Friday, 15 June 2018

ಹಾಗೇ ಸುಮ್ಮನೇ.....


               ನಾವು ಈಗಿರುವ ಮನೆಗೆ ಬಂದು ಮೂರು ವರ್ಷ,ಮೂರು ತಿಂಗಳುಗಳು..ಬರುವ ಮೊದಲೇ builders ಮನೆಯ ಹಿತ್ತಲಿನಲ್ಲಿ( ಮನೆಯ ಹಿಂಭಾಗದ ಖಾಲಿ ಜಾಗ)
ಎಲ್ಲ ವಿಲ್ಲಾಗಳಲ್ಲಿಯೂ ಕೆಲವೊಂದು ಒಂದೇ ರೀತಿಯ ಗಿಡಗಳನ್ನು ನೆಟ್ಟಾಗಿತ್ತು..ಅವು ಯಾವವು? ಯಾವ ರೀತಿಯಲ್ಲಿ ಬೆಳೆಯುತ್ತವೆ ಎಂಬ ಅಂದಾಜಿಲ್ಲದ ನಾವು ನಮಗೆ ಬೇಕಾದ ಕೆಲವು ಹೂವು,ಹಣ್ಣುಗಳ ಗಿಡಗಳನ್ನು ನಮ್ಮದೇ ಅಂದಾಜಿನಲ್ಲಿ ಹಾಕಿಕೊಂಡಿದ್ದೆವು...ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹುಲುಸಾಗಿ ಬೆಳೆದ ಗಿಡಗಳು ಹೊಸ ಮಣ್ಣಿನಲ್ಲಿ ದಟ್ಟವಾಗಿ ಬೆಳೆದ ಪರಿಯೊಂದು ವಿಸ್ಮಯ...ಅದರ ಜೊತೆಜೊತೆಗೆ ಪುಟ್ಟದೊಂದು ಸಮಸ್ಯೆ ನಮಗರಿವಿಲ್ಲದೇನೇ ದೊಡ್ಡದಾಗತೊಡಗಿದ್ದು ಕ್ರಮೇಣ ಗಮನಕ್ಕೆ ಬಂತು...
                    ಸಮೃದ್ಧವಾಗಿ  ಮರದಾಕಾರದಲ್ಲಿ ಬೆಳೆದ ಗಿಡಗಳ ಅಡಿಯಲ್ಲಿ ನಾವು ಹಚ್ಚಿದ ಯಾವುದೇ ಹೂವು,ಹಣ್ಣಿನ ಗಿಡಗಳು ಬೇಕಾದಷ್ಟು ಗಾಳಿ, ಬೆಳಕು ಸಿಗದೇ ಕುಬ್ಜವಾಗಿಯೇ ಉಳಿದವು...ಆ ಸಮಸ್ಯೆ ಇಲ್ಲದ ಕಡೆ ಬೆಳವಣಿಗೆ ತೃಪ್ತಿಕರವಾಗಿತ್ತು...
                   ‌‌ ದೊಡ್ಡ ಗಿಡಗಳನ್ನು ಕತ್ತರಿಸಬೇಕು ಇಲ್ಲವೇ ಸಣ್ಣ ಗಿಡಗಳ ಜಾಗ ಬದಲಿಸಬೇಕು...ಹಾಗೆ ಬದಲಿಸಿದ ಗಿಡಗಳು ಬೇಳೆದೇ ತೀರುವ ಭರವಸೆಯೊಂದು ಸಿಗಬೇಕು.
ಎರಡಕ್ಕೂ ಮನಸ್ಸು ಬಾರದು...ಮಧ್ಯಮ ದಾರಿಯೊಂದು ಹಿಡಿದು ಕೆಲ ಗಿಡಗಳ ಹೆಚ್ಚುವರಿ ಭಾಗ ಕತ್ತರಿಸಿ,ಕೆಲ ಗಿಡಗಳ ಜಾಗ ಬದಲಿಸಿ ನಿನ್ನೆ ಒಂದು ಸಮಾಧಾನ ಕಂಡುಕೊಂಡದ್ದಾಯಿತು...
                   ಈ ಘಟನೆಯಿಂದ ನನ್ನ ಬಹುದಿನಗಳ ಸಮಸ್ಯೆಗೊಂದು ಉತ್ತರ ಸಿಕ್ಕಿತು...ಪರಿವಾರದಲ್ಲಿ ಅಪ್ರತಿಮ ಪ್ರತಿಭೆಯೊಂದು ಬ್ರಹತ್ ಆಕಾರದಲ್ಲಿ ಬೆಳೆದರೆ  ಆ ಕುಟುಂಬದ ಇನ್ನಿತರರ ಪ್ರತಿಭೆ ತುಲನೆಯ ಭಾರಕ್ಕೆ ಸಿಕ್ಕು ಒತ್ತಡ ಅನುಭವಿಸುವದು ಸಾಮಾನ್ಯವಾಗಿ ಬಿಡುತ್ತದೆ.ಲತಾ ಮಂಗೇಶ್ಕರ್, ಅವರ ಸಹೋದರಿಯರು,ಅಮಿತಾಬ್ ಬಚ್ಚನ್,ಅಭಿಷೇಕ ,ಇಂಥ ಉದಾಹರಣೆಗಳು ಚರ್ಚೆಗಳಲ್ಲಿ  ಆಗಾಗ ಬರುವದನ್ನು ನಾವು ಕಂಡಿದ್ದೇವೆ...
                  ಇನ್ನೂ ಒಂದು ವಿಷಯ..ದಟ್ಟವಾದ ನೆರಳನ್ನು over protection ಗೆ ಸಮೀಕರಿಸಿದರೂ ಅತೀಪ್ರೀತಿ,ಮುಚ್ಚಟೆ,ಆಶ್ರಯಗಳು ಅವಲಂಬಿತರ ಮುಕ್ತ ಬೆಳವಣಿಗೆಗೆ ಅಡ್ಡಿಯಾಗುತ್ತವೆ ಎಂಬ ವಿಷಯ...ಒಂದು ರೀತಿಯ ಅತಿಯಾದ ಕಾಳಜಿ ಬೆಳವಣಿಗೆಯ ವೇಗಕ್ಕೆ ಎಲ್ಲೋ ನಿಯಂತ್ರಣ ಒಡ್ಡುತ್ತದೆ ಎಂಬುದು ಸಾಬೀತಾದ ಉದಾಹರಣೆಗಳೂ ಇಲ್ಲದಿಲ್ಲ...
                   ಅಂತೂ ಉಸಿರುಗಟ್ಟಿಸುವ ವಾತಾವರಣ ಯಾವ ರೀತಿಯಿಂದಲೂ ಬೆಳವಣಿಗೆ ಸ್ನೇಹಿಯಲ್ಲ.....ಅದು ಹಾರುವ ರೆಕ್ಕೆಗಳಿಗೆ ಹಾಕಿಟ್ಟ CLIPಗಳಷ್ಟೇ..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...