Monday, 27 August 2018

ನೆನಪುಗಳೇ ಹೀಗೇ...

ನೆನಪುಗಳೇ ಹೀಗೇ....
ನುಣ್ಣನೆಯ ನೆನಪುಗಳು
ತಣ್ಣಗಾಗುವದಿಲ್ಲ...
.ಕಣ್ಣಿನಲೆ ಹಣ್ಣಾಗಿ ಹದನುಗೊಂಡು...
ಸಣ್ಣಗೇ ಮಿಡಿಯುತ್ತ
ಬಣ್ಣಗಳ ಪಡೆಯುತ್ತ
ಟಣ್ಣನೇ ಜಿಗಿಯುವವವು
ರೂಪಗೊಂಡು...
ನಮ್ಮದೇ ಗಳಿಗೆಗಳ
ನೆಮ್ಮದಿಯ ಮನಸುಗಳ
ಸುಮ್ಮಾನದಲಿ ಕಾದು ಒಪ್ಪವಿಟ್ಟು...
ಸುಮ್ಮನೇ ಕುಳಿತಾಗ
ಘಮ್ಮೆಂದು ಹೊರಬಂದು
'ಮಮ್ಮು' ಉಣಿಸುವ ರೀತಿ ಉಣಿಸಿಬಿಟ್ಟು...
ಬಾಲ್ಯ 'ಕಟ್ಟು'ವ ಸಮಯ
ಮೌಲ್ಯ ತಿಳಿಯುವದಿಲ್ಲ...
ಆ ಗಳಿಗೆಗಳೇ 'ನೆನಪಾ'ಗಿ
ಬರುವವೆಂದು...
ಕಳೆದ ಮುತ್ತಿನ ಬೆಲೆಯು
ತಿಳಿಯುವದೆ ತಡವಾಗಿ
' ಪಳೆಯುಳಿಕೆ' ರೀತಿಯಲಿ ಶಿಥಿಲಗೊಂಡು....
ನೆನಪುಗಳೆ ಬದುಕಿನಲಿ
ಬೆನ್ನಿಗೇರಿದ ಗಂಟು...
ಬಾಳಪಯಣದ ದೂರ ದಾರಿಗುಂಟ...
ಕಳಚಿ ಪ್ರತಿಗಳಿಗೆಗಳು
ನುಣುಚಿ ಜಾರದಹಾಗೆ
ಅನುಗಾಲ ಅಂಟುವವು ಬಾಳಿಗುಂಟ....
ನೆನಪುಗಳ ಕೊಟ್ಟವರೇ
'ನೆನಪಾಗಿ' ಉಳಿದಾಗ
ಕಣ್ಣುಗಳೆ ಕಂಬನಿಯ
ಮಡುವಿನೊಳಗೆ....
ನೆನಪುಗಳೆ ಕಡುವೈರಿ
ಮೈ- ಮನಸುಗಳನೇರಿ
ಜೀವ ಹಣ್ಣಾಗುವದು ತಾಪದೊಳಗೆ..
..
ನಾನು ಬದಲಾಗುವೆನು
' ಸೀನು' ಬದಲಾಗುವದು
ನೆನಪುಗಳ ಜಾತ್ರೆಯಲಿ
ಎಲ್ಲ ಹಸಿರು...
ನೆನಪುಗಳೇ ಜೀವಾಳ...
ನೆನಪುಗಳೇ ಬೇತಾಳ...
ನೆನಪುಗಳೆ ಈ ಬದುಕ
ಸೋತ ಉಸಿರು...

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...