Monday, 27 August 2018

ಹಾಗೇ ಸುಮ್ಮನೇ...

ನಾನೀಗ TV ನೋಡುವದನ್ನು ಬಿಟ್ಟುಬಿಟ್ಟಿದ್ದೇನೆ..Amezan prime service ದಲ್ಲಿ  ಬೇಕಾದ ಹಳೆಯ ಚಿತ್ರಗಳನ್ನು ಆಯ್ದು ಬೇಕೆಂದಾಗನೋಡುವದನ್ನು ರೂಢಿಸಿಕೊಂಡಿದ್ದೇನೆ...ಇಂದು
ಪ್ರತಿಭಾವಂತರ ದಂಡೇ ಇರುವ ,ಗೋವಿಂದ ನಿಹಲಾನಿ ನಿರ್ದೇಶನದ ' ಪಾರ್ಟಿ' ಸಿನೇಮಾ ನೋಡಿದೆ..ಮರಾಠಿ ರಂಗಭೂಮಿಯ ಪ್ರಸಿದ್ಧ ನಟರನ್ನೊಳಗೊಂಡ ಅತ್ಯದ್ಭತ ಸಿನೇಮಾ...ಒಬ್ಬ ವ್ಯಕ್ತಿಯ ಯಶಸ್ಸಿಗೆ ದೊರೆತ ಪುರಸ್ಕಾರದ ನೆವದಲ್ಲಿ ಏರ್ಪಡಿಸಿದ ಪಾರ್ಟಿಯೊಂದರಲ್ಲಿ ಮತ್ತರಾಗಿ ತಮ್ಮನ್ನೇ ತಾವು ಬಿಚ್ಚಿ ಹರಹಿ ಒಣಹಾಕಿದ ಪಾತ್ರಧಾರಿಗಳ ನಿಜ ವ್ಯಕ್ತಿತ್ವಗಳು..ಎಷ್ಟು ಹಿಡಿಸಿತೆಂದರೆ ಇಂದು ಬೆಳಿಗ್ಗೆ ಅವಶ್ಯಕ ಕೆಲಸಗಳನ್ನಷ್ಟೇ ಮಾಡಿ ಮತ್ತೊಮ್ಮೆ ನೋಡಿದೆ...ಅಮರೀಶಪುರಿ,ಓಂಪುರಿ,ಕೆಕೆ ರೈನಾ,ಸೋನಿ ರಾಜಧನ,ದೀಪಾಸಾಹಿ,ರೋಹಿಣಿ ಹತ್ತಂಗಡಿ,ಶಫಿ ಇನಾಮದಾರ್ ಮೊದಲಾದ ಅತಿರಥ ಮಹಾರಥರು ಯಾವುದೇ ಹಂತದಲ್ಲಿ ನಟನೆ ಮಾಡುತ್ತಿದ್ದಾರೆ ಅನಿಸಲೇ ಇಲ್ಲ...ಆಡಂಬರದ ಜಗತ್ತಿನಲ್ಲಿ ಬರೀ ತೋರಿಕೆಯನ್ನೇ ಹಾಸಿ,ಹೊದ್ದು ಬದುಕುವವರ ಒಳ ಹೊರಗನ್ನುಚನ್ನಾಗಿ ತೆರೆದಿಟ್ಟು ಅವರನ್ನೇ ಉಸಿರುಗಟ್ಟಿಸುವ ಸತ್ಯಗಳ ಅನಾವರಣವನ್ನು ಅವರಿಂದಲೇ ಮಾಡಿಸಿ ನಮ್ಮನ್ನು ಬೆಚ್ಚಿಬೀಳಿಸುವದಲ್ಲದೆ ಸಿನೆಮಾ ಮುಗಿಯುವ ಹೊತ್ತಿಗೆ ಒಂದು ದೀರ್ಘ ಉಸಿರು,ಹೃದಯದಲ್ಲೊಂದು ಭರಿಸಲಾಗದ ಮಿಡುಕು,ಸುಖವೆಂಬ ಶಬ್ದದ ( ಮರಣೋತ್ತರ) ಪರೀಕ್ಷೆ ವಿಷಾದದ ಛಾಯೆ ಉಳಿಸಿದರೂ ನಾವು ' ಸರ್ವಸ್ವ' ಅಂದುಕೊಂಡದ್ದು ಎಷ್ಟೊಂದು ಖೋಖಲಾ,ಪ್ರೀತಿಯಂಬ ಮರೀಚಿಕೆ,ನಮಗಾಗಿಯಲ್ಲದಿದ್ದರೂ ಅನ್ಯರಿಗೆ ಎಂಬಂತೆ ಬದುಕು ಒತ್ತೆಯಿಡಬೇಕಾದ ಪರಿ,ರಂಗದ ಮೇಲೆ ಮಾಡುವ ಆದರ್ಶ ಬಿಂಬಿಸುವ ಪಾತ್ರಗಳಿಗೂ,ಅದನ್ನು ಮಾಡುವ ಪಾತ್ರಧಾರಿಗಳಿಗೂ ಇರುವ ಸಂಬಂಧಗಳ ವೈರುಧ್ಯ, ಎಲ್ಲರಿಂದಲೂ ಪ್ರೀತಿ,ಅಭಿಮಾನ ಗೌರವಗಳನ್ನು ಬಾಚಿಕೊಂಡ ಒಬ್ಬ ವ್ಯಕ್ತಿ ಅತೀ ಎತ್ತರದಲ್ಲಿ ಇದ್ದಾಗ್ಯೂ ಮರೀಚಿಕೆಯಾಗಿಯೇ ಉಳಿದು ಆಹಂತದಲ್ಲೂ ಮುಂದೇನು ಎಂಬ ಸವಾಲೊಂದನ್ನುಹುಟ್ಟುಹಾಕಿ ಅವನೆಲ್ಲ ಅಂತಶ್ಯಕ್ತಿಯನ್ನು ಬಸಿದು ಹೊರತೆಗೆಯುವ ವಿಚಿತ್ರ ವಿಧಿ....
                ಸತ್ವರಹಿತ ಆಡಂಬರ,ಅಬ್ಬರಗಳೇ
ಯಶಸ್ವಿ ಸಿನೇಮಾಗಳೆನಿಸಿಕೊಂಡು ಕೋಟಿ club ಸೇರುತ್ತಿರುವಾಗ ಅತಿ ಅಪರೂಪವೆನಿಸಿಕೊಳ್ಳುವ ಇಂಥ ಕೆಲವು ಚಿತ್ರಗಳೂ ಅಷ್ಟಿಷ್ಟು ಇವೆ ಎಂಬುದೊಂದೇ ಸಮಾಧಾನ...

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...