ಹಾಗೇ ಸುಮ್ಮನೇ...
Good morning DHARWAD...
ಸತತವಾಗಿ ಮೂರು ದಿನಗಳ ನಂತರ ನಮ್ಮ ಧಾರವಾಡಕ್ಕೊಂದು ನಿರಾಳದ ಬೆಳಗು...ಥೇಟ್ ಮಗಳ ಮದುವೆ ಮಾಡಿ ಬೀಗರನ್ನು ಬಸ್ಸು ಹತ್ತಿಸಿ ಮುಗಿದಮೇಲೆ
ಸಾಡೇದ ಮನೆಯಲ್ಲಿ ಕಂಬಕ್ಕೆ ಆತು ಕುಳಿತು ಕಾಲು ಚಾಚಿ ' ಉಸ್ಸಪ್ಪಾ' ಅಂದ ಹಾಗೆ ...ಆಗಬೇಕಾದ್ದೇ...
ಅರವತ್ತೊಂದು ವರ್ಷಗಳ ನಂತರ ನಮ್ಮ ಧಾರವಾಡಕ್ಕೆ ಸಿಕ್ಕ ಸುವರ್ಣಾವಕಾಶವಿದು...ಹಿಂದಿನದು ಧಾರವಾಡದಲ್ಲಿ ನಡೆದಾಗ ನಾನು ಹನ್ನೆರಡರ ಬಾಲೆ...ಧಾರವಾಡ ಜಿಲ್ಹೆಯಲ್ಲಿ,ಹಿರೇಕೇರೂರು ತಾಲೂಕಿನಲ್ಲಿ, ನಮ್ಮ ಪುಟ್ಟದಾದ ರಟ್ಟೀಹ.ಳ್ಳಿ ಇದೆ ಎಂಬುದು ಪತ್ರದ ವಿಳಾಸದಲ್ಲಿ ಬರೆದಾಗ ಮಾತ್ರ ಗೊತ್ತು..
೧೯೬೫ ರಲ್ಲಿ ,PUC ಗೆಂದು ಧಾರವಾಡಕ್ಕೆ ಬಂದುದನ್ನು ನೆನೆದರೆ ಮೊದಲಸಲದ ವಿದೇಶ ಪ್ರವಾಸದ ಠೀವಿಯನ್ನೂ ಮೀರಿಸಿ ಹಿಗ್ಗಿದ್ದು ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ನಂತರ ಮಕ್ಕಳ ಜೊತೆ ಒಂಬತ್ತು ದೇಶಗಳನ್ನು ಸುತ್ತಿ, ಇನ್ನೊಂದು ಮಾಡಿ ಹತ್ತಕ್ಕೆ ದುಂಡು ಸುತ್ತಬೇಕೆಂಬುವ ಹುಮ್ಮಸಿನಲ್ಲೂ ಆ ರೋಮಾಂಚನವಿಲ್ಲ.
ನಂತರದಲ್ಲಿ ವಿದ್ಯಾಭ್ಯಾಸ, ನೌಕರಿ,ಮದುವೆ, ಮಕ್ಕಳು,ನಿವೃತ್ತಿ,ಎಲ್ಲವೂ ಧಾರವಾಡದಲ್ಲಿಯೇ..
ಈಗ ಹದಿಮೂರು ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿ ಅಲ್ಲೆಲ್ಲ ಟೊಂಗೆಗಳು ಚಾಚಿದ್ದರೂ ಬೇರು ನಮ್ಮ ಧಾರವಾಡದಲ್ಲಿಯೇ...
ಇಷ್ಟೆಲ್ಲ ಹೇಳಿದಮೇಲೆ ಸಾಹಿತ್ಯ ಸಮ್ಮೇಳನಕ್ಕೇಕೆ ಬರಲಿಲ್ಲ ಎಂಬ ಪ್ರಶ್ನೆ ಸ್ವಾಭಾವಿಕವೇ...
ಬರಬೇಕಿತ್ತು..." ನೆನಪಿನೋಕುಳಿ" ಯಲ್ಲಿ ನನ್ನದೂ ಒಂದು ಪುಟ್ಟ ಲೇಖನವಿದೆ..ಉಮೇಶ ದೇಸಾಯಿ ಯವರ ವಿನಂತಿಯ ಮೇರೆಗೆ ಬರೆದದ್ದು..
ಆ ಗುಂಪು ಸೇರಲಾದರೂ ಬರುವದು ಅವಶ್ಯವಿತ್ತು..ಆದರೆ ಕೇವಲ ನಾಲ್ಕು ದಿನಗಳ ಮೊದಲು ಡಿಸೆಂಬರ್ ರಜೆಯಲ್ಲಿ ಮೂರೂ ಮಕ್ಕಳ ಕುಟುಂಬದೊಂದಿಗೆ ಒಂದು ವಾರ ಪ್ರವಾಸ ಹೋಗಿ ಬರುವಾಗ ಧಾರವಾಡಕ್ಕೂ ನಾಲ್ಕುದಿನ ಬಂದಿದ್ದೆ...ಮೊಮ್ಮಕ್ಕಳ school reopen ಆಗುವ ಕಾರಣದಿಂದ ನಿಲ್ಲಲಾಗಲಿಲ್ಲ...ಆದರೂ ಸಮ್ಮೇಲನದ time to time posts ಗಳು ಎಲ್ಲ ಕಡೆಗೂ ಹರಿದಾಡಿ ಒಂದು ಚಿತ್ರಣವನ್ನು ಕಟ್ಟಿಕೊಟ್ಟಿದ್ದವು...ಮೂರೂದಿನ ನಡೆದ ಕಾರ್ಯಕ್ರಮಗಳ video recording ಗಳು bonus ಲಾಭ...
ನಾನು ಸಾಹಿತಿಯಲ್ಲ..
ಸಾಹಿತ್ಯಾಸಕ್ತಳು ಮಾತ್ರ..ಅದು ನಮ್ಮೆಲ್ಲರಿಗೂ ಬಂದ ಅಪ್ಪನ ಬಳುವಳಿ.ಅಷ್ಟಿಷ್ಟು ,ಆಗಾಗ,ತೋಚಿದ್ದನ್ನು ಗೀಚುವ ಗೀಳು ಇದೆಯಾದರೂ ಪುಸ್ತಕ ಹೊರತರುವ, ವೇದಿಕೆ ಹತ್ತುವ ಮಟ್ಟದ್ದಲ್ಲ...ಆದರೂ ಬಂದಿದ್ದರೆ ಸ್ವಲ್ಪಾದರೂ ಆನಂದಿಸ ಬಹುದಿತ್ತು...ಆದರೆ ದಿನಾಲೂ ಅಗ್ರಿ ಕಾಲೇಜಿಗೆ ಎಡತಾಕುವದು ಸುಲಭವಲ್ಲ..ನನ್ನವೇ ಆದ ಆರೋಗ್ಯ ಸಮಸ್ಯೆಗಳು...ಜೊತೆಗೊಬ್ಬರು ಇದ್ದರೆ ಚಂದ..ಏಕ ಕಾಲಕ್ಕೆ ನಡೆಯುವ ನಾಲ್ಕೈದು ಗೋಷ್ಠಿಗಳಲ್ಲಿ ಎಲ್ಲದರಲ್ಲೂ ಹಾಜರಿರುವದು ಅಸಾಧ್ಯದ ಮಾತು...ಮೇಲೇ ತೀವೃ ಸ್ವರೂಪದ ಧೂಳು,ಮೇಲೆ ಥಂಡಿ...
ಎರಡೂ ನನಗೆ ನಿಷಿದ್ಧವೇ..
ಒಟ್ಟಿನಲ್ಲಿ ಲಾಭ- ಹಾನಿಗಳ ಪರಡಿಯಲ್ಲಿ ಲಾಭದ ತೂಕ ಕೆಳಗಿತ್ತು...ಎಪ್ಪತ್ನಾಲ್ಕರ ಅಂಚಿನಲ್ಲಿ ಬೇರೆ ಊರಿನಲ್ಲಿ ಸಾಹಸಕ್ಕಿಳಿಯುವ ಧೈರ್ಯ ಆಗಲೇಯಿಲ್ಲದಿರುವದು ನನ್ನ ಮಟ್ಟಿಗೆ ಒಳ್ಳೆಯದೋ ,ಕೆಟ್ಟದೋ ವಿಚಾರ ಮಾಡುವದನ್ನು ಕೂಡ ಬಿಟ್ಟು ಹಾಯಾಗಿದ್ದೇನೆ..ಸಧ್ಯಕ್ಕೆ ಬೆಂಗಳೂರಿನ ವಿವಿಧ ಗುಂಪುಗಳಲ್ಲಿ ಗುರುತಿಸಿಕೊಂಡು ಇಲ್ಲಿಯ ಸಾಹಿತಿಗಳ ಸಾಂಗತ್ಯದಲ್ಲಿ ,ಇಲ್ಲಿಯ ಕಾರ್ಯಕ್ರಮಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ ತಕ್ಕ ಮಟ್ಟಿಗೆ..
ಇಪ್ಪತ್ತು - ಇಪ್ಪತ್ತೈದು ವರ್ಷಕ್ಕೆ ಮದುವೆ ಮಾಡಿಕೊಂಡು ನಮ್ಮವರು ಎಂಬುವರನ್ನೆಲ್ಲ ತೊರೆದು ಸಂಪೂರ್ಣ ಅಪರಿಚಿತರೊಂದಿಗೆ ಇಡೀ ಬಾಳನ್ನೇ ಸವೆಸುವ ಹೆಣ್ಣಿಗೆ ಅದೇನೂ ಅಸಾಧ್ಯವಲ್ಲ ಬಿಡಿ..
No comments:
Post a Comment