21. ಧರ್ಮ
ಒಂದೊಂದು ಧರ್ಮಕೂ ಒಂದೊಂದು ರೀತಿ...
ಇದ್ದರೆ ಇರಲಿಬಿಡಿ... ಅವರವರ ಪ್ರೀತಿ...
ಧರ್ಮ - ಜಾತಿಯ ಹೆಸರಿನಲಿ ರಂಪಾಟ ಮಾಡಿ...
ಸವಿಯಾದ ಹಾಲಿನಲಿ ಹುಳಿ ಹಿಂಡಬೇಡಿ...
22. ರಾಜಕಾರಣ
ರಾಜಕಾರಣ ಇಂದು ಬಹಳಷ್ಟು ಹೊಲಸು...
ದೌರ್ಜನ್ಯ - ಶೋಷಣೆ ಬಹಳಷ್ಟು ಸಲೀಸು...
ಮೋಸ -ವಂಚನೆಗೂ ಇಲ್ಲ ಕಡಿವಾಣ...
ಉರಿವ ಮನೆ ಗಳಗಳನು ಎಳೆದವನೇ ಜಾಣ...
( ಕೊನೆಯ ಸಾಲು ವ್ಯಾಖ್ಯಾನ ಅಲ್ಲ...ವಿಡಂಬನೆ (satire).ಒಳ್ಳೆಯವರನ್ನು ಬಲಹೀನರು ಎಂದೂ ,ಬಲಹೀನರ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಸ್ವಾರ್ಥ ಸಾ ಧಿಸಿಕೊಳ್ಳುವವರನ್ನು ಚಾಣಾಕ್ಷರೆಂದೂ ಬಿಂಬಿಸುವದರ ಬಗ್ಗೆ ಒಂದು Punch. ಬೇರೆಯವರ ಮನೆಗೆ ಹತ್ತಿದ ಬೆಂಕಿ ನಂದಿಸುವದರ ಬದಲು ಸಿಕ್ಕಷ್ಟು ಗಳಗಳನ್ನೂ ಎಳೆದುಕೊಂಡು ಪಾರಾಗುವ ಬುದ್ಧಿ...)--ಗಳಗಳು --ಮನೆಯ ಸೂರಿನ ಆಧಾರಕ್ಕಾಗಿ ಬಳಸುವ ಬಿದಿರುಗಳು.
23. ಸೇಡು
ನಾವು ಉಂಡದ್ದನ್ನು ನೀವೂ ಉಣ್ಣಬೇಕು...
ನಮ್ಮ ಸಂಕಟ ನಿಮಗೂ ಗೊತ್ತಾಗಬೇಕು...
"ಕಣ್ಣಿಗೆ -ಪ್ರತಿ- ಕಣ್ಣು "- ಎನುವ ಈ ನೀತಿ...
ಮನುಕುಲವ ಕುರುಡಾಗಿಸೀತೆಂಬ ಭೀತಿ...
24. ಗಂಗೆ
ಪಾಪನಾಶಿನಿ ಗಂಗೆ- ಈಗಲ್ಲ ಪರಿಶುದ್ಧ...
ಅವಳ ಶುದ್ಧೀಕರಣ - ಒಂದು ಮಹಾ ಯುದ್ಧ...
ಶತ -ಶತಮಾನಗಳ ಕೂಡಿಟ್ಟ ಹೊಲಸು...
ಸಂಪೂರ್ಣ ಪರಿಹಾರ ಆದೀತೆ ಸಲೀಸು?
25. ಕಾವ್ಯಕನ್ನಿಕೆ
ಕಾವ್ಯಕನ್ನಿಕೆಗಿನ್ದು ವಿಧವಿಧದ ರೂಪ,
ಪ್ರಾಸ- ಪ್ರಸ್ತಾರಗಳು ಬಹಳ ಅಪರೂಪ...
ಸತತ ಪರಿವರ್ತನೆ ಈ ಜಗದ ನಿಯಮ,
ಸಾಹಿತ್ಯ- ಕ್ಸ್ಹೆತ್ರವೂ ಹೊರತಲ್ಲ ತಮ್ಮ.
26. ತಿರುವು - ಮುರುವು
ವಸ್ತುಗಳ 'ಪ್ರೀತಿಸಿ', ವ್ಯಕ್ತಿಗಳ ' ಬಳಸಿ'
ತಿರುಮುರುವು ಹಾದಿಯಲಿ ಬಹುದೂರ ಚಲಿಸಿ,
ಕಣ್ಣು ಮರೆಯಾಗುತ್ತಲಿದೆ ನೆಮ್ಮದಿಯ ಬದುಕು,
ಇನ್ನಾದರೂ ಒಂದು ಸರಿ ದಾರಿ ಹುಡುಕು...
27. ಮನವೆಂಬ ಮರ್ಕಟ
ಮಂಗಗಳು ಉಪವಾಸ ಮಾಡಿದ್ದು ಗೊತ್ತೇ?
ಮನಸ್ಸಿನ ಹತೋಟಿ ಸುಲಭವೇ ಮತ್ತೆ?!
ಎಂಥೆಂಥ ಮಹಿಮರನು ಗೊಂಬೆಯೊಲು ಕುಣಿಸಿ...
ಗಹಗಹಿಸಿ ನಗುವದು ಜಯದಿ ಸಂಭ್ರಮಿಸಿ!
(ಒಮ್ಮೆ ಮಂಗಗಳು ಏಕಾದಶಿ ಉಪವಾಸ ಮಾಡಲು ನಿರ್ಧರಿಸಿ ಕ್ರಮೇಣ ಹಣ್ಣುಗಳನ್ನು ತಂದಿಟ್ಟುಕೊಳ್ಳುವ, ಸುಲಿದಿಟ್ಟುಕೊಳ್ಳುಕೊಳ್ಳುವ, ಬಾಯಲ್ಲಿ ಇಟ್ಟು ಕೊಂಡು ಮರುದಿನ ಜಗಿಯುವ ನಿರ್ಧಾರ ಮಾಡಿ ಮನಸ್ಸು ತಡೆಯಲಾರದೆ ಅಂದೇ ಉಪವಾಸ ಮುರಿಯುತ್ತವೆ. ಮನಸ್ಸೆಷ್ಟು ಚಂಚಲ ಎಂಬುದು ವಿಷಯ.)
No comments:
Post a Comment