Tuesday, 21 August 2018

ಏಳು! ಎದ್ದೇಳು!! ದ್ರೌಪದಿ....!!!

ನಿನ್ನ ವಸ್ತ್ರಗಳನ್ನು
ನೀನೇ ಸಂಭಾಳಿಸಿಕೋ..
ಇನ್ನಾವ ಕೃಷ್ಣನೂ ಈಗ ಬರುವದಿಲ್ಲ....

ಎಲ್ಲಿಯವರೆಗೆ
ಆಸೆಯಿಟ್ಟುಕೊಂಡು ಕಾಯುತ್ತಿ..
ಸ್ವಂತ ನಿಯತ್ತನ್ನೇ ಮಾರಿಕೊಂಡವರಿಗಾಗಿ....??

ದುಶ್ಶಾಸನರದೇ
ದರ್ಬಾರದಲ್ಲಿ
ಯಾರಿಂದ ರಕ್ಷಣೆ ಬೇಡುವಿ??

ಸ್ವಂತ ಲಜ್ಜಾಹೀನರು
ನಿನ್ನ ಮರ್ಯಾದೆ _
ಯನ್ನೇನು ಕಾಯಬಲ್ಲರು???

ಏಳು! ಎದ್ದೇಳು!! ದ್ರೌಪದಿ..
ನಿನ್ನ ವಸ್ತ್ರ ನೀನೇ ಉಳಿಸಿಕೋ....

ಹಿಂದಿನವ ಕೇವಲ
ಕುರುಡು ರಾಜನಾಗಿದ್ದ...
ಇಂದಿನವರು ಮೂಕ,ಹಾಗೂ
ಕಿವುಡರೂ ಆಗಿದ್ದಾರೆ....

ಪ್ರಜೆಗಳ ತುಟಿಗಳನ್ನು
ಹೊಲಿಯಲಾಗಿದೆ...
ಹೇಳು- ಕೇಳುವದರ ಮೇಲೆ ಪಹರೆಯಿದೆ...

ನೀನೇ ಯೋಚಿಸು...
ನಿನ್ನ ಅಸಹಾಯಕ ಕಣ್ಣೀರು
ಯಾರ ಮನ ಕರಗಿಸಬಲ್ಲದು?

ಏಳು! ಎದ್ದೇಳು!! ದ್ರೌಪದಿ...
ನಿನ್ನನ್ನು ನೀನೇ ಸಂಭಾಳಿಸಿಕೋ....

ಜೂಜಿನ ಹಾಸು ಹಾಸಿ
ಶಕುನಿಗಳು ಕುಳಿತಿರುವಾಗ
ಉಳಿದವರ ಬುದ್ಧಿ  ಓಡಿತೇ...?

ಏಳು! ಎದ್ದೇಳು !!ದ್ರೌಪದಿ.

ನಿನ್ನ ಮಾನ ಉಳಿಸಿಕೊಳ್ಳುವ
ಹೊಣೆ  ಈಗ ನಿನ್ನದೇ...
ಯಾವ ಕೃಷ್ಣನೂ ಇನ್ನಿಲ್ಲಿ ಬರುವದಿಲ್ಲ.....

ಏಳು ! ಎದ್ದೇಳು!! ದ್ರೌಪದಿ!!!

( ಶ್ರೀ, ಅಟಲ್ ಬಿಹಾರಿ ವಾಜಪೇಯಿಯವರ ಹಿಂದಿ ಕವನದ ಅನುವಾದ...)

Monday, 13 August 2018

ಮತ್ತೆ ಬಂತು ಶ್ರಾವಣ...

( ಧಾರವಾಡದ ' ಬಂತು ಶ್ರಾವಣ' ಕ್ಕೆ ಬರೆದು  ಯುವ ಕವಿಗಳಿಗಾಗಿ  ಎಂದು ಇದ್ದುದರಿಂದ ಕಳಿಸದೇ ಬಿಟ್ಟ ಕವನ...ಇಂದು ನಿಮಗಾಗಿ)

ಶ್ರಾವಣದ ದಿನಗಳವು ಬಾಗಿಲನು ಬಡಿಯುತಿವೆ
ಆಷಾಢ ದಿನಗಳನ್ನು ಹಿಂದೆ ಮೆಟ್ಟಿ...
ಮಳೆನೀರ ಹುಯಿಲಿನಲಿ
ಮೈ ಮನಗಳರಳುತಿವೆ..
ತೂಗುತಿವೆ ಮನದಣಿಯೆ
ಜೋಕಾಲಿ ಕಟ್ಟಿ.....

ಮುಗಿಲ ನಕ್ಷತ್ರಗಳು
ಅಂಗಳಕೆ ಇಳಿದಿಹವು...
ಚಿತ್ರ- ಚಿತ್ತಾರದಾ ರಂಗೋಲಿ ಬರೆದು...
ಕಣ್ಣು ಹಾಯುವವರೆಗೂ
ಹಸಿರು ಹೊನ್ನಿನ ನೋಟ...
ಸೆಳೆದು ಆಲಂಗಿಸಿವೆ ಕೈ
ಮಾಡಿ ಕರೆದು...

ಹುತ್ತದಲಿ ಹಾಯಾಗಿ
ಮಲಗಿದ್ದ ನಾಗಣ್ಣ...
ಊರ ಭೇಟಿಗೆ ಬರುವ
ಮೊದಲ ಬಾರಿ....
ಸಿಡಿದರಳು,ಹುಳಿಹುಣಿಚೆ
ಎಳ್ಳು ಬೆಲ್ಲದ ಜೊತೆಗೆ
ಪೂಜೆ ಗಣಿಯಾಗಿ ಬಿಡಿ ಎಲ್ಲ ಸೇರಿ....

ಹುರಿಗಡಲೆ,ತನಿಬೆಲ್ಲ,
ಮೇಲೆ ಎಳ್ಳಿನ ಕಾಳು...
ಒಣಕೊಬ್ಬರಿ ಜೊತೆಗೆ
ಸ್ನೇಹ ಮಾಡಿ...
ಬಾಯ ಕಹಿಯನ್ನೆಲ್ಲ
ದೂರವಾಗಿಸಲೆಂದೆ
ಕಾದಿಹವು ತಟ್ಟೆಯಲಿ
ಒಟ್ಟುಗೂಡಿ...

ದೂರದೂರುಗಳಿಂದ
ತಾಯಮಡಿಲಿಗೆ ಬಂದ
ಮಗಳಿಗೊಂದು ಚಂದದ
ಹಸಿರು ಸೀರೆ...
ಹಣೆಯಲಿ ಕಿರುತಿಲಕ
ಕೈ ತುಂಬ ಗಾಜುಬಳೆ
ಮುಡಿತುಂಬ ಮಲ್ಲಿಗೆ
ಮುಡಿಯಲಿ ನೀರೆ...

ಹಗಲಿರುಳು ಗೊತ್ತಿಲ್ಲ
ಸಮಯದರಿವೇ ಇಲ್ಲ
ಬಂಧು ಬಾಂಧವರ ಜೊತೆ ಸ್ನೇಹಮಿಲನ...
ಇದುವೆ ಶ್ರಾವಣ ರೀತಿ
ಇದುವೆ ಶ್ರಾವಣ ನೀತಿ
ಇದುವೆ  ಶುಭ ಶ್ರಾವಣದ
ತಂತನನ...

Sunday, 12 August 2018

ಹಾಗೇ ಸುಮ್ಮನೇ...

ಮತ್ತೆ ಬಂತು ಶ್ರಾವಣ....ಎಲ್ಲೆಲ್ಲಿಯೂ ಸಂಭ್ರಮ...ಕಂಡಲ್ಲೆಲ್ಲ  ಹಸಿರ ಹಬ್ಬ...ಸಿಹಿ ಭೋಜನ..ಜೋಕಾಲಿ...ತವರ ಸಡಗರ...ಉಡಿಯಕ್ಕಿ,ಸೀರೆ, ಬಳೆಗಳ ಭರಾಟೆ...ಬಂಧು ಬಾಂಧವರ ಮಿಲನ...ಸಾಲು ಸಾಲು ಸಂಭ್ರಮಗಳು...ಬೇರೆಬೇರೆ ರೂಪದಲ್ಲಿ...... ಬೇರೆ ಬೇರೆ ಬಣ್ಣಗಳಲ್ಲಿ....                  ಆದರೆ ಮನುಷ್ಯನ ಜೀವನದಲ್ಲಿ ನಿತ್ಯ ಸಂಭ್ರಮದ ಕಾಲವೊಂದು ಇರುತ್ತದೆ.ಅದಕ್ಕೆ ಬಾಲ್ಯವೆಂದು ಹೆಸರು...ಬದುಕಿನ ಎಲ್ಲ ಜಂಜಾಟಗಳಿಂದ ದೂರವಾದ, ಕಪ್ಪು - ಬಿಳುಪಿನ ಕಲ್ಪನೆಯಿಂದ ಹೊರತಾದ ,ಬಣ್ಣಬಣ್ಣದ ಬಾಲ್ಯ...            ‌ ‌ ‌‌‌‌        ‌‌‌' ಬಾಲ್ಯ' ಎಂದೂ ಮುಗಿಯದ ಬಾಯಸಿಹಿ...ಎಂದೆಂದಿಗೂ ಮಧುರ..ಹಾಗೆಂದಕೂಡಲೇ ನೆನಪಿಗೆ ಬರುವದು...ಜಗಜಿತ ಸಿಂಗ್ ಹಾಗೂ ಚಿತ್ರಾಸಿಂಗ್ ಅವರು ಹಾಡಿದ evergreen ಗಜಲ್..." ಯೆ ದೌಲತ ಭೀ ಲೇ ಲೋ...ಯೇ ಶೊಹರತ್ ಭೀ ಲೇ ಲೋ..ಭಲೇ ಛೀನ ಲೋ ಮುಝ ಸೆ ಮೇರೀ ಜವಾನೀ...ಮಗರ್ ಮುಝಕೋ ಲೌಟಾದೋ ಬಚಪನ ಕಾ ಸಾವನ್...ವೋ ಕಾಗಜ ಕಿ ಕಸ್ತೀ...ಓ ಬಾರಿಶ್ ಕಾ ಪಾನೀ....         ' ಬದುಕೆ,ನನ್ನ ಈ ವರೆಗೆ ಗಳಿಸಿದ ಹೆಸರು,ಕೀರ್ತಿ, ಸಂಪತ್ತು,ದೌಲತ್ತು, ವೈಭವ,ಆಡಂಬರ ಎಲ್ಲವನ್ನೂ ವಾಪಸ್ ತೆಗೆದುಕೊಂಡು ಬಿಡು..      ‌   ‌        ಬದಲಾಗಿ ನನ್ನ ಬಾಲ್ಯ ಮರಳಿಸು...ಆ ಶ್ರಾವಣದ ಮಳೆ,ಕಾಗದದ ದೋಣಿ,ನನ್ನ ಪುಟ್ಟ ಮೊಹಲ್ಲಾದ ಆ ಅಜ್ಜಿ, ಅವಳು ಹೇಳುತ್ತಿದ್ದ ಚಂದದ ಕಥೆಗಳು,ಆ ಕಥೆಗಳೊಳಗಿನ ಅಪ್ಸರೆಯರು, ಆ ಮರೆಯದ ಸುಂದರ ರಾತ್ರಿಗಳನ್ನು ಮರಳಿಸು...       ‌             ಬಿರುಬಿಸಿಲಿನಲ್ಲೂ ಮನೆಬಿಟ್ಟು ಹೋಗುವ ಸ್ವಾತಂತ್ರ್ಯ ವನ್ನು ,ಮುದ್ದಾದ ಪುಟ್ಟ ಪುಟ್ಟ ಪಕ್ಷಿಗಳನ್ನು,ಚಿಟ್ಟೆಗಳನ್ನು ಬೆಂಬತ್ತುವ ಹುಮ್ಮಸನ್ನು ,ಬೊಂಬೆಗಳ ಮದುವೆಯಲ್ಲಿಯ ಸುಳ್ಳು ಜಗಳಗಳನ್ನು ಮರಳಿಸು....                  ಮನಸಾರೆ ಜೋಕಾಲಿ ಜೀಕುವದು, ಬೀಳುವದು,ಏನೂ ನಡದೇಯಿಲ್ಲಯಂಬಂತೆ ಪುನಃ ಜೀಕುವದು ...ಒಹ್ !!!ಆ ಸುವರ್ಣ ಯುಗವನ್ನೊಮ್ಮೆ  ದಯಮಾಡಿ ಮರಳಿಕೊಡು...                      ಆಟದ ಭರದಲ್ಲಿ ಒಡೆದ ಬಳೆಗಳ ಚೂರುಗಳನ್ನು,ಅವುಗಳು ಮಾಡಿದ ಗಾಯದ ಗುರುತುಗಳನ್ನು,ಮರಳಿಸು...ವೇಳೆ ಸಿಕ್ಕಾಗಲೆಲ್ಲ ಏರಿ ಕುಳಿತುಕೊಳ್ಳುತ್ತಿದ್ದ ಮರಳರಾಶಿ,ಅದರಲ್ಲಿ ಗೂಡುಗಳನ್ನು ಕಟ್ಟಿ,ಕೆಡವಿ,ಮತ್ತೆ ಕಟ್ಟಿ ಆಡುತ್ತಿದ್ದ ಆ ಮನಮೋಹಕ ದಿನಗಳನ್ನುವಾಪಸ್ ಕೊಡು...              ‌ಆದಿನಗಳ ಮುಗ್ಧ ಮನಸ್ಸುಗಳನ್ನು, ಜೀವಕ್ಕೆ ಜೀವವಾದ ಆಟಿಗೆಗಳನ್ನು,ಅಮಾಯಕ ಬಾಲ್ಯದ  ಹೊಂಗನಸುಗಳನ್ನು ,ಜಗತ್ತಿನ ಗೊಡವೆಯಿಲ್ಲದ,ಸುಳ್ಳುಸಂಬಂಧಗಳ ಬಂಧವಿಲ್ಲದ ಆ ಸುಂದರ ಬಾಲ್ಯದ ದಿನಗಳನೊಮ್ಮೆ ಮರಳಿಕೊಟ್ಟುಬಿಡು ಬದುಕೆ..                    ಬದಲಿಗೆ ಈಗಿನ ನನ್ನ ಇಡೀ ಬದುಕನ್ನೇ ನಿನಗೆ ಧಾರೆಯರೆಯುತ್ತೇನೆ"        ‌          ಹೇಳಲು ಏನಾದರೂ ಉಳಿದಿದೆ ಅನಿಸುತ್ತಿದೆಯೇ?????

Wednesday, 8 August 2018

ಗೆಳತಿಗೆ...

ಬಂದುಬಿಡು..
ಯಾವಾಗಲಾದರೊಮ್ಮೆ..

ಹಾಗೇ ಸುಮ್ಮನೇ...

ಒಮ್ಮೆಲೇ
ಪಾರಿವಾಳವೊಂದು
ಅಂಗಳಕ್ಕೆಹಾರಿ
ಬಂದ ಹಾಗೆ...

ಎಲ್ಲಿಂದಲೋ ಸದ್ದಿಲ್ಲದೇ
ತೂರಿಬರುವ
ತಂಪು ಗಾಳಿಯ
ಬಿಸುಪಿನ ಹಾಗೇ....

ಪಕ್ಕದ ಮನೆಯ ಪಾಕಶಾಲೆಯಿಂದ
ಬರುವ ರಸಪಾಕದ
ಘಮಲಿನ ಹಾಗೆ....

ಬಂದುಬಿಡು ಒಮ್ಮೆ...

ತುಂಟ ಮಗುವೊಂದು
ಚಂಡು ಹುಡುಕುತ್ತಾ
ತೋಟದಲ್ಲಿ ನುಸುಳಿ
ಬಂದಹಾಗೆ....

ಪುಟ್ಟ ಅಳಿಲೊಂದು
ಪಾಗಾರ ತನ್ನದೇ
ಎಂದಂದು ಜಿಗಿದಾಡುವ
ಹಾಗೆ..

ಬಾಗಿಲ ಕರೆಗಂಟೆ ಬಾರಿಸಬೇಡ..
ನನ್ನ ಹೆಸರು ಹಿಡಿದು
ಜೋರಾಗಿ ಕೂಗು...
ನನ್ನ ಸಮಯಾನುಕೂಲ
ಕೇಳುವ ಕಾರಣವಿಲ್ಲ...
ನಿನ್ನದನ್ನು ಯಥೇಷ್ಟ ಕೂಡಿಟ್ಟುಕೊಂಡು ಬಾ..

ಬಂದುಬಿಡು ಒಮ್ಮೆ..

ಇಬ್ಬರ ಸಮಯಗಳ ನಡುವೆ ಒಂದು ಉಯ್ಯಾಲೆ ಕಟ್ಟೋಣ..
ಭೂತ,ಭವಿಷತ್ತಿನ ನಡುವಿನ ಜೀಕುಗಳಲ್ಲಿ
ಮಾತುಗಳು ತಂತಾನೇ
ಒಡಮೂಡಿ ಬರುತ್ತವೆ...
ಕಾಗದದ  ಮೇಲೆ
ಕವನದ ಸಾಲುಗಳು
ರೂಹು ಪಡೆದಂತೆ...

ಬಂದುಬಿಡು  ಒಮ್ಮೆ...

ಮರಳಿ ಹೋಗುವಾಗ
ನಿನ್ನೊಂದಿಗೆ ನನ್ನನ್ನು
ಕರೆದೊಯ್ಯಿ...
ನಿನ್ನನ್ನು ಸ್ವಲ್ಪು ಇಲ್ಲಿ
ಉಳಿಸಿ ಹೋಗು...
ಮತ್ತೆ ಮತ್ತೆ ಬರಬೇಕಲ್ಲವೇ?
ನಿನ್ನನ್ನು ನಾನು
ನನ್ನನ್ನು ನೀನು
ಪಡೆಯಬೇಕೆಂದರೆ..

ಬಂದುಬಿಡು ಒಮ್ಮೆ...

(ಮೂಲ:ಗುಲ್ಜಾರ್)
ಮನೋಹರ ನಾಯಕ, ಮನಸಾರೆ ಧನ್ಯವಾದಗಳು..ಇಂಥ ಚಂದದ ಕವನದ  transcreation ನ ಅವಕಾಶ ಕಲ್ಪಿಸಿದ್ದಕ್ಕಾಗಿ...)

Tuesday, 7 August 2018

ಹಾಗೇ ಸುಮ್ಮನೇ...

Wise or otherwise...????* ವಿಷದ ಬಾಟಲಿಯ ಅವಧಿ ಮೀರಿದರೆ( expire) ಅದರ ವಿಷದಂಶ ಹೆಚ್ಚಾಗುತ್ತಾ? ಕಡಿಮೆಯಾಗುತ್ತ?*ಆಕ್ಸಿಜನ್ ಕೂಡ ನಮ್ಮನ್ನು ನಿಧಾನವಾಗಿ ಕೊಲ್ಲುತ್ತದೆ...ಆದರೆ ಅದಕ್ಕೆ ೭೫ ರಿಂದ ೧೦೦ ವರ್ಷಗಳು ಹಿಡಿಯುತ್ತವೆ...*W ಇಂಗ್ಲಿಷಿನಲ್ಲಿ double' U' ಏಕೆ?double 'V' ತಾನೇ ಆಗಬೇಕು..*ನೀವು ಏನಾದರೂ ಸ್ವಚ್ಛಗೊಳಿಸಿದರೆ ಆ ಹೊಲಸು ಮತ್ತಾವುದೋ ಒಂದು  ಕಡೆ ಜಮಾ ಆಗಿರುತ್ತದೆ.ಅದು ನಿರ್ಮೂಲನೆ ಅಲ್ಲ...ಬರಿ ಸ್ಥಳಾಂತರ...*ನೂರು ವರ್ಷಗಳ ಕೆಳಗೆ ಶ್ರೀಮಂತರು ಕಾರಿನಲ್ಲಿ,ಬಡವರು ಒಂಟಿಯಮೇಲೆ ಪಯಣಿಸುತ್ತಿದ್ದರು...ಈಗ ಅದು ತಿರುವು ಮುರುವು..*WHAT,WHERE,WHEN ಇವುಗಳಲ್ಲಿಯ W ಬದಲಾಗಿ T ಹಾಕಿ.ಅವುಗಳಿಗೆ ಉತ್ತರ ಸಿಗುತ್ತದೆ..*ಮಂಗನಿಂದ ಮಾನವ ಅಂತಾದರೆ ಈಗಲೂ ಏಕೆ ಇಷ್ಟೊಂದು ಮಂಗಗಳು ಸುತ್ತಲೂ ಕಾಣಸಿಗುತ್ತವೆ?*fridge- ನಲ್ಲಿರುವ ' D'Refrigerator ದಲ್ಲಿ ಏಕಿಲ್ಲ?* ಮೊದಲ ಗಡಿಯಾರದ ಆವಿಷ್ಕಾರವಾದಾಗ ಗಂಟೆ ಎಷ್ಟಾಗಿತ್ತು ಎಂದು ಹೇಳಿದವರಾರು?* Funeral ಶಬ್ದ ' FUN ' ದಿಂದೇಕೆ ಶುರುವಾಯ್ತು? * ಹಣ ಗಿಡದಲ್ಲಿ ಬೆಳೆಯುವದಿಲ್ಲವೆಂದಾದರೆ bank ಗಳಿಗೆ branches ಏಕಿವೆ?* vegetarian ಒಬ್ಬ vegetables ತಿನ್ನುವದಾದರೆ  Humanitarian ಏನು ತಿನ್ನುತ್ತಾನೆ...?* ಹಡಗಿನಿಂದ ಸರಕು ಸಾಗಾಣಿಕೆ 'CAR'GO ಹಾಗೂ TRUCK ನಿಂದಕಳಿಸುವದು 'SHIP'MENT..ಏಕೆ?*( ಸಂಗ್ರಹ)

Sunday, 5 August 2018

ಹಾಗೇ ಸುಮ್ಮನೇ....

ಹಲೋ; ಹಲೋ, ಯಾರು ಮಾತಾಡೋವ್ರು?''ನೀನss ಹೇಳು ನೋಡೋಣ..ಎಷ್ಟು ನೆನಪಿಟ್ಟಿ ಅಂತ ಗೊತ್ತಾಗ್ತದ..  ಅತ್ಯಾ, ಏನ್ ಮಾಡ್ಲಿಕ್ಹತ್ತೀರಿ? ಇಲ್ನೋಡ್ರಿ...ಯಾರೋ ಮಾತಾಡ್ಬೇಕಂತಾರ ನಿಮ್ ಜೊತೆ....ಯಾರವಾ?ನೀವss ಹೇಳ್ರಿ...ಅವರ್ಗೆ ಫೋನ್ ಕೊಡ್ತೇನಿ ಮಾತಾಡ್ರಿ; ಹಲೋ,ನನ್ನ ನೆನಪದನೋ...ಏನ್ ಮರ್ತss ಬಿಟ್ಯೋ...ನಿನ್ನ ನಂಬರ್ ಹುಡುಕಲಿಕ್ಕೆ ನಾ ಮಾಡದ ಸರ್ಕಸ್ ಇಲ್ಲ..ಅಂತೂ ಇವತ್ತ ಸಿಕ್ತು..ಎಲ್ಲಿದ್ದೀ? ಏನ್ ತಾನ..? ಒಮ್ಮೆನೂ ನನ್ನ ನೆನಪು ಬರ್ಲ್ಲೇ ಇಲ್ಲೇನು ನಿನಗ? ಎಷ್ಟು ದಿನಾ ಆತು ನಮ್ಮ ಭೆಟ್ಟಿ ಆಗಿ...ನೆನಪು ಮಾಡ್ಕೋ...May 12 ಕ್ಕ vote ಹಾಕೋವಾಗಆದ ಭೆಟ್ಟಿ...ಆಮ್ಯಾಲ ಗಪ್ ಆಗಿ..ಇವತ್ತ ಇವರ ಮುಂದ ಬಯ್ದೆ...; ಅವರss ಯಾಕ ಮಾಡಬೇಕು? ಏನೋ ಕಾರಣ ಇದ್ದೀತು...ನೀನss ಮಾಡಿದ್ರಾತು..ಗೆಳತನದಾಗ ಎಂಥಾ; ನಾ... ನೀ... ಹಗ್ಗ ಜಗ್ಗಾಟ ಅಂದ್ರು... ಅದ್ಕ ಮಾಡ್ದೆ...       ನನ್ನ ಹೆಸರು ನಾನss ಮರೆಯೋ ದಿವಸ ಇವು...ಇನ್ನ  50-   60 ವರ್ಷದ ಹಿಂದಿನ ಒಂದನೇತ್ತಾ, ಬಿನ್ನೇತ್ತಾ ಗೆಳತೇರು ಫೋನ್ ಮಾಡಿ ನಾ ಯಾರು ಹೇಳು ಅಂದ್ರ ಪರಿಸ್ಥಿತಿ ಏನಾಗಬೇಡ... ಇನ್ನೊಂದು chance ಕೊಡತೇನಿ... ಅಂದುಕೋತ ಕನಿಷ್ಟ ಎರಡು ,ಮೂರು ' ಊಹು...ಅಲ್ಲ, wrong,  ಅಂತ ಆದಮ್ಯಾಲೂ ಹೊಳಿದೇದ್ರ. ? ನನಗ ಅನುಮಾನ.. ಎದುರು ಬಂದ ನಿಂತ್ರೂ ಆಗಲಿಕ್ಕಿಲ್ಲ ಅಂತ...ರಟ್ಟೀಹಳ್ಳಿ ಪ್ರೈಮರಿ ಸ್ಕೂಲ್,ಹೈಸ್ಕೂಲ್... ಧಾರವಾಡದ K.E board, J.SS college,Kumata Kamala Baliga college of edn...  ಈ ಎಲ್ಲ ಕಡೆಯ ಗೆಳತಿಯರ ಫೋನ್ಗಳು ಈ ಒಂದೇ ವಾರದಲ್ಲಿ  ಬಂದದ್ದು,ಬರುತ್ತಿರುವದು ಸ್ವಾಭಾವಿಕವೋ,ಕಾಕತಾಳೀಯವೋ ಪವಾಡವೋ ತಿಳಿಯುತ್ತಿಲ್ಲ...ಇಂದು FRIENDSHIP DAY ಅಂತೆ..ನನಗೆ ಸುರುವಾಗಿವಾರವಾಯಿತು...                   ಹಳೆಯ ದಿನಗಳು,ಮಧ್ಯದ ಆಗುಹೋಗುಗಳು,ಸಧ್ಯದ ಪರಿಸ್ಥಿತಿ ಎಲ್ಲದರ ರೀಲುಗಳನ್ನು ಬಿಚ್ಚಿ,ನೆನೆದು,ಹಿಗ್ಗಿ,ಅಷ್ಟಿಟ್ಟು ಕೆಲವೊಮ್ಮೆ ಕುಗ್ಗಿ,ಮುಂದೆ regular contact ಮಾಡುವ ಭರವಸೆಯೊಂದಿಗೆ ಮಾತು ಮುಗಿಸಿದ್ದಾಯ್ತು...                ಕಷ್ಟದ ದಿನಗಳನ್ನು ಉದ್ವಿಗ್ನತೆಯಿಲ್ಲದೆ,ಇಂದಿನದನ್ನು ಒಂದುರೀತಿಯ ನಿರ್ಲಿಪ್ತತೆಯಿಂದ,ಮುಂದಿನದನ್ನು ಅನಿಶ್ಚಿತತೆ  ,ಹಾಗೂ ಸ್ವಲ್ಪು ಆತಂಕ ಮಿಶ್ರಿತ ಧ್ವನಿಯಲ್ಲಿ ಮಾತನಾಡಿ ಮುಗಿಸಿದರೂ ಏನೋ ಆನಂದ,ನಿರಾಳ ಭಾವನೆ...                ಗೆಳೆತನವೊಂದು ವಿಶಾಲ ಆಲದ ಮರದ ನೆರಳು ಅನ್ನುತ್ತಾರೆ ಒಬ್ಬ ಕವಿ ಅದರಲ್ಲಿ ಹರಹು ಇದೆ...ಹಿತವಿದೆ..ಹಾಯಾಗಿಕೆಲ ದಿನ ಕಳೆಯಬಲ್ಲೆವೆಂಬ ಹುಮ್ಮಸು ದೊರೆಯುತ್ತದೆ..ನಾನು ಹಿಂದೊಮ್ಮೆ ನನ್ನ ಕಷ್ಟದ ದಿನಗಳಲ್ಲಿ ಮಾನಸಿಕವಾಗಿ ಕುಗ್ಗಿಹೋಗಿ ಡಾಕ್ಟರರ ಬಳಿ ಹೋದಾಗ ಅವರು ಕೊಟ್ಟ ಸಲಹೆ," ಸಾಕಷ್ಟು ನಿಮ್ಮ ಸ್ನೇಹಿತೆಯರೊಂದಿಗೆ ಕಲೆತು ಇರಿ..ಸುಖ - ದುಃಖ ಹಂಚಿಕೊಳ್ಳಿ..ಯಾವ ವಿಷಯವನ್ನೂ ಮನದಲ್ಲಿಟ್ಟುಕೊಳ್ಳದೇ ವಿನಿಮಯಮಾಡಿಕೊಳ್ಳಿ'                   ನನಗದು ಇಂದಿಗೂ ರಾಮಬಾಣ...ನನ್ನ ಸ್ನೇಹ ಮಂಡಲ ದೊಡ್ಡದು,ಗಾತ್ರದಿಂದ,...ಹೃದಯದಿಂದ...ಯೋಗ್ಯತೆಯಿಂದ...LOVE YOU FRIENDS....THANK YOU ALLLLLL

Wednesday, 1 August 2018

ತಥ್ಯ...

ಹಿಂದೆ...
ಮೈಯಲ್ಲಿ ಬಲವಿತ್ತು...
ನಡೆಯಲ್ಲಿ ಛಲವಿತ್ತು...
ಸಾಧಿಸುವ ಒಲವಿತ್ತು...

ಗೆದ್ದರೆ ಫಲವಿತ್ತು...
ಛಲ, ಬಲಗಳು ಫಲ
ನೀಡಿ ಗೆಲ್ಲಿಸಿದ್ದು ಸುಳ್ಳಲ್ಲ...

ಇಂದು...
ದೇಹಕ್ಕೆ ವಯಸ್ಸಾಗಿದೆ...
ಸಾಕೆಂಬ ಮನಸಾಗಿದೆ...
ಅಂದದ್ದೆಲ್ಲ ನನಸಾಗಿದೆ...

ಆರಾಮ ಏಕಮೇವ ಕನಸಾಗಿದೆ...
ಕನಸು ನನಸಿನ ಹಂಗಿಲ್ಲದೇ ಇರಬೇಕೆನಿಸಿದ್ದು ಸುಳ್ಳಲ್ಲ...
ಮುಂದೆ....ದಿನಗಳು ಹೀಗೇ ಸಾಗಬಹುದು...

ಮನಸಿನ್ನೂ ಮಾಗಬಹುದು...
ಮನಕೆ ನಿಜದರಿವು ಆಗಬಹುದು...
ಶಿರವು ತಥ್ಯಕೆ ಬಾಗಬಹುದು...
ಬಂದದ್ದು ಬರಲಿ ಎದುರಿಸುವೆ ಅನಿಸಿದ್ದು ಸುಳ್ಳಲ್ಲ...

ಒಳಗು... ವೃದ್ಧ್ಯಾಪ್ಯ- ಅಂದರೆ 'ಮರು ಬಾಲ್ಯ'- ಅಂತ ಕೇಳಿದ್ದೆ/ನೋಡಿದ್ದೆ/ನಕ್ಕಿದ್ದೆ.ಈಗ ಅನುಭವಿಸುತ್ತಿದ್ದೇನೆ...ಓದಬೇಕು- ನನ್ನಣ್ಣ  ಆಗುವುದಿಲ್ಲ.ಬರೆಯಬೇಕು...