Thursday, 10 January 2019

ಹಾಗೇ ಸುಮ್ಮನೇ...

ಬಿಟ್ಟೇನೆಂದರೂ ಬಿಡದೀ ಮಾಯೆ...
      ‌
                        ಬಿಟ್ಟುಕೊಡುವದು, ಹಿಡಿದಿಟ್ಟುಕೊಳ್ಳುವದು  ಎರಡೂ ಈ ಬದುಕಿನ ಅವಿಭಾಜ್ಯ ಅಂಗಗಳು..ನಮಗೇ ಬೇಕಾಗಿಯೋ, ಬೇಕಾಗಿದ್ದರೂ ಕೂಡ ಅನಿವಾರ್ಯವಾಗಿಯೋ  ಏನೇನನ್ನೋ ಬದುಕಿನಲ್ಲಿ ಬಿಡುತ್ತ ಹೋಗುತ್ತೇವೆ. ನಮ್ಮಮ್ಮ,ಅಪ್ಪನಿಗೆ ಎರಡೆರಡು ವರ್ಷಗಳ ಅಂತರದಲ್ಲಿ  ಎಂಟ್ಹತ್ತು ಜನ ಮಕ್ಕಳು..ಎರಡು ವರ್ಷಗಳಾಗುತ್ತಲೇ ಕ್ರಮೇಣ ಬಗಲಿನಿಂದ ತೊಡೆಗೆ,ತೊಡೆಯಿಂದ ಅಂಗಳಕ್ಕೆ  ಸರಿದು ಬರುವದು ಒಂದು ನಿಯಮವಾಗಿತ್ತು...ನಂತರ ಆ ಅಂಗಳ ಬಿಟ್ಟು ಶಾಲೆಯಂಗಳಕ್ಕೆ ಬಂದದ್ದು,ಹೈಸ್ಕೂಲಿಗಾಗಿ ಪ್ರಾಥಮಿಕ ಶಾಲೆ,ಕಾಲೇಜಿಗಾಗಿ ಹೈಸ್ಕೂಲು ಬಿಡುವದು, ಬಿಡಿ ಎಲ್ಲರೂ ಮಾಡಿದ್ದೇ.. PUC ಗೆ ನಮ್ಮೂರು ಬಿಟ್ಟು ಧಾರವಾಡಕ್ಕೆ ಬಂದದ್ದು ಇತಿಹಾಸ.ಇಪ್ಪತ್ನಾಲ್ಕು ವರ್ಷಗಳಿಗೆ ಅಪ್ಪನ ಮನೆ ಬಿಟ್ಟು  ಬೇರೇ ಮನೆ ಸೇರಿದ್ದು, ಐವತ್ತರ ಅಂಚಿನಲ್ಲಿ ಒಬ್ಬೊಬ್ಬರೇ ಮಕ್ಕಳು ನನ್ನನ್ನು ಬಿಟ್ಟು ತಮ್ಮ ತಮ್ಮ ಗೂಡು 
ಕಟ್ಟಿಕೊಂಡು ಹೋದದ್ದೂ ಬದುಕಿನ ಭಾಗವಾಗಿಯೇ..

     ‌ ‌            ಐವತ್ತೆಂಟಕ್ಕೆ ನೌಕರಿಯ ಗೋಜು ಬಿಟ್ಟದ್ದು,ಮುಂದೆ ಮಧುಮೇಹವೆಂದು ಸಕ್ಕರೆ, ಬಿ.ಪಿ ಯಂದು ಉಪ್ಪು ಬಿಟ್ಟದ್ದು ,ಕಾಲು ನೋವೆಂದು walking ಬಿಟ್ಟದ್ದು, vertigo ಎಂದು ತಿರುಗಾಟ ಬಿಟ್ಟದ್ದು ಸುದ್ದಿಯಾಗಲೇಯಿಲ್ಲ..ಯಾಕಂದರೆ  ಇಂಥವು ಸಾಮಾನ್ಯವಾಗಿ ನಮ್ಮೊಬ್ಬರದೇ ಸಮಸ್ಯೆಯಾಗಿರದೇ ನಮ್ಮಂಥ ಬಹುತೇಕರ ಸಮಸ್ಯೆಯಾಗಿರುವದು  ನಮಗೆ ಸಮಾಧಾನ ತರುವ ವಿಷಯವಾಗಿರಲೂ ಬಹುದು......
                        ಒಂದನ್ನು ಬಿಟ್ಟಾಗ ಅರಿವಿಲ್ಲದೇ ಇನ್ನೊಂದನ್ನು ಗಂಟು ಹಾಕಿಕೊಂಡಿರುತ್ತೇವೆ.ಹಾಗೆಯೇ ಗಂಟುಬಿದ್ದದ್ದು ಈ FACE BOOK ಎಂಬ ಮಾಯೆ..ಎಲ್ಲದರಂತೆ ಇದನ್ನು ಸುಲಭವಾಗಿ ಬಿಡಲಾಗುತ್ತಿಲ್ಲ...ಬೇಸರಕ್ಕೆ  Time pass ಗಾಗಿ ಎಂಬ   hash tag  ಅಂಟಿಸಿಕೊಂಡು ನನ್ನನ್ನು ಒಲಿಸಿಕೊಂಡ ಈ ವಾಮನರೂಪಿ mobile ಇದೀಗ ತ್ರಿವಿಕ್ರಮಾಕಾರ ಬೆಳೆದು ,
ಬೆಳಗು,ಮದ್ಯಾನ್ಹ ,ರಾತ್ರಿ  ಎಂಬ  ಮೂರೇ ಹೊತ್ತಿನಲ್ಲಿ  ಹೆಜ್ಜೆಯಿಡಲು  ಅನುಮತಿ ಕೇಳುತ್ತಿದೆ..ಅದಕ್ಕೆ 'ಹೂ' ಎಂದ
ಬಲಿ ಚಕ್ರವರ್ತಿಯ ಗತಿಯೇ ನನ್ನದು ...ಸೀದಾ ಪಾತಾಳ..
                       ಫೋನು,ಮೆಸೇಜು,e- mail ಎಂದು ಸುರುವಾದ ಇದರ ಪ್ರೇಮ  ಎಲ್ಲಿ ಹದ ತಪ್ಪಿತೋ ಗೊತ್ತಿಲ್ಲದೇ  ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಮೇಲೇಯೇ  ನನಗೆ ಅನಾಹುತದ ಅರಿವಾದದ್ದು...ಇಷ್ಟೆಲ್ಲ ಬಿಟ್ಟು  ಬಂದ  ನನಗೆ ಇದನ್ನು ಬಿಡುವದು ಸುಲಭಸಾಧ್ಯವಾಗುತ್ತಿಲ್ಲ....ಏನಾದರೂ ಬರೆದದ್ದನ್ನು ಮೆಚ್ಚಿ ನಾಲ್ಕು ಜನ ' ಜೈ ಜೈ' ಅಂದರೋ
ಸುರು...' ಹದಿನಾರರ ಹದಿಹರೆಯದ ಹುಡುಗನಿಗೆ ಸೆರೆ ಕುಡಿಸಿ,ಚೇಳು ಕಚ್ಚಿಸಿ ಕುಣಿಯಲು ಹಚ್ಚಿದಂತೆ..' ಎದೆಯುಬ್ಬಿ ಮೋದಿಯವರ ೫೪ ಇಂಚಿನ 'ಛಾತಿ' ಯನ್ನೂ ಮೀರಿದಂತೆಯೇ...ಗಳಿಗೆಗೊಮ್ಮೆ likes,comments, ನೋಡುವದು,ಬಂದಿದ್ದರೆ ಅತ್ಯಂತ ಪ್ರೀತಿಯಿಂದ   ಧನ್ಯತೆಯಿಂದ ಅವರೆಲ್ಲರಿಗೆ ಉಪಕೃತಳಾಗುವದು, ಒಂದು ವೇಳೆ ಸಂಖ್ಯೆ ಕಡಿಮೆಯಾದರೆ ಖಿನ್ನತೆಗೆ ಜಾರಿ ದೀಪಿಕಾ ಪಡುಕೋಣೆಯಂತಾಡುವದು,ಊಟ,ನಿದ್ರೆಗಳಿಲ್ಲದ ಚಡಪಡಿಕೆ ಏನು ಹೇಳಲಿ ಅದರ  ಬಗ್ಗೆ...ಯಾವುದೋ ಗಳಿಗೆಯಲ್ಲಿ,ಒಂದಿಷ್ಟು ಹೆಚ್ಚು ಪ್ರತಿಕ್ರಿಯೆಗಳು ಬಂದಾಗಲೆಲ್ಲ ನನಗೆ ನಾನೇ '"ಇನ್ನು ಸಾಕು...ಬಿಟ್ಟುಬಿಡೋಣ...ಅಂಗೈಯಲ್ಲಿ ಮುದ್ದು ಮುದ್ದಾಗಿ ಮಲಗುವಂಥ, ಪುಟ್ಟದೊಂದು mobile ಖರೀದಿಸಿ  Hi...Bye..ಗೆ ಸೀಮಿತಗೊಳಿಸೋಣ " ಎಂದು...
                      ಕಷ್ಟಪಟ್ಟು ಅಷ್ಟನ್ನು ಮಾಡಬಹುದು..ಮುಂದೆ? ನನ್ನನ್ನೇನು ಮಾಡ್ತೀಯಾ ಎಂದು ಎದುರಿಗೆ ನಿಂತು ದುರುಗುಟ್ಟುವ ಸಮಯಕ್ಕೇನು ಹೇಳಲಿ...ತಮ್ಮ ತಮ್ಮ  routine ಗೇನೆ  ವೇಳೆ ಸಿಗದೆ  busy ಇರುವ  ಕಾರಣಕ್ಕೆ ಮಕ್ಕಳ,ಮೊಮ್ಮಕ್ಕಳ ಸಮಯ ಎರವಲು ಪಡೆಯಲಾರದ  ಬಡತನ...ಯಾರನ್ನಾದರೂ ಕರೆಯೋಣ ಇಲ್ಲವೇ ನಾನೇ ಹೋಗೋಣ ಅಂದರೆ ಬೆಂಗಳೂರಿನ ಸಂದಣಿಯಲ್ಲಿ ಕನಿಷ್ಟ ನಾಲ್ಕು ತಾಸು....taxi ಗೆ  minimum 600 ರೂ.ದಕ್ಷಿಣೆ..
.ಇಂಥ ದುರ್ಭರ ಆಯ್ಕೆಯಲ್ಲಿ ಮತ್ತೆ ಸಂಕಟಹಾರಕವೆಂದರೆ  FACE BOOK ಒಂದೇ..
           ‌‌ಹೀಗಾಗಿ ಸಧ್ಯಕ್ಕೆ ' ಬಿಟ್ಟೇನೆಂದರೂ ಬಿಡದೀ  ಮಾಯೆ...'ಎಂಬಂತಾಗಿದೆ ನನ್ನ ಹಣೆ ಬರಹ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...