ಹಾಗೇ ಸುಮ್ಮನೇ...
ಸಂಕ್ರಾಂತಿ..
* " ಎಳ್ಳು- ಬೆಲ್ಲ ತೊಗೊಂಡು ಒಳ್ಳೆ ಮಾತಾಡೋಣ"...
* ತಿಳಗುಳ ಘ್ಯಾ...ಗೊಡ ಗೊಡ ಬೋಲಾ"...
* Take sweet...and Be sweet..
ಭಾಷೆ ಬೇರೆ...ಭಾವನೆಗಳು ಒಂದೇ...ಧ್ವನಿಗಳು ಬೇರೆ..ಧ್ವನ್ಯಾರ್ರ್ಥ ಒಂದೇ..
ಬೆಳಿಗ್ಗೆ ಹತ್ತೂವರೆಗೆ ಶುರುವಾದ ಸಂಭ್ರಮ, ಹೆಡ್ ಮಾಸ್ತರರ ಭಯಂಕರ ಗುಡುಗಿನೊಂದಿಗೆ ಸಮಾಪ್ತವಾಗಬೇಕು...ಈ ಹುಡುಗರ ಉತ್ಸಾಹ ಭಂಗವಾಗಬಾರದೆಂಬ ಕಾರಣಕ್ಕೇನೆ ಆ ದಿನ ಶಾಲೆ ಒಂದೂವರೆ ಎರಡು ಗಂಟೆ,ಅಂದರೆ ಎರಡು ಅವಧಿ ತಡವಾಗಿ ಇಟ್ಟರೂ ಅವುಗಳ ಉತ್ಸಾಹದ ಮುಂದೆ ಅದು ಲೆಕ್ಕಕ್ಕಿಲ್ಲ. ಕಡಿಮೆಯೇ ಎನ್ನಬೇಕು. ಅಧಿಕೃತವಾಗಿ ಸಿಕ್ಕ ವೇಳೆ ದಾಟಿ ಗೈರು ಪೀರಿಯಡ್,drawing/ craft ಅನ್ನುವ ನೆವಗಳನ್ನು ಮುಂದೆಮಾಡಿ ಸದ್ದಿಲ್ಲದೇ ಹೆಚ್ಚಿನ ವೇಳೆ ಕಬಳಿಸುವದು ಮಾಮೂಲು..ಆ ದಿನ uniform ಸೂಟಿ. ಬಣ್ಣಬಣ್ಣದ ಬಟ್ಟೆ ತೊಟ್ಟು,ಕೈ ತುಂಬ ಬಳೆ ಇಟ್ಟು,ಮಯೂರ ಲಾಸ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತ ತಾವಿರುವದು ಶಾಲೆ ಎಂಬುದನ್ನು ಮರೆತು ಗುಂಪು ಗುಂಪಾಗಿ ಮೆರೆಯುತ್ತಿದ್ದ ಚಂದದ ಹುಡುಗಿಯರನ್ನು ಹಿಮ್ಮೆಟ್ಟಿಸುವದು ಅಸಾಧ್ಯದ ಕೆಲಸ ಎಂಬುದು ಎಲ್ಲರಿಗೂ ಗೊತ್ತು...ಅದರ ವಿರುದ್ಧ ಧ್ವನಿಯತ್ತುತ್ತಿದ್ದ ಗಂಡು ಧ್ವನಿಗಳಲ್ಲಿಯೂ ಬಲವೇ ಇರುತ್ತಿರಲಿಲ್ಲ ಎಂಬುದು open secret..." ಸಾಕು..ಮುಗಸ್ರಿ ಇನ್ನ..ಹೋಗದಿದ್ರ punishment ಕೊಡಬೇಕಾಗ್ತದಾ ಮತ್ತ..." ದಂಥ ಬೆದರಿಕೆಗಳಲ್ಲಿ, "ನೀ ಸ್ವಲ್ಪ ಸತ್ಹಂಗ ಮಾಡು....ನಾ ಇಷ್ಟ ಅತ್ಹಂಗ ಮಾಡ್ತೇನಿ" ಅನ್ನೋ ಸುಳ್ಳಾಟsssನ ಕಾಣ್ತಿತ್ತು...
ಎಳ್ಳು ಕೊಡೋ ಬಗೀನೂ ನಾನಾ ಥರ...class teacher,favorite teacher ಇದ್ರ ಅವರಿಗೆ ಎಳ್ಳು ತುಂಬಿದ ದೊಡ್ಡ - ದೊಡ್ಡ ಪಾಕೀಟು,ಪುಟ್ಟ ಪುಟ್ಟ plastic ಡಬ್ಬಿ ಒಳಗ ಎಳ್ಳು ಕೊಡೋದುಮೇಲೆ ಚಂದದ ಸಕ್ಕರೆ ಅಚ್ಚುಗಳೊಂದಿಗೆ...ಉಳಿದವರಿಗೆ ಅವರ subject,ಉ ಕಲಿಸೋ ರೀತಿ, ಅವರೊಡನೆಯ ಆತ್ಮೀಯತೆಯ ಅಂದಾಜಿನ ಮೇಲೆ ಕೈಯಾಗ ಎಳ್ಳು ತೊಗೊಳೋದು..ಕೆಲವು ಹುಡುಗರಂತೂ ಬಾರಿಹಣ್ಣು ಮಾರೋ ಮುದುಕೀರ್ಹಂಗ ಆರು ಕೈಯಾಗ ಹಿಡಿದು, ಅಡ್ಡ ಗೋಣು ಅಲಗಾಡ್ಸಿ ಎರಡು ಪರತ ಹಾಕಿ,ಮತ್ತೊಮ್ಮೆ ಕೈ ನೋಡಿಕೊಂಡು ಇನ್ನೊಂದು ಎತಿಗೊಂಡು ಕೊಡ್ಲೋ ಬ್ಯಾಡೋ ಅಂತ ತಮ್ಮ 'ಆಸ್ತಿ will ' ಬರದಕೊಟ್ಹಾಂಗ ಕೊಡೋರು...ಕೆಲವು ಚಾಣಾಕ್ಷ ಹುಡುಗರು ಒಂದು ಗುಂಪು teacher ಮುಂದ ನಿಂತಿತ್ತಂದ್ರ ತಾವು ಕೊಡದsss ಗದ್ದಲದಾಗ
ಎಲ್ಲರ ಜೊತೆಗೆ ಕೈಯೊಡ್ಡಿ ನಮ್ಮಿಂದssನ ವಸೂಲಿ ಮಾಡಿ ಯುದ್ಧ ಗೆದ್ಹಂಗ ಕ್ಯಾಕಿ ಹಾಕೋರು...ಹುಡುಗಿಯರ ಜೊತೆ ಬೆರೆಯಲಿಕ್ಕೆ ಅವಕಾಶ ಸಿಗುವ ಏಕೈಕ ದಿನ ಅದು..ಅವತ್ತೊಂದು ದಿವಸ " ಬಾರಾಖೂನ್ ಮಾಫ್" ಅವರಿಗೆ...ತಮ್ಮ ಎಂದಿನ ಬದ್ಮಾಶ್ತನಕ್ಕ,ಸಭ್ಯತೆಯ ತೆರೆ ಎಳೆದು only gentleman of d world ಅನ್ನೋಹಂಗ pose ಕೊಟ್ಟು ಎಳ್ಳುಕೊಡೋ ದೃಶ್ಯ ಯಾವ ಸಿನೆಮಾದಾಗೂ ಸೆರೆ ಹಿಡಿಲಿಕ್ಕೆ ಆಗಿಲ್ಲ...ಅನಸ್ತದ ಇದುವರೆಗೂ...
ಬೇರೆ ಬೇರೆ teacher ಗೆ ಕೊಡುವಾಗಲೂ ಯಾವ ಸಿನೆಮಾಕ್ಕೂ ಕಡಿಮೆಯಿಲ್ಲದ ಸೀನುಗಳು..ಅತಿ ಮೆಚ್ಚಿನ teacher ಗೆ ಒತ್ತಾಯದಿಂದ ಬಾಯಾಗನ ಹಾಕಲಿಕ್ಕೆ ಹಟಮಾಡುವದು,strict teacher ಇದ್ರ ಹತ್ತು ಹುಡುಗರ ಜೊತೆ ಸದ್ದಿಲ್ಲದೇ ಗುಂಪಿ ನಲ್ಲಿ ನುಸುಳಿ ಹೋಗಿ ಕೈಯಿಷ್ಟ ಮುಂದ ಮಾಡಿ ಕೊಟ್ಟ ಶಾಸ್ತ್ರ ಮಾಡೋದು, ತಮ್ಮನ್ನ ತುಂಟರ ಗುಂಪಿನೊಳಗ ಗುರುತಿಕೊಂಡವರು ಅಂದು ಅತೀ ವಿಧೇಯರಾಗಿ ಶಿಕ್ಷಕರ ಕಾಲಿಗೆರಗಿ,ಕೈಕಟ್ಟಿನಿಂತುಕೊಂಡು,ಅವರಿಗೇ ತಾವೇ ತಪ್ಪು ಮಾಡಿದೆವೇನೋ ಎಂ ಬ ಭಾವ ಬರುವಂತೆ ಗೋಲ್ ಮಾಲ್ ಸಿನೆಮಾದ ,' ಲಕ್ಷ್ಮಣ ಪ್ರಸಾದ' ',ರಾಮಪ್ರಸಾದ' ನಾಗಿ ಎಲ್ಲರನ್ನೂ fool ಮಾಡಿ, ಅವರೆಲ್ಲ ಹೋದಮ್ಯಾಲ ಜೋರು ಧ್ವನಿಯಲ್ಲಿ ಕೇಕೇ ಹಾಕಿ ಸಂಭ್ರಮಿಸುವದೂ ಇತ್ತು...
ಚಂಡ ಮದ್ದಳೆಯಲ್ಲಿ ಕೊಳಲಿನ ಧ್ವನಿ ಎಲ್ಲಿ ಕೇಳಬೇಕು? ನಿಜವಾಗಿ ಸಜ್ಜನ ವಿದ್ಯಾರ್ಥಿಗಳು ಇವರೆಲ್ಲರ ಅಬ್ಬರ ಮುಗಿಯುವದಕ್ಕಾಗಿ ಕಾದು ಕಾದು ಸದ್ದಿಲ್ಲದೇ class ಗಳನ್ನು ಸೇರಿ, ಶಾಲೆ ಮುಗಿದು ಮನೆಗೆ ಹೋಗುವಾಗ ಮೆತ್ತಗೇ ಬಂದು,wish ,ಮಾಡಿ ಮರೆಯಾಗುತ್ತಿದ್ದರು...
ಇಡೀ ದಿನ ಮುಗಿಸಿ ಮನೆಗೆ ಹೋಗುವ ಹೊತ್ತಿಗೆ ಮೈ,ಕೈ ಜಿಡ್ಡೋ ಜಿಡ್ಡು..
ಬೆಲ್ಲ,ಸಕ್ಕರೆಯ ಜಿಗಿ...ಆದರೆ ಮನಸ್ಸು ಮಾತ್ರ ಮುಂದಿನ ಒಂದು ವಾರದ ವರೆಗೆ fresh...fresh...ಮಕ್ಕಳನ್ನು ನೋಡಿಯೋ...ನಮ್ಮ ಬಾಲ್ಯ ನೆನೆದೋ..ಅದು ಹಬ್ಬ ಹುಣ್ಣಿವೆಗಳಲ್ಲಿಯ ಪವಾಡವೋ..ಇಂದಿಗೂ ಗೊಂದಲ...
ಮುಂದಿನ ತಿಂಗಳಿಗೆ ನಾನು ನಿವೃತ್ತಳಾಗಿ ಪೂರಾ ಹದಿನೈದು ವರ್ಷ.೨೦೦೪ ರಲ್ಲಿ ..ಐವತ್ತೆಂಟಕ್ಕೆ...ಇಂದು ಬೆಂಗಳೂರು ಮಹಾನಗರದ concrete jungle ನಲ್ಲಿ ಅದರಲ್ಲೂ software hub ಎನಿಸಿರುವ ಎಲೆಕ್ರಾನಿಕ್ city ಯಲ್ಲಿ..ಎಡಕ್ಕೆ ತಮಿಳರು,ಎದುರಿಗೆ ಮುಸ್ಲಿಮ್ family ಬಲಕ್ಕೆ ಮಲೆಯಾಳಿ... ಹಿಂದೆ ಗುಜರಾತಿ ..ಭಾಷೆ,ಆಚರಣೆ,ಜೀವನ ಶೈಲಿ, ಎದರಲ್ಲಿಯೂ ಸಾಮ್ಯವಿಲ್ಲ..ಎಲ್ಲರೂ ತಮ್ಮ ತಮ್ಮ ಹಬ್ಬಾ ಆಚರಿಸುತ್ತಾರೆ.ಆದರೆ ಏಕ ಕಾಲದಲ್ಲಿ ಅಲ್ಲ..ಎಲ್ಲ ಭಣ ಭಣ...ರಜೆಯೂ ಬೇರೆ ಬೇರೆ..ಮನೆಯಲ್ಲಿಯೇ ಎಲ್ಲರೂ ಇರುವದಿಲ್ಲವೆಂದ ಮೇಲೆ, ಯಾರಿಗಾಗಿ
ಹಬ್ಬ? ಎಳ್ಳು ಬೀರುವವರು ಯಾರು? ಕರಿ ಎರೆಯುವದು ಯಾರಿಗೆ? ಉಡಿಯಲ್ಲಿ ಬೀಳುವ ಬೆಂಡು ,ಬತ್ತಾಸು, ಕಾಸಿಗೆ ಕಿತ್ತಾಡುವ ಮಕ್ಕಳೆಲ್ಲಿದ್ದಾರೆ? ಕಬ್ಬು ಸಿಗಿದು ತಿಂದು ತಿಪ್ಪೆಯಾದ ಮನೆ ಸ್ವಚ್ಛ ಮಾಡುವ ಗೋಜೆಲ್ಲಿ? ಜರದ ಪರಕಾರ,ಕುಪ್ಪುಸ ಧರಿಸಿ ಕಡಲೆಗಿಡ,ಕಬ್ಬು,ಬದನೆ, ಎಳ್ಳು ಎಲ್ಲ ಬೀರಲು( ಬೀರಿಸಲು) ' ಪುಟ್ಟಗೌರಿ' ಯರು ಎಲ್ಲಿ ?? ಎಳ್ಳುಹಬ್ಬದ ಅಡಿಗೆ ಮಾಡಿ ಒಟ್ಟಿಗೆ ಉಣ್ಣುವದು ಯಾವಾಗ? ಹಿರಿಯರು ನಮಸ್ಕಾರ ಮಾಡಲು ಎಲ್ಲಿ ಸಿಗುತ್ತಾರೆ?
ಏನೆಲ್ಲ ಪ್ರಶ್ನೆಗಳು? ಆದರೆ ಉತ್ತರ?..
ಮತ್ತೊಬ್ಬ ಬೇತಾಳ ನನ್ನು ಹೆಗಲೇರಿಸಿಕೊಂಡ ವಿಕ್ರಮನೇ ಹುಟ್ಟಿ ಬರಬೇಕು..
No comments:
Post a Comment