ಹಾಗೇ ಸುಮ್ಮನೇ...
ಉಪ್ಪು ತಿಂದವರು ನೀರು ಕುಡಿಯಲೇಬೇಕು...
ಒಮ್ಮೆ ಬಡ ಬ್ರಾಹ್ಮಣನೊಬ್ಬ ಧರ್ಮರಾಯನ ಬಳಿ ಸಹಾಯ ಯಾಚಿಸಿ ಬಂದ..ಧರ್ಮಜ ಅವನಿಗೆ ಮರುದಿನ ಬರುವಂತೆ ಕೇಳಿಕೊಂಡ.ವಿಷಯ ತಿಳಿಯುತ್ತಲೇ ಭೀಮ ಊರ ತುಂಬ ಡಂಗುರ ಹೊಡೆಸಿದ," ನಮ್ಮ ಅಣ್ಣ ಒಂದು ದಿನದ ಮಟ್ಟಿಗೆ ಸಾವನ್ನು ಗೆದ್ದಿದ್ದಾನೆ"_ ಎಂದು..ಒಂದು ದಿನವಂತೂ ಸಾಯುವದಿಲ್ಲವೆಂಬ ನಂಬಿಕೆ ಅವನಲ್ಲಿ ಹೇಗೆ ಬಂತು ಎಂಬ ಉಡಾಫೆ ಅದರಲ್ಲಿ ಕಾಣುತ್ತದೆ ಎಂದು ತಿಳಿದ ಯುಧಿಸ್ಟಿರ ನಾಚಿಕೆಯಿಂದ ಬ್ರಾಹ್ಮಣನನ್ನು ವಾಪಸ್ ಕರೆಸಿ ಅವನಿಗೆಸಹಾಯಮಾಡುತ್ತಾನೆ_ ಇದು ಮಹಾಭಾರತದ ಒಂದು ಉಪಕಥೆ..ನಿಜವಾ..ಸುಳ್ಳಾ...ಬದಿಗೆ ಇಟ್ಟು ಸಾರವನ್ನಷ್ಟೇ ಕೆದಕೋಣ...
" ಸಾವು ಅಂತಿಮ ತೀರ್ಪು...ಅದು ಶಾಶ್ವತ ಸತ್ಯ... ಅನಿಶ್ಚಿತ..ಜೀವನ್ಮರಣದೊಂದಿಗೆ ಸೆಣಸಾಡುವ. ರೋಗಿ ವರ್ಷಗಟ್ಟಲೇ ಬದುಕಬಹುದು...election ಗೆದ್ದ ಉಮೇದುವಾರ ಸಂಭ್ರಮಾಚರಣೆಯ ವೇಳೆ ಹೃದಯಾಘಾತದಿಂದ ಸಾಯಬಹುದು...ಅಷ್ಟೊಂದು ನಶ್ವರ ಈ ಬದುಕು...ಸಾವು_ ಬದುಕಿನ ಮಧ್ಯೆ ಒಂದೇ ಉಸಿರಿನ ಅಂತರ...ಇದ್ದರೆ ಬದುಕು...ಬಿದ್ದರೆ ಸಾವು...
" ಜಗತ್ತಿನಲ್ಲಿ ಅತಿ ಅಚ್ಚರಿಯ ಸಂಗತಿ ಯಾವುದು? "_ ಇದು ಧರ್ಮರಾಯನಿಗೆ ಯುಧಿಷ್ಟಿರನ ಪ್ರಶ್ನೆ
... ...
"ಪ್ರತಿದಿನ ಮನುಷ್ಯರು ಯಮನಮನೆಗೆ ದಾಳಿ ಇಡುವದನ್ನು( ಸಾಯುತ್ತಿರುವದನ್ನು) ಮಾನವ ನೋಡುತ್ತಲೇ ಇರುತ್ತಾನೆ..ಆದರೆ ತಾನು ಮಾತ್ರ ಈ ಜಗತ್ತಿನಲ್ಲಿ ಶಾಶ್ವತ..ತನಗೆ ಸಾವೆಂಬುದೇ ಇಲ್ಲ ಎಂಬಂತೆ ಎಲ್ಲವನ್ನೂ,ಎಲ್ಲರನ್ನೂ ಧಿಕ್ಕರಿಸುತ್ತಲೇ ಬದುಕುತ್ತಾನೆ...ಇದೊಂದು ಪರಮಾಶ್ಚರ್ಯದ ಸಂಗತಿ _ ಇದು ಧರ್ಮರಾಯನ ಉತ್ತರ...
ನಿನ್ನೆಯ ಚುನಾವಣಾ ಫಲಿತಾಂಶ, ಚುನಾವಣಾಪೂರ್ವ ದೊಂಬರಾಟ,ಚುನಾವಣೋತ್ತರ ಪ್ರತಿಕ್ರಿಯೆ, ಹತಾಶೆ ನಿರಾಸೆಗಳನ್ನು ಕಂಡಾಗ ಯಾಕೋ ಇದೆಲ್ಲ ನೆನಪಾಯಿತು...
ಇದೊಂದು ಸುನಾಮಿ ಸದೃಶ ಸನ್ನಿವೇಶ ಇದ್ದ ಹಾಗೆ...ಬರುತ್ತದೆ...ಅಬ್ಬರಿಸುತ್ತದೆ...ಕೆಲವರನ್ನು ನುಂಗುತ್ತದೆ...ಇನ್ನು ಕೆಲವರನ್ನು ದಡಕ್ಕೆಸೆಯುತ್ತದೆ...ನಂತರ ಎಲ್ಲವೂ ತಣ್ಣಗಾಗಿ ಹೊಸ ಅಧ್ಯಾಯವೊಂದು ಬಿಚ್ಚಿಕೊಳ್ಳುತ್ತದೆ...ಎಂದಿನಿಂದಲೂ ಆಗುತ್ತ ಬಂದದ್ದೇ ಇದು...ಹಿಂದೆ ಗೆದ್ದವರಾರೂ ಶಾಶ್ವತ ಅಜೇಯರಾಗಿಲ್ಲ...ಮಣ್ಣು ಮುಕ್ಕಿದವರೆಲ್ಲ ಶಾಶ್ವತವಾಗಿ ಕಣ್ಮರೆಯಾಗಿಲ್ಲ...
ಇದು ನಾನು ಹೇಳಿದ್ದಲ್ಲ...ಎಲ್ಲರೂ ಕಣ್ಣಾರೆ ಕಂಡು ಅನುಭವಿಸಿದ್ದು..ಇತಿಹಾಸದಲ್ಲಿ ದಾಖಲಾದದ್ದು...ಕೆಲ ಅದೃಷ್ಟವಂತರು ಹೆಚ್ಚುಕಾಲ ಇದ್ದಾರು...ಅದೃಷ್ಟ ಬೆಂಬಲಿಸದವರು ಅಲ್ಪ ಕಾಲ...
ಆದರೆ ಆ ವೈಭವ, ಅಧಿಕಾರ,ಹಣ,ಅಂತಸ್ತು ಕಾಯಂ ಬೇಕೆಂಬ ದುರಾಶೆಗಾಗಿ ಆಡುವ ಆಟಗಳು ವಿಪರೀತ ಅಸಹ್ಯ ತರಿಸುತ್ತವೆ...ಕಣದಲ್ಲಿದ್ದು ಕಷ್ಟಪಟ್ಟು ಗಳಿಸಿಕೊಂಡದ್ದು ಹೆಚ್ಚುಕಾಲ ಇರಲೆಂದು ಬಯಸುವದು ಸಹಜ...ಅದಕ್ಕಾಗಿ ಸತತ ದುಡಿಯಲಿ,ಉಳಿಸಿಕೊಳ್ಳಲಿ, ಜನಪರ ಕೆಲಸ ಮಾಡುತ್ತ ಹೋಗಿ ಜನಾದರ ಪಡೆದರೆ ಖಂಡಿತಕ್ಕೂ ಅದು ಅಸಾಧ್ಯವೇನಲ್ಲ...ಅದನ್ನು ಬಿಟ್ಟು ಸ್ವಂತ ಉದ್ಧಾರದಲ್ಲಿ ತೊಡಗಿ,ಜನ ಸಾಮಾನ್ಯರ ಬೆನ್ನಮೇಲೆ ಕಾಲಿಟ್ಟು ಮೇಲೆ ಹೋಗಿ ಅವರನ್ನು ಒದ್ದರೆ ತಿಳಿಯಲಾರದಷ್ಟು ಮೂರ್ಖರಲ್ಲ ಜನ...ಅರಿಯಲು ಸ್ವಲ್ಪು ತಡವಾದೀತು...ಆದರೆ ಅದು ಜನ ಮೂರ್ಖರೆಂದಲ್ಲ..ಹಸು ಮುಖದ ಹುಲಿಗಳ ಕಪಟತನದಿಂದಾಗಿ...
ಬದುಕಿನಲ್ಲಿ ಎಲ್ಲವೂ ಇರಲಿ ಎಂಬುದು ಒಂದು ಆಶಯ...ಆದರೆ ಅದಕ್ಕಾಗಿ ಆಡುವ ಮೋಸದಾಟ, ಅಶ್ಲೀಲ ಭಾಷೆಗಳ ಬಳಕೆ,ಅನುಚಿತ ತಂತ್ರಗಳು,ಏನಕೇನ ಪ್ರಕಾರೇಣ ಗೆಲುವಿನ ಹಂಬಲ ಇವು ಅಸಹ್ಯ ಹುಟ್ಟಿಸುತ್ತವೆ...ಅಲ್ಲದೇ ತಡವಾಗಿಯಾದರೂ ಪರೀಕ್ಷೆಗೊಡ್ಡಲ್ಪಟ್ಟು ಶಿಕ್ಷೆ ಅನುಭವಿಸುತ್ತವೆ...
ಹಿಂದೆಲ್ಲ ಆದದ್ದೂ ಇದೇ..ನಿನ್ನೆ ಆದದ್ದೂ ಇದೇ..ಮುಂದೆಯೂ ಆಗುವದೂ ಇದೇ...