Monday, 8 July 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ,..

"God is in d heaven and all   is  right with the world"..   
          
              ಅವಳ ಹೆಸರು ಕವಿತಾ..ಬೀದರ ಜಿಲ್ಹೆಯ ರಾಜಗೀರ ಹಳ್ಳಿಯವಳು. ಶಾಲೆಯ ಮೆಟ್ಟಿಲು ಏರಿಲ್ಲ..ಹಿರಿಮಗಳ ಸಹಾಯದಿಂದ ತನ್ನ ಹೆಸರು ಬರೆಯಲು ಮಾತ್ರ ಕಲಿತಿದ್ದಾಳೆ.but she is a university by herself..
                'ಸುಶಿಕ್ಷಿತರೆಲ್ಲ ಸುಸಂಸ್ಕೃತರಲ್ಲ" ಎಂಬುದಾಗಿ ಮಾತೊಂದಿದೆ.ಅದನ್ನೇ ಇನ್ನೊಂದು ರೀತಿಯಲ್ಲೂ ಹೇಳಬಹುದು." ಅಶಿಕ್ಷಿತರೆಲ್ಲ ಅನಾಗರಿಕರಲ್ಲ.." ಇದು ಈ  ಐದು ವರ್ಷಗಳಲ್ಲಿ  ನಾನು ಕವಿತಾಳಿಂದ ಕಲಿತ ಪಾಠ..
              ಈ ಕವಿತಾ ನಮ್ಮ ಮನೆಯ domestic help..ನಮ್ಮ ಭಾಷೆಯಲ್ಲಿ' ಮನೆಗೆಲಸದವಳು" ದೂರದ ಬೀದರದಿಂದ ಹೊಟ್ಟೆ ಪಾಡಿಗಾಗಿ ಇತರರಂತೆ ವಲಸೆ ಬಂದವಳು.ಮನೆತನದ ಪರಿಸ್ಥಿತಿ ಅಷ್ಟೊಂದು ಹೀನಾಯವೇನೂ ಆಗಿರಲಿಲ್ಲ.. ಆದರೆ  ಮೂರು ನಾಲ್ಕು ವರ್ಷ ಸತತ  ಮಳೆ ಕೈಕೊಟ್ಟು ಬರದ ವಾತಾವರಣ ಅನುಭವಿಸುವಂತಾದುದು, ಮೊದಲ  ಮಗಳ ಮದುವೆ, ಆರು ಜನರ ತುಂಬು ಸಂಸಾರದ ಹೊಣೆಗಾರಿಕೆ ಇವೆಲ್ಲವುಗಳಿಂದ ದಿಕ್ಕೆಟ್ಟ ಸಂಸಾರವಾಗಿತ್ತದು...ಇದ್ದ ಹಳ್ಳಿಯಲ್ಲಿ,ಸುತ್ತುಮುತ್ತಲೂ ರೈತರ ಸರಣಿ ಆತ್ಮಹತ್ಯೆಗಳು ಧೈರ್ಯಗುಂದಿಸಿದಾಗ ಬೆಂಗಳೂರಿಗೆ ವಲಸೆ ಬರದೇ ಬೇರೆ ಮಾರ್ಗವಿರಲಿಲ್ಲ..ನಮಗೆ ಪರಿಚಯದವರಿಂದ ಅವಳ ಪರಿಚಯವಾಗಿ ನಮ್ಮ ಮನೆ, ಹಾಗೂ ಪರಿಚಯದ ಇನ್ನು ಕೆಲವು ಮನೆಗಳ ಕೆಲಸ ದೊರೆತು ನೆಮ್ಮದಿಯ ಉಸಿರು ಬಿಡುವಂತಾದುದು ಅವಳ ಅದೃಷ್ಟ..ಆದರೆ ಕಥೆ ಬೇರೆಯೇ ಇತ್ತು..
‌‌‌    ‌     ಅನಿವಾರ್ಯತೆಗೆ ಸಿಕ್ಕಸಿಕ್ಕಲ್ಲಿ, ಸಿಕ್ಕಷ್ಟು ಹಣ ಸಾಲ ಪಡೆದದ್ದು ,ಅದರ ಮೇಲೆ ಬಸಿರಿನಂತೆ ದಿನದಿನಕ್ಕೆ ಬೆಳೆಯುತ್ತಿರುವ ಬಡ್ಡಿ
ಅವಳನ್ನು ಅಷ್ಟು ಬೇಗ ಸಲೀಸಾಗಿ ಆರಾಮ ಇರಲು ಬಿಡುವ ಮಾತೇ ಇರಲಿಲ್ಲ..ಎಷ್ಟು ದುಡಿದರೂ ತಳವಿಲ್ಲದ ಹಂಡೆಗೆ ನೀರು ಸುರಿದಂತೆ  ಸೋರಿ ಹೋಗುತ್ತಿತ್ತು..ಅಡವಿಟ್ಟ ಹೊಲ ಕಳೆದುಹೋಗಬಾರದೆಂದು ಇಡೀ ಕುಟುಂಬ ಹಗಲಿರುಳೆನ್ನದೇ ದುಡಿದ ಹಣ ಬರಿ ಬಡ್ಡಿ ಲೆಕ್ಕಕ್ಕೆ ಸರಿಹೋಗುತ್ತಿತ್ತು. ಅದನ್ನು ನಮ್ಮಿಂದಲೇ online ತುಂಬಿಸುತ್ತಿದ್ದು, ಪ್ರತಿಸಲ ನಮಗೆ ಸಂಕಟವಾಗುತ್ತಿತ್ತು..ಆದರೂ ಅದು ಬರಿ ಬಡ್ಡಿಗೆ ಸರಿದೂಗಿ ಅಸಲು ಹೇಗಿತ್ತೋ,ಎಷ್ಟಿತ್ತೋ ಹಾಗೇ..ಅಷ್ಟೇ..
                ಕೊನೆಗೆ ನಾನು ಒಂದು ವಿಚಾರಮಾಡಿ ಅವರ ಮನೆಯವರನ್ನೆಲ್ಲ ಕರೆದು ಕೂಡಿಸಿ ಹೇಳಿದೆ. ಅವಳ ಒಂದೊಂದೇ ಸಾಲದ ಹಣವನ್ನು ಮುಂಗಡವಾಗಿ ನಾವು ತುಂಬುವದು-  advance payment_ ಅವರು ನಮಗೆ  ಕಂತಿನಲ್ಲಿ ತೀರಿಸುವದು..ಅಲ್ಲಿಯ ವರೆಗೂ ಕೆಲಸದ ಹಣ ಹೆಚ್ಚಿಸುವಂತಿಲ್ಲ.ಮನೆಗೆಲಸ ಬಿಡುವಂತಿಲ್ಲ.ಇದರಿಂದ ಒಂದೆರಡು ವರ್ಷ ಅಲ್ಪ ಮಟ್ಟಿನ ಬಡ್ಡಿಹಣ ನಮಗೆ ಇಲ್ಲವಾದರೂ ಅವಳ ಕುಟುಂಬಕ್ಕೆ ಅದರಿಂದ ಅಪಾರ ಸಹಾಯ ವಾಗುತ್ತಿತ್ತು..ಅದು ಅವಳ ನಂಬಿಕೆಗೆ,ಒಳ್ಳೆಯತನಕ್ಕೆ ,ಪ್ರಾಮಾಣಿಕತನಕ್ಕೆ ಸಲ್ಲಬೇಕಾದ ಗೌರವವದು ..ನಮಗೂ ತೀರ ಹೊಣೆಯಾಗದೆ ಒಂದು  ಉತ್ತಮ ಕುಟುಂಬ ನೆಲೆಗೊಳ್ಳುವದಾದರೆ ಒಳ್ಳೆಯದೇ, ಎಂದು ಬಂದ ವಿಚಾರವನ್ನು ಹೇಳಿದಾಗ ಎಚ್ಚರಿಸಿದವರು ಹಾಗೂ  ಅನುಮಾನಿಸಿದವರೇ ಹೆಚ್ಚು..ಆದರೆ ಕೇವಲ ಅವಳ ಸಜ್ಜನಿಕೆಯನ್ನು ನಂಬಿ,ಸ್ವಲ್ಪು ಮಟ್ಟಿಗೆ risk ತೆಗೆದುಕೊಂಡದ್ದು ಹುಸಿಹೋಗಲಿಲ್ಲ...
               ಈಗವಳು ಐದುವರ್ಷಳಿಂದ ನಮ್ಮ ಮನೆ ಸದಸ್ಯಳೇ ಆಗಿದ್ದಾಳೆ..ಈ ಅವಧಿಯಲ್ಲಿ ಒಂದೇ ಒಂದು ಪೈಸೆ ಕೂಡ ಮನೆಗೆ ಒಯ್ದಿಲ್ಲ.ಗಂಡ, ಮಗ ತರುವ  ಅಷ್ಟಿಷ್ಟು ಹಣದಲ್ಲಿ  ಮನೆ ತೂಗಿಸಿ ,ಉಳಿಸಿ ,ಶಕ್ತಿ ಮೀರಿ ಸಾಲ ತೀರಿಸಿದ್ದಾರೆ..ಕೊನೆಯ ಮೂವತ್ತು ಸಾವಿರ ಮುಂದಿನ ತಿಂಗಳಿಗೆ ಮುಗಿಯುತ್ತದೆ ಎಂಬ ಖುಷಿಯಲ್ಲಿ ಮುಖವೀಗ ಅರಳಿದ ಮಲ್ಲಿಗೆಯಾಗಿದೆ..ಇದೀಗ ಪುಟ್ಟ ಮನೆಯೊಂದರ ಕನಸು ಕುಡಿಯೊಡೆಯುತ್ತಿದೆ..ಅತಿ ದೊಡ್ಡದಲ್ಲದ ಸಹಾಯವಾದರೂ ನಮಗೆ ಕಹಿ ಅನುಭವ ನೀಡದೆ,ಒಂದು ಕುಟುಂಬವನ್ನು ಶಕ್ತ್ಯಾನುಸಾರ ದಡ ಮುಟ್ಟಿಸಿದ  ತೃಪ್ತಿ  ನಮಗೂ ಆನೆಬಲ ನೀಡಿದೆ..
         YES, God is in d heaven and all is right with d world....

     ‌"ಸಂಕಟದಲಿ ಸಂರಕ್ಷಿಸು
ಎಂಬುದು ಎನ್ನ ಪ್ರಾರ್ಥನೆಯೇ ಅಲ್ಲ...
ಸಂಕಟದಲಿ ಭಯವಿರದಿರೆ ಸಾಕೈ..
ಇದ್ದರದುವೇ ಸಾಕಲ್ಲಾ-"
          ತುಂಬಾ ನೆನಪಾಗುತ್ತಿದೆ...

.

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...