Monday, 27 August 2018

Chutukugalu - 1

ಉದ್ದುದ್ದ ಕವಿತೆಗಳ ಅಡ್ಡಡ್ಡ ಸೀಳಿ
ನಾಲ್ಕು ಸಾಲುಗಳಲ್ಲೆ ಹೆಳುವುದ ಹೇಳಿ
ಚುಟುಕಾಗಿ ಬರೆಯುವದೇ ಅನಿಸುವುದು ಸೂಕ್ತ
ಬರೆಯಿವವ, ಓದುವವ ಬಲು ಬೇಗ ಮುಕ್ತ


ಚುಟುಕಗಳ ಓದುತ್ತ ಬೆಳೆದವಳು ನಾನು
ದೇಸಾಯಿ ದಿನಕರರ ಬಹುದೊಡ್ಡ fan
ಅವರದೇ ಹಾದಿಯಲಿ ಒಂದು ಕಿರು ಹೆಜ್ಜೆ
ಚುಟುಕು ಕಲಂದುಗೆಯ ಒಂದು ಬಿಡಿಗೆಜ್ಜೆ


ಚಿನ್ನ, ಮುದ್ದು, ರಾಜ ಎಂದೆಲ್ಲ ಕರೆದು
ಭಾಷಣವ ಮಾಡಿ ಲೆಖನವ ಬರೆದು
ಆಚರಿಸಿ ಆಯಿತಲ್ಲ ಮಕ್ಕಳ ದಿವಸ
ಮುಂದಿಹಿದು ಮತ್ತ ಅದೇ ಶೊಷಣೆಯ ವರುಷ


4.   ವ್ಯಸ್ತ
ಬಲಗೈಲಿ ಐಪ್ಯಾಡು , ಎಡಗೈಲಿ ಫೋನು
ನಡುನಡುವೆ ಟಿವಿಯಲಿ ಬರುತಿರುವದೆನು?
ಎಷ್ಟೊಂದು ಕೆಲಸಗಳು ಏಕಕಾಲಕ್ಕೆ?
ಸಮಯ ಎಲ್ಲಿದೆ ಹೇಳಿ ಮಾತಾಡಲಿಕ್ಕೆ?


5.   ವೇಗ
ಇಂದು ಮೊದಲನೇ ಭೇಟಿ, ನಾಳೆಯೇ ಮದುವೆ
ನಾಡಿದ್ದು divorceಗೆ ಬಂದದ್ದು ನಿಜವೇ...
ಹೇಗೆಂದು? ಏಕೆಂದು? ಕೇಳುವದು ಸಲ್ಲ...
ಫೆವಿಕಾಲು ಹೃದಯಗಳ ಜೋಡಿಸುವದಿಲ್ಲ...


6.   ಹಗರಣ
ಎಲ್ಲೆಲ್ಲಿ ಕೇಳಿದರೂ ಹಗರಣದ ಸುದ್ದಿ,
ನಿಜವಾಗಿ ಕಂಡೀತೇ ದೇಶ ಅಭಿವೃದ್ಧಿ?
ಇಂದು ಬದುಕಿದ್ದರೆ ಆ ನಮ್ಮ ಬುದ್ಧ...
ಶುದ್ಧ ರಾಜಕಾರಣಿ ಮನೆಯ - ಸಾಸುವೆಯ ಕೇಳುತಿದ್ದ!
( ಟಿಪ್ಪಣೆ -- ಕಿಸಾ ಗೌತಮಿ ಪುತ್ರ ಶೋಕ ಪರಿಹಾರಕ್ಕಾಗಿ ಬುದ್ಧನ ಬಳಿ ಬಂದಾಗ ಅವರು ಅವಳಿಗೆ ಸಾವು ಇಲ್ಲದ ಮನೆಯ ಸಾಸುವೆ ತಂದರೆ ಪರಿಹಾರ ಸಿಗುತ್ತದೆ ಎಂದು ಹೇಳಿ ಸಾವು ಅನಿವಾರ್ಯ ಎಂಬುದನ್ನು ಮನಗಾಣಿಸುತ್ತಾರೆ.ಇದರ ಹಿನ್ನೆಲೆಯಲ್ಲಿ ಸಾವಿಲ್ಲದ ಮನೆ ಹೇಗೆ ಇರುವದಿಲ್ಲವೋ ಹಾಗೆ ಇಂದಿನ ರಾಜಕಾರಣದಲ್ಲಿ ಹಗರಣವಿಲ್ಲದ ಮನೆಯೂ ದುರ್ಲಭ ಎಂಬುದು ತಾತ್ಪರ್ಯ )


7.   ಕಾಂಚಾಣ-- ಪರ್ವ
ಹೃದಯ ಭಾವನೆಗಳು - ಸವಕಲಿನ ನಾಣ್ಯ,
ದುಡ್ಡು - ದುಡ್ಡು - ದುಡ್ಡು, ಬಾಕಿಯದು ನಗಣ್ಯ...
ಎಷ್ಟು ದಿನ ನಡೆದೀತು ಕಂಚಾಣ - ಪರ್ವ?
ಒಂದಿಲ್ಲ ಒಂದುದಿನ ಸೋಲಲಿದೆ " ಗರ್ವ"...

8.   ಮಡೆಸ್ನಾನ
ಎಂಜಲೆಲೆಗಳ ಮೇಲೆ ಉರುಳುರುಳಿ ಬಂದು,
ಪಾಪನಾಶನವಾಯ್ತು ಎಂದಂದುಕೊಂಡು...
ಎಷ್ಟುದಿನ ಬದುಕುವಿರಿ ಇಂಥ ಭ್ರಮೆಯೊಳಗೆ,
ಹೊರಬಂದು ನೋಡಿ - ನೂರೆಂಟು ದಾರಿ ನಿಮಗೆ...

9.   ಪ್ರೇಮ- ಚುಂಬನ
ಪ್ರೇಮ-ಚುಂಬನವಿಂದು ಮಾರಾಟ ಸರಕು...
ಎಲ್ಲರಿಗೂ ಅವರವರ ಪ್ರಚಾರ ಬೇಕು.
ಎಷ್ಟೊಂದು ಪ್ರಶ್ನೆಗಳು ಭಾರತದ ಮುಂದೆ...
ಕಾಳುಗಳ ತೂರಿಸಿ ಹೊಟ್ಟಿನಾ ಹಿಂದೆ...


10.       ಪ್ರತಿಮೆ
ಒಬ್ಬೊಬ್ಬ ಮಹಾತ್ಮಗೂ ಒಂದೊಂದು ಪ್ರತಿಮೆ,
ಕೋಟಿಯಲಿ ಹಣದ ಹೊಳೆ ಹರಿಸುವದೇ ಹೆಮ್ಮೆ...
ಬೇಕಿಲ್ಲ ಅವರೆಲ್ಲ ನಾಮಬಲ ಸಾಕು,
ನಮ್ಮೆಲ್ಲ ಆಟಕ್ಕೆ ಅವರು - ಕಲ್ಲಾಗಬೇಕು...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...