Wednesday, 20 February 2019

ಹಾಗೇ   ಸುಮ್ಮನೇ....

ಮುಚ್ಚಿದ ಕಣ್ಣುಗಳ ಹಿಂದೆ....

      ‌‌‌‌   ‌           ಅದು ೧೯೬೦-೬೧ ರ  ಸಾಲು...ನಾನಾಗ ಎಂಟನೇ ವರ್ಗದ ವಿದ್ಯಾರ್ಥಿನಿ...ನಮ್ಮ ಶಾಲೆ ಎರಡು -ಮೂರು ವರ್ಷಗಳ ಹಸುಗೂಸು...ನಮ್ಮದೇ ಎರಡನೇ ವರ್ಷದ batch ಎಂಬಂತೆ ನೆನಪು...ಮಾಧ್ಯಮಿಕ ಶಾಲೆ ಪ್ರಾರಂಭಿಸುವ ವಿಚಾರ ಬಂದಾಗ ಬಯಲಲ್ಲಿ ಆಡುವ ಹುಡುಗರನ್ನು ಕರೆದುಕೊಂಡು ಹೋಗಿ ಅವರ ವಯಸ್ಸಿಗನುಗುಣವಾಗಿ  ವರ್ಗಗಳಲ್ಲಿ ಕೂಡಿಸಿದ್ದರು..ಹೀಗಾಗಿ ನಮಗೆ ಶಾಲೆ 'ಜೇಲು' ಅನಿಸದೇ ಮನೆಯದೇ extended version
ಅನಿಸಿತ್ತು...ಅದಕ್ಕೆ ಶಾಲೆ ಎಂಬುದಕ್ಕಿಂತ ' 'ಪಡಸಾಲೆ' ಹೆಚ್ಚು ಸೂಕ್ತ ಹೆಸರು...
            ಶ್ರೇಣಿ,ರ್ಯಾಂಕ್,ಪ್ರಶಸ್ತಿ,ಸ್ಪರ್ಧೆಗಳೆಂಬ ಶಬ್ದಗಳು ನಮ್ಮ ಶಬ್ದಕೋಶದಲ್ಲಿರಲಿಲ್ಲ...ಕಾರ್ಯಕ್ರಮವೊಂದು ಮನೆಯಲ್ಲಿದ್ದರೆ ಮನೆಮಂದಿಯಲ್ಲ ಪಡಸಾಲೆಯಲ್ಲಿ ಹರಟುವದಿಲ್ಲವೇ...ಹಾಗೆ ಸನ್ನಿವೇಶವಿರುತ್ತಿತ್ತು..
          ‌‌‌        ಒಂದು ದಿನ ನಮ್ಮ ವಿಜ್ಞಾನದ ಗುರುಗಳ ಪಾಠ ನಡೆದಿತ್ತು..," ಕಣ್ಣುಗಳು ಹಾಗೂ ಅದರ ಕಾರ್ಯಗಳು' ಎಂಬುದು ವಿಷಯ..ಕರಿಹಲಿಗೆಯ ಮೇಲೆ ಎರಡು ಕಣ್ಣುಗಳು ಮೂಡಿದ್ದವು..ಅವರು ವಿವರಣೆ ಕೊಡುತ್ತಿದ್ದುದನ್ನು ನಾನು feel ಮಾಡುವದು ನಡೆದಿತ್ತು...ನಾನು ಸರ್ ಗೆ ಒಂದು ಪ್ರಶ್ನೆ ಕೇಳಿದೆ.." ಕಣ್ಣು camera ಇದ್ದಹಾಗೆ ಎಂದರೆ ಎರಡು ಕಣ್ಣುಗಳಿಗೆ  ಎರಡೆರಡು ಬಿಂಬಗಳು ಕಾಣಬೇಕು..ಒಂದೇ ಏಕೆ? " ಎಂದು..ಅವರೇನು ಉತ್ತರಿಸಿದರು ಎಂಬುದಿಲ್ಲಿ ಅಪ್ರಸ್ತುತ..ಮೇಲೆದ್ದು ಎರಡನೇ ಪ್ರಶ್ನೆ ತೂರಿದೆ,"ಬಲಗಣ್ಣು ಮುಚ್ಚಿದರೆ ಎಲ್ಲ ಸ್ಪಷ್ಟವಾಗಿ
ಕಾಣುತ್ತದೆ..ಅದೇ ಎಡಗಣ್ಣು ಮುಚ್ಚಿದರೆ ಏಕೆ ಕಾಣುವದಿಲ್ಲ?? "ಎಂದು..
      ‌‌‌‌‌    ‌‌    ‌‌ಸರ್ ಬೆಚ್ಚಿ ನನ್ನನ್ನು ತಮ್ಮ ಬಳಿ ಕರೆದು board ಮೇಲೆ ಬರೆದದ್ದು ಓದಲು ಹೇಳಿದರು...ಬಲಗಣ್ಣು ಮುಚ್ಚಿ ಕ್ಷಣಾರ್ಧದಲ್ಲಿ ಓದಿ ಮುಗಿಸಿದೆ..ಎಡಗಣ್ಣು ಮುಚ್ಚಿದಾಗ ಎಲ್ಲ ಸಾರಿಸಿದ ಹಾಗಿತ್ತು..ಆಗಲಿಲ್ಲ..ಮರುದಿನ ಸರ್ ಯಾರಾದರೂ ದೊಡ್ಡವರನ್ನು ಕರೆದುಕೊಂಡು ಬಾ ಅಂದರು..ಮನೆಗೆ ಹೋಗಿ ಸುದ್ದಿ ಹೇಳಿದೆ.
   ‌‌‌‌‌     ‌‌‌‌        ‌‌‌ಏಳು ಮಕ್ಕಳಲ್ಲಿ ನಾನು ನಾಲ್ಕನೇಯವಳು..ಹಿರಿಯರ ಜವಾಬ್ದಾರಿಯೂ ಇಲ್ಲ..ಕಿರಿಯರ ಅಕ್ಕರೆಯೂ ಇಲ್ಲ..ಯಾರೂ ನನ್ನನ್ನು ಗಂಭೀರವಾಗಿ ಪರಿಗಣೇಸಲೇಯಿಲ್ಲ..ಮತ್ತೊಮ್ಮೆ ಹೇಳಿದೆ..ನನ್ನ ಹಿರಿಯಣ್ಣ ತಮಾಷೆ ಮಾಡಿದ," ನಿಂಗ ಚಾಳೀಸ ಹಕ್ಕೊಂಡು ಸಾಲ್ಯಾಗ ಡೌಲು ಬಡೀಬೇಕಾಗೇದ ..ನಾವ್ಯಾರೂ ಬರೂದಿಲ್ಲ..ಒಂದ ಕಣ್ಣು ಸರಿ ಅದನೋ ಇಲ್ಲೋ
  ..ಸಾಕು ಹೋಗು..ಮುಂದ ನೋಡೋಣಂತ.."ಅಷ್ಟೇನೂ ಅನುಕೂಲಸ್ಥರಲ್ಲದ ನಮಗೆ ಅದು ಅನಿವಾರ್ಯವಾಗಿತ್ತು...ಅಲ್ಲದೇ ಆ ಕಾಲದಲ್ಲಿ ಚಿಕ್ಕ ಪುಟ್ಟ ತಕರಾರಿಗೆ ಯಾರೂ ಡಾಕ್ಟರರ ಹತ್ತಿರ ಹೋಗುವದು ತುಂಬಾನೇ ಅಪರೂಪ..ಅಲ್ಲದೇ ಸಮಸ್ಯೆಯ ಗಂಭೀರತೆಯ ಅರಿವೂ ಆಗದಿರುವ ಸಾಧ್ಯತೆಯುಂಟು...

ಮತ್ತೆರೆಡು ವರ್ಷಗಳು ಉರುಳಿ ಓದುವದು ಹೆಚ್ಚಾದಾಗ ಧಾರವಾಡದಲ್ಲಿ ತೋರಿಸಲೇ ಬೇಕಾಯಿತು..
             ಸುಧೀರ್ಘ ತಪಾಸಣೆಯ ನಂತರ  ಗೊತ್ತಾದದ್ದು...ಈ ತಕರಾರು ಬಹಳ ಹಿಂದಿನದು..ಚಿಕ್ಕವಳಿದ್ದಾಗಲೇ ಏನೋ ಪೆಟ್ಟು ಇಲ್ಲವೇ ತೀವೃ ಜ್ವರಬಾಧೆಯಿಂದ ಕಣ್ಣಿನ ಸುತ್ತಮುತ್ತಲಿನ ನರಗಳು ಬಲ ಕಳೆದುಕೊಂಡಿವೆ..ಏನೂ ಮಾಡಲಾಗದು"
               ‌ಅಲ್ಲಿಗೆ ನಾನು ಶುಕ್ರಾಚಾರ್ಯರ ಮೊಮ್ಮಗಳು...ಪಟೌಡಿ ನವಾಬನ ಸಂಬಂಧಿಯಾದೆ..ಇನ್ನೊಂದು ಕಣ್ಣು ಪ್ರತಿಶತ ಇಪ್ಪತ್ತು ಮಾತ್ರ ಉಪಯೋಗ..ಆದರೆ ಓದು ಬರಹಕ್ಕೆ ಉಪಯೋಗವಿಲ್ಲ ಎಂಬುದನ್ನು ಅರಗಿಸಿಕೊಳ್ಳಲೇ ಬೇಕಾಯ್ತು...ಅದೃಷ್ಟವೆಂದರೆ ಇನ್ನೊಂದು ಕಣ್ಣು ಪರಿಪೂರ್ಣವಾಗಿ fit ಇದ್ದು ಎರಡರ ಕೆಲಸವನ್ನೂ ಸಂಭಾಳಿಸಿದೆ...ನನ್ನ ಕಣ್ಣಲ್ಲವೇ?!!..ನನ್ನಂತೆಯೇ ಕಿರಿವಯಸ್ಸಿಗೆ' ಸಾಥಿ' ಯನ್ನು ಕಳೆದುಕೊಂಡರೂ ಏಕಾಕಿಯಾಗಿ ಎರಡರದೂ ಜವಾಬ್ದಾರಿ ನಿಭಾಯಿಸಿ ದಡ ಮುಟ್ಟಿಸಿದೆ...
        ‌‌ಈಗ ನನಗೆ ಮಧುಮೇಹದ ತಕರಾರು..ಪ್ರತಿವರ್ಷ ಕಣ್ಣಿನ‌ ತಪಾಸಣೆ ಆಗಲೇಬೇಕು..ಮೊನ್ನೆ ಹೋದಾಗ ಕಣ್ಣಿಗೆ drops ಹಾಕಿ ನಲವತ್ತು ನಿಮಿಷ ಕಣ್ಮುಚ್ಚಿ ಕಾಯಲು ಹೇಳಿದಾಗ 'ಮುಚ್ಚಿದ 'ಕಣ್ಣುಗಳ ಹಿಂದೆ ' ಬಿಚ್ಚಿಕೊಂಡ ರೀಲು ಇದು..

       ‌           ‌‌‌‌  ‌‌‌‌
.

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...