Friday, 19 July 2019

ವೊ ದಿನ್ ಭೀ ಕ್ಯಾ ದಿನ್ ಥೆ..

ಹಾಗೇ  ಸುಮ್ಮನೇ... 

ವೋ ದಿನ್ ಭೀ ಕ್ಯಾ ದಿನ್ ಥೆ...

                "ನಾ ಇನ್ನ ಯಾವದೇ  ಧಾರ್ಮಿಕ ಕಾರ್ಯಕ್ರಮ ಮಾಡಸ್ಲಿಕ್ಕೆ ಹೋಗಬಾರದಂತ ಮಾಡೇನಿ...ಜನರೊಳಗ ಈಗ ಮೊದಲಿನ ಶೃದ್ಧಾ ಇಲ್ಲ..ಕಾಟಾಚಾರಕ್ಕ ಮಾಡಿ ಮುಗಸ್ತಾರ.. ಮಾಡಬೇಕು ಅನ್ನೋಕಿಂತ ತೋರ್ಸ್ಗೋಬೇಕನ್ನೋದ  ಭಾಳ ಇರ್ತದ...ಧರ್ಮ,ನಂಬಿಕೆ ಜಗದಾಗ,  ಬರೇ ಆಡಂಬರ ಇರ್ತದ...ಮಾಡಬೇಕಾದ್ದನ್ನು ಮೊಟಕ ಮಾಡಿ , ಬಿಡಬಹುದಾದದ್ದರ ಮೆರವಣಿಗಿ ನಡೀತದ...ಮನಸ್ಸಿಗೆ ಭಾಳಾ ಬ್ಯಾಸರಾಗ್ತದ...ಹೌದಪಾ ಸಂಸಾರದ...ಖರ್ಚದ ಅನ್ನೊ ದರ್ದ ಅಂತೂ ಇಲ್ಲ...ಅದರ ಬದ್ಲು ಶೃದ್ಧಾದ್ಲೆ ಕಲೀತೀವಿ ಅನ್ನೋರ್ಗೆ ಪಾಠ ಮಾಡೋದು ಛೊಲೋ..ಇಲ್ಲಾ ಅಂದ್ರ ನೆಮ್ಮದಿಯಿಂದ ನಮಗೇನ ಬೇಕೋ ಅದನ್ನ ಮಾಡ್ಕೊಂಡ ಇರಬಹುದು.."
             ಶಾಂತಿ,ಸಹನೆಯ ಪುರುಷಾವತಾರ ಎಂಬಂತಿದ್ದ ಪುರೋಹಿತರೊಬ್ಬರ ನೋವಿನ ನುಡಿಗಳಿವು..."ಧರ್ಮಕ್ಕಾಗಿಯೇ ಧರ್ಮದ ಪಾಲನೆ...ಹಣಕ್ಕಲ್ಲ ಎಂದು ನಂಬಿ ,ಅದನ್ನೇ ಬದುಕಿ, ಅದನ್ನೇ  ಹೇಳುತ್ತಾ, ದುಡ್ಡಿಗಾಗಿ ಎಂದೂ ಕೈ ಚಾಚದೇ,ಅಕಸ್ಮಾತ್ ಆಗ್ರಹದಿಂದ ಯಾರಾದರೂ ಕೊಟ್ಟರೆ ಕೆರೆಯ ನೀರು ಕೆರೆಗೆ ಎಂದಂದು ಧರ್ಮದ ಕಾರ್ಯಗಳಿಗೇನೆ ಅದನ್ನು ಬಳಸುತ್ತ," ಇನ್ನೂ ಇಂಥವರು ಉಳಿದಿದ್ದಾರೆಯೇ" ಎಂಬಂಥ ಅಚ್ಚರಿ ಹುಟ್ಟಿಸುತ್ತ, ಸಮಾಜ ತನಗೆ ಕೊಟ್ಟುದಕ್ಕೆ ಪ್ರತಿಯಾಗಿ ತನ್ನನ್ನೇ ಸಮಾಜಕ್ಕೆ ಕೊಟ್ಟುಕೊಂಡಂಥ  ಮಹನೀಯರ ಮನದಾಳದಮಾತುಗಳಿವು...
             ನನಗೂ ಹಲವಾರು ಬಾರಿ ಈ ತರಹ ಅನಿಸಿದ್ದಿದೆ...ಆತ್ಮೀಯರಾದ ಒಬ್ಬಬ್ಬರ ಮುಂದೆ ಗೊಣಗಿದ್ದೂ ಆಗಿದೆ...ಎಲ್ಲದಕ್ಕೂ ಹೆಸರಿಡುವ  ಸಿನಿಕರ ಗುಂಪಿಗೆ ನನ್ನನ್ನು ಸೇರಿಸಿಯಾರೆಂದು  ಮನದಲ್ಲೇ ದಬ್ಬಿ ಆ ಮಾತುಗಳನ್ನು ಹೂತಾಗಿದೆ...ಆದರೆ ಬಾಯಲ್ಲಿ ಹೇಳುವದಿಲ್ಲ ಅಂದ ಮಾತ್ರಕ್ಕೆ ಇಲ್ಲವೆಂದು ಹೇಗಾದೀತು?
           ನನ್ನ ,ನನ್ನ ಸಹೋದರ ಸಹೋದರಿಯರ ಮದುವೆಯ ಕಥೆ ಕೇಳಿದರೆ  ಬಹುಶಃ ಹಳಬರಿಗೆ ಅಚ್ಚರಿಯಾಗಲಿಕ್ಕಿಲ್ಲ.ಆದರೆ ಮೊಮ್ಮಕ್ಕಳು ಅಡಗೂಲಜ್ಜಿ ಕಥೆಗಳು ಅಂದಾರು ..ಕೆಲವೇ ಸಾವಿರಗಳಲ್ಲಿ,ಒಂದು ಗುಡಿಯ ಪ್ರಾಂಗಣದಲ್ಲಿ, ಇಡೀ ಊರಿನ ಜನ ನೆರೆದು ನೆರವೇರಿಸಿ ಕೊಟ್ಟ ಕಾರ್ಯಕ್ರಮಗಳವು..ಮಂತ್ರ,ವೇದ ಘೋಷಗಳ ಅರ್ಭಟ ಊರನ್ನೇ ತುಂಬುತ್ತಿತ್ತು..
ಕಾರ್ಯಕ್ರಮದ ನಾಲ್ಕು ದಿನ ಹಳ್ಳಿಯ ಯಾರ ಮನೆಯಲ್ಲೂ ಅಡಿಗೆ ಯಿಲ್ಲ. ಯಾರಿಗೂ ಹಾಗೆ ಮಾಡಿ ಹೀಗೇ ಮಾಡಿ ನಿರ್ದೇಶನವಿಲ್ಲ..
ಯಾರಿಗೆ ಏನು ಬರುತ್ತೋ ,ಯಾರು ಯಾವ ಕೆಲಸದಲ್ಲಿ ನಿಪುಣರೋ ಅವರು ಯಾರಿಗೂ ಕಾಯದೇ ಕೆಲಸ ಮಾಡಿ ಮುಗಿಸುತ್ತಿದ್ದರು..ಎಂಟು ,ಹತ್ತು ದಿನ ಮೊದಲೇ ಪ್ರತಿಯೊಬ್ಬರ ಮನೆಗೂ ಹೋಗಿ ಔತಣ ನೀಡುವುದಲ್ಲದೇ ಆದಿನ ಅಕಸ್ಮಾತ್ ಯಾರಾದರೂ ನೆಂಟರ ಆಗಮನವಾದರೆ ಅಗಾವಾಗಿ  ಅವರನ್ನೂ ಸೇರಿಸಿ ಔತಣ ಕೊಟ್ಟು ಬರುತ್ತಿದ್ದುದೂ ಉಂಟು..ಯಾರ ಮನೆಯಲ್ಲಿ ಏನೇ ಆಗಲಿ ಅದು ಊರ ಜಾತ್ರೆಯಾಗಿಬಿಡುತ್ತಿತ್ತು..ಪ್ರತಿಯೊಬ್ಬರೂ ಮತ್ತೊಬ್ಬರಿಗೆ  ತೋರಿಸುವ  ಪರಸ್ಪರ ಕಾಳಜಿಯಿಂದ ಯಜಮಾನನ  ಹೊರೆ  ತಂತಾನೇ ತೂಕ ಕಳೆದುಕೊಳ್ಳುತ್ತಿತ್ತು..ಎಲ್ಲರೂ ಖುಶ್...ಹೀಗಾಗಿ ಎಷ್ಟೋ ವರ್ಷಗಳ ನಂತರವೂ ನೆನಪುಗಳ ಖಜಾನೆ ತುಂಬಿರುತ್ತಿತ್ತಲ್ಲದೇ ಕಿರಿಯರೆದುರು, ಬಂಧು ಬಳಗದೆದುರು ಸಮಯ ಸಿಕ್ಕಾಗ  ಮೆದ್ದು  ಸವಿಯಬಹುದಾದ ಮೇಜವಾನಿ ಊಟ ಉಂಡ ತೃಪ್ತಿ  ಸಿಗುತ್ತಿತ್ತು...
             ಈಗ ಎಲ್ಲವೂ ತದ್ವಿರುದ್ಧ...ಸ್ವತಃ ಮನೆಯವರಿಗೇನೇ ಯಾವುದೇ ಕಾರ್ಯಕ್ರಮಗಳಲ್ಲಿ ಕೆಲಸವಿರುವದಿಲ್ಲ.
              .ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ಆಮಂತ್ರಣ/ ವಿಜ್ಞಾಪನೆ, ಒಂದೆರಡು ಫೋನ್ ಕರೆಗಳು, event  managers ಗಳಿಗೆ ಕೆಲಸದ ಆಧಾರದ  ಮೇಲೆ ಹಣ ಸಂದಾಯ ಮಾಡಿಬಿಟ್ಟರೆ ಮುಗಿಯಿತು..ನೀವೂ host ಗಳ ಬದಲು guest ಗಳೇ ಆಗಿಬಿಡಬಹುದು..ಸಧ್ಯದ ಜೀವನ ಶೈಲಿ, ಕೆಲಸದ ಒತ್ತಡ, ಕೈತುಂಬಿ ,ಕಿಸೆದುಂಬಿ ಬರುವ ಧಾರಾಳ ಹಣ, ಇವುಗಳಿಂದಾಗಿ ಸಂಬಂಧಿಸಿದವರ  ಜವಾಬ್ದಾರಿಯನ್ನೂ ಹಲವರ ಹೆಗಲಿಗೇರಿಸಿ  ಹಗುರವಾಗಿ ಬಿಡುವದು ಇಂದಿನವರ ಆಯ್ಕೆಯಾಗಿ, ಎಲ್ಲವೂ ಇದೆ..ಯಾರದೂ ಅಲ್ಲ ಎಂಬಂತಾಗಿದೆ..ಹಿಂದೆಲ್ಲ  ಉಡುಗೊರೆಯಾಗಿ ಬರುತ್ತಿದ್ದ ಅಷ್ಷಿಷ್ಟು ಹಣವೋ,ಸಾಮಾನೋ
ಆನಂದ  ತರುತ್ತಿದ್ದವು..ಈಗ ನಾವು ಕೊಟ್ಟದ್ದೇ ಅನೇಕ ಬಾರಿ ನಮಗೇ ಮರಳಿ ಬರುವಷ್ಟು ಅನಾದರಕೊಳಪಟ್ಟಿವೆ ಉಡುಗೊರೆಗಳು...ಎಲ್ಲರಬಳಿಯೂ ಎಲ್ಲವೂ ಇದ್ದದ್ದು ಒಂದು ಕಾರಣವಾದರೆ  ಯಾವುದಕ್ಕೂ ಬೆಲೆಯಿಲ್ಲದಿರುವದು ಇನ್ನೊಂದು ಕಾರಣ. ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುವದು ಸ್ವಾಭಾವಿಕ....ಸಮಯ ಹರಿಯುವ ನೀರು ಇದ್ದಂತೆ...ಅದಕ್ಕೆ ಮುಂದೆ ಹರಿಯುವದಷ್ಟೇ ಗೊತ್ತು..ತನ್ನ ಜೊತೆ ಸಿಕ್ಕಿದ್ದೆಲ್ಲವನ್ನೂ ಮುಂದೆ ದಾಟಿಸಿ ಬಿಡುವದು ಗೊತ್ತು..ಅವುಗಳಲ್ಲಿ ಅವಿಭಕ್ತ ಕುಟುಂಬಗಳು  ಒಡೆದು ಸಣ್ಣ ಸಣ್ಣ ಘಟಕಗಳಾಗಿ ದೂರ ದೂರ ಇರತೊಡಗಿದ ಮೇಲೆ ಅವರ ಮಧ್ಯೆ  ಕಂಡೂ ಕಾಣದ ಗೋಡೆಗಳು ಎದ್ದು
ಕುಟುಂಬ ವ್ಯವಸ್ಥೆಯ  ಬುಡವನ್ನೇ ಅಲುಗಿಸತೊಡಗಿದ್ದೂ ಒಂದು...ಹೀಗಾಗಿ  ಭದ್ರ ಅಡಿಪಾಯವಿಲ್ಲದ  ಇಂದಿನ ಕಟ್ಟಡಗಳಂತೆ ಸಂಬಂಧಗಳೂ ಸಹ  ಕಟ್ಟುವ ಹಂತದಲ್ಲಿಯೇ
ಕುಸಿಯತೊಡಗಿವೆ..
ಪರಸ್ಪರ ಪ್ರೀತಿ,ವಿಶ್ವಾಸ, ಅಭಿಮಾನದ ಜಾಗದಲ್ಲಿ, ಅನಾರೋಗ್ಯಕರ ಸ್ಪರ್ಧೆ,ಅಸೂಯೆ,ಅಸಹನೆಗಳಿಂದ ಯಾರಿಗೂ ಸಮಾಧಾನವಿಲ್ಲದ ವಾತಾವರಣ ಉಂಟಾಗಿದೆ.  ಏನೋ ಚಡಪಡಿಕೆ, ಅದಾವುದೋ ಉದ್ವೇಗ ,ಅವಸರಗಳಿಂದಾಗಿ ಮಾತು,ಕೃತಿ, ಎಲ್ಲವುಗಳಲ್ಲೂ  ಒಂದು ಕೃತ್ರಿಮತೆ ಎದ್ದು ಕಾಣುತ್ತದೆ.. ಅಪರಿಚಿತ ಭಾವ ಮೂಡಿ ಯಾವುದೂ ನಮ್ಮದಲ್ಲ ಅನಿಸುವ ಅನ್ಯ ಭಾವ  ಮೂಡಿದಾಗ  ಪರಿಣಾಮ ಅತಿ ಸ್ಪಷ್ಟ.. ಶುಷ್ಕತೆ, ಒಣ ಬಡಿವಾರ,ಆತ್ಮೀಯವೆನಿಸದ  ತೋರಿಕೆಯ ಛಾಪು ನಮ್ಮ ನಡೆ ನುಡಿಗಳಲ್ಲಲ್ಲದೇ ಎಲ್ಲಿ ಕಾಣ ಸಿಗಬೇಕು  ಹೇಳಿ???

Friday, 12 July 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ

"ರೋನೇ  ಕೋ ಏಕ ಕಂಧಾ  ಚಾಹಿಯೇ..."

             ನಿನ್ನೆ ಸಾಯಂಕಾಲ ಏಳು ಗಂಟೆ.ಕರೆಗಂಟೆ ಬಾರಿಸಿತು..ಎದ್ದುಹೋಗಿ ಬಾಗಿಲು ತೆರೆದಾಗ ನಮ್ಮದೇ ಕಾಲನಿಯ ಸವಿತಾ.' ಬನ್ನಿ ಒಳಗಡೆ ಎಂದೆ..' ನೀವೇ ಬನ್ನಿ ಆಂಟಿ..club house ನಲ್ಲಿ ಕೂತು ಮಾತಾಡೋಣ' ಎಂದಳು.ಹೆಚ್ಚು ಪ್ರಶ್ನಿಸದೇ ಹಿಂಬಾಲಿಸಿದೆ..ಕುರ್ಚಿಯ ಮೇಲೆ ಕೂಡುತ್ತಲೇ ಜೋರಾಗಿ ಅಳತೊಡಗಿದಳು..ನಾನು ಗಾಬರಿಯಾದೆ..ಅವಳನ್ನು ಈ ಮೊದಲು ನೋಡಿಯಷ್ಟೇ ಪರಿಚಯ. ಒಮ್ಮೆ ಮಾತ್ರ ಮಾತಾಡಿಸಿದ್ದು.. ಅದೂ ಕೇವಲ ಕೆಲವೇ ನಿಮಿಷ..ಹೆಚ್ಚೇನೂ ಗೊತ್ತಿರದ ನಾನು  ಅವಳನ್ನು ಹೇಗೆಂದು ಸಂತೈಸಲಿ?  ಕೈಹಿಡಿದು ಬೆನ್ನ ಮೇಲೆ ಕೈಯಾಡಿಸುತ್ತ ಕುಳಿತೆ..ಹತ್ತು ನಿಮಿಷ ಅತ್ತು ' sorry ಆಂಟಿ, ನಿಮ್ಗೆ disturb ಮಾಡಿದೆ..ನಮ್ಮಮ್ಮ ಸತ್ತು ಮೂರುತಿಂಗಳು ಆಂಟಿ, ಅವಳು ನನಗೆ ಗೆಳತಿಯ ಹಾಗಿದ್ದಳು.. ದಿನಾ ಅವಳೊಂದಿಗೆ ಮಾತಾಡಿದರೇ ನನಗೆ ಸಮಾಧಾನ..ಇದ್ದೊಬ್ಬ ಮಗ ವಿದೇಶದಲ್ಲಿದ್ದಾನೆ.ಅವನೂ ಬಿಟ್ಟು ಬರಲಾರ..ಕಿಡ್ನಿಯ ತೊಂದರೆ ಯಿಂದ ತುಂಬ ಅನುಭವಿಸಿ ಮೂರು ತಿಂಗಳಹಿಂದೆ ಇಲ್ಲವಾದಳು.ತಂದೆ ತಮ್ಮನೊಂದಿಗೆ ಸದ್ಯ ಇದ್ದಾರೆ.ತುಂಬ ಒಂಟಿಯಾಗಿದ್ದೇನೆ ಆಂಟಿ..ನನ್ನ ಗಂಡ ದಣಿದು ಬಂದಾಗ ನನ್ನ ಮೂಡು ಸರಿ ಇರದಿದ್ದರೆ ತುಂಬ ನೊಂದುಕೊಳ್ತಾರೆ..ನನಗೆ ಸಂಭಾಳಿಸಲಾಗುತ್ತಿಲ್ಲ.ಎರಡೂ ಮಕ್ಕಳು ತುಂಬ ಚಿಕ್ಕವರು..ಎಲ್ಲರೆದುರು ಎಲ್ಲ ಹೇಳಿಕೊಳ್ಳಲಾಗುತ್ತಿಲ್ಲ.ಒಳಗಿನ  ಒತ್ತಡಕ್ಕೆ ನನ್ನದೂ ತೂಕ ಕಡಿಮೆಯಾಗುತ್ತಿದೆ.pulse rate  ಹೆಚ್ಚಾಗುತ್ತಿದೆ..ನನಗೆ ಏನು ಮಾಡಲೂ ತೋಚುತ್ತಿಲ್ಲ...ಇಷ್ಟು ಹೇಳುತ್ತಲೇ  ಸಹಜವಾಗಿಯೇ ಮತ್ತೆ ದುಃಖ ಉಕ್ಕಿ ಬಂದು ಮಾತೇ ಆಡಲಿಲ್ಲ..ನಾನೂ ಮಾತನಾಡದೇ ಬರಿ ಕೇಳುವ ಕೆಲಸ ಮಾಡಿದೆ.ಈಗ  ಅಳು ಸ್ವಲ್ಪು ಹಿಡಿತಕ್ಕೆ ಬಂದು ಸಮಾಧಾನದಿಂದ ವಿವರವಾಗಿ ಹೇಳತೊಡಗಿದಳು.ಅಮ್ಮನಿಗೆ serious ಎಂದು ಗೊತ್ತಾದ ಕೂಡಲೇ ಆಸ್ಪತ್ರೆಗೆ ಹೋಗ ಬೇಕೆಂದರೆ  ತುಂಬಾದೂರ..ಮಳೆ ಹುಚ್ಚೆದ್ದು ಸುರಿಯುತ್ತಿತ್ತು..ಓಲಾ taxi ಮೂರು ನಾಲ್ಕು ಬಾರಿ cancel ಆಗಿ ಕೊನೆಗೊಮ್ಮೆ ಹೋಗುವ ಹೊತ್ತಿಗೆ ಅಮ್ಮ ಕೋಮಾದಲ್ಲಿ ಜಾರಿ I C U ಸೇರಿಯಾಗಿತ್ತು..ಇಷ್ಟೆಲ್ಲ ಮಾಡಿ,ಸದಾ ಜೊತೆಗಿದ್ದ ತಾಯಿಯ ಜೊತೆ ಕೊನೆ ಕ್ಷಣದಲ್ಲಿ ಇರಲಾಗದಕ್ಕೆ ಆದ ಆಘಾತ ಸುಲಭವಾಗಿ ಮರೆಯುವಂಥದು ಆಗಿರಲಿಲ್ಲ..
ನಾನಾದರೂ ಹೇಗೆ ಸಮಾಧಾನಿಸಲಿ? ಮಾತುಗಳು ಬರಿ ಶಬ್ದಗಳಾಗಿ ಉಳಿಯುವ ಅಪಾಯವೇ ಜಾಸ್ತಿ ಇಂಥ ಸಂದರ್ಭಗಳಲ್ಲಿ..ಮಾತನಾಡುವದು ಅನಿವಾರ್ಯ..ತಿಳಿದ ಮಾತು ಹೇಳುತ್ತ ಅವಳ ಮಾತುಗಳಿಗೆ ಕಿವಿಯಾದೆ . ಮನದಲ್ಲಿ ಕಟ್ಟಿನಿಂತ ಭಾವನೆಗಳು ಬರಿದಾಗುತ್ತಲೇ ಸ್ವಲ್ಪು  ಆರಾಮ ಎನಿಸಿದ ಸವಿತಾ ವೇಳೆಯಾಯಿತೆಂದು ನನಗೆ thanks ಹೇಳಿ  ಮತ್ತೆ ಭೇಟಿಯಾಗುವದಾಗಿ  ಹೇಳಿ ಮನೆ ಕಡೆ ಹೆಜ್ಜೆ ಹಾಕಿದಳು..
            ಮೇಲು ನೋಟಕ್ಕೆ ದಿನನಿತ್ಯದ ಒಂದು ಚಿಕ್ಕ ಘಟನೆಯಾದ ಈ ವಿಷಯ ಸಮಾಜದ  ಬಹುದೊಡ್ಡ ಸಮಸ್ಯೆ..ಮರೆಯಾಗುತ್ತಿರುವ ಕೂಡು ಕುಟುಂಬಗಳು ಕಣ್ಮರೆಯಾಗುತ್ತ  ಚಿಕ್ಕ ಚಿಕ್ಕ ಘಟಕಗಳಾಗತೊಡಗಿದ ನಂತರದ ಸಾಮಾಜಿಕ ಸವಾಲುಗಳಲ್ಲಿ ಒಂದು..ವಿಭಕ್ತ ಕುಟುಂಬಗಳಲ್ಲಿ ಗಂಡ_ ಹೆಂಡತಿ ,ಒಂದೋ ಎರಡೋ ಮಕ್ಕಳು ಮಾತ್ರವಿದ್ದು ಎಲ್ಲರೂ ತಮ್ಮತಮ್ಮ ವಲಯಗಳಲ್ಲಿ ಬಂಧಿತರಾಗಿ ಬೇರೆಯವರೊಂದಿಗೆ ಯಾವುದೇ ಭಾವ ಬಂಧ ವೇರ್ಪಡದೇ ದೊಡ್ಡದೊಂದು ' ನಿರ್ವಾತ'  ಏರ್ಪಟ್ಟಾಗ ಮನುಷ್ಯ ಮಾನಸಿಕ ತಬ್ಬಲಿತನ ಅನುಭವಿಸುತ್ತಾನೆ..ಅದರ ಪಾರ್ಶ್ವ ಪರಿಣಾಮಗಳು ಕುಟುಂಬದ ಮೇಲಾಗಿ ಒಟ್ಟು ಸಂಗತಿಗಳು ಅಸಮಾಧಾನಕರವಾಗಿ ಬದಲಾಗುತ್ತವೆ..ಮೇಲೆ ಮೇಲೆ ಎಲ್ಲವೂ ಸರಿಯಂದು ಕಂಡರೂ ಒಳಗೇ ಗೆದ್ದಲು ತಿಂದ ಮರವಾಗುತ್ತದೆ ಪರಿಸ್ಥಿತಿ...ಇದು ಪ್ರಗತಿಶೀಲ ಬೆಳವಣಿಗೆಯ ಅನಿವಾರ್ಯ ಭಾಗ ಎಂದುಕೊಂಡರೂ  ಆಗಬಹುದಾದ ಅಪಾಯಗಳಿಗೆ ಸುಲಭ ಪರಿಹಾರಗಳಿರುವದಿಲ್ಲ..ಹಾಗಾದಾಗ ಎಷ್ಟೋ 'ಸವಿತಾ' ಗಳು ಸದ್ದಿಲ್ಲದೇ ಮನೋಕ್ಲೇಶಕ್ಕೆ ತುತ್ತಾಗುತ್ತಾರೆ..ಗಂಡಸರೂ ಈ  ಸಂದಿಗ್ಧಗಳಿಗೆ ಬಲಿಯಾಗುವ ಸಾಧ್ಯತೆ ಇಲ್ಲದಿಲ್ಲ..
    ‌       ಬೆಂಕಿ ಪಕ್ಕದ ಮನೆಗೆ ಹತ್ತಿದೆ..ನಮ್ಮನೆಗಲ್ಲ.. ಅನ್ನುವಷ್ಟು ಸಮಸ್ಯೆ ಹಗುರವಾಗಿಲ್ಲ..ಎಲ್ಲರೂ ವಿಚಾರಮಾಡುವ ಕಾಲ ವಂತೂ ಸನ್ನಿಹಿತವಾಗಿದೆ, ಅನಿಸುತ್ತಿದೆ ನನಗಂತೂ..

Monday, 8 July 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ,..

"God is in d heaven and all   is  right with the world"..   
          
              ಅವಳ ಹೆಸರು ಕವಿತಾ..ಬೀದರ ಜಿಲ್ಹೆಯ ರಾಜಗೀರ ಹಳ್ಳಿಯವಳು. ಶಾಲೆಯ ಮೆಟ್ಟಿಲು ಏರಿಲ್ಲ..ಹಿರಿಮಗಳ ಸಹಾಯದಿಂದ ತನ್ನ ಹೆಸರು ಬರೆಯಲು ಮಾತ್ರ ಕಲಿತಿದ್ದಾಳೆ.but she is a university by herself..
                'ಸುಶಿಕ್ಷಿತರೆಲ್ಲ ಸುಸಂಸ್ಕೃತರಲ್ಲ" ಎಂಬುದಾಗಿ ಮಾತೊಂದಿದೆ.ಅದನ್ನೇ ಇನ್ನೊಂದು ರೀತಿಯಲ್ಲೂ ಹೇಳಬಹುದು." ಅಶಿಕ್ಷಿತರೆಲ್ಲ ಅನಾಗರಿಕರಲ್ಲ.." ಇದು ಈ  ಐದು ವರ್ಷಗಳಲ್ಲಿ  ನಾನು ಕವಿತಾಳಿಂದ ಕಲಿತ ಪಾಠ..
              ಈ ಕವಿತಾ ನಮ್ಮ ಮನೆಯ domestic help..ನಮ್ಮ ಭಾಷೆಯಲ್ಲಿ' ಮನೆಗೆಲಸದವಳು" ದೂರದ ಬೀದರದಿಂದ ಹೊಟ್ಟೆ ಪಾಡಿಗಾಗಿ ಇತರರಂತೆ ವಲಸೆ ಬಂದವಳು.ಮನೆತನದ ಪರಿಸ್ಥಿತಿ ಅಷ್ಟೊಂದು ಹೀನಾಯವೇನೂ ಆಗಿರಲಿಲ್ಲ.. ಆದರೆ  ಮೂರು ನಾಲ್ಕು ವರ್ಷ ಸತತ  ಮಳೆ ಕೈಕೊಟ್ಟು ಬರದ ವಾತಾವರಣ ಅನುಭವಿಸುವಂತಾದುದು, ಮೊದಲ  ಮಗಳ ಮದುವೆ, ಆರು ಜನರ ತುಂಬು ಸಂಸಾರದ ಹೊಣೆಗಾರಿಕೆ ಇವೆಲ್ಲವುಗಳಿಂದ ದಿಕ್ಕೆಟ್ಟ ಸಂಸಾರವಾಗಿತ್ತದು...ಇದ್ದ ಹಳ್ಳಿಯಲ್ಲಿ,ಸುತ್ತುಮುತ್ತಲೂ ರೈತರ ಸರಣಿ ಆತ್ಮಹತ್ಯೆಗಳು ಧೈರ್ಯಗುಂದಿಸಿದಾಗ ಬೆಂಗಳೂರಿಗೆ ವಲಸೆ ಬರದೇ ಬೇರೆ ಮಾರ್ಗವಿರಲಿಲ್ಲ..ನಮಗೆ ಪರಿಚಯದವರಿಂದ ಅವಳ ಪರಿಚಯವಾಗಿ ನಮ್ಮ ಮನೆ, ಹಾಗೂ ಪರಿಚಯದ ಇನ್ನು ಕೆಲವು ಮನೆಗಳ ಕೆಲಸ ದೊರೆತು ನೆಮ್ಮದಿಯ ಉಸಿರು ಬಿಡುವಂತಾದುದು ಅವಳ ಅದೃಷ್ಟ..ಆದರೆ ಕಥೆ ಬೇರೆಯೇ ಇತ್ತು..
‌‌‌    ‌     ಅನಿವಾರ್ಯತೆಗೆ ಸಿಕ್ಕಸಿಕ್ಕಲ್ಲಿ, ಸಿಕ್ಕಷ್ಟು ಹಣ ಸಾಲ ಪಡೆದದ್ದು ,ಅದರ ಮೇಲೆ ಬಸಿರಿನಂತೆ ದಿನದಿನಕ್ಕೆ ಬೆಳೆಯುತ್ತಿರುವ ಬಡ್ಡಿ
ಅವಳನ್ನು ಅಷ್ಟು ಬೇಗ ಸಲೀಸಾಗಿ ಆರಾಮ ಇರಲು ಬಿಡುವ ಮಾತೇ ಇರಲಿಲ್ಲ..ಎಷ್ಟು ದುಡಿದರೂ ತಳವಿಲ್ಲದ ಹಂಡೆಗೆ ನೀರು ಸುರಿದಂತೆ  ಸೋರಿ ಹೋಗುತ್ತಿತ್ತು..ಅಡವಿಟ್ಟ ಹೊಲ ಕಳೆದುಹೋಗಬಾರದೆಂದು ಇಡೀ ಕುಟುಂಬ ಹಗಲಿರುಳೆನ್ನದೇ ದುಡಿದ ಹಣ ಬರಿ ಬಡ್ಡಿ ಲೆಕ್ಕಕ್ಕೆ ಸರಿಹೋಗುತ್ತಿತ್ತು. ಅದನ್ನು ನಮ್ಮಿಂದಲೇ online ತುಂಬಿಸುತ್ತಿದ್ದು, ಪ್ರತಿಸಲ ನಮಗೆ ಸಂಕಟವಾಗುತ್ತಿತ್ತು..ಆದರೂ ಅದು ಬರಿ ಬಡ್ಡಿಗೆ ಸರಿದೂಗಿ ಅಸಲು ಹೇಗಿತ್ತೋ,ಎಷ್ಟಿತ್ತೋ ಹಾಗೇ..ಅಷ್ಟೇ..
                ಕೊನೆಗೆ ನಾನು ಒಂದು ವಿಚಾರಮಾಡಿ ಅವರ ಮನೆಯವರನ್ನೆಲ್ಲ ಕರೆದು ಕೂಡಿಸಿ ಹೇಳಿದೆ. ಅವಳ ಒಂದೊಂದೇ ಸಾಲದ ಹಣವನ್ನು ಮುಂಗಡವಾಗಿ ನಾವು ತುಂಬುವದು-  advance payment_ ಅವರು ನಮಗೆ  ಕಂತಿನಲ್ಲಿ ತೀರಿಸುವದು..ಅಲ್ಲಿಯ ವರೆಗೂ ಕೆಲಸದ ಹಣ ಹೆಚ್ಚಿಸುವಂತಿಲ್ಲ.ಮನೆಗೆಲಸ ಬಿಡುವಂತಿಲ್ಲ.ಇದರಿಂದ ಒಂದೆರಡು ವರ್ಷ ಅಲ್ಪ ಮಟ್ಟಿನ ಬಡ್ಡಿಹಣ ನಮಗೆ ಇಲ್ಲವಾದರೂ ಅವಳ ಕುಟುಂಬಕ್ಕೆ ಅದರಿಂದ ಅಪಾರ ಸಹಾಯ ವಾಗುತ್ತಿತ್ತು..ಅದು ಅವಳ ನಂಬಿಕೆಗೆ,ಒಳ್ಳೆಯತನಕ್ಕೆ ,ಪ್ರಾಮಾಣಿಕತನಕ್ಕೆ ಸಲ್ಲಬೇಕಾದ ಗೌರವವದು ..ನಮಗೂ ತೀರ ಹೊಣೆಯಾಗದೆ ಒಂದು  ಉತ್ತಮ ಕುಟುಂಬ ನೆಲೆಗೊಳ್ಳುವದಾದರೆ ಒಳ್ಳೆಯದೇ, ಎಂದು ಬಂದ ವಿಚಾರವನ್ನು ಹೇಳಿದಾಗ ಎಚ್ಚರಿಸಿದವರು ಹಾಗೂ  ಅನುಮಾನಿಸಿದವರೇ ಹೆಚ್ಚು..ಆದರೆ ಕೇವಲ ಅವಳ ಸಜ್ಜನಿಕೆಯನ್ನು ನಂಬಿ,ಸ್ವಲ್ಪು ಮಟ್ಟಿಗೆ risk ತೆಗೆದುಕೊಂಡದ್ದು ಹುಸಿಹೋಗಲಿಲ್ಲ...
               ಈಗವಳು ಐದುವರ್ಷಳಿಂದ ನಮ್ಮ ಮನೆ ಸದಸ್ಯಳೇ ಆಗಿದ್ದಾಳೆ..ಈ ಅವಧಿಯಲ್ಲಿ ಒಂದೇ ಒಂದು ಪೈಸೆ ಕೂಡ ಮನೆಗೆ ಒಯ್ದಿಲ್ಲ.ಗಂಡ, ಮಗ ತರುವ  ಅಷ್ಟಿಷ್ಟು ಹಣದಲ್ಲಿ  ಮನೆ ತೂಗಿಸಿ ,ಉಳಿಸಿ ,ಶಕ್ತಿ ಮೀರಿ ಸಾಲ ತೀರಿಸಿದ್ದಾರೆ..ಕೊನೆಯ ಮೂವತ್ತು ಸಾವಿರ ಮುಂದಿನ ತಿಂಗಳಿಗೆ ಮುಗಿಯುತ್ತದೆ ಎಂಬ ಖುಷಿಯಲ್ಲಿ ಮುಖವೀಗ ಅರಳಿದ ಮಲ್ಲಿಗೆಯಾಗಿದೆ..ಇದೀಗ ಪುಟ್ಟ ಮನೆಯೊಂದರ ಕನಸು ಕುಡಿಯೊಡೆಯುತ್ತಿದೆ..ಅತಿ ದೊಡ್ಡದಲ್ಲದ ಸಹಾಯವಾದರೂ ನಮಗೆ ಕಹಿ ಅನುಭವ ನೀಡದೆ,ಒಂದು ಕುಟುಂಬವನ್ನು ಶಕ್ತ್ಯಾನುಸಾರ ದಡ ಮುಟ್ಟಿಸಿದ  ತೃಪ್ತಿ  ನಮಗೂ ಆನೆಬಲ ನೀಡಿದೆ..
         YES, God is in d heaven and all is right with d world....

     ‌"ಸಂಕಟದಲಿ ಸಂರಕ್ಷಿಸು
ಎಂಬುದು ಎನ್ನ ಪ್ರಾರ್ಥನೆಯೇ ಅಲ್ಲ...
ಸಂಕಟದಲಿ ಭಯವಿರದಿರೆ ಸಾಕೈ..
ಇದ್ದರದುವೇ ಸಾಕಲ್ಲಾ-"
          ತುಂಬಾ ನೆನಪಾಗುತ್ತಿದೆ...

.

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...