ಹಾಗೇ ಸುಮ್ಮನೇ...
Thursday, 16 May 2019
ಬಯಲು ಆಲಯದೊಳಗೋ... ಆಲಯವು ಬಯಲೊಳಗೋ... ಮುಖ ಹೊತ್ತಿಗೆಯ ಬಹುತೇಕ ಓದುಗರಿಗೆ ಈಗಾಗಲೇ ಒಂದು ವಿಷಯ ಗಮನಕ್ಕೆ ಬಂದಿರಬಹುದು...ಈಗ 65 ರಿಂದ 75 ವಯಸ್ಸಿನವರೆಲ್ಲರ ಬಾಲ್ಯವೂ ಏಕರೂಪವಾಗಿತ್ತು ಎಂದು..ಗೊತ್ತಿಲ್ಲದವರು ಆ ವಯಸ್ಸಿನವರ post ಗಳನ್ನು ಹಾಗೂ comments ಗಳನ್ನು ಗಮನಿಸಿದರೆ ಒಂದು ಸಾಮ್ಯ ಎದ್ದುಕಾಣುತ್ತದೆ..ಎಲ್ಲರೂ ಆದಷ್ಟು ಮನೆಯಿಂದ ಹೊರಗೇ ಆಟವಾಡುತ್ತಿದ್ದುದು...ಇದ್ದವರು,ಇರದವರ ನಡುವೆ ಯಾವದೊಂದೂ ಅಂತರ ಕಾಣಿಸದೇ ಇರುವದು,ಮತ್ತೆ ಆದಷ್ಟು ಪ್ರಕೃತಿಯಲ್ಲಿ ಲಭ್ಯವಿದ್ದ ವಸ್ತುಗಳೆಲ್ಲವನ್ನೂ ಆಟಕ್ಕೆ ಬಳಸುವದು...ಆಡಲುಬೇಕಾದ ಸಾಮಾನುಗಳು ಪೇಟೆಯಲ್ಲಿಯೂ ದೊರೆಯಬಹುದೆಂಬ ಸಾಮಾನ್ಯ ಜ್ಞಾನಕ್ಕೂ ಹೊರತಾದ ಬಾಲ್ಯ...ಮಣ್ಣು,ಕಲ್ಲು,ದಂಟು,ಹುಣಿಚೆ, ಬೇವಿನ ಬೀಜ,ಗಜ್ಜುಗ, ಒಡೆದ ಬಳೆಚೂರುಗಳು,ಸೇಂಗಾ ಸಿಪ್ಪೆ,ಕಪ್ಪೆಚಿಪ್ಪು,ಏನೆಲ್ಲ ಸಿಗುತ್ತಿತ್ತೋ ಎಲ್ಲವನ್ನೂ ಬಳಸಿದ ಖ್ಯಾತಿ ನಮ್ಮದು...ಏನೂ ಆಟಿಗೆಗಳ ಅವಶ್ಯಕತೆಯೇ ಇಲ್ಲದ ಆಟಗಳಿಗೂ ಕಡಿಮೆ ಇರಲಿಲ್ಲ.. ಗಿಡ ,ಮರ ಹತ್ತಿ ಗಿಡಮಂಗನಾಟ,ಇಳಿಬಿದ್ದ ಟೊಂಗೆಗಳ ಹಿಡಿದು ಜೋಕಾಲಿ,ಬಳಸಿ ಒಗೆದ ಸೈಕಲ್ ಗಾಲಿಗೆ ಅಡ್ಡಕೋಲು ಕೊಟ್ಟು ಓಡಿಸುವದು,ಗಾಳಿಗೆ ಬಿದ್ದ ತೆಂಗಿನ ಗರಿಯ ಮೇಲೆ ಮಕ್ಕಳನ್ನು ಕೂಡಿಸಿ ಎಳೆಯುವದು ಅಬ್ಬಾ! ಏನೆಲ್ಲ ಮೇಧಾವೀ ತಲೆಗಳು...ಒಂದು ಕಲ್ಲಿನಾಟದಲ್ಲೂ ಹಲವಾರು ಬಗೆಯ ಆಟಗಳ ಶೋಧ...ಬಿಳಿದಾಗಿ ಗುಂಡಗಿರುವ ಕಲ್ಲು ಗಳನ್ನು ಕಟೆದು ಆಣಿಕಲ್ಲು ಆಡುವದು,ಅತಿ ಚಿಕ್ಕ ಕಲ್ಲುಗಳನ್ನು ಹುಲಿಮನೆ ,ಚೌಕಾಭಾರಕ್ಕೆ ಬಳಸುವದು,ಚಪ್ಪಟೆ ಕಲ್ಲುಗಳಿಂದ ಕುಂಟಲಪಿ,ಆಕಾರವೇ ಇಲ್ಲದ ಕಲ್ಲುಗಳ ಸಂಗ್ರಹಿಸಿ ಒಂದರಮೇಲೊಂದು ಇಟ್ಟು,ಬೇರೆ ಕಲ್ಲಿನಿಂದ ಹೊಡೆದುರುಳಿಸುವ ಲಗೋರಿ,ಒಂದೇ ಎರಡೇ...ನೆನೆಸಿದರೆ ಆಡಿದ ನಮಗೇ ಅಚ್ಚರಿಯಾಗಬೇಕು.. ನಿಸರ್ಗದ ಮಧ್ಯದ ವಸ್ತುಗಳಿಂದ ಆಡಿ ಸಿಕ್ಕ ಆನಂದವೂ ಪಕ್ಕಾ ನೈಸರ್ಗಿಕ...ಏನಾದರೂ ಬಿದ್ದು ಗಾಯವಾದರೆ ವೀಳೆದೆಲೆಯಂಥ ಯಾವುದೋ ಔಷಧೀಯ ಗುಣವಿರುವ ಎಲೆಗಳನ್ನು ತಿಕ್ಕಿ ರಸ ಗಾಯಕ್ಕೆ ಹಾಕಿದರೆ ಎರಡು ದಿನಗಳಲ್ಲಿಯೇ ಗಾಯ ಮಾಯ...ಇನ್ನು ಆಟಿಗೆ ಸಾಮಾನುಗಳನ್ನು ಸಂಗ್ರಹಿಸುವ,ಕಳೆದುಕೊಳ್ಳವ,ಮನೆಗೆ ಜೋಪಾನವಾಗಿ ಮನೆಗೆ ತರುವ ಗೋಜೇ ಇಲ್ಲ.ಎಲ್ಲಿ ಬೇಕೆಂದಲ್ಲಿ,ಯಾವಾಗೆಂದರೆ ಆವಾಗ , ಎಷ್ಟು ಬೇಕಾದಷ್ಟು, ಲಭ್ಯ...ಅನಂತವಾಗಿ, ಅನಾಯಾಸವಾಗಿ,ಅಕ್ಷಯವಾಗಿ ದೊರೆಯುತ್ತಿದ್ದ ಸರಕುಗಳೇ ಎಲ್ಲವೂ.. ಬಹುತೇಕ ಆಟಗಳು outdoor games ಗಳೇ...ಆಗಿನ್ನೂ ನರ್ಸರಿ,ಮಾಂಟೆಸರಿ,day care ಗಳಂಥ ಮಕ್ಕಳ ಜೇಲುಗಳು ಹುಟ್ಟಿರಲಿಲ್ಲ..ಆರು ವರ್ಷಗಳಿಗೆ ಶಾಲಾ ಜೀವನ ಪ್ರಾರಂಭ..ಆದರೆ ಸುಲಲಿತವಾಗಿ ನಡೆಯಲು ಬಂತೋ,ಯಾವ ಮಗುವೂ ಮನೆಯಲ್ಲಿ ಉಳಿಯುತ್ತಿಲಿಲ್ಲ..ಅಣ್ಣನೋ,ಅಕ್ಕನೋ ಹೊರಟರೆ ಗಾಳಿಪಟದ ಬಾಲಂಗಸಿಯಾಗಿ ರಸ್ತೆಗೆ ಬಂದೇ ಬಿಡುವದು..ಅಂಥ ಮಕ್ಕಳು ಆಡಲು ಹಟಮಾಡಿದರೆ ಒಂದು ವಿಶೇಷ ಹೆಸರು ಅವಕ್ಕೆ..'ಎಣ್ಣಿಗುಂಡಿ'.. 'ಆಟಕ್ಕುಂಟು..ಲೆಕ್ಕಕ್ಕಿಲ್ಲ' ಎಂಬುದರ ಬಳಕೆ ಆಗಲೇ ಬಂದಿರಬೇಕು, ದೊಡ್ಡಹುಡುಗರು ಪರಸ್ಪರ ಕಣ್ಣು ಹೊಡೆದು ಆ ಹುಡುಗನ ಆಟ ಲೆಕ್ಕಕ್ಕಿಲ್ಲ ಎಂಬ ನಿರ್ಣಯಕ್ಕೆ ಬರುತ್ತಿದ್ದರು...ಆಯಿತು ನಂಟರೂ ಉಂಡರು.. ಅಕ್ಕಿಯೂ ಉಳಿಯಿತು..ಎಂಬ ಲೆಕ್ಕ... ಯಾವ ನಿಯಮಗಳಿಲ್ಲದ,ಸ್ಪರ್ಧೆಗಳಿಲ್ಲದ, ಪ್ರಶಸ್ತಿ ,,ಅಷ್ಟೇಕೆ ಯಾವ ಬಿಗುಮಾನವೂ ಇಲ್ಲದ, ರೊಕ್ಕ,ಅಂತಸ್ತುಗಳು ಅಡ್ಡಬರದ,ಆಟಕ್ಕಾಗಿ ಆಟ,ಶುದ್ದ ಮನರಂಜನೆಗಾಗಿ ಆಟ, ದೇಹದ ಆರೋಗ್ಯಕಾಗಿ ಆಟ,ಸಮಾಜದ ಭಾಗವಾಗಿ ಮಕ್ಕಳನ್ನು ಬೆಳೆಸುವ ಆಟಗಳೀಗ ನೋಡಲೂ ಸಿಗುವದಿಲ್ಲ... ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುವ ಹಾದಿಯಲ್ಲೊಂದು JAIN FARM RESORT ಅಂತಿದೆ..ಒಂದು ದಿನದ ವಾಸ್ತವ್ಯಕ್ಕೆ ಒಬ್ಬರಿಗೆ ರೂ,3000/- ಅಲ್ಲಿ welcome drink ಇಂಗು ಮಜ್ಜಿಗೆ...ರೂಮು ಹುಲ್ಲುಹೊದಿಕೆಯ ಗುಡಿಸಲು...ಬೆಳಕು ಲಾಟೀನಿನದು,ಒಂದು round ಚಕ್ಕಡಿ ಸವಾರಿಗೆ 25/- ಅಲ್ಲಲ್ಲಿ ಬಯಲುಗಳಲ್ಲಿ ಕಲ್ಲು ಹಾಗಸುಗಳು, ಮೇಲೆ ತೆಂಗಿನ ಗರಿಗಳ ಥಾಟು...ನಡುನಡುವೆ ಬಾಯಾಡಿಸಲು ಕುರುದಿನಸುಗಳು, ಮಣ್ಣಿನ ಗಡಿಗೆಗಳಲ್ಲಿ ಅಂಥಿಂಥ ಕುರುದಿನಿಸುಗಳು...ರಾತ್ರಿ ಜಾನಪದ ಕಾರ್ಯಕ್ರಮ,ಕೋಲಾಟ,ಮುಂತಾದವು..ಜಾತಕ/ ಭವಿಷ್ಯ ಹೇಳುವವರು, ಮದರಂಗಿ ಬಳೆಯುವವರು,ಮೂಗು/ ಕಿವಿ ಚುಚ್ಚುವವರು ಎಲ್ಲರೂ.. ಇದ್ದುದನ್ನು ಬಿಟ್ಟು ಇರದುದರೆಡೆಗೆ ತುಡಿಯುವದೇ ಜೀವನ ಎಂಬ ಮಾತು ನೂರಕ್ಕೆ ನೂರು ನಿಜ,ಸುಗ್ರಾಸ ಉಣ್ಣುವಷ್ಟು ಗಳಿಸಿ ,ರಸ್ತೆ ತಿಂಡಿಗಳನ್ನು ತಿನ್ನುವದು,ಮನೆಯಲ್ಲಿ ಎರಡೆರಡು ಕಾರುಗಳಿದ್ದೂ ರೂಮಿನಲ್ಲಿ gadgets ಗಳೊಂದಿಗೆ ಬಂದಿಯಾಗುವದು,ನಾಲ್ಕು/ ಐದು bedrooms ಗಳ ಮನೆಗಳನ್ನು ಕಟ್ಟಿಕೊಂಡು ಅವುಗಳು ಮನೆಮಂದಿಗಳಿಗಿಂತ ಹೆಚ್ಚಾಗಿ maids ಗಳಿಗೆ ಬಳಕೆಯಾಗುವ ಅನಿವಾರ್ಯತೆ,cricket/ foot ball ನಂಥ ಆಟಗಳನ್ನೂ ರಿಮೋಟಾಧಾರಿತ computer game ಗಳನ್ನಾಗಿ ಮಾಡಿರುವದೂ ನೋಡಿದಾಗ ಮೇಲಿಂದ ಮೇಲೆ ಅಜಾರಿಬಿದ್ದು ದವಾಖಾನೆಗೆ ಹೋಗುವದು,ಸರಿಯಾಗಿ ಏನನ್ನೂ ತಿನ್ನಲಾಗದು ಎಂಬ ಪರಿಸ್ಥಿತಿ ಬರುವದರ ಕಾರಣ ಸ್ಪಷ್ಟ.. ಚಿಕ್ಕಾಸು ಖರ್ಚಾಗದ,ಹೆಚ್ಚು ಕಾಳಜಿವಹಿಸುವ ಕಾರಣವಿಲ್ಲದ,ಸಾಮಾಜಿಕ ಜೀವನದ ಭದ್ರ ಬುನಾದಿಯಾಗಿ ಮಗುವನ್ನು ತರಬೇತಿಗೊಳಿಸುತ್ತಿದ್ದ,ಬಡವ- ಬಲ್ಲಿದ ಭೇದ ತಲೆಗೆ ಬಿಲ್ಕುಲ್ ಇಳಿಯದ ಪರಿಶುದ್ಧ,ನಿಷ್ಕಳಂಕ,ಆನಂದಮಯ,ನಿಜವಾದ ಅರ್ಥದಲ್ಲಿ ಮಗುಮನಸ್ಸಿನ ಅಂದಿನ ಜೀವನ ದಿಂದ ಪಡೆದ ಸಂತೋಷ ಈಗಿನ ಮಕ್ಕಳಿಗೆ ಸಿಗದ ಬಗ್ಗೆ ನನಗೆ ಯಾವಾಗಲೂ ಒಂದು ಬಗೆಯ ಕನಿಕರ..
Subscribe to:
Post Comments (Atom)
*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...
-
ಬಿಂಬ-೧ ಗೆಲುವು... ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...
No comments:
Post a Comment