ಹಾಗೇ ಸುಮ್ಮನೇ....
ಮುನ್ನೂರು ಮೈಲು ಪ್ರವಾಸದ ಮೊದಲ ಮೂರು ಹೆಜ್ಜೆಗಳು....
ನಾವು ಈಗಿರುವ ಮನೆಗೆ ಬಂದು ನಾಲ್ಕು ವರ್ಷ.ಮೊದಲ ಮನೆಯಿಂದ ಕೇವಲ ಒಂದೇ ಕಿಲೋಮೀಟರ್ ದೂರದಲ್ಲಿ ಹೊಸಮನೆ ಇದ್ದರೂ ಅಲ್ಲಿಯವರ ಯಾರ ಪರಿಚಯವೂ ನನಗಿರಲಿಲ್ಲ..ಪ್ರಸಂಗವೂ ಬಂದಿರಲಿಲ್ಲ.
ಹೀಗಾಗಿ ಇಲ್ಲಿ ಬಂದಮೇಲೆ ಆದ ಗೆಳತಿಯರಲ್ಲಿ ಪರಭಾಷೆಯವರೂ ಕೆಲವರಿದ್ದರು.ಅವರಲ್ಲಿ ಶ್ರೀ/ ಶ್ರೀಮತಿ ಭಗಾಡೆಯವರೂ ಇಬ್ಬರು...ಮೂಲತಃ ನಾಗಪುರದವರು..ಮರಾಠಿ ಮನೆಮಾತು...ಶ್ರೀಮತಿಯವರು ಯೋಗ/ ಪ್ರಾಣಾಯಾಮ/ ಧ್ಯಾನಗಳಲ್ಲಿ ಪರಿಣಿತರಿದ್ದು ಹಿರಿಯ ನಾಗರಿಕರಿಗೆ ಉಚಿತ ವರ್ಗ ನಡೆಸುತ್ತಿದ್ದರು..ಅವರು ಉಪಯೋಗಿಸುವ ಹಿಂದಿ ಬಹುಜನರಿಗೆ ಅರ್ಥವಾಗದಿದ್ದಾಗ ಕನ್ನಡ ಕಲಿಯುವ ಮನಸ್ಸು ಮಾಡಿದ್ದಲ್ಲದೇ ಪತಿಯೊಡಗೂಡಿ ಸಮಾನ ವಯಸ್ಕರನ್ನು ,ಸಮಾನ ಮನಸ್ಕರನ್ನು ಕಲೆಹಾಕಿ ಅಂಕಲಿಪಿ,ಹಾಗೂ ಪ್ರಾಥಮಿಕ ಅಕ್ಷರ ಜ್ಞಾನ ಕೊಡಬಲ್ಲ ಪಠ್ಯಪುಸ್ತಕ ಗಳನ್ನು ಖರೀದಿಸಿ club house ನ ಒಂದು ಮೂಲೆಯಲ್ಲಿ ಪ್ರಾರಂಭಿಸಿಯೇ ಬಿಟ್ಟರು..
ಕೆಲವೇ ದಿನಗಳಲ್ಲಿ ಸ್ವರ,ವ್ಯಂಜನ,,ಸಂಯುಕ್ತಾಕ್ಷರ ಗಳನ್ನು ಕಲಿತು dictation ಕೊಟ್ಟರೆ ತಪ್ಪಿಲ್ಲದೇ ಬರೆಯಬಲ್ಲವರಾದರು...ಆದರೆ ಅದು ಕಾಪಿ ಅಷ್ಟೇ..ಸ್ವಾಧ್ಯಾಯದ ಮೊದಲ ಮೆಟ್ಟಿಲು..
ವಿಷಯ ಮಾಹಿತಿಗಾಗಿ ಕೆಲವರ ಸಹಾಯ ಬೇಕೇಬೇಕೆಂದಾಗ,ಕನ್ನಡ ಬಲ್ಲವರು ಸಾಕಷ್ಟು ಜನ ಇದ್ದರೂ ಅವರಿಗೆ ಅರ್ಥವಾಗಿಸಲು ಹಿಂದಿ/ ಇಂಗ್ಲಿಷ ಬಳಕೆ ಮಾಡಿ ಕಲಿಸುವವರ ಅನಿವಾರ್ಯತೆ ಎದುರಾಯಿತು....
ಪರಿಣಾಮ ಅವರು ನನ್ನ ಕಡೆ ಬಂದರು..ಮೊದಲಿದ್ದ ಮನೆಯಲ್ಲಿ ನಾನು ಇನ್ನೊಬ್ಬ ಗೆಳತಿಯೊಂದಿಗೆ ಸೇರಿ ಕನ್ನಡೇತರರಿಗೆ ಕನ್ನಡದ ಉಚಿತ ವರ್ಗಗಳನ್ನು ನಡೆಸುತ್ತಿದ್ದುದು ಅದು ಹೇಗೋ ಇಲ್ಲಿಯವರಿಗೆ ಗೊತ್ತಾಗಿತ್ತು..ನಾನೂ ಒಪ್ಪಿ ವಾರಕ್ಕೆ ಮೂರುದಿನ ಕಲಿಸುವದಾಗಿಯೂ,ಉಳಿದ ಅವಧಿಯಲ್ಲಿ ತಾವೇ ಕೈಲಾದಷ್ಟು ಅಭ್ಯಾಸ ಮಾಡಿ ,ಸಮಸ್ಯೆಗಳ ಪಟ್ಟಿ ಮಾಡಿ ತಂದರೆ ಅದಷ್ಟೇ classನಲ್ಲಿ ಕಲಿತು ಕಲಿಕೆಯ ವೇಗ ಹೆಚ್ಚಿಸ ಬಹುದೆಂದೂ ಮಾತಾಯಿತು..ವಾಕ್ಯ ರಚನೆಗಳು,ಪ್ರಾರಂಭಿಕ ವ್ಯಾಕರಣ,ಯಾವುದೇ ವಿಷಯವಾಗಿ ಎರಡು ಮೂರು ವಾಕ್ಯಗಳನ್ನು ಬರೆಯುವದು ಮುಂತಾದ ಮೂಲ ಕಲಿಕೆಯೊಂದಿಗೆ ವರ್ಗಗಳ ಪ್ರಾರಂಭವಾಯಿತು..ಜೊತೆಗೆ ಕನ್ನಡ ಬರಲಿ, ಬಿಡಲಿ ಮಾತಾಡುವದು ಕಡ್ಡಾಯಗೊಳಿಸಲಾಯಿತು...ಎರಡು ಮೂರು ತಿಂಗಳಲ್ಲಿ ಇತರರು ಯಥಾಶಕ್ತಿ ಪ್ರಯತ್ನ ಮಾಡಿದರೂ ಭಗಾಡೆ ದಂಪತಿಗಳು ವಿಶೇಷ ಪರಿಶ್ರಮದಿಂದ ಎಲ್ಲರಿಗಿಂತ ಮುಂದೆ ಆಗಿ ಕನ್ನಡ ಗೀತೆಗಳ ಸಂಯೋಜನೆ, ಕನ್ನಡ ರಾಜ್ಯೋತ್ಸವ ದಂದು ಯುಗಳಗೀತೆಗಳನ್ನು ಹಾಡುವದು,ಯಾರೇ ಯಾವುದೇ ಭಾಷೆ ಮಾತಾಡಲಿ ತಾವು ಮಾತ್ರ ಕನ್ನಡದಲ್ಲಿಯೇ ಉತ್ತರಿಸಲು ಪ್ರಯತ್ನಿಸುವದು, ಎಲ್ಲ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುವದು ಮುಂತಾದವುಗಳಿಂದ ಪ್ರಯತ್ನ ಜಾರಿಯಿಟ್ಟರು..
ಎಷ್ಟು ? ಏಕೆ? ಹೇಗೆ ? ಕಲಿತರು ಎಂಬ ಜಿಜ್ಞಾಸೆ ಬದಿಗಿಟ್ಟು ಅವರ ಕಲಿಯುವ ಉತ್ಸಾಹಕ್ಕೆ ಅವರು ಕೇಳಿದಾಗಲೆಲ್ಲ ಕೈಲಾದಷ್ಟು ಸಹಾಯ ಮಾಡಿದ್ದು ಬಿಟ್ಟರೆ ನನ್ನ ಪಾತ್ರ ನಗಣ್ಯ..
ಇಂದಿಗೂ ಎಲ್ಲೇ ಭೇಟಿಯಾಗಲೀ ಬಗಲ ಚೀಲವೊಂದರಲ್ಲಿ ಟಿಪ್ಪಣಿ ಪುಸ್ತಕ,ಒಂದು ಪೆನ್ನು, ಸದಾ ಸಿದ್ಧವಾಗಿರುತ್ತದೆ..ಆಗಾಗ ಗೊತ್ತಾಗದ ವಿಷಯಗಳನ್ನು ಬರೆದಿಟ್ಟುಕೊಂಡು ನನ್ನ ಸಮಯಾನುಕೂಲ ಕೇಳಿಕೊಂಡು ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಾರೆ..ಹೊಸ ಪದವೇನಾದರೂ ನನ್ನಿಂದ ಪ್ರಯೋಗವಾದರೆ ತತ್ಷಣ note ಮಾಡಿಟ್ಟುಕೊಳ್ಳುತ್ತಾರೆ....ಭಾಷೆ ಕಲಿಯಲೆಂದೇ ಕನ್ನಡ channel ನೋಡುತ್ತಾರೆ...ಇತ್ತೀಚಿನ ಬೆಳವಣಿಗೆಯಂದರೆ.ತಮ್ಮ apartment ನಲ್ಲಿಯ ಇತರರಿಗೆ ವಾರಕ್ಕೆ ಮೂರು ದಿನ ಕನ್ನಡ class ತೆಗೆದುಕೊಳ್ಳುತ್ತಿದ್ದಾರೆ.. ಕಲಿಕೆ/ ಕಲಿಸುವಿಕೆ ಏಕ ಕಾಲಕ್ಕೆ...
ಅಂದಹಾಗೆ ಶ್ರೀ ಭಗಾಡೆಯವರಿಗೆ 74, ಅವರ ಶ್ರೀಮತಿಯರಿಗೆ 67... ಏನೋ ಅಸಾಧ್ಯವಾದುದನ್ನು ಸಾಧಿಸಿದ್ದಾರೆ ಎಂದು ನಾನು ಹೇಳುವದಿಲ್ಲ...ಅಂಥವರೆಲ್ಲಿದ್ದರೂ ,ಯಾವ ಮೂಲೆಯಲ್ಲಿದ್ದರೂ ನನ್ನದೊಂದು ಹಾರ್ದಿಕ ನಮನ...ಆದರೆ ಕನ್ನಡ ಬಂದೂ ಬಳಸದವರ,ಕನ್ನಡದವರೇ ಇದ್ದೂ ಭಾಷೆಯ ತಪ್ಪು/ ಒಪ್ಪುಗಳನ್ನು ಗಂಭೀರವಾಗಿ ಪರಿಗಣಿಸದ,ಕನ್ನಡವನ್ನು fashion ಹೆಸರಿನಲ್ಲಿ ತಿರುಚುವ,ಅಸಭ್ಯ ಅಸಂಸ್ಕೃತ ಭಾಷೆಯನ್ನು ಯಾವುದೇ ಎಗ್ಗಿಲ್ಲದೇ ಬಳಸಲು ಮುಂದಾಗುವ ನಮ್ಮಲ್ಲಿಯ ಜನರಲ್ಲೇ ಕೆಲವರನ್ನು ಕಂಡಾಗ ಇವರ ಬಗ್ಗೆ ಮನಸ್ಸು ತುಂಬಿ ಬಂದು ಅನುಭವ ಹಂಚಿಕೊಳ್ಳ ಬೇಕೆನಿಸಿತು..ಅಷ್ಟೇ...ಮತ್ತೇನಿಲ್ಲ..
No comments:
Post a Comment