Friday, 12 July 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ

"ರೋನೇ  ಕೋ ಏಕ ಕಂಧಾ  ಚಾಹಿಯೇ..."

             ನಿನ್ನೆ ಸಾಯಂಕಾಲ ಏಳು ಗಂಟೆ.ಕರೆಗಂಟೆ ಬಾರಿಸಿತು..ಎದ್ದುಹೋಗಿ ಬಾಗಿಲು ತೆರೆದಾಗ ನಮ್ಮದೇ ಕಾಲನಿಯ ಸವಿತಾ.' ಬನ್ನಿ ಒಳಗಡೆ ಎಂದೆ..' ನೀವೇ ಬನ್ನಿ ಆಂಟಿ..club house ನಲ್ಲಿ ಕೂತು ಮಾತಾಡೋಣ' ಎಂದಳು.ಹೆಚ್ಚು ಪ್ರಶ್ನಿಸದೇ ಹಿಂಬಾಲಿಸಿದೆ..ಕುರ್ಚಿಯ ಮೇಲೆ ಕೂಡುತ್ತಲೇ ಜೋರಾಗಿ ಅಳತೊಡಗಿದಳು..ನಾನು ಗಾಬರಿಯಾದೆ..ಅವಳನ್ನು ಈ ಮೊದಲು ನೋಡಿಯಷ್ಟೇ ಪರಿಚಯ. ಒಮ್ಮೆ ಮಾತ್ರ ಮಾತಾಡಿಸಿದ್ದು.. ಅದೂ ಕೇವಲ ಕೆಲವೇ ನಿಮಿಷ..ಹೆಚ್ಚೇನೂ ಗೊತ್ತಿರದ ನಾನು  ಅವಳನ್ನು ಹೇಗೆಂದು ಸಂತೈಸಲಿ?  ಕೈಹಿಡಿದು ಬೆನ್ನ ಮೇಲೆ ಕೈಯಾಡಿಸುತ್ತ ಕುಳಿತೆ..ಹತ್ತು ನಿಮಿಷ ಅತ್ತು ' sorry ಆಂಟಿ, ನಿಮ್ಗೆ disturb ಮಾಡಿದೆ..ನಮ್ಮಮ್ಮ ಸತ್ತು ಮೂರುತಿಂಗಳು ಆಂಟಿ, ಅವಳು ನನಗೆ ಗೆಳತಿಯ ಹಾಗಿದ್ದಳು.. ದಿನಾ ಅವಳೊಂದಿಗೆ ಮಾತಾಡಿದರೇ ನನಗೆ ಸಮಾಧಾನ..ಇದ್ದೊಬ್ಬ ಮಗ ವಿದೇಶದಲ್ಲಿದ್ದಾನೆ.ಅವನೂ ಬಿಟ್ಟು ಬರಲಾರ..ಕಿಡ್ನಿಯ ತೊಂದರೆ ಯಿಂದ ತುಂಬ ಅನುಭವಿಸಿ ಮೂರು ತಿಂಗಳಹಿಂದೆ ಇಲ್ಲವಾದಳು.ತಂದೆ ತಮ್ಮನೊಂದಿಗೆ ಸದ್ಯ ಇದ್ದಾರೆ.ತುಂಬ ಒಂಟಿಯಾಗಿದ್ದೇನೆ ಆಂಟಿ..ನನ್ನ ಗಂಡ ದಣಿದು ಬಂದಾಗ ನನ್ನ ಮೂಡು ಸರಿ ಇರದಿದ್ದರೆ ತುಂಬ ನೊಂದುಕೊಳ್ತಾರೆ..ನನಗೆ ಸಂಭಾಳಿಸಲಾಗುತ್ತಿಲ್ಲ.ಎರಡೂ ಮಕ್ಕಳು ತುಂಬ ಚಿಕ್ಕವರು..ಎಲ್ಲರೆದುರು ಎಲ್ಲ ಹೇಳಿಕೊಳ್ಳಲಾಗುತ್ತಿಲ್ಲ.ಒಳಗಿನ  ಒತ್ತಡಕ್ಕೆ ನನ್ನದೂ ತೂಕ ಕಡಿಮೆಯಾಗುತ್ತಿದೆ.pulse rate  ಹೆಚ್ಚಾಗುತ್ತಿದೆ..ನನಗೆ ಏನು ಮಾಡಲೂ ತೋಚುತ್ತಿಲ್ಲ...ಇಷ್ಟು ಹೇಳುತ್ತಲೇ  ಸಹಜವಾಗಿಯೇ ಮತ್ತೆ ದುಃಖ ಉಕ್ಕಿ ಬಂದು ಮಾತೇ ಆಡಲಿಲ್ಲ..ನಾನೂ ಮಾತನಾಡದೇ ಬರಿ ಕೇಳುವ ಕೆಲಸ ಮಾಡಿದೆ.ಈಗ  ಅಳು ಸ್ವಲ್ಪು ಹಿಡಿತಕ್ಕೆ ಬಂದು ಸಮಾಧಾನದಿಂದ ವಿವರವಾಗಿ ಹೇಳತೊಡಗಿದಳು.ಅಮ್ಮನಿಗೆ serious ಎಂದು ಗೊತ್ತಾದ ಕೂಡಲೇ ಆಸ್ಪತ್ರೆಗೆ ಹೋಗ ಬೇಕೆಂದರೆ  ತುಂಬಾದೂರ..ಮಳೆ ಹುಚ್ಚೆದ್ದು ಸುರಿಯುತ್ತಿತ್ತು..ಓಲಾ taxi ಮೂರು ನಾಲ್ಕು ಬಾರಿ cancel ಆಗಿ ಕೊನೆಗೊಮ್ಮೆ ಹೋಗುವ ಹೊತ್ತಿಗೆ ಅಮ್ಮ ಕೋಮಾದಲ್ಲಿ ಜಾರಿ I C U ಸೇರಿಯಾಗಿತ್ತು..ಇಷ್ಟೆಲ್ಲ ಮಾಡಿ,ಸದಾ ಜೊತೆಗಿದ್ದ ತಾಯಿಯ ಜೊತೆ ಕೊನೆ ಕ್ಷಣದಲ್ಲಿ ಇರಲಾಗದಕ್ಕೆ ಆದ ಆಘಾತ ಸುಲಭವಾಗಿ ಮರೆಯುವಂಥದು ಆಗಿರಲಿಲ್ಲ..
ನಾನಾದರೂ ಹೇಗೆ ಸಮಾಧಾನಿಸಲಿ? ಮಾತುಗಳು ಬರಿ ಶಬ್ದಗಳಾಗಿ ಉಳಿಯುವ ಅಪಾಯವೇ ಜಾಸ್ತಿ ಇಂಥ ಸಂದರ್ಭಗಳಲ್ಲಿ..ಮಾತನಾಡುವದು ಅನಿವಾರ್ಯ..ತಿಳಿದ ಮಾತು ಹೇಳುತ್ತ ಅವಳ ಮಾತುಗಳಿಗೆ ಕಿವಿಯಾದೆ . ಮನದಲ್ಲಿ ಕಟ್ಟಿನಿಂತ ಭಾವನೆಗಳು ಬರಿದಾಗುತ್ತಲೇ ಸ್ವಲ್ಪು  ಆರಾಮ ಎನಿಸಿದ ಸವಿತಾ ವೇಳೆಯಾಯಿತೆಂದು ನನಗೆ thanks ಹೇಳಿ  ಮತ್ತೆ ಭೇಟಿಯಾಗುವದಾಗಿ  ಹೇಳಿ ಮನೆ ಕಡೆ ಹೆಜ್ಜೆ ಹಾಕಿದಳು..
            ಮೇಲು ನೋಟಕ್ಕೆ ದಿನನಿತ್ಯದ ಒಂದು ಚಿಕ್ಕ ಘಟನೆಯಾದ ಈ ವಿಷಯ ಸಮಾಜದ  ಬಹುದೊಡ್ಡ ಸಮಸ್ಯೆ..ಮರೆಯಾಗುತ್ತಿರುವ ಕೂಡು ಕುಟುಂಬಗಳು ಕಣ್ಮರೆಯಾಗುತ್ತ  ಚಿಕ್ಕ ಚಿಕ್ಕ ಘಟಕಗಳಾಗತೊಡಗಿದ ನಂತರದ ಸಾಮಾಜಿಕ ಸವಾಲುಗಳಲ್ಲಿ ಒಂದು..ವಿಭಕ್ತ ಕುಟುಂಬಗಳಲ್ಲಿ ಗಂಡ_ ಹೆಂಡತಿ ,ಒಂದೋ ಎರಡೋ ಮಕ್ಕಳು ಮಾತ್ರವಿದ್ದು ಎಲ್ಲರೂ ತಮ್ಮತಮ್ಮ ವಲಯಗಳಲ್ಲಿ ಬಂಧಿತರಾಗಿ ಬೇರೆಯವರೊಂದಿಗೆ ಯಾವುದೇ ಭಾವ ಬಂಧ ವೇರ್ಪಡದೇ ದೊಡ್ಡದೊಂದು ' ನಿರ್ವಾತ'  ಏರ್ಪಟ್ಟಾಗ ಮನುಷ್ಯ ಮಾನಸಿಕ ತಬ್ಬಲಿತನ ಅನುಭವಿಸುತ್ತಾನೆ..ಅದರ ಪಾರ್ಶ್ವ ಪರಿಣಾಮಗಳು ಕುಟುಂಬದ ಮೇಲಾಗಿ ಒಟ್ಟು ಸಂಗತಿಗಳು ಅಸಮಾಧಾನಕರವಾಗಿ ಬದಲಾಗುತ್ತವೆ..ಮೇಲೆ ಮೇಲೆ ಎಲ್ಲವೂ ಸರಿಯಂದು ಕಂಡರೂ ಒಳಗೇ ಗೆದ್ದಲು ತಿಂದ ಮರವಾಗುತ್ತದೆ ಪರಿಸ್ಥಿತಿ...ಇದು ಪ್ರಗತಿಶೀಲ ಬೆಳವಣಿಗೆಯ ಅನಿವಾರ್ಯ ಭಾಗ ಎಂದುಕೊಂಡರೂ  ಆಗಬಹುದಾದ ಅಪಾಯಗಳಿಗೆ ಸುಲಭ ಪರಿಹಾರಗಳಿರುವದಿಲ್ಲ..ಹಾಗಾದಾಗ ಎಷ್ಟೋ 'ಸವಿತಾ' ಗಳು ಸದ್ದಿಲ್ಲದೇ ಮನೋಕ್ಲೇಶಕ್ಕೆ ತುತ್ತಾಗುತ್ತಾರೆ..ಗಂಡಸರೂ ಈ  ಸಂದಿಗ್ಧಗಳಿಗೆ ಬಲಿಯಾಗುವ ಸಾಧ್ಯತೆ ಇಲ್ಲದಿಲ್ಲ..
    ‌       ಬೆಂಕಿ ಪಕ್ಕದ ಮನೆಗೆ ಹತ್ತಿದೆ..ನಮ್ಮನೆಗಲ್ಲ.. ಅನ್ನುವಷ್ಟು ಸಮಸ್ಯೆ ಹಗುರವಾಗಿಲ್ಲ..ಎಲ್ಲರೂ ವಿಚಾರಮಾಡುವ ಕಾಲ ವಂತೂ ಸನ್ನಿಹಿತವಾಗಿದೆ, ಅನಿಸುತ್ತಿದೆ ನನಗಂತೂ..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...