ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||
ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ೧ ||
ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ೨ ||
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ಎಲ್ಲಿ ಜಾರಿತೋ ಮನವು...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...
ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ತೊರೆದು ಹೋಗದಿರೋ ಜೋಗಿ....
ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.
ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.
ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.
ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ಬಂದೇ ಬರತಾವ ಕಾಲ...
ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂಥ ಮನಸನು
ಒಂದು ಮಾಡುವ ಸ್ನೇಹಜಾಲ
- ಬಂದೇ ಬರತಾವ ಕಾಲ
ಮಾಗಿಯ ಎದೆ ತೂರಿ
ಕೂಗಿತೊ ಕೋಗಿಲ,
ರಾಗದ ಚಂದಕೆ
ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
- ಬಂದೇ ಬರತಾವ ಕಾಲ
ಹುಣ್ಣಿಮೆ ಬಾನಿಂದ
ತಣ್ಣನೆ ಸವಿಹಾಲು
ಚೆಲ್ಲಿದೆ ಮೆಲ್ಲನೆ
ತೊಯಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಬುವಿ ಬಾನು ಸೇರಿ ಹರಸ್ಯಾವ ಬಾಳನು
- ಬಂದೇ ಬರತಾವ ಕಾಲ
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ಅಂಥಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ.
ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.
ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.
-- ಕೆ.ಎಸ್.ಎನ್
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.
ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.
-- ಕೆ.ಎಸ್.ಎನ್