Monday, 28 January 2019

ಹಾಗೇ ಸುಮ್ಮನೇ...

ನಿಜವೋ...ಸುಳ್ಳೋ..ನೀವೇ ಹೇಳಿ...

ಕೆಲ ದಿನಗಳಿಂದ ಒಂದು ವಿಚಾರ ಬಾಧಿಸ್ತಾಯಿದೆ..ಹೆಣ್ಣು ಮಕ್ಕಳಿಗೆ ಐವತ್ತರ ಸನಿಹ ದೇಹದಲ್ಲಿ ಆಗುವ ಹಾರ್ಮೋನ್ ಗಳ ಸ್ಥಿತ್ಯಂತರದಿಂದಾಗಿ ಕೆಲವೊಂದು ಬದಲಾವಣೆಗಳು ಆಗಿ ಕೆಲಕಾಲ  ಕಾಡಿಸಿ,ಹಣ್ಣಾಗಿಸಿ ಕೊನೆಗೊಮ್ಮೆ menopause ಹೆಸರಲ್ಲಿ  ಮುಕ್ತಾಯವಾಗುತ್ತವೆ.ಆ ಕೆಲತಿಂಗಳು, ಕೆಲವೊಮ್ಮೆ ವರ್ಷವಿಡೀ ಆ ಸ್ಥಿತಿ  ಎಷ್ಟು ಹಣ್ಣಾಗಿಸುತ್ತದೆಂದರೆ  ಒಂದು ರೀತಿಯ ಮಾನಸಿಕ ವೇದನೆ,ಯಾತನೆ...ಕೆಲವೊಬ್ಬರು ಕ್ಷಣ ಕ್ಷಣಕ್ಕೆ ಬದಲಾಗುವ mood swing ಗಳಿಂದಾಗಿ depression ಗೆ ಹೋಗುವ ಸಾಧ್ಯತೆಗಳನ್ನೂ ಅಲ್ಲ ಗಳೆಯುವಂತಿಲ್ಲ..ಇಲ್ಲದ ಬೇಸರ,ಏಕಾಕಿತನ, ವಿನಾಕಾರಣ ಭಾವುಕರಾಗುವದು, ಜನರಿಂದ ದೂರಹೋಗುವದು , ಸುಮ್ಮ ಸುಮ್ಮನೇ ಅಳುವಂತಾಗುವದು , ಹೀಗೆ ಇನ್ನಿಲ್ಲದ  ಹೇಳಲಾಗದ,ಅನುಭವಿಸಲೂ ಆಗದ ಗೊಂದಲಗಳ ಸೃಷ್ಟಿ ಯಾರಿಗೂ  ಹೊಸದೇನೂ ಅಲ್ಲ..
                   ನಾನೀಗ ಕೇಳಹೊರಟ ಪ್ರಶ್ನೆ ಬೇರೆಯೇ...ಇಂಥದೇ ಅಥವಾ ಬೇರೆ ಬದಲಾವಣೆ ಒಂದು ವಯಸ್ಸಿನಲ್ಲಿ ಬುದ್ಧಿ,ಹಾಗೂ ಮನಸ್ಸಿಗೂ ಆಗುತ್ತದೆಯೇ? ಕಾರಣಗಳು ಬೇರೆಯಿರಬಹುದು..body cells ಅಶಕ್ತವಾಗಿ, ಅವುಗಳ ಬೆಳವಣಿಗೆ ಅಪೇಕ್ಷಿತಮಟ್ಟದಲ್ಲಿ ಇರಲಾರದೇ ಹೋದಾಗ, ಮೊದಲಿನ ಉತ್ಸಾಹ ಇಲ್ಲದಿರುವದು,ನಿರಾಸಕ್ತಿ, ಯಾವುದರಲ್ಲಿ ಏನಿದೆ ಎಂಬಂಥ ಉದಾಸೀನ,ಏನೂ ಇಲ್ಲ...ಬದುಕೆಂದರೆ ಇಷ್ಟೇ ಎಂಬಂಥ ಅನಾಥ ಭಾವ, ಬದುಕಿನ ಬಗ್ಗೆ ಒಂದು ದಿವ್ಯ ನಿರ್ಲಕ್ಷ ,ದಂತಹದನ್ನು ಕಾಣುತ್ತೇವೆ...ಯಾರಾದರೂ ಅದಕ್ಕೆ ಸಂಬಂಧಿತ post ಹಾಕಿದರೆ ಲೆಕ್ಕವಿಲ್ಲದಷ್ಟು ,likes,comments,ತಮಗೂ ಹಾಗೇ ಎಂಬ ಅನಿಸಿಕೆಗಳು,ಪರಿಚಯದ ಅಂತಹ ಘಟನೆಗಳ ಉದಾಹರಣೆಗಳು ಓತಪ್ರೋತವಾಗಿ ಹರಿದು ಬರುತ್ತವೆ..ಕೆಲವರು  ತೋರಿಕೆಗೆ  ಧೈರ್ಯ ತೋರಿಸುವ,ಧನಾತ್ಮಕವಾಗಿ ಪ್ರತಿಕ್ರಯಿಸುವ  ಉದಾಹರಣೆಗಳಿದ್ದರೂ ಅಂಥವು ಕಡಿಮೆಯೇ...
                  ನನಗೆ ಓದು,ಬರಹ ಅತಿ ಮೆಚ್ಚಿನ ಹವ್ಯಾಸ..ನಾನು ಹತ್ತನೇವರ್ಗದಲ್ಲಿ ಬರುವ ಹೊತ್ತಿಗೆ ಒಂದು ನೂರು,( ನೂರನೇಯದು- ಅ.ನ.ಕೃ ಅವರ ಗರುಡ ಮಚ್ಚೆ) ಪುಸ್ತಕಗಳನ್ನು  ಓದಿ ಮುಗಿಸಿದ್ದೆ( ನಮ್ಮ ದೂರದ ಬಂಧುಗಳದು ಹತ್ತು ಸಾವಿರಕ್ಕೂ ಮಿಕ್ಕಿದ ದೊಡ್ಡ ವಾಚನಾಲಯವಿತ್ತು...ಕೊಂಡು ಓದುವ ಯೋಗ್ಯತೆ ಇರಲಿಲ್ಲ). ಅವುಗಳಲ್ಲಿ ವಿ.ಕೃ.ಗೋಕಾಕರ ಸಮರಸವೇ ಜೀವನ,ಅ.ನ.ಕೃ ಅವರ ನಟ ಸಾರ್ವಭೌಮ ದಂಥ ಬ್ರಹತ್ ಕೃತಿಗಳಿದ್ದವು...ನಾನು ಒಬ್ಬಂಟಿಗಳಾಗಿ ಹೊರಗೆ ಹೋಗುವದು ನಿಲ್ಲಿಸಿದಾಗ ಓದುವ ಹವ್ಯಾಸವೇ ನನಗೆ ಜೀವ. ತುಂಬಿದ್ದು...
                    ಈಗ ಪೂರಾ ಉಲ್ಟಾ...ದಿನಪತ್ರಿಕೆ ಎರಡು ಬಾರಿ ಓದುತ್ತೇನೆ...ವಾರ.ಮಾಸಿಕ, ಪತ್ರಿಕೆಗಳ ಸೆಳೆತ ಕಡಿಮೆಯಾಗಿದೆ...ಕಾದಂಬರಿ,ಕಥೆ ಪುಸ್ತಕಗಳೂ ತಮ್ಮದೇ ವೇಗ ಬೇಡುತ್ತವೆ...ಓದಿದರೂ ಬುದ್ಧಿ ಕೆಲವೊಮ್ಮೆ ಓದಿದ್ದನ್ನು ಗ್ರಹಿಸುವದಿಲ್ಲ....ಕೆಲವೇ ಹೊತ್ತಿನ ನಂತರ ಓದಿದ್ದು ಮರೆತೇ ಹೋಗುತ್ತದೆ.ಗೆಳತಿಯರೊಂದಿಗಿನ ಸಾಹಿತ್ಯಿಕ ಚರ್ಚೆ ನಿಂತಿದೆ...ಈಗ ಸ್ವತಃ ಅಣ್ಣನದೇ ದೊಡ್ಡ ಲೈಬ್ರರಿಯಿದ್ದರೂ, ನಾವೆಲ್ಲ ಸೇರಿದಾಗ ಸಾಹಿತ್ಯ ಸಂಬಂಧಿತ ಹರಟೆಗಳೇ ಹೆಚ್ಚಾಗಿದ್ದರೂ, ಅಣ್ಣ ತಮ್ಮಂದಿರು ಪೇಟೆಗೆ ಬಂದ ಉತ್ತಮ ಪುಸ್ತಕಗಳನ್ನು ಕೊಂಡು ಓದಿದ ತಕ್ಷಣ ನಮಗೆ ತಿಳಿಸಿ ಓದಲೇಬೇಕೆಂದು ಹೇಳಿದಾಗಲೂ ಉತ್ಸಾಹದ ಗಾಡಿ ಓಡಲು ಎಣ್ಣೆ ಬೇಡುತ್ತದೆ..ಇಲ್ಲ ಇನ್ನಿಲ್ಲದಂತೆ ಕಿರುಗುಟ್ಟುತ್ತದೆ.
ಈ ಮನಸ್ಸಿಗೆ  ಈ ವ್ಯತ್ಯಾಸ ಚನ್ನಾಗಿ ಅರ್ಥವಾಗುತ್ತದೆ...ಅದನ್ನು ಸೋಮಾರಿಯಾಗಲು ಬಿಡಲೇಬಾರದೆಂಬ ಹಠದಿಂದ ಎಲ್ಲ ಪರಿಚಿತರ ಪುಸ್ತಕ ಬಿಡುಗಡೆ ,ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ..
ಆದರೂ ಮೊದಲಿನ ವೇಗ ಪಡೆಯಲಾಗುತ್ತಿಲ್ಲ..
                 ಇವತ್ತು ಆದದ್ದೂ ಇದೇ..ನಿನ್ನೆ ಎರಡು ಪುಸ್ತಕ ತಂದಿದ್ದೇನೆ. ಓದಿದರೆ ಒಂದೇ ದಿನದಲ್ಲಿ ಮುಗಿಸಬಹುದಾದದ್ದನ್ನು  ವಿನಾಕಾರಣ ವಿಲಂಬಿಸುತ್ತಿದ್ದೇನೆ..
        ‌         ‌ಇದು ಕಾಯಂ ರೋಗವಾಗಬಾರದೆಂಬ ಆಶೆ...ಎಲ್ಲರಿಗೂ ಹೀಗೇ ಆಗುತ್ತದಾ  ಎಂಬ ಕುತೂಹಲ..ಆಗಿಬಿಟ್ಟರೆ ಎಂಬ ಭಯ...'ಆಗುವದಿಲ್ಲ ಬಿಡಿ ' ಎಂಬ ಪುಟ್ಟ ಅಭಯ ಸಿಗಬಹುದೇ ಎಂಬ ನಿರೀಕ್ಷೆ..."ಕೆಲ ಕಾಲದ ನಂತರ ಸರಿಹೋಗುತ್ತೆ..ಇದೂ ಒಂದು ಅಲ್ಪಕಾಲಿಕ phase" ಎಂಬಂತಾಗಬಹುದೆಂಬ ದೂರದಾಸೆ...ಈ ಬರಹಕ್ಕೆ  ಮೂಲ ಕಾರಣಗಳು ಮೇಲೆ ಹೇಳಿದವುಗಳೇ ಆಗಿವೆ.
              ಇಲ್ಲಿಗೀ ಕಥೆ ಮುಗಿಯಿತು... boring ಅನಿಸಿದರೊಂದು ಕ್ಷಮೆ ಇರಲಿ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...