Friday, 8 March 2019

ಹಾಗೇ ಸುಮ್ಮನೇ...

ಹಾಗೇ ಸುಮ್ಮನೆ...

ಮಜಲುಗಳು....

(ಮಹಿಳಾ ದಿನಕ್ಕೊಂದು ಅವಲೋಕನ_ ನಾನು ಕಂಡಂತೆ..)

ಅಜ್ಜಿ:
‌‌‌‌‌ ‌    ‌   ‌೧೯೫೬..ನೇ ಇಸ್ವಿ..ನನಗಾಗ ಹತ್ತುವರ್ಷ..ಹುಡುಗತನದ ಹೊಸಿಲು ದಾಟಿ ಒಂದಿಷ್ಟು  ಜಗತ್ತು ನೋಡುವ ಕುತೂಹಲ ಬೆಳೆಯುವ ವಯಸ್ಸು....ಎಲ್ಲರೂ ತಮ್ಮ ತಮ್ಮ ಜಗತ್ತಿನಲ್ಲಿ ಲೀನರಾಗಿದ್ದರೂ  ನಮ್ಮ ಅಜ್ಜಿಯ ಪ್ರಪಂಚವೇ ಬೇರೆ..ಹತ್ತು ವರ್ಷಕ್ಕೆ ಮದುವೆಯಾಗಿ,ಹನ್ನೆರಡಕ್ಕೆ ಗಂಡನನ್ನು ಕಳೆದುಕೊಂಡ ನಮ್ಮಮನೆಯ' ಫಣಿಯಮ್ಮ' ಆಕೆ..ನಿಮ್ಮ ಊಹೆ ಸರಿ..ನಮ್ಮಪ್ಪ 'ದತ್ತುಪುತ್ರ'
ಕೆಂಪು ಸೀರೆ,ಬೋಳುತಲೆ,ಹಣೆಯಲ್ಲಿ ಉದ್ದಕ್ಕೊಂದು ಅಂಗಾರ...ತುಂಬಾ ಚಲುವೆ..ಕೆಂಪು ಬಣ್ಣ, ಚೂಪು ಮೂಗು, ಮಿರುಗುವ ತ್ವಚೆ...ಆದರೂ ಕಾಡುಸುಮ..ಅಡುಗೆ ಮನೆಯ ಮಹಾರಾಣಿ...ಎಲ್ಲಾದರೂ ಅರ್ಧಗಂಟೆ ಬಿಡುವು ಸಿಕ್ಕರೆ ಕೈಯಲ್ಲಿ ಹತ್ತಿಬುಟ್ಟಿ...ಯಾವಾಗಾದರೊಮ್ಮೆ ಸ್ವಲ್ಪು ಹೊತ್ತು ಹೊರಕಟ್ಟೆಯ ತುದಿಗೆ ಕುಳಿತು ಹೋಗ ಬರುವವರ ಕ್ಷೇಮ ಕೇಳುತ್ತಿದ್ದುದುಂಟು...
"ಅದೇನು? ಚಹ ಅಂದ್ರ ಹೆಂಗಿರ್ತದ? ಯಾಕಷ್ಟು
ಜನ ಅದಕ್ಕ ಬಡ್ಕೋತಾರ?"- ಅವಳು ಕೇಳಿದಾಗ ಒಂದಿನ ಒಂಚೂರು ಕುಡಿ ಅಜ್ಜಿ,ಯಾರ್ಗೂ ಹೇಳೂದಿಲ್ಲ ಅಂದು ಬಯ್ಸೋಳ್ಳೋದೂ ಇತ್ತು..." ಏಕಾದಶಿ ದಿವಸ  ಎಷ್ಟರ ಊಟ ನೆನಪಾಗ್ತದ ಸುಡ್ಲಿ... ಉಪಾಸದ ಪುಣ್ಯ ಸಿಕ್ಹಂಗss ನನಗ" ಅಂತ ಅಲವತ್ಗೊತಿದ್ಲು...ಅರವತ್ತು ವರ್ಷದ ಮ್ಯಾಲ ಲಕ್ವಾ ಹೊಡದ್ರೂ ಅಡಿಗಿ ಮಾಡೋದು ಬಿಡತಿದ್ದಿಲ್ಲ..ಎಲ್ಲ ಸಾಮಾನು ಸುತ್ಲೂ ಇಟ್ಗೊಂಡು,ಒಂದ ಕೈಯಿಂದ ಅಡಿಗಿ ಮುಗಿಸಿ ,ಪಾತ್ರೆ  ಇಳಸ್ಲಿಕ್ಕೆ ಆಗದಾಗ ,ಉರಿ ಹೊರಗ  ಹಿರದು
ಒಲಿಮುಂದ ಮಕ್ಕೊತಿದ್ಲು..ಯಾರರ ಊಟಕ್ಕ ಬಡಸ್ಲಿಕ್ಕೆ ಬರೋವರೆಗೆ..

ಅವ್ವ: ೧೯೭೬
    ‌   ‌‌‌   ‌ಅತ್ತ ಅತ್ತಿ ,ಗಂಡ..ಇತ್ತ ಎಂಟು ಹತ್ತು ಮಕ್ಕಳು...ನಡುವ ಚಟ್ನಿ ನಮ್ಮವ್ವ...ಅವರ ಶಬ್ದಕೋಶದಾಗ ಸ್ವಾತಂತ್ರ್ಯ ಶಬ್ದ ಇರಲೇಯಿಲ್ಲ..ಕೆಲಸದವರನ್ನು ಇಟ್ಟುಕೊಳ್ಳುವಷ್ಟು ಅನುಕೂಲಸ್ಥರಲ್ಲ...ದುಡಿತಕ್ಕೆ ಹಗಲು, ರಾತ್ರಿ ಭೇದವಿಲ್ಲ..ಗಾಣದೆತ್ತು...ಗೊಣಗುವ, ದೂರು ಹೇಳುವ ಅಧಿಕಾರವಿಲ್ಲ...ಸಾಮಾನು ತೀರಿದರೂ "ಇಂಥದ್ದು  ತೀರಿದೆ...ತಂದರಾಗ್ತಿತ್ತು" ಅನ್ನಬೇಕು...'ತನ್ನಿ ' ಇಲ್ಲವೇಯಿಲ್ಲ.. ಯಾರಾದರೂ ಉಡುಗೊರೆ ಕೊಟ್ಟರೆ ಮೂರನೇ ಸೀರೆ...ಎಲ್ಲಾದರೂ ಬಳಗದ ಮದುವೆಯಾದರೆ ಕೈತುಂಬ ಬಳೆಗಳು..ಮುತ್ತೈದೆ ಎಂದು ಯಾರಾದರೂ ದಕ್ಷಿಣೆ ಕೊಟ್ಟರೆ ಕೈ ಖರ್ಚಿಗೆ,ಮನೆ ಮುಂದೆ ಬರುವ ಸೊಪ್ಪು ಖರೀದಿಗೆ ಸರಿಹೊಂದುತ್ತಿತ್ತು..ಆದರೆ ಆ ಬದುಕಿಗೆ ಒಂದೇ ಒಂದು ದಿನ ಗೊಣಗಿದ್ದಿಲ್ಲ...ದೈವ ಹಳಿದಿದ್ದಿಲ್ಲ...ಅದಕ್ಕೆ ಆಗ ಎಲ್ಲರದೂ ಅದೇ ಬದುಕಾದ್ದರಿಂದ ಇದ್ದ ಸಮಾಧಾನವೋ...ಬದುಕನ್ನು ಬಂದಂತೆ ಅಪ್ಪಿಕೊಂಡದ್ದು ಕಾರಣವೋ ...ಊಹುಂ...ನಮಗೆ ಕೊನೆಗೂ ಗೊತ್ತಾಗಲೇಯಿಲ್ಲ.

ನಾವು :೧೯೯೬...

             ನಮ್ಮ ಹೊತ್ತಿಗೆ ಶಿಕ್ಷಣ ಮಹತ್ವ ಪಡೆದಿತ್ತು..ಕಲಿತವರಿಗೆ ಯಾವುದೋ ಒಂದು ನೌಕರಿ ಸಿಗುತ್ತಿತ್ತು...ಬದುಕುವ  ಶೈಲಿಯಲ್ಲಿ ಬದಲಾವಣೆ ಹಣಿಕಿ ಹಾಕತೊಡಗಿತು...ತಿಂಗಳಿಗೆ ಬರುವ ನಿರ್ದಿಷ್ಟ ಪಗಾರದಲ್ಲಿಯೇ plan ಮಾಡಿ ನಲವತ್ತು ವರ್ಷಕ್ಕೊಂದು ಮನೆ, ಮಕ್ಕಳಿಗೆ ಕಷ್ಟಪಟ್ಟಾದರೂ ಉತ್ತಮ ಶಿಕ್ಷಣ  ಕೊಡಿಸುವ ಕನಸುಗಳು ಚಿಗುರೊಡೆಯ ತೊಡಗಿದವು...ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದವರ  ಸರಿಗಟ್ಟುವ  ಆಶೆ ಮೊಳಕೆಯೊಡೆಯತೊಡಗಿತು...ಸ್ಪರ್ಧೆಗಳು,ಅಸೂಯೆಗಳು,ತೀವ್ರ ಹಣಗಳಿಕೆಗೆ ವಾಮಮಾರ್ಗಗಳು, ತೋರಿಕೆಯ ಅಂತಸ್ತು, ಆಡಂಬರಗಳಿಂದಾಗಿ 'ಮೌಲ್ಯ'ದ ಜಾಗವನ್ನು 'ಬೆಲೆ' ಆಕ್ರಮಿಸ ತೊಡಗಿತು..
ಆದರೆ ಪ್ರಾಮಾಣಿಕ ದುಡಿಮೆಯಿದ್ದವರು ಉತ್ತಮ ಫಲಿತಾಂಶ ಕಂಡು ಮಕ್ಕಳಿಗೆ ಉತ್ತಮ ಶಿಕ್ಷಣ,ವಿದೇಶದಲ್ಲಿ ಹೆಚ್ಚಿನ ವ್ಯಾಸಂಗದ trend ಬೆಳೆದು  'ಮಧ್ಯಮ' ವರ್ಗದವರೂ ಇದ್ದುಳ್ಳವರ ಸಾಲಿನಲ್ಲಿ ರಾರಾಜಿಸ ತೊಡಗಿದರು...ಆದರೆ ಕೌಟುಂಬಿಕ,ಸಾಮಾಜಿಕ ಮೌಲ್ಯಗಳು ಈ RAT RACE ನಲ್ಲಿ ಹಿಂದೆ ಹಿಂದೆ ಸರಿಯುತ್ತ ಮರೆಯಾದದ್ದು ಅರಿವಿಗೆ ಬರಲೇಯಿಲ್ಲ.

ನಮ್ಮ ಮಕ್ಕಳು :೨೦೦೬ ನಂತರ...

                   ಈಗ ನಮ್ಮ ಮಕ್ಕಳಿಗೆ ನಮ್ಮ ಹಿಂದಿನ ದಿನಗಳು ' ಅಡಗೂಲಜ್ಜಿ ಕಥೆಗಳು...ಯಾವುದೇ ನೋವು,ಭಾವನೆ,ಆತಂಕ,ಅನಿಸಿಕೆಗಳಿಲ್ಲದೇ ಆ ಕಥೆಗಳನ್ನವರು ಕೇಳಿ ಆನಂದಿಸಬಲ್ಲರು..ಸ್ವಂತದ ಬಗ್ಗೆ ಒಂದಿಷ್ಟೂ ಯೋಚಿಸದೇ ಇದ್ದುದನ್ನು ಬೇಜವಾಬ್ದಾರಿ ಎಂದು ಖಂಡಿಸಿಯಾರು...ಅತಿ ಮೌಲ್ಯಗಳು ಉಪ್ಪಿನಕಾಯಿಗೆ ಸರಿ ಎಂದು ಹಂಗಿಸಿಯಾರು..
ಎಲ್ಲ ಪಡೆಯಬಹುದಾಗಿದ್ದರೂ ಅದನ್ನು ಅಲಕ್ಷಿಸಿದ್ದಕ್ಕೆ ಮೂರ್ಖರು ಎಂದು ಅರ್ಥೈಸಿಯಾರು..ಯಾಕಂದರೆ ಈಗಿನ ತಲೆಮಾರು ಹೆಚ್ಚು practical...ಇತರರ ಅಭಿಪ್ರಾಯಗಳು secondary ಅವರಿಗೆ...ಯಾರದೋ ಮುಲಾಜಿಗೆ ' ಹೂಂ' ಅನ್ನುವವರೇ ಅಲ್ಲ...ಗಂಡ,ಹೆಂಡತಿ ಇಬ್ಬರೂ ದುಡಿಯುವದರಿಂದ ಆರ್ಥಿಕ ಸ್ಥಿತಿಯೂ ಉತ್ತಮಗೊಂಡು  ಸರ್ವತಂತ್ರ ಸ್ವತಂತ್ರರು ಈ ತಲೆಮಾರಿನವರು...ಅದಕ್ಕೆ ಹೊಂದಿಕೊಂಡು ಇದ್ದ ಹಿರಿಯರು ಸುಖವಾಗಿ ಇರಬಲ್ಲರು ....ಹಾಗಿಲ್ಲದವರು ತಮ್ಮದೇ ಒದ್ದಾಟ, ಆತಂಕಗಳಲ್ಲಿ ತ್ರಿಶಂಕುವಾಗಿ ಬದುಕುತ್ತಿರುವದು ಮಾತ್ರ  ಹಗಲು ಕಂಡ ಸತ್ಯ..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...