ಹಾಗೇ ಸುಮ್ಮನೇ...
ನಾನು ಹಳ್ಳಿಯ ಹಿನ್ನೆಲೆಯಿಂದ ಬಂದ ಹುಡುಗಿ ಎಂದು ಹಲವುಬಾರಿ ಹಿಂದೆಯೇ ಹೇಳಿದ್ದೇನೆ.ಗಾಂಧಿಜಿಯವರು ಸದಾಕಾಲ ಹೇಳುತ್ತಿದ್ದ simple living ನಮ್ಮದು..'ಆದರ್ಶ'ಕ್ಕಾಗಿ ಅಲ್ಲ.. 'ಅಭಾವ'ಕ್ಕಾಗಿ..' ಅನಿವಾರ್ಯಕ್ಕಾಗಿ...ನಮ್ಮಲ್ಲಿ ಬಟ್ಟೆಗಳಿಡುವ ಕಪಾಟುಗಳಿರಲಿಲ್ಲ..ಏಕೆಂದರೆ ಇಡಲು ಬಟ್ಟೆಗಳಿರಲಿಲ್ಲ...ಒಂದು ಮೈಮೇಲೆ..ಇನ್ನೊಂದು ಕೋಲಮೇಲೆ...ಶಾಲೆಯೆಂಬ ಶಬ್ದ ಅಂಗಳದಲ್ಲಿ ಆಡಿಕೊಂಡಿದ್ದ ನಮ್ಮನ್ನು ದರದರ ಎಳೆದೊಯ್ದು ಒಂದು ಹಾಳು ಬಿದ್ದ ಗುಡಿಯಲ್ಲೋ, ಮನೆಯಲ್ಲೋ ಕೂಡಿ ಹಾಕಿದಾಗಲೇ ಕೇಳಿದ್ದು...ಇನ್ನು 'ಹುಟ್ಟು 'ಯಾವಾಗಲೂ ' ಹಬ್ಬ ' ಎನಿಸುತ್ತಿದ್ದುದು ಮಾತ್ರ ನಿಜ...ಯಾಕೆಂದರೆ ಕುಟುಂಬ ಯೋಜನೆ ಎಂಬ ಮಾತು ಮನೆಯವರೆಗೆ ಬಾರದ ದಿನಗಳವು...ಹೋಗುವವವೆಲ್ಲ ಹೋಗಿ ಉಳಿದ ಐದು ಹೆಣ್ಣುಮಕ್ಕಳು,ಮೂರು ಜನ ಗಂಡು ಮಕ್ಕಳ ಹುಟ್ಟಿದ ದಿನವನ್ನು ಮುಂದೆ ಬರಬಹುದಾದ,ಹಬ್ಬವೊಂದನ್ನು ಆರಿಸಿ ಒಂದು ಸಿಹಿ ಮಾಡುವದು ಕಡ್ಡಾಯ ಎಂಬಂಥ ದಿನಗಳನ್ನು ಆಯ್ದುಕೊಂಡೇ ಮಾಡುವಂಥ ಅನಿವಾರ್ಯತೆ...ನೆತ್ತಿಗೆ ಒಂದು ಬೊಟ್ಟು ಎಣ್ಣೆ ಹಿರಿಯರು ಕೂಡಿಸಿ 'ಹಚ್ಚಿ' ಹರಸಿದರೆ ಅಲ್ಲಿಗೆ ಮುಗಿಯಿತು ಸಂಭ್ರಮ...
" ಕಲ್ಲು ಖಣಿ( ಗಣಿ) ಯಾಗು...
" ಕರಕಿ ಬೇರಾಗು.." ( ಜಿಗುಟುತನ) "ಆಯಷ್ಯವಂತೆಯಾಗು"
"ಭಾಗ್ಯ ವಂತೆಯಾಗು.."
ಇಂಥ ಬಾಯಿ ತುಂಬ ಮಾಡುವ ಹರಕೆಗಳ ಅರ್ಥಕೂಡ ಅರಿಯದ ಮುಗ್ಧತೆ..ಆದರೆ ಒಂದು ಮಾತು..ಈ ತರಹದ ಜೀವನ ಹೊರತು ಪಡಿಸಿ ಬೇರಿನ್ನೇನೋ
ಬೇಡುವ ಬಯಕೆ ಕೂಡ ಬರುತ್ತಲೇಯಿರಲಿಲ್ಲ ಮನಸ್ಸಿಗೆ ಅಂದರೆ ನಂಬಬೇಕು ನೀವು...
ಕಾಲ ಬದಲಾಯಿತು.. ತಕ್ಕಂತೆ ನಾವೂ ಬದಲಾದೆವು..ಧಾರವಾಡ, ಬೆಂಗಳೂರು ಅನ್ನುತ್ತನ್ನುತ್ತಲೇ ಅಮೆರಿಕಾ, ಇಂಗ್ಲಂಡ್,ಪ್ಯಾರಿಸ್,ದುಬೈ ,ಸಿಂಗಾಪುರ,ದಂಥ ಒಂಬತ್ತು ದೇಶಗಳನ್ನು ಮಕ್ಕಳ ಪುಣ್ಯದಿಂದ ಸುತ್ತಾಡಿ ಒಂದನ್ನು ಸೇರಿಸಿ ಹತ್ತು ಮಾಡಿ ಮುಗಿಸುವ ಹಂಬಲದಲ್ಲಿದ್ದೇನೆ.ಇದನ್ನು ಹೇಳಲು ಕಾರಣವುಂಟು..ಊರಮುಂದಿನ ಓರ್ವ ತಿರುಕ ಧರ್ಮಶಾಲೆಯಲ್ಲಿ ಆನೆಯಿಂದ ಮಾಲೆ ಹಾಕಿಸಿಕೊಂಡ ಕನಸು ಕಂಡಿದ್ದ...ನಾವು ಅಂಥ ತಿರುಕನ ಕನಸಿಗೂ ಹೊರತಾದ ಮಂದಿ ..ನಮ್ಮಣ್ಣ ವಾರದ ಹುಡುಗನಾಗಿದ್ದವ ಒಂದು ಬಹುಮಹಡಿಯ ಕಾಲೇಜು ಕಟ್ಟುವ ಕನಸೊಂದನ್ನು ಅದಾವಾಗ ಮನಸ್ಸಿನಲ್ಲಿ ಕಾಪಿಟ್ಟು ಕೊಂಡಿದ್ದನೋ ಅದನ್ನು ನೀರೆರೆದು ಪೋಷಿಸಿ ಬೆಳೆಸಿದ್ದನೋ ಯಾರೂ ಅರಿಯರು..ಅವನ ಬಿಡುವಿರದ ದುಡಿತ,ಬೆವರಿನ ಬೆಲೆ ,ಆಧಾರ,ಅರ್ಹತೆ,ಅಂತಃ ಕರಣ ಗಳು ಮಾಡಿದ ಬಹು ದೊಡ್ಡ " ಪವಾಡ" ವಿದು..
ನಿನ್ನೆಯ ನನ್ನ ಹುಟ್ಟುಹಬ್ಬದ ಶುಭಾಶಯಗಳು ಸುನಾಮಿಯೋಪಾದಿಯಲ್ಲಿ ಬರುವದು ಇನ್ನೂ ನಿಂತಿಲ್ಲ...ದೂರ ದೂರದ ದೇಶಗಳಲ್ಲಿರುವ ಮಕ್ಕಳು ತಮ್ಮ ಹಗಲು - ರಾತ್ರಿಯ ಅಂದಾಜಿನಲ್ಲಿ ಮೂರುದಿನಗಳಿಂದ ಹಾರೈಕೆ ಕಳಿಸುತ್ತಲೇ ಇದ್ದಾರೆ...ಬರುತ್ತಲೇ ಇವೆ..
ಅದೇ hang over ನಲ್ಲಿ ಇರುವ ನಾನು, ಮಕ್ಕಳು ಕೊಟ್ಟ ಆರಾಮಕುರ್ಚಿಯಲ್ಲಿ ಕುಳಿತು ,ಅವರೇ ತಂದ mug ನಲ್ಲಿ ಕಾಪಿ ಹೀರುತ್ತ, ನೆನೆದ ಹುಟ್ಟುಹಬ್ಬಗಳ ಸುಂದರ saga ಇದು..
No comments:
Post a Comment