Sunday, 10 February 2019

ಹಾಗೇ ಸುಮ್ಮನೇ...
Un honoured_ Un sung_
Heroes/ heroines...
                2015 ನೇ ಇಸ್ವಿ...ಹೊಸಮನೆ ಖರೀದಿಸಿ ಅಲ್ಲಿಗೆ shift ಆಗುವ ಬಗ್ಗೆ ವಿಚಾರ ನಡೆದಿತ್ತು..ಹೊಸ ಕಾಲನಿ ...ಇನ್ನೂ ಬಹಳಷ್ಟು  ಮನೆಗೆ ಜನ ಬಂದಿರಲಿಲ್ಲ.ಹೀಗಾಗಿ ಮನೆಗೆಲಸದವರ ವ್ಯವಸ್ಥೆ ಇಲ್ಲಿಂದಲೇ ಮಾಡ
ಬೇಕಿತ್ತು..ಸರಿ..ಬಹಳ ದಿನಗಳಿಂದ ಒಂದು ಮನೆಯಲ್ಲಿ ಕೆಲಸ ಮಾಡುವವಳೊಬ್ಬಳನ್ನು ವಿಚಾರಿಸಲಾಗಿ ಹದಿನೈದು ದಿನ ಕಾದರೆ ತನ್ನ ಅಣ್ಣ , ಅತ್ತಿಗೆಯನ್ನೇ ಕರೆಸುತ್ತೇನೆ ಅಂದಳು..ಆಯ್ಕೆಯಿರಲಿಲ್ಲ..ಕಾದದ್ದಾಯಿತು..ಅವಳು ಬಂದದ್ದೂ ಆಯ್ತು...
                   ಮೊದಲ ಬಾರಿ ಊರು ಬಿಟ್ಟು ಬಂದವಳು..ಅದೂ ಬೆಂಗಳೂರಿಗೆ...ಶಾಲೆಯ ಮುಖ ನೋಡಿದವಳಲ್ಲ..ಹೊರಗೆ ಕೆಲಸಕ್ಕೆ ಹೋದವಳಲ್ಲ..ಪುಟ್ಟ ಮನೆ,ಒಂದು ತುಂಡು ಜಮೀನು ಹೇಗೋ ಸಂಭಾಳಿಸಿಕೊಂಡು ಮನೆ ನಡೆಸಿದವಳು..ಈಗ ಮೂರು ನಾಲ್ಕು ವರ್ಷಗಳಿಂದ ಮಳೆಯಿಲ್ಲ...ಸಾಲ ಪಡೆದು ತೆಗೆಸಿದ ಬೋರಿನ ಬಾವಿಗಳಲ್ಲಿ  ಇದ್ದು ಬಿದ್ದ ನೀರು ಇಂಗಿಹೋಗಿದೆ.ವರುಷದ ಹಿಂದೆ ಮೊದಲ ಮಗಳ ಮದುವೆಯಾಗಿದೆ...ಮೈತುಂಬ ಸಾಲ...ತೀರಿಸುವ ಹಾದಿ ಸುಗಮವಿಲ್ಲ..ಸಾಲು ಸಾಲು ರೈತರ ಆತ್ಮಹತ್ಯೆಗಳು ಎಲ್ಲರನ್ನೂ ಕಂಗೆಡಿಸಿದ ವೇಳೆಯದು...
           ‌ನಾನೂ ಕೆಲ ಪರಿಚಯದವರ ಮನೆಗೆಲಸ ಕೊಡಿಸಿದೆ...ಹದಿನೈದು ಸಾವಿರ ಸಿಗತೊಡಗಿತು...ಇಡೀದಿನ ಕೆಲಸ...ದೂರುವಂತಿಲ್ಲ..ಪೈ ಪೈ ಕೂಡಿಸಿ ವೃತವೆಂಬಂತೆ ಸಾಲಕ್ಕೆ ಕಟ್ಟತೊಡಗಿದಳು...ಆದರೆ ಖಾಸಗಿ ಸಾಲಕ್ಕೆ ಬಡ್ಡಿ ಬಹಳವಿದ್ದ ಕಾರಣ ಎಷ್ಟು ತುಂಬಿದರೂ ಬಡ್ಡಿ ಮಾತ್ರ ತುಂಬಿದಂತಾಗಿ ಅಸಲು ಯಥಾ ಪ್ರಕಾರ ಹಾಗೇ ಉಳಿಯುತ್ತಿತ್ತು...ನಾನು ವಿಚಾರಮಾಡಿದೆ.ಆಪತ್ಕಾಲಕ್ಕೆಂದು ಇಟ್ಟ FD ಗೆ
ಅತಿ ಹೆಚ್ಚೆಂದರೆ 7./.ಬಡ್ಡಿ.. ಒಂದೆರಡು ವರ್ಷ ಬಿಟ್ಟುಕೊಟ್ಟರೆ  ಅತಿಯಾದ ಹಾನಿಯೇನೂ ಅಲ್ಲ...ಆದರೆ ಸಾಲ ತೀರಿದರೆ ಅವಳಿಗಾಗುವ ಬಡ್ಡಿಯ ಉಳಿತಾಯ ಗಣನೀಯ..ಹೀಗೆಂದು ನಾವೆಲ್ಲ ಯೋಚಿಸಿ ಅವಳ ಒಬ್ಬಿಬ್ಬರು ಜನರನ್ನು ಕೂಡಿಸಿ  ಕೆಲವು ಚಿಕ್ಕ ಪುಟ್ಟ ಕರಾರು ಹಾಕಿ ನಾವು ಮಾಡಬೇಕೆಂದ ಸಹಾಯದ ಬಗ್ಗೆ ಹೇಳಿದಾಗ ಅವಳಿಗೆ ತುಂಬಾನೇ ಸಂತೋಷವಾಯಿತು..
                    ಆ ಮಾತಿಗೀಗ  ಎರಡೂವರೆ, ಮೂರು ವರ್ಷಗಳಾಗುತ್ತ ಬಂತು...ನಮ್ಮ ಮನೆಗವಳು ಬಂದು ನಾಲ್ಕು ವರ್ಷಗಳಾಗುತ್ತವೆ ಬರುವ April ಗೆ...ಒಂದು clear ಆದಮೇಲೆ ಇನ್ನೊಂದು ತೀರಿಸುತ್ತಿದ್ದಾಳೆ ಅಖಂಡವಾಗಿ...ಪೂರ್ತಿ ವಿಶ್ವಾಸ ಬಂದಿದೆ ಬದುಕಿನ ಬಗ್ಗೆ...ಒಂದು ಪೈಸೆ ಹೆಚ್ಚು ಬಂದರೂ ಕೂಡಿಟ್ಟು ಸಾಲಕ್ಕೆ  ತುಂಬುತ್ತಾಳೆ..ಇನ್ನು ಮೂರು - ನಾಲ್ಕು ತಿಂಗಳಿಗೆ ಸಂಪೂರ್ಣ ಋಣಮುಕ್ತಳಾಗುತ್ತಾಳೆ...ಈಗಲೇ ಚಿಕ್ಕ ಪುಟ್ಟ ಕನಸುಗಳು ಕಣ್ಣು ತುಂಬತೊಡಗಿವೆ....ಮಗನ ಮದುವೆ,ಬೆಂಗಳೂರಿನಲ್ಲೊಂದು ಪುಟ್ಟ ಮನೆ ಹೀಗೆ....ಮನೆ ಮಗಳಿಗಿಂತ ಹೆಚ್ಚಾಗಿ ನಡೆದುಕೊಳ್ಳುತ್ತಿದ್ದಾಳೆ..ಈ ಮೂರು ವರ್ಷಗಳಲ್ಲಿ ಒಂದು ತಿಂಗಳೂ ಮನೆಗೆ ತನ್ನ ದುಡಿತದ ದುಡ್ಡು ಒಯ್ದಿಲ್ಲ..ಗಂಡನ  ಅಷ್ಟಿಷ್ಟು ದುಡಿಮೆಯಲ್ಲಿ ಮನೆ  ತೂಗಿಸಿ  ನಾಳೆಗಳನ್ನು ಕಟ್ಟಿಕೊಳ್ಳುತ್ತಿದ್ದಾಳೆ..
                   ನಮಗಾದ  ಲೆಕ್ಕಕ್ಕಿಲ್ಲದ ಸ್ವಲ್ಪು ಬಡ್ಡಿಹಣದ ಲುಕ್ಸಾನು ಬಿಟ್ಟರೆ ಅವಳಿಗಾದ ಲಾಭ, ಅದರಿಂದ ನಮಗೆ ಸಿಕ್ಕ  ಸಮಾಧಾನಕ್ಕೆ ಬೆಲೆ ಕಟ್ಟಲಾದೀತೆ??ಹಣ ತರಬಹುದು..ಬೆಂಗಳೂರಿನಂಥ ಮಹಾನಗರದಲ್ಲಿ  ವಿಶ್ವಾಸವೆಲ್ಲಿಂದ ತರುವದು..!?
ಅದು ನಮಗೆ ಸಿಕ್ಕಿದೆ...ಅದೂ ಒಬ್ಬ  ಶಾಲೆಯ ಮೆಟ್ಟಿಲು ಕಂಡಿರದ ,ಹಳ್ಳಿಯ,ಬಡಕುಟುಂಬದ ' ಹೃದಯ  ಶ್ರೀಮಂತ' ಹೆಣ್ಣುಮಗಳೊಬ್ಬಳಿಂದ...ಈಗ    ಅವಳಿಲ್ಲದೇ ನಮ್ಮ ಮನೆ ನಡೆಯುವಂತಿಲ್ಲ ಎಂಬಷ್ಟು ಮನೆಯವಳಾಗಿದ್ದಾಳೆ..
                 ಇಂದು ಮುಂಜಾನೆ paper ಪುಟ ಬಿಚ್ಚಿದೊಡನೆ ವಿಜಯ ಮಲ್ಯನ ಸುದ್ದಿ...ಹಿಂದಿನಿಂದಲೇ ನೀರವ ಮೋದಿ,ಲಲಿತ ಮೋದಿ,ಸತ್ಯಂನ ಮಹಾಲಿಂಗಂ,_42000 ಕೋಟಿ ಸಾಲಮಾಡಿಕೊಂಡು ದಿವಾಳಿ ಅರ್ಜಿ ಗುಜರಾಯಿಸುತ್ತಿರುವ ಅನಿಲ ಅಂಬಾನಿ ಎಲ್ಲ ವಂಚಕರ ಸಾಲು ಸಾಲು ಪಟ್ಟಿ ನೆನಪಿಗೆ ಬಂದು 
ಕಣ್ಣು ಕತ್ತಲೆಯಿಟ್ಟಾಗ ನಡುವೆ ಹೊಳೆದ ಮಿಂಚಿನ ಬೆಳಕು ಇದು...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...