Wednesday, 8 August 2018

ಗೆಳತಿಗೆ...

ಬಂದುಬಿಡು..
ಯಾವಾಗಲಾದರೊಮ್ಮೆ..

ಹಾಗೇ ಸುಮ್ಮನೇ...

ಒಮ್ಮೆಲೇ
ಪಾರಿವಾಳವೊಂದು
ಅಂಗಳಕ್ಕೆಹಾರಿ
ಬಂದ ಹಾಗೆ...

ಎಲ್ಲಿಂದಲೋ ಸದ್ದಿಲ್ಲದೇ
ತೂರಿಬರುವ
ತಂಪು ಗಾಳಿಯ
ಬಿಸುಪಿನ ಹಾಗೇ....

ಪಕ್ಕದ ಮನೆಯ ಪಾಕಶಾಲೆಯಿಂದ
ಬರುವ ರಸಪಾಕದ
ಘಮಲಿನ ಹಾಗೆ....

ಬಂದುಬಿಡು ಒಮ್ಮೆ...

ತುಂಟ ಮಗುವೊಂದು
ಚಂಡು ಹುಡುಕುತ್ತಾ
ತೋಟದಲ್ಲಿ ನುಸುಳಿ
ಬಂದಹಾಗೆ....

ಪುಟ್ಟ ಅಳಿಲೊಂದು
ಪಾಗಾರ ತನ್ನದೇ
ಎಂದಂದು ಜಿಗಿದಾಡುವ
ಹಾಗೆ..

ಬಾಗಿಲ ಕರೆಗಂಟೆ ಬಾರಿಸಬೇಡ..
ನನ್ನ ಹೆಸರು ಹಿಡಿದು
ಜೋರಾಗಿ ಕೂಗು...
ನನ್ನ ಸಮಯಾನುಕೂಲ
ಕೇಳುವ ಕಾರಣವಿಲ್ಲ...
ನಿನ್ನದನ್ನು ಯಥೇಷ್ಟ ಕೂಡಿಟ್ಟುಕೊಂಡು ಬಾ..

ಬಂದುಬಿಡು ಒಮ್ಮೆ..

ಇಬ್ಬರ ಸಮಯಗಳ ನಡುವೆ ಒಂದು ಉಯ್ಯಾಲೆ ಕಟ್ಟೋಣ..
ಭೂತ,ಭವಿಷತ್ತಿನ ನಡುವಿನ ಜೀಕುಗಳಲ್ಲಿ
ಮಾತುಗಳು ತಂತಾನೇ
ಒಡಮೂಡಿ ಬರುತ್ತವೆ...
ಕಾಗದದ  ಮೇಲೆ
ಕವನದ ಸಾಲುಗಳು
ರೂಹು ಪಡೆದಂತೆ...

ಬಂದುಬಿಡು  ಒಮ್ಮೆ...

ಮರಳಿ ಹೋಗುವಾಗ
ನಿನ್ನೊಂದಿಗೆ ನನ್ನನ್ನು
ಕರೆದೊಯ್ಯಿ...
ನಿನ್ನನ್ನು ಸ್ವಲ್ಪು ಇಲ್ಲಿ
ಉಳಿಸಿ ಹೋಗು...
ಮತ್ತೆ ಮತ್ತೆ ಬರಬೇಕಲ್ಲವೇ?
ನಿನ್ನನ್ನು ನಾನು
ನನ್ನನ್ನು ನೀನು
ಪಡೆಯಬೇಕೆಂದರೆ..

ಬಂದುಬಿಡು ಒಮ್ಮೆ...

(ಮೂಲ:ಗುಲ್ಜಾರ್)
ಮನೋಹರ ನಾಯಕ, ಮನಸಾರೆ ಧನ್ಯವಾದಗಳು..ಇಂಥ ಚಂದದ ಕವನದ  transcreation ನ ಅವಕಾಶ ಕಲ್ಪಿಸಿದ್ದಕ್ಕಾಗಿ...)

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...