ಹೀಗೊಂದು ಸುಂದರ ಸಂಜೆ...
ಇದು ಇಪ್ಪತ್ತು ವರ್ಷಕ್ಕೂ ಹಿಂದಿನ ಮಾತು. ನನಗಾಗ ಐವತ್ತೈದು ವರ್ಷ. ಹೈಸ್ಕೂಲಿನಲ್ಲಿಯೂ ಹಿರಿಯ ಶಿಕ್ಷಕಿ ಪಟ್ಟ. ಮನೆಯಲ್ಲಿಯೂ 'ಅಜ್ಜಿ'ಯಾಗಿ ಆಗಿತ್ತು.ಈ ಎಲ್ಲ ಕಾರ್ಯಭಾರದಿಂದ
ತಲೆಭಾರವೆನಿಸಿ, ಒಂಚೂರು ಬದಲಾವಣೆಗೆ ಹಪಹಪಿಸಿದಾಗ ಅದಕ್ಕೊಂದು ಪರಿಹಾರ ಭೂಮಿಕಾ ತಂಡದ " ಮಾಯಾಮೃಗ" ಧಾರಾವಾಹಿಯಿಂದ ಸಿಕ್ಕಿದ್ದು ನನ್ನ ಪುಣ್ಯವಿಶೇಷವೆಂದೇ ಹೇಳಬೇಕು. .ಆಕಾಶವೇ ಬೀಳಲಿ ಮೇಲೆ, ಭೂಮಿಯೇ ಬಾಯ್ಬಿಡಲೀ ಇಲ್ಲೇ, ನಾ ನಿನ್ನ ನೋಡದೇ ಬಿಡೆನು '- ಅನ್ನುವಂತೆ , ಅದೂ ಒಂದು ವೃತವೇನೋ ಎನ್ನುವ ಹಾಗೆ ಟೀವಿಯ ಮುಂದೆ ಪ್ರತಿಷ್ಠಾಪಿತಳಾಗುತ್ತಿದ್ದೆ. ಎಲ್ಲ ವರ್ಗಗಳ ,ಎಲ್ಲ ಹಂತಗಳ , ಎಲ್ಲ ವಯೋಮಾನದವರ ,ಸಾಮಾನ್ಯವಾಗಿ ಎಲ್ಲ ರೀತಿಯ ಸಮಸ್ಯೆಗಳನ್ನು ಒಳಗೊಂಡ ಆ ಧಾರಾವಾಹಿ ನನ್ನೊಳಗೆ ಅದೆಷ್ಟು ಒಳಗೆ ಇಳಿದಿತ್ತೆಂದರೆ , ಕೊನೆಗೊಮ್ಮೆ ಮುಗಿದಾಗ ಏನೋ ಕಳೆದುಕೊಂಡ ಭಾವನೆ. ದಟ್ಟದೊಂದು ಮೌನ ಹಾಸಿ ಹೊದ್ದು ಕೊಂಡಂತೆ ಭಾಸವಾಗುತ್ತಿತ್ತು . ಯಾವುದೋ ಒಂದು
ಸಮಸ್ಯೆ ಕಾಡತೊಡಗಿದರೆ ಆ ಧಾರಾವಾಹಿಯಲ್ಲಿ ದಿಢೀರನೇ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ
ಸಮಾಧಾನ ಸಿಗುತ್ತದೆ ಎಂಬ ಭಾವ ನನ್ನದು.
ಇಂಥದೊಂದು ಧಾರಾವಾಹಿ ಮತ್ತೊಮ್ಮೆ ನೋಡಲು ಸಿಗುವದಿದೆ ಎಂದಾಗ ನಾನು ಮಾಡಿದ ಮೊದಲ ಕೆಲಸ, ಗುರುತು-ಪರಿಚಯವಿದ್ದ ಎಲ್ಲರಿಗೂ ಅದರ link share ಮಾಡಿದ್ದು. ತಪ್ಪದೇ ನೋಡಲು ಆಗ್ರಹಿಸಿದ್ದು.
ಇದು ಎರಡು ವಾರಗಳ ಹಿಂದಿನ ಮಾತು. ಆ ಹತ್ತೂ ಎಪಿಸೋಡುಗಳನ್ನು ಮತ್ತೆ ಮತ್ತೆ ನೋಡಿದ್ದೇನೆ.ನೋಡಿದವರೊಂದಿಗೆ ಚರ್ಚಿಸಿಯಾಗಿದೆ.ಆಗಾಗ ಅದಕ್ಕೆ comments ಬರೆಯುವುದೂ ಉಂಟು.
ಆದರೆ ಕಳೆದ ವಾರ ನನಗೊಂದು pleasant surprise ಕಾದಿತ್ತು.' 'ಮಾಯಾಮೃಗ' ದಲ್ಲಿ ನಿಮಗೆ ಅತಿ ಮೆಚ್ಚುಗೆಯಾದ ಐದು ಅಂಶಗಳನ್ನು ಬರೆದು ಕಳಿಸಿ ಎಂಬ quiz ಗೆ ಎಂದಿನಂತೆ ಬರೆದು post ಮಾಡಿದ್ದೆ.
ಅದು ಉತ್ತಮ review ಎಂದು select ಆಗಿದೆ ಎಂದೂ, ವಾರಾಂತ್ಯದ online reunion zoom ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿ ನಿರ್ದೇಶಕರು/ ಪಾತ್ರಧಾರಿಗಳೊಂದಿಗೆ ಸಂವಾದದಲ್ಲಿ ಚರ್ಚಿಸುವ ಅವಕಾಶವಿದೆಯಂದೂ ತಿಳಿಸಲಾಗಿತ್ತು.
ಓದಿದ ಕೂಡಲೇ ಹೇಗೆ
ಪ್ರತಿಕ್ರಯಿಸಬೇಕೆಂದೇ ನನಗೆ
ಗೊಂದಲವಾಯಿತು.ಒಂದುಕಡೆ ಸಂಭ್ರಮ, ಇನ್ನೊಂದೆಡೆ ದಿಗಿಲು. ನನಗೆ ಬರವಣಿಗೆ ಹೊಸದಲ್ಲ.ನೂರಾರು ರೆಡಿಯೋ ಕಾರ್ಯಕ್ರಮಗಳು, ಇಂಗ್ಲಿಷ್/ ಹಿಂದಿಯಿಂದ ಅನುವಾದಗಳು, ಒಂದೆರಡು ಪುಸ್ತಕಗಳನ್ನೂ ಬರೆದ ಅನುಭವಗಳೇನೊ ಇದೆ. ಪರಿಚಯದವರೊಂದಿಗೆ ಮಾತಿಗೂ ಸೈ.ಆದರೆ modern technology is definitely not my cup of tea. ಸರಿಹೊಂದದೇ ಇದದ್ದು ಮಾಡಲು ತುಂಬಾನೇ ಭಯ, ಅದೂ ಪ್ರತಿಷ್ಠಿತ ನಿರ್ದೇಶಕರು, ಜನಪ್ರಿಯ ಹಿರಿಯ ನಟರು, ವಾಗ್ಮಿಗಳು ಇದ್ದರಂತೂ ಇದ್ದಲ್ಲೇ ನಡುಕ ಶುರು. ಏನಾದರೂ ಅಚಾತುರ್ಯವಾದರೇ...
ಅಲ್ಲದ್ದು ಘಟಿಸಿದರೇ...ಇಂಥವೇ ಅನುಮಾನಗಳ ಸರದಿ ನನ್ನ ನಡೆಯನ್ನು ಹಿಮ್ಮೆಟ್ಟಿಸುತ್ತವೆ. ಇದಕ್ಕೆ ಇವತ್ತು T.N Seetharam ಸರ್ ತುಂಬಾ ಚೆಂದದ ಕಾರಣ ಕೊಟ್ಟರು," ಗೌರವದಿಂದ ಹುಟ್ಟುವ ಭಯ", ಭಯದಿಂದ ಹುಟ್ಟುವ ಗೌರವ" ಎಂದು. ಇದಕ್ಕೂ ಚೆಂದದ ವಿವರಣೆ ನನಗೆ ದಕ್ಕಲಿಕ್ಕಿಲ್ಲ. ಖಂಡಿತಕ್ಕೂ ಇದೇ ನಾನು ಭಾಗವಹಿಸದೇ ಇದ್ದುದಕ್ಕೆ ಕಾರಣ. ಇದು ಹದಿನಾರಾಣೆ ಸತ್ಯ. ಬಾಗಿಲಿಗೆ ಬಂದ ಅದೃಷ್ಟ ನಾನು ಬಳಸಿಕೊಳ್ಳಲು ಆಗಲಿಲ್ಲ. ಆ ಬಗ್ಗೆ ನನಗೆ ಪಶ್ಚಾತ್ತಾಪವಿದೆ.
ಆದರೆ ಒಂದು ಮಾತು.ನಾನದನ್ನು ಒಪ್ಪಿಕೊಂಡಿದ್ದರೆ, ಅದನ್ನು ನಿಭಾಯಿಸುವ ಒತ್ತಡದಲ್ಲಿ ಆ ಎಲ್ಲ ಇತರರ ಸ್ವಾರಸ್ಯಕರ, ಸ್ವಾನುಭವದ
ಮಾತುಗಳನ್ನು ಒಮ್ಮನಸ್ಸಿನಿಂದ
ನಿರಾಳವಾಗಿ ಆಸ್ವಾದಿಸುವ ಅವಕಾಶ ಬಹುಶಃ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಮೊದಲೇ ಕಾರಣ ಹೇಳಿ team ನ ಒಪ್ಪಿಗೆ ಪಡೆದ ಕಾರಣಕ್ಕೆ ನಿಶ್ಚಿಂತಳಾಗಿ ಅಂಥ ಸಹಜ, ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಖುಶಿ ನನ್ನದು.
ಹಿಂದೆಯೂ ನಾನದನ್ನು ಬಿಡದೇ ನೋಡಿದ್ದೆ.ಆದರೆ ಆಗಿನ ನನ್ನ ಮಾನಸಿಕ, ಬೌದ್ಧಿಕ, ಅನುಭವಕ್ಕೆ ನಿಲುಕಬಹುದಾದಷ್ಟು ಮಾತ್ರವೇ ಅರ್ಥವಾಗಿತ್ತು. ಈಗಿನ ನನ್ನ ಅನುಭವದ ವ್ಯಾಪ್ತಿಯ ವಿಸ್ತಾರದಲ್ಲಿ ಇನ್ನೂ ಹೆಚ್ಚು ಹೆಚ್ಚು ವ್ಯಾಪಕವಾದ ರೀತಿಯಲ್ಲಿ ಧಾರಾವಾಹಿ ಬಿಚ್ಚಿ ಕೊಳ್ಳುತ್ತಿದೆ.ಆ ಕಾರಣಕ್ಕೆ ಅದು ಎಂದಿಗೂ ಹಳತಾಗುವದಿಲ್ಲ. ಅಂತೆಯೇ ಎಲ್ಲರೂ ನೋಡಿ ಆನಂದಿಸಲಿ ಎಂಬ ಕಾರಣಕ್ಕೆ ನಾನು ಎಲ್ಲರಿಗೂ ಅದನ್ನು ತಲುಪಿಸಲು
ಪ್ರಯತ್ನಿಸಿದ್ದು. ನಾನೂ ಹೊಸದೇ ಉತ್ಸಾಹದಿಂದ ಪ್ರತಿವಾರ ಅದನ್ನು ಕಾಯುತ್ತಿದ್ದುದು....ಕಾಯುತ್ತಲೇ ಇರುವುದು...