ಫೋನಾನುಬಂಧ...
ನಾನು ಸಾಮಾನ್ಯವಾಗಿ ನನ್ನ ಸ್ನೇಹಿತರು/ ಸಂಬಂಧಿಕರೆಲ್ಲರ ನಂಬರ್ಗಳನ್ನು ಹೆಸರು ಹಾಕಿಯೇ ಸಂಗ್ರಹಿಸಿದ್ದೇನೆ. ನೆನಪಿಡಲಾಗುವದಿಲ್ಲ ಎಂಬುದು ಮುಖ್ಯ ಕಾರಣವಾದರೂ ಈಗೀಗ ಯಾರು/ ಯಾವ ಸಂಖ್ಯೆಗಳಿಂದ
Fake calls ಮಾಡ್ತಾರೋ ಅನ್ನುವುದೂ ಒಂದು ಆತಂಕದ ಅಂಶ. ಮೂರನೇಯದಾಗಿ ಹೆಸರು ನೋಡಿ ಸಧ್ಯ ತೆಗೆದುಕೊಳ್ಳಲೇಬೇಕಾ? ಅರ್ಜೆಂಟ್ ಅಂತ ಇಲ್ಲದಿದ್ದರೆ ಕಾಯಬಹುದಾ? ಎಂಬುದೂ ತಿಳಿಯುತ್ತದೆ. ಆದರೆ Lock down ಆದಾಗಿನಿಂದ ನನ್ನ ಈ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ ವಾಗಿ ಹೋಗಿದೆ. ನಮ್ಮ ಹುಟ್ಟೂರಿನ ಬಾಲ್ಯದ ಗೆಳತಿಯರಿಂದ ಹಿಡಿದು, ನನ್ನ ಸಂಬಂಧಿಕರು, ಸಹೋದ್ಯೋಗಿಗಳು, ಪರಿಚಯಸ್ಥರು, ನಾವು ಇದ್ದು ಬಂದ ಎಲ್ಲ ಮನೆಗಳ ಹಳೆಯ ಸ್ನೇಹಿತೆಯರು ನೆನಪಿಸಿಕೊಂಡು, ಫೇಸ್ಬುಕ್ ನಲ್ಲಿ ನೋಡಿ, ಸ್ನೇಹಿತರ common friends' list ನಲ್ಲಿಂದ ಮಾಹಿತಿ ಪಡೆದು ಸಂಪರ್ಕಿಸುತ್ತಿದ್ದಾರೆ.ಒಂದು ವರ್ಷಕ್ಕೂ ಮೇಲ್ಪಟ್ಟು ಭೇಟಿಯಾಗದೇ, ಮಾತಾಡಲೂ ಆಗದೇ,ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂ ಆಗದೇ ಸದಾ ಒಂದು ರೀತಿಯ ಆತಂಕದಲ್ಲಿಯೇ ಅಕ್ಷರಶಃ ಏಕಾಂಗಿ ಬದುಕನ್ನು ಕಳೆಯುತ್ತಿರುವ ಎಲ್ಲರಿಗೂ ಹತಾಶ ಭಾವ ಕಾಡುವದು ತಾರಕ್ಕೇರುತ್ತಿದೆ.
ಮನೆಯಲ್ಲಿ ಜನವಿದ್ದರೂ ಎಲ್ಲರಿಗೂ ತಮ್ಮ ತಮ್ಮ ಆದ್ಯತೆಗಳ ಕಾರಣದಿಂದಾಗಿ ಒಬ್ಬರಿಗೊಬ್ಬರು ವೇಳೆ ಕೊಡಲಾಗುತ್ತಿಲ್ಲ.
ಇದೂ ಅನಿವಾರ್ಯತೆ ಎಂದು ಅಂದುಕೊಂಡರೂ ಅನಿಶ್ಚಿತತೆ ದಿನದಿಂದ ದಿನಕ್ಕೆ ಬೆಳೆಯುತ್ತಾ ದೀರ್ಘವಾಗುತ್ತಲೇ ಇರುವದೊಂದು ತೀರದ ಸಮಸ್ಯೆಯಾಗಿದೆ. ಕಾರಣ ಒಳಒತ್ತಡದ ಪರಿಹಾರೋಪಾಯವಾಗಿ ಈ ಕರೆಗಳು,(calls) ಎಂಬುದು ಸರ್ವವಿದಿತ... ಡಾಕ್ಟರುಗಳು/ ಮಾನಸಿಕ ತಜ್ಞರದೂ ಇದೇ ಅಭಿಪ್ರಾಯವಾಗಿದ್ದು ಅದು ಧನಾತ್ಮಕವಾಗಿ ಕೆಲಸ ಮಾಡುತ್ತಿದೆ. ಆ ಕಾರಣಕ್ಕಾಗಿಯೇ ಯಾವುದೇ ಕರೆ ಬಂದರೂ ತೆಗೆದುಕೊಂಡು ಅರ್ಜೆಂಟ್ ಇಲ್ಲದಿದ್ದರೆ / ನಾನು ವ್ಯಸ್ತಳಿದ್ದರೆ ಮತ್ತೆ ವೇಳೆ ತಿಳಿಸಿ ಕರೆ ಮಾಡುತ್ತೇನೆ. ಅದು ಉಭಯತರಿಗೂ refresh ಆದಂತೆ ಆಗುತ್ತದೆ. ಸಧ್ಯ ಬಹುತೇಕರಿಗೆ ಫೋನ್ ಆಪತ್ಭಾಂದವ/ ಆಪ್ತಮಿತ್ರ. ಮೊನ್ನೆ ಒಂದೇ ಒಂದು ಗಳಿಗೆ ಈ ಹೊತ್ತಿನಲ್ಲಿ phone ಎಂಬುದೇ ಇರದಿದ್ದರೆ ಎಂದು ಯೋಚಿಸಿದಾಗ ಅಕ್ಷರಶಃ ಬೆಚ್ಚಿಬಿದ್ದೆ. ಹೆಚ್ಚು ಆ ವಿಚಾರದಲ್ಲಿ ಕಳೆದುಹೋಗದೇ ಎಚ್ಚರಗೊಂಡೆ..
No comments:
Post a Comment