( ಧಾರವಾಡದ ' ಬಂತು ಶ್ರಾವಣ' ಕ್ಕೆ ಬರೆದು ಯುವ ಕವಿಗಳಿಗಾಗಿ ಎಂದು ಇದ್ದುದರಿಂದ ಕಳಿಸದೇ ಬಿಟ್ಟ ಕವನ...ಇಂದು ನಿಮಗಾಗಿ)
ಶ್ರಾವಣದ ದಿನಗಳವು ಬಾಗಿಲನು ಬಡಿಯುತಿವೆ
ಆಷಾಢ ದಿನಗಳನ್ನು ಹಿಂದೆ ಮೆಟ್ಟಿ...
ಮಳೆನೀರ ಹುಯಿಲಿನಲಿ
ಮೈ ಮನಗಳರಳುತಿವೆ..
ತೂಗುತಿವೆ ಮನದಣಿಯೆ
ಜೋಕಾಲಿ ಕಟ್ಟಿ.....
ಮುಗಿಲ ನಕ್ಷತ್ರಗಳು
ಅಂಗಳಕೆ ಇಳಿದಿಹವು...
ಚಿತ್ರ- ಚಿತ್ತಾರದಾ ರಂಗೋಲಿ ಬರೆದು...
ಕಣ್ಣು ಹಾಯುವವರೆಗೂ
ಹಸಿರು ಹೊನ್ನಿನ ನೋಟ...
ಸೆಳೆದು ಆಲಂಗಿಸಿವೆ ಕೈ
ಮಾಡಿ ಕರೆದು...
ಹುತ್ತದಲಿ ಹಾಯಾಗಿ
ಮಲಗಿದ್ದ ನಾಗಣ್ಣ...
ಊರ ಭೇಟಿಗೆ ಬರುವ
ಮೊದಲ ಬಾರಿ....
ಸಿಡಿದರಳು,ಹುಳಿಹುಣಿಚೆ
ಎಳ್ಳು ಬೆಲ್ಲದ ಜೊತೆಗೆ
ಪೂಜೆ ಗಣಿಯಾಗಿ ಬಿಡಿ ಎಲ್ಲ ಸೇರಿ....
ಹುರಿಗಡಲೆ,ತನಿಬೆಲ್ಲ,
ಮೇಲೆ ಎಳ್ಳಿನ ಕಾಳು...
ಒಣಕೊಬ್ಬರಿ ಜೊತೆಗೆ
ಸ್ನೇಹ ಮಾಡಿ...
ಬಾಯ ಕಹಿಯನ್ನೆಲ್ಲ
ದೂರವಾಗಿಸಲೆಂದೆ
ಕಾದಿಹವು ತಟ್ಟೆಯಲಿ
ಒಟ್ಟುಗೂಡಿ...
ದೂರದೂರುಗಳಿಂದ
ತಾಯಮಡಿಲಿಗೆ ಬಂದ
ಮಗಳಿಗೊಂದು ಚಂದದ
ಹಸಿರು ಸೀರೆ...
ಹಣೆಯಲಿ ಕಿರುತಿಲಕ
ಕೈ ತುಂಬ ಗಾಜುಬಳೆ
ಮುಡಿತುಂಬ ಮಲ್ಲಿಗೆ
ಮುಡಿಯಲಿ ನೀರೆ...
ಹಗಲಿರುಳು ಗೊತ್ತಿಲ್ಲ
ಸಮಯದರಿವೇ ಇಲ್ಲ
ಬಂಧು ಬಾಂಧವರ ಜೊತೆ ಸ್ನೇಹಮಿಲನ...
ಇದುವೆ ಶ್ರಾವಣ ರೀತಿ
ಇದುವೆ ಶ್ರಾವಣ ನೀತಿ
ಇದುವೆ ಶುಭ ಶ್ರಾವಣದ
ತಂತನನ...
No comments:
Post a Comment