Tuesday, 28 August 2018

ಅಪ್ಪ ನಕ್ಕ.....

ನನ್ನ ಕರುಳಿನ ಕುಡಿ
ನನ್ನವಳ ಗರ್ಭದಲಿ
ಮೊಳಕೆಯೊಡೆದಿತ್ತು...
"ಹೆರಿಗೆಯಾದರೆ..ಗೆದ್ದೆ..."

ಅಪ್ಪ  ಹಿಂದಿನಿಂದ ನಕ್ಕ...

ಮಗ ಹುಟ್ಟಿ ತೊದಲುಮಾತು,
ತೊಡರು ಗಾಲು..
ಸದಾ ಬೇಕಿತ್ತು ಬೆಂಗಾವಲು..
"ವರ್ಷಗಳೈದು
ಕಳೆದರೆ...ಗೆದ್ದ ಹಾಗೆ..."

ಕೇಳಿತು ಅಪ್ಪ ನಕ್ಕ ಹಾಗೆ...

ಮಗನ ಸ್ಕೂಲು,ಕಾಲೇಜು...
ಅವನಿಗೇನೋ ಮೋಜು..
ನನಗೆ ಪರೀಕ್ಷೆ...ಇನ್ನಿಲ್ಲದ ನಿರೀಕ್ಷೆ...
ಯಾವಾಗ ಮುಗಿದೀತೋ...ಅನಿಸಿತ್ತು

ಅಪ್ಪ ನಕ್ಕಿದ್ದು  ಕಿವಿಗೆ ಬಿತ್ತು....

ಈಗ ಮಗನ ನೌಕರಿ..
ವಧುವಿನ ಹುಡುಕಾಟ...
ಮದುವೆ ಮುಗಿದರೆ
ಮುಗಿದಂತೆ ಹೋರಾಟ...ಅಂದುಕೊಂಡೆ..

ಅಪ್ಪ ಹುಸಿನಗೆ ನಕ್ಕದ್ದು ಕಂಡೆ...

ಕಳೆಯಿತು ಮತ್ತೊಂದು ದಶಕ...
ಈಗ ನನ್ನ ಮಗ ನನ್ನ ತೂಕ..
ಕಾಯುತ್ತಿದ್ದಾನೆ ' ಮುಕ್ತನಾಗುವ ದಾರಿ..'.
ಕೇಳಿತಾ ಯಾರೋ ನಕ್ಕ ಹಾಗೆ...?

ನಾನೇ ನಕ್ಕಿದ್ದು ಈ ಬಾರಿ...

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...