ..ಕೌಶಲ್ಯಕ್ಕಿಂತ ಹೆಚ್ಚಾಗಿ time pass ಸಾಧನವಾಗಿ ಉಳಿದದ್ದೇ ಹೆಚ್ಚು..
ಬೆಂಗಳೂರಿಗೆ ಬಂದು,ಗೆಳತಿಯರ ವಲಯ ಬೆಳೆದಂತೆ ಅವರ ಬಹುಮುಖ ಪ್ರತಿಭೆ,ನಿಸ್ಸಂಕೋಚವಾಗಿ ತೊಡಗಿಸಿಕೊಳ್ಳುವಿಕೆ,ಅಂತಃಪುರ,ಈಹೊತ್ತಿಗೆ,ಜನದನಿ,ಯಂಥ ಮಹಿಳಾ ಪ್ರಾಧಾನ್ಯದ ಸಂಘಟನೆಗಳು,ನಿರಂತರ ಬರವಣಿಗೆ,ಪ್ರಕಟಣೆಗಳು ,ಗುಂಪು ಪ್ರವಾಸಗಳು, ಕಿರುಚಿತ್ರಗಳ ತಯಾರಿಕೆ ,ಒಂದು ಕಾರಣ ಸಿಕ್ಕರೆ ಸಾಕು ಅದನ್ನು celebrate ಮಾಡುವದು ,ಇಂಥ ಚಟುವಟಿಕೆಗಳಿಂದಾಗಿ ' ನಾನೆಲ್ಲಿದ್ದೇನೆ...ಎಲ್ಲಿಯವರೆಗೂ ಮುಟ್ಟಬಹುದು 'ಎಂಬ ಕಲ್ಪನೆ ಸಿಗುವದು ಸಾಧ್ಯವಾಯ್ತು...ನನಗಿಂತ ಹಿರಿಯರು,ಒಂದೂ ಕಾರ್ಯಕ್ರಮ ಬಿಡದೇ ,ನೆವ ಹೇಳದೇ,ಸಾಧ್ಯವಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ
ಸಕ್ರಿಯವಾಗಿ ಪಾಲುಗೊಳ್ಳುವದು ನೋಡಿದಾಗ ನಾವು ಕಳೆದುಕೊಂಡದ್ದೇನು ಎಂಬುದರ ಅರಿವಾಗುತ್ತಿದೆ...
..
ಪುಟ್ಟ ಸರೋವರದ ಕಲ್ಲು ಪೊಟರೆಯನ್ನೇ ಜಗತ್ತೆಂದು ಭಾವಿಸಿದ ಕಪ್ಪೆ ದಂಡೆಯ ಮೇಲೆ ಮೇಯುತ್ತಿರುವ ಬ್ರಹತ್ ಆಕಾರದ ದನ ವೊಂದನ್ನು ಕಂಡಾಗ ಆದ ದಿಗ್ಭ್ರಮೆ ನನಗಾಗಿದೆ...ಎಲ್ಲೋ ಒಂದು ಕಡೆ "ಅವಕಾಶ ಸಿಕ್ಕಿದ್ದರೆ .." ಎಂಬಂತಿದ್ದ ಮನದ ಭಾವನೆಗೆ ತಡವಾಗಿಯಾದರೂ ಅವಕಾಶ ಸಿಕ್ಕಿದೆ..ಉಳಿದ ಸಖಿಯರಂತೆ ಸಿಕ್ಕ ಅವಕಾಶಗಳನ್ನೆಲ್ಲ ' ದಕ್ಕಿಸಿ' ಕೊಳ್ಳುವ ಛಾತಿ ಈ ವಯಸ್ಸಿನಲ್ಲಿ ಇಲ್ಲದಿದ್ದರೂ ನನ್ನದೇ ಅರ್ಹತೆಯಲ್ಲಿ,ನನಗೆ ಸಿಕ್ಕ ಅನುಕೂಲತೆಗಳ ಮಾನದಲ್ಲಿ ,ನನ್ನ ಮಿತಿಯಲ್ಲಿ ರೆಕ್ಕೆ ಬಡಿಯುತ್ತಿದ್ದೇನೆ...
ವಿಶಾಲ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಲಾಗದಿದ್ದರೂ ,ನನ್ನದೇ ಮಿತಿಯಲ್ಲಿ _ ಒಂದು ಮುಷ್ಟಿ ಆಕಾಶ-ವನ್ನು ನನ್ನದಾಗಿಸಿಕೊಂಡು, ಭೂಮಿಯಳತೆಯಲ್ಲಿಯೇ
ಪ್ರಪಂಚ ಕಂಡ ಸಮಾಧಾನ ನನ್ನದು..
Friday, 8 March 2019
ಹಾಗೇ ಸುಮ್ಮನೇ...
ಹಾಗೇ ಸುಮ್ಮನೆ...
ಮಜಲುಗಳು....
(ಮಹಿಳಾ ದಿನಕ್ಕೊಂದು ಅವಲೋಕನ_ ನಾನು ಕಂಡಂತೆ..)
ಅಜ್ಜಿ:
೧೯೫೬..ನೇ ಇಸ್ವಿ..ನನಗಾಗ ಹತ್ತುವರ್ಷ..ಹುಡುಗತನದ ಹೊಸಿಲು ದಾಟಿ ಒಂದಿಷ್ಟು ಜಗತ್ತು ನೋಡುವ ಕುತೂಹಲ ಬೆಳೆಯುವ ವಯಸ್ಸು....ಎಲ್ಲರೂ ತಮ್ಮ ತಮ್ಮ ಜಗತ್ತಿನಲ್ಲಿ ಲೀನರಾಗಿದ್ದರೂ ನಮ್ಮ ಅಜ್ಜಿಯ ಪ್ರಪಂಚವೇ ಬೇರೆ..ಹತ್ತು ವರ್ಷಕ್ಕೆ ಮದುವೆಯಾಗಿ,ಹನ್ನೆರಡಕ್ಕೆ ಗಂಡನನ್ನು ಕಳೆದುಕೊಂಡ ನಮ್ಮಮನೆಯ' ಫಣಿಯಮ್ಮ' ಆಕೆ..ನಿಮ್ಮ ಊಹೆ ಸರಿ..ನಮ್ಮಪ್ಪ 'ದತ್ತುಪುತ್ರ'
ಕೆಂಪು ಸೀರೆ,ಬೋಳುತಲೆ,ಹಣೆಯಲ್ಲಿ ಉದ್ದಕ್ಕೊಂದು ಅಂಗಾರ...ತುಂಬಾ ಚಲುವೆ..ಕೆಂಪು ಬಣ್ಣ, ಚೂಪು ಮೂಗು, ಮಿರುಗುವ ತ್ವಚೆ...ಆದರೂ ಕಾಡುಸುಮ..ಅಡುಗೆ ಮನೆಯ ಮಹಾರಾಣಿ...ಎಲ್ಲಾದರೂ ಅರ್ಧಗಂಟೆ ಬಿಡುವು ಸಿಕ್ಕರೆ ಕೈಯಲ್ಲಿ ಹತ್ತಿಬುಟ್ಟಿ...ಯಾವಾಗಾದರೊಮ್ಮೆ ಸ್ವಲ್ಪು ಹೊತ್ತು ಹೊರಕಟ್ಟೆಯ ತುದಿಗೆ ಕುಳಿತು ಹೋಗ ಬರುವವರ ಕ್ಷೇಮ ಕೇಳುತ್ತಿದ್ದುದುಂಟು...
"ಅದೇನು? ಚಹ ಅಂದ್ರ ಹೆಂಗಿರ್ತದ? ಯಾಕಷ್ಟು
ಜನ ಅದಕ್ಕ ಬಡ್ಕೋತಾರ?"- ಅವಳು ಕೇಳಿದಾಗ ಒಂದಿನ ಒಂಚೂರು ಕುಡಿ ಅಜ್ಜಿ,ಯಾರ್ಗೂ ಹೇಳೂದಿಲ್ಲ ಅಂದು ಬಯ್ಸೋಳ್ಳೋದೂ ಇತ್ತು..." ಏಕಾದಶಿ ದಿವಸ ಎಷ್ಟರ ಊಟ ನೆನಪಾಗ್ತದ ಸುಡ್ಲಿ... ಉಪಾಸದ ಪುಣ್ಯ ಸಿಕ್ಹಂಗss ನನಗ" ಅಂತ ಅಲವತ್ಗೊತಿದ್ಲು...ಅರವತ್ತು ವರ್ಷದ ಮ್ಯಾಲ ಲಕ್ವಾ ಹೊಡದ್ರೂ ಅಡಿಗಿ ಮಾಡೋದು ಬಿಡತಿದ್ದಿಲ್ಲ..ಎಲ್ಲ ಸಾಮಾನು ಸುತ್ಲೂ ಇಟ್ಗೊಂಡು,ಒಂದ ಕೈಯಿಂದ ಅಡಿಗಿ ಮುಗಿಸಿ ,ಪಾತ್ರೆ ಇಳಸ್ಲಿಕ್ಕೆ ಆಗದಾಗ ,ಉರಿ ಹೊರಗ ಹಿರದು
ಒಲಿಮುಂದ ಮಕ್ಕೊತಿದ್ಲು..ಯಾರರ ಊಟಕ್ಕ ಬಡಸ್ಲಿಕ್ಕೆ ಬರೋವರೆಗೆ..
ಅವ್ವ: ೧೯೭೬
ಅತ್ತ ಅತ್ತಿ ,ಗಂಡ..ಇತ್ತ ಎಂಟು ಹತ್ತು ಮಕ್ಕಳು...ನಡುವ ಚಟ್ನಿ ನಮ್ಮವ್ವ...ಅವರ ಶಬ್ದಕೋಶದಾಗ ಸ್ವಾತಂತ್ರ್ಯ ಶಬ್ದ ಇರಲೇಯಿಲ್ಲ..ಕೆಲಸದವರನ್ನು ಇಟ್ಟುಕೊಳ್ಳುವಷ್ಟು ಅನುಕೂಲಸ್ಥರಲ್ಲ...ದುಡಿತಕ್ಕೆ ಹಗಲು, ರಾತ್ರಿ ಭೇದವಿಲ್ಲ..ಗಾಣದೆತ್ತು...ಗೊಣಗುವ, ದೂರು ಹೇಳುವ ಅಧಿಕಾರವಿಲ್ಲ...ಸಾಮಾನು ತೀರಿದರೂ "ಇಂಥದ್ದು ತೀರಿದೆ...ತಂದರಾಗ್ತಿತ್ತು" ಅನ್ನಬೇಕು...'ತನ್ನಿ ' ಇಲ್ಲವೇಯಿಲ್ಲ.. ಯಾರಾದರೂ ಉಡುಗೊರೆ ಕೊಟ್ಟರೆ ಮೂರನೇ ಸೀರೆ...ಎಲ್ಲಾದರೂ ಬಳಗದ ಮದುವೆಯಾದರೆ ಕೈತುಂಬ ಬಳೆಗಳು..ಮುತ್ತೈದೆ ಎಂದು ಯಾರಾದರೂ ದಕ್ಷಿಣೆ ಕೊಟ್ಟರೆ ಕೈ ಖರ್ಚಿಗೆ,ಮನೆ ಮುಂದೆ ಬರುವ ಸೊಪ್ಪು ಖರೀದಿಗೆ ಸರಿಹೊಂದುತ್ತಿತ್ತು..ಆದರೆ ಆ ಬದುಕಿಗೆ ಒಂದೇ ಒಂದು ದಿನ ಗೊಣಗಿದ್ದಿಲ್ಲ...ದೈವ ಹಳಿದಿದ್ದಿಲ್ಲ...ಅದಕ್ಕೆ ಆಗ ಎಲ್ಲರದೂ ಅದೇ ಬದುಕಾದ್ದರಿಂದ ಇದ್ದ ಸಮಾಧಾನವೋ...ಬದುಕನ್ನು ಬಂದಂತೆ ಅಪ್ಪಿಕೊಂಡದ್ದು ಕಾರಣವೋ ...ಊಹುಂ...ನಮಗೆ ಕೊನೆಗೂ ಗೊತ್ತಾಗಲೇಯಿಲ್ಲ.
ನಾವು :೧೯೯೬...
ನಮ್ಮ ಹೊತ್ತಿಗೆ ಶಿಕ್ಷಣ ಮಹತ್ವ ಪಡೆದಿತ್ತು..ಕಲಿತವರಿಗೆ ಯಾವುದೋ ಒಂದು ನೌಕರಿ ಸಿಗುತ್ತಿತ್ತು...ಬದುಕುವ ಶೈಲಿಯಲ್ಲಿ ಬದಲಾವಣೆ ಹಣಿಕಿ ಹಾಕತೊಡಗಿತು...ತಿಂಗಳಿಗೆ ಬರುವ ನಿರ್ದಿಷ್ಟ ಪಗಾರದಲ್ಲಿಯೇ plan ಮಾಡಿ ನಲವತ್ತು ವರ್ಷಕ್ಕೊಂದು ಮನೆ, ಮಕ್ಕಳಿಗೆ ಕಷ್ಟಪಟ್ಟಾದರೂ ಉತ್ತಮ ಶಿಕ್ಷಣ ಕೊಡಿಸುವ ಕನಸುಗಳು ಚಿಗುರೊಡೆಯ ತೊಡಗಿದವು...ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದವರ ಸರಿಗಟ್ಟುವ ಆಶೆ ಮೊಳಕೆಯೊಡೆಯತೊಡಗಿತು...ಸ್ಪರ್ಧೆಗಳು,ಅಸೂಯೆಗಳು,ತೀವ್ರ ಹಣಗಳಿಕೆಗೆ ವಾಮಮಾರ್ಗಗಳು, ತೋರಿಕೆಯ ಅಂತಸ್ತು, ಆಡಂಬರಗಳಿಂದಾಗಿ 'ಮೌಲ್ಯ'ದ ಜಾಗವನ್ನು 'ಬೆಲೆ' ಆಕ್ರಮಿಸ ತೊಡಗಿತು..
ಆದರೆ ಪ್ರಾಮಾಣಿಕ ದುಡಿಮೆಯಿದ್ದವರು ಉತ್ತಮ ಫಲಿತಾಂಶ ಕಂಡು ಮಕ್ಕಳಿಗೆ ಉತ್ತಮ ಶಿಕ್ಷಣ,ವಿದೇಶದಲ್ಲಿ ಹೆಚ್ಚಿನ ವ್ಯಾಸಂಗದ trend ಬೆಳೆದು 'ಮಧ್ಯಮ' ವರ್ಗದವರೂ ಇದ್ದುಳ್ಳವರ ಸಾಲಿನಲ್ಲಿ ರಾರಾಜಿಸ ತೊಡಗಿದರು...ಆದರೆ ಕೌಟುಂಬಿಕ,ಸಾಮಾಜಿಕ ಮೌಲ್ಯಗಳು ಈ RAT RACE ನಲ್ಲಿ ಹಿಂದೆ ಹಿಂದೆ ಸರಿಯುತ್ತ ಮರೆಯಾದದ್ದು ಅರಿವಿಗೆ ಬರಲೇಯಿಲ್ಲ.
ನಮ್ಮ ಮಕ್ಕಳು :೨೦೦೬ ನಂತರ...
ಈಗ ನಮ್ಮ ಮಕ್ಕಳಿಗೆ ನಮ್ಮ ಹಿಂದಿನ ದಿನಗಳು ' ಅಡಗೂಲಜ್ಜಿ ಕಥೆಗಳು...ಯಾವುದೇ ನೋವು,ಭಾವನೆ,ಆತಂಕ,ಅನಿಸಿಕೆಗಳಿಲ್ಲದೇ ಆ ಕಥೆಗಳನ್ನವರು ಕೇಳಿ ಆನಂದಿಸಬಲ್ಲರು..ಸ್ವಂತದ ಬಗ್ಗೆ ಒಂದಿಷ್ಟೂ ಯೋಚಿಸದೇ ಇದ್ದುದನ್ನು ಬೇಜವಾಬ್ದಾರಿ ಎಂದು ಖಂಡಿಸಿಯಾರು...ಅತಿ ಮೌಲ್ಯಗಳು ಉಪ್ಪಿನಕಾಯಿಗೆ ಸರಿ ಎಂದು ಹಂಗಿಸಿಯಾರು..
ಎಲ್ಲ ಪಡೆಯಬಹುದಾಗಿದ್ದರೂ ಅದನ್ನು ಅಲಕ್ಷಿಸಿದ್ದಕ್ಕೆ ಮೂರ್ಖರು ಎಂದು ಅರ್ಥೈಸಿಯಾರು..ಯಾಕಂದರೆ ಈಗಿನ ತಲೆಮಾರು ಹೆಚ್ಚು practical...ಇತರರ ಅಭಿಪ್ರಾಯಗಳು secondary ಅವರಿಗೆ...ಯಾರದೋ ಮುಲಾಜಿಗೆ ' ಹೂಂ' ಅನ್ನುವವರೇ ಅಲ್ಲ...ಗಂಡ,ಹೆಂಡತಿ ಇಬ್ಬರೂ ದುಡಿಯುವದರಿಂದ ಆರ್ಥಿಕ ಸ್ಥಿತಿಯೂ ಉತ್ತಮಗೊಂಡು ಸರ್ವತಂತ್ರ ಸ್ವತಂತ್ರರು ಈ ತಲೆಮಾರಿನವರು...ಅದಕ್ಕೆ ಹೊಂದಿಕೊಂಡು ಇದ್ದ ಹಿರಿಯರು ಸುಖವಾಗಿ ಇರಬಲ್ಲರು ....ಹಾಗಿಲ್ಲದವರು ತಮ್ಮದೇ ಒದ್ದಾಟ, ಆತಂಕಗಳಲ್ಲಿ ತ್ರಿಶಂಕುವಾಗಿ ಬದುಕುತ್ತಿರುವದು ಮಾತ್ರ ಹಗಲು ಕಂಡ ಸತ್ಯ..
*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...
-
ಬಿಂಬ-೧ ಗೆಲುವು... ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...