Sunday, 10 March 2019

ಹಾಗೇ ಸುಮ್ಮನೇ...

ಹಾಗೇ ಸುಮ್ಮನೆ...

ಒಂದು ಮುಷ್ಟಿ ಆಕಾಶ..

( ವಿಜಯಕ್ಕನ ಕ್ಷಮೆ ಕೇಳಿ)
     
           ಅದೊಂದು ಕಾಲವಿತ್ತು..ಈಗಿನ ಮಕ್ಕಳು ಒಂದೆರಡು ಗಂಟೆ ಆಡಲು ಹೊರಹೋಗುವಂತೆ ನಾವುಗಳು ಮನೆಗೆ ಬರುತ್ತಿದ್ದೆವು..ಮನೆಯವರಿಗೂ ಅದು ಅಭ್ಯಾಸವಾಗಿರುತ್ತಿತ್ತು.".ಕತ್ತೆ ತಪ್ಪಿಸಿಕೊಂಡರೆ ಹಾಳುಗೋಡೆ...ಹೊಟ್ಟೆ ಕೆರೆದರೆ ಮನೆಗಲ್ಲದೇ ಎಲ್ಲಿ ಹೋಗುತ್ತವೆ" ಎಂಬ ದಿವ್ಯ ನಿರ್ಲಕ್ಷ್ಯ..ಅಭ್ಯಾಸ,ಶಾಲೆ,ಉದ್ಯೋಗ,ಭವಿಷ್ಯ ಇಂಥವುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಹಳ್ಳಿಯ ವಾತಾವರಣ..ಹಾಗೆಂದು ಮಕ್ಕಳು ದಡ್ಡರಲ್ಲ..ಒಬ್ಬೊಬ್ಬರು ಒಂದೊಂದರಲ್ಲಿ ನಿಪುಣರು...ಬಹಿರಂಗ ಪ್ರಚಾರ,ಬೆನ್ನು ಚಪ್ಪರಿಸುವಿಕೆ,ಮಕ್ಕಳ ಬಗ್ಗೆ ಹೇಳಿಕೊಂಡು ಹೆಮ್ಮೆ ಪಡುವದು ಇಂಥವೆಲ್ಲ ಗಮನಿಸದ ಪಾಲಕವರ್ಗ..ನಮ್ಮ ಮನೆಯಲ್ಲಿ ಓದಿನ ಬಗ್ಗೆ ಸ್ವಲ್ಪು ಒಲವು ಬಹಳವಿತ್ತು..ಕ್ರಮೇಣ ಅಷ್ಟಿಷ್ಟು ತೋರಿದ್ದು ಗೀಚಿ 'ಸ್ತ್ರೀ' ಹಾಗೂ ಹೆಸರು ನೆನಪಿರದ ಕೆಲವು magazines ಕಳಿಸುತ್ತಿದ್ದೆ.. print ಆದಾಗ ಮನೆಯಲ್ಲಿ ತೋರಿಸಲು ಏನೋ ಮುಜುಗರ...ಏನಾದರೂ ಒಂದೆರಡು ಶಭಾಸಗಿರಿ ಬಂದರೆ ಅದು ಹೊರಗಿನವರಿಂದಲೇ..ಈ ಪರಿಸ್ಥಿತಿ ಎಲ್ಲರದೂ..' ಒಳ್ಳೆಯವರಾಗಿರುವದು ಜಾಣರಾಗುವದಕ್ಕಿಂತ
ಮಹತ್ವದ್ದು" ಎಂಬ ಅನಿಸಿಕೆ ಪಕ್ವವಾಗಿದ್ದ ಕಾಲಘಟ್ಟವದು...
        ‌‌‌‌‌‌         ಆದರೂ ಆಗೀಗ ಏನಾದರೂ ಗೀಚುವ ಹಂಬಲ ಉಳಿಸಿಕೊಂಡು ಬಂದ  ನನಗೆ
ಅದನ್ನು ಪುರಸ್ಕರಿಸುವುದನ್ನು ಕಲಿಸಿದ್ದು ಧಾರವಾಡ..ಸ್ಕೂಲನಲ್ಲಿ ಹಸ್ತಪ್ರತಿ magazine ಗೆ ಲೇಖನಗಳು ಕಡಿಮೆ ಬಂದಾಗ ನನ್ನ ಲೇಖನಗಳನ್ನು ಬೇರೆಯವರ ಹೆಸರುಗಳಲ್ಲಿ,ನನ್ನ ಒಪ್ಪಿಗೆಯಿಂದ ಪ್ರಕಟಿಸುತ್ತಿದ್ದುದೂ ಒಂದಿಷ್ಟು  ಬಲಕೊಟ್ಟದ್ದುಂಟು..ಇಂಥ ಚಿಕ್ಕ ,ಪುಟ್ಟ ಬೆನ್ನು ಚಪ್ಪರಿಸುವಿಕೆಯಿಂದ ಜೀವಂತ ಉಳಿದ ನನ್ನ ಬರವಣಿಗೆ  ಸಂದರ್ಭ ಸಿಕ್ಕಿದಾಗಲಷ್ಟೇ ಪ್ರಕಟವಾಗುತ್ತಿದ್ದುದು,ಮದುವೆ,ನೌಕರಿ ಎಂದು
ಹೊರಬಿದ್ದಮೇಲೆ  ಸಾಕಷ್ಟು ನೀರು,ಗೊಬ್ಬರ ಉಂಡು ,ಆಕಾಶವಾಣಿಯಲ್ಲಿ ಚಿಂತನ,ಸ್ವರಚಿತ ಕವನ ನಿವೇದನೆ,ರೂಪಕ,ನಾಟಕಗಳಿಗಾಗಿಯಷ್ಟೇ ವಿಸ್ತಾರಗೊಂಡು pot garden  ನಂತೆ ಸೀಮಿತ  ಕ್ಷೇತ್ರಗಳಲ್ಲಿ ಉಸಿರು ಪಡೆದುಕೊಂಡಿತು...ಬಹುಶಃ ಹಣದ ಅಡಚಣಿಗೆ ಆ ಮೂಲಕವಾಗಿ ಸಿಗುತ್ತಿದ್ದ ಸಂಭಾವನೆಯ  ಪೂರಕ ಹಣವೂ ಕಾರಣವಾಗಿರಬಹುದು...
  ‌ ‌‌                  ಬರೆಯುವದು ಹೆಚ್ಚಾದರೂ ಅವುಗಳನ್ನು ಯಾರಿಗೂ ತೋರಿಸದೇ ಮುಚ್ಚಿಡುತ್ತಿದ್ದೆ..ಕೌಶಲ್ಯಕ್ಕಿಂತ ಹೆಚ್ಚಾಗಿ time pass ಸಾಧನವಾಗಿ ಉಳಿದದ್ದೇ ಹೆಚ್ಚು..
  ‌‌‌‌‌  ‌‌‌‌         ‌‌ಬೆಂಗಳೂರಿಗೆ ಬಂದು,ಗೆಳತಿಯರ ವಲಯ ಬೆಳೆದಂತೆ  ಅವರ ಬಹುಮುಖ ಪ್ರತಿಭೆ,ನಿಸ್ಸಂಕೋಚವಾಗಿ ತೊಡಗಿಸಿಕೊಳ್ಳುವಿಕೆ,ಅಂತಃಪುರ,ಈಹೊತ್ತಿಗೆ,ಜನದನಿ,ಯಂಥ ಮಹಿಳಾ ಪ್ರಾಧಾನ್ಯದ  ಸಂಘಟನೆಗಳು,ನಿರಂತರ ಬರವಣಿಗೆ,ಪ್ರಕಟಣೆಗಳು ,ಗುಂಪು ಪ್ರವಾಸಗಳು, ಕಿರುಚಿತ್ರಗಳ ತಯಾರಿಕೆ ,ಒಂದು ಕಾರಣ ಸಿಕ್ಕರೆ ಸಾಕು ಅದನ್ನು celebrate ಮಾಡುವದು ,ಇಂಥ ಚಟುವಟಿಕೆಗಳಿಂದಾಗಿ ' ನಾನೆಲ್ಲಿದ್ದೇನೆ...ಎಲ್ಲಿಯವರೆಗೂ ಮುಟ್ಟಬಹುದು 'ಎಂಬ ಕಲ್ಪನೆ ಸಿಗುವದು ಸಾಧ್ಯವಾಯ್ತು...ನನಗಿಂತ ಹಿರಿಯರು,ಒಂದೂ ಕಾರ್ಯಕ್ರಮ ಬಿಡದೇ ,ನೆವ ಹೇಳದೇ,ಸಾಧ್ಯವಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ
ಸಕ್ರಿಯವಾಗಿ ಪಾಲುಗೊಳ್ಳುವದು ನೋಡಿದಾಗ  ನಾವು ಕಳೆದುಕೊಂಡದ್ದೇನು ಎಂಬುದರ ಅರಿವಾಗುತ್ತಿದೆ...
..
           ಪುಟ್ಟ ಸರೋವರದ ಕಲ್ಲು ಪೊಟರೆಯನ್ನೇ  ಜಗತ್ತೆಂದು ಭಾವಿಸಿದ ಕಪ್ಪೆ ದಂಡೆಯ ಮೇಲೆ ಮೇಯುತ್ತಿರುವ ಬ್ರಹತ್ ಆಕಾರದ ದನ ವೊಂದನ್ನು ಕಂಡಾಗ ಆದ ದಿಗ್ಭ್ರಮೆ ನನಗಾಗಿದೆ...ಎಲ್ಲೋ ಒಂದು ಕಡೆ "ಅವಕಾಶ ಸಿಕ್ಕಿದ್ದರೆ .." ಎಂಬಂತಿದ್ದ ಮನದ ಭಾವನೆಗೆ ತಡವಾಗಿಯಾದರೂ ಅವಕಾಶ ಸಿಕ್ಕಿದೆ..ಉಳಿದ ಸಖಿಯರಂತೆ ಸಿಕ್ಕ ಅವಕಾಶಗಳನ್ನೆಲ್ಲ ' ದಕ್ಕಿಸಿ' ಕೊಳ್ಳುವ ಛಾತಿ ಈ ವಯಸ್ಸಿನಲ್ಲಿ ಇಲ್ಲದಿದ್ದರೂ ನನ್ನದೇ ಅರ್ಹತೆಯಲ್ಲಿ,ನನಗೆ ಸಿಕ್ಕ ಅನುಕೂಲತೆಗಳ ಮಾನದಲ್ಲಿ ,ನನ್ನ ಮಿತಿಯಲ್ಲಿ ರೆಕ್ಕೆ ಬಡಿಯುತ್ತಿದ್ದೇನೆ...
              ವಿಶಾಲ  ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಲಾಗದಿದ್ದರೂ ,ನನ್ನದೇ ಮಿತಿಯಲ್ಲಿ _ ಒಂದು ಮುಷ್ಟಿ ಆಕಾಶ-ವನ್ನು ನನ್ನದಾಗಿಸಿಕೊಂಡು, ಭೂಮಿಯಳತೆಯಲ್ಲಿಯೇ
ಪ್ರಪಂಚ ಕಂಡ ಸಮಾಧಾನ ನನ್ನದು..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...