" ಏ! ಯವ್ವಾ, ಈ ನನ್ನ ಕೂದಲು ಉದುರಿ ಬಿದ್ದು ಹೋಗೊಕಿಷ್ಟು ಏನರ ಔಸ್ದಿ ಹೇಳಬೇ, ಸಾಕಾಗಿ ಹೋಗೇತಿ ನಂಗ" - ನಿಂಗಮ್ಮನ ದಿನನಿತ್ಯದ ಅಳಲು ಇದು.
ನಿಂಗಮ್ಮ ಎಪ್ಪತ್ತರ ದಶಕದಲ್ಲಿ ನಮ್ಮ ಧಾರವಾಡದ ಹೆಂಬ್ಲಿ ಓಣಿಯ ನಮ್ಮನೆಯ ಕೆಲಸದಾಳು. ತುಂಬಾ ಚೆಲುವೆ ಇದ್ದಿರಬೇಕು ಯೌವನದ ದಿನಗಳಲ್ಲಿ. ಕೆಂಪು ಬಣ್ಣ, ಚೂಪು ಮೂಗು, ನೀಳವಾದ ಮೈಕಟ್ಟು, ಆಗಲೂ ಇತ್ತು ಅವಳಿಗೆ. ಅರವತ್ತು ವರ್ಷಗಳಿರಬೇಕು. ಅದೂ ಅವಳಿಗೆ ಗೊತ್ತಿಲ್ಲ. "ನಿಂಗೆಷ್ಟು ವರ್ಷಗಳು ನಿಂಗಮ್ಮ?" ಅಂದರೆ "ಯಾರಿಗೆ ಗೊತ್ತsss ನನ್ನವ್ವಾ, ನಾ ಹುಟ್ಟಿದಾಗ ಆ ಹುಣಚೀಮರ ಈಟಿತ್ತಂತ ನೋಡು"- ಇದು ಅವಳ ಉತ್ತರ, ಜೊತೆಗೆ ಒಂದು ಅಳತೆಯಲ್ಲಿ ಅದರ ಎತ್ತರದ ಕೈತೋರಿಸುವದು. ಅಲ್ಲಿಗೆ ವಯಸ್ಸು ಕೇಳಿದವರು ಹುಣಶಿಮರದ ಹುಟ್ಟು, ಬೆಳವಣಿಗೆಯ ಲೆಕ್ಕ ಹಾಕಿಕೊಂಡು ಅವಳ ವಯಸ್ಸು ಅಂದಾಜು ಮಾಡಿಕೊಳ್ಳಬೇಕು.😂
ನಿಂಗಮ್ಮ ಒಂದು ರೀತಿಯಲ್ಲಿ ಸಂಸಾರವಿದ್ದ ಸನ್ಯಾಸಿನಿ. ಗಂಡನಿಲ್ಲದ ಅನಾಥೆಯಾದರೂ ತಂಗಿಯ ಮಗನನ್ನು
ಸಾಕಿಕೊಂಡಿದ್ದಳು. ಅವನೋ ಹುಟ್ಟು ಸೋಮಾರಿ, ಅವನ ಸಂಸಾರವೂ ಇವಳದೇ ಹೆಗಲಿಗೆ. ಹೀಗಾಗಿ ದುಡಿತ ಈ ವಯಸ್ಸಿನಲ್ಲಿಯೂ ಬೆನ್ನು ಬಿಡದಾಗಿತ್ತು ಅವಳಿಗೆ.
ಒಂದೇ ಓಣಿಯಲ್ಲಿ ಕೆಲವು ಮನೆಗಳ ಕೆಲಸ ಮಾಡುತ್ತಿದ್ದರೂ ಸರಕಾರೀ ಅಧಿಕಾರಿಗಳ ಶಿಸ್ತು.( ಆಗಿನ ಕಾಲದಲ್ಲಿ) ಅವಳನ್ನು ನೋಡಿ ಗಡಿಯಾರ ಬದಲಿಸಬಹುದಾದಷ್ಟು ಸಮಯಪ್ರಜ್ಞೆ
ಅವಳದು. ಬೆಳಿಗ್ಗೆ ಏಳು/ ಮಧ್ಯಾನ್ಹದ ಒಂದು ಗಂಟೆಗೆ ಬಾಗಿಲಲ್ಲಿ ಪ್ರತ್ಯಕ್ಷ. ಒಂದೇ ಒಂದು ದಿನ ತಪ್ಪಿಸಿಕೊಳ್ಳುವವಳಲ್ಲ.
ಸದಾ ನಗುಮೊಗದ ಚೆಲುವೆ.' ಯವ್ವಾ!' ಎಂದರೆ ಆ ಆರ್ದ್ರತೆಗೆ ಎಂಥ ಮನಸ್ಸೂ ಕರಗಬೇಕು. ಬೆನ್ನು ಬಾಗಿಸಿಕೊಂಡು ಭಿರಭಿರನೇ ನಡೆದರೆ ನಮ್ಮ ಆಲಸ್ಯಕ್ಕೆ ನಮಗೇ ನಾಚಿಕೆಯಾಗಬೇಕು.
ಇಂತಿಪ್ಪ ನಿಂಗವ್ವಳಿಗೂ ಒಂದು ಚಿಂತೆ. ಅವಳ ಉದ್ದ ಕೂದಲದ್ದು. ಆ ವಯಸ್ಸಿನಲ್ಲೂ ಗಂಟು ಕಟ್ಟಿದರೆ ಅವಳ ತಲೆಯ ಆಕಾರವನ್ನು ಮೀರಿಸುತ್ತಿತ್ತು ಅದು.ಅದರ ಆರೈಕೆ, ಅವಳ ಹೊಟ್ಟೆಯ ಪಾಡಿನಲ್ಲಿ ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಅವು ಸಿಕ್ಕು ಬೀಳುವುದು, ತಲೆಯಲ್ಲಿ ಹೇನುಗಳಾಗುವದು ಇದೆಲ್ಲದರ ಕಿರಿಕಿರಿ." ಎವ್ವಾ! ಎಲ್ಲಾರ್ನೂ ಕೇಳ್ದೆ, ಹೇಳಿದ್ದೆಲ್ಲ ಮಾಡ್ದೆ, ಯಾರೋ
ಉಪ್ಪು ನೀರಾಗ ಕೂದಲಾ ತೊಳೀ ಅಂದ್ರು.ಅದೂ ಆತು. ಏನೂ ಉಪಯೋಗ ಆಗ್ಲೇಯಿಲ್ಲಬೇ, ಜೀವನ ರೋಸಿ ಹೋಗೇತಿ ನನಗ, ನಿಮ್ಮಂಥವರಿಗೆ ಇದ್ರ ಉಪಚಾರ ಕಾಣ್ತಾವು. ನಮ್ಮಂಥಾ ಪಾಪಿ/ ಪರದೇಶಿ ಗಳಿಗೆ ಯಾಕೆ ಬೇಕು?"- ಇದು ಅವಳ ನಿತ್ಯ ಸುಪ್ರಭಾತ.
ಅವಳ ದೃಷ್ಟಿಯಲ್ಲಿ ಕೂದಲಿನ ಆರೈಕೆಗೆ ಹಾಕುವ ಸಮಯದಲ್ಲಿ ಮತ್ತೆರಡು ಮನೆ ಕೆಲಸಮಾಡಿದರೆ ರೊಟ್ಟಿಗೆ ಕಾರಬ್ಯಾಳಿ ಜೊತೆ ಒಂದು ಪಲ್ಯಾನೂ ಮಾಡಿ ಉಣಲಿಕ್ಕಾದೀತು, ಎಂಬುದು ಅವಳ ಲೆಕ್ಕ. ಅದು 'ಬದುಕಿನ' ಲೆಕ್ಕವಾಗಿತ್ತು.
ಇಂದು ರವಿವಾರ. ನನ್ನ ತಲೆಸ್ನಾನದ ದಿನ.ಕೂದಲು ತೊಳೆದುಕೊಂಡು ಹೊರಗೆ ಒಣಗಿಸುತ್ತ ನಿಂತಿದ್ದೆ.
ದಿನೇ ದಿನೇ ತೆಳ್ಳಗೆ/ ಬೆಳ್ಳಗೇ ಆಗುತ್ತ ನಡೆದಿರುವ ನನ್ನ ಕೂದಲನ್ನು ಕಂಡಾಗ ಆದ ನನ್ನ ಚಡಪಡಿಕೆ, ನನ್ನನ್ನು ಐವತ್ತು ವರ್ಷಗಳ ಹಿಂದಿನ ನಿಂಗವ್ವಳ ಚಡಪಡಿಕೆಗೆ ಕೊಂಡೊಯ್ದು ಕಾಡಿದ್ದು ಹೀಗೇ...
#Sundaysnacks.
ಚಿತ್ರ ಕೃಪೆ: ಗೂಗಲ್.
No comments:
Post a Comment