Wednesday, 25 January 2023

" ತತ್ವ ಸಿಲುಕದೆಮ್ಮಯ ತರ್ಕಶಾಂಕುಶಕೆ"

        ೧೯೭೨ ರ ಅಕ್ಟೋಬರ್ ತಿಂಗಳು. ನಮ್ಮ ಮದುವೆಯಾಗಿ ಕೇವಲ ಎರಡೇ ವರ್ಷ. ನನ್ನವರಿಗೆ ಮೊದಲ ಬಾರಿ ಲಘು ಹೃದಯಾಘಾತ ವಾಗಿತ್ತು.ನಾನು ಆ ಶಬ್ದವನ್ನೇ ಅದುವರೆಗೂ ಕೇಳಿರಲಿಲ್ಲ. ನಮ್ಮದೊಂದು ಪುಟ್ಟ 
ಹಳ್ಳಿ. ಕೆಳ ಮಧ್ಯಮ ವರ್ಗದ ಕುಟುಂಬ.ದುಡಿತ ಅನಿವಾರ್ಯ. ಹೆಚ್ಚು ಕಡಿಮೆ ಎಲ್ಲರದೂ ಅದೇ ಬದುಕು. ಹೀಗಾಗಿ ಗಟ್ಟಿ ಜೀವಗಳು.ಎಂಬತ್ತು/ ತೊಂಬತ್ತು ಎಂದರೆ ಮಧ್ಯ ವಯಸ್ಸು ಎಂಬಂಥ ಚಟುವಟಿಕೆ. ಯಾರಾದರೂ ಏಕಾಏಕಿ ಹೋದರೆ " ಕಲ್ಲು ಗುಂಡಿನ ಹಾಗಿದ್ದ, ಒಂದು ದಿನ ಛಟ್ ಅಂತ ಸೀತವನಲ್ಲ, ಕೂತು ಕೂತಲ್ಲೇ ಹೋದ ಪುಣ್ಯಾತ್ಮ"- ಎಂಬಂಥ ಮಾಮೂಲು ಶರಾ. ಹೀಗಾಗಿ ನನಗೆ ಆ ಹೆಸರು ಹೆದರಿಸಲೇಯಿಲ್ಲ. ಕ್ರಮೇಣ ಅದರ ಗಂಭೀರತೆಯ ಅರಿವಾದಾಗಲೇ ಅನಾವಶ್ಯಕ ಅಂಜಿಕೆ ಶುರುವಾದದ್ದು. ಅವರು ಮನೆಗೆ ಬರುವದು ತಡವಾದರೆ/ ರವಿವಾರ ಹೆಚ್ಚು ಹೊತ್ತು
ಮಲಗಿದರೆ/ ಹೊರಗಿನಿಂದ ನಾನೇನಾದರೂ ಬಂದಾಗ ಮನೆ ಮುಂದೆ ನಾಲ್ಕು ಜನ ಹೆಚ್ಚು ಕಂಡರೆ
ಎದೆ ಝಲ್ ಎನ್ನಲು ಶುರುವಾದದ್ದು. ಅವರನ್ನು ಕಳೆದುಕೊಂಡದ್ದು ೧೯೮೩ ಅಕ್ಟೋಬರ್...ಸರಿಯಾಗಿ ನಲವತ್ತು ವರ್ಷಗಳ ಹಿಂದೆ.
             
          ಆಮೇಲೆ ಸದಾಕಾಲ ನನಗೆ ಅನಿಸುತ್ತಿದ್ದುದು ಒಂದೇ.ಈಗಿನಂತೆ
ಆಗ ವೈದ್ಯಕೀಯ ಸೌಲಭ್ಯಗಳು ಇದ್ದರೆ!
ನಮ್ಮ ಬಳಿ ಮುಂಬೈ / ಬೆಂಗಳೂರಿಗೆ ಹೋಗಿ ಚಿಕಿತ್ಸೆ ಮಾಡಿಸುವಷ್ಟು ದುಡ್ಡಿದ್ದರೆ ! ಸ್ವಲ್ಪ ಮೊದಲೇ ತಿಳಿದಿದ್ದರೆ. ಹಾಗಾಗಿದ್ದರೆ...ಹೀಗಾಗಿದ್ದರೆ...ಎಂದು. 
          ‌
                ಈಗ ಗೊತ್ತಾಗುತ್ತಿದೆ, ಏನಿದ್ದರೂ ಏನೂ ಆಗುತ್ತಿರಲಿಲ್ಲ, ಆಗುವದೇ ಆಗುತ್ತಿತ್ತು...ಅದೆಲ್ಲ ಕಾಲ ನಿರ್ಣಿತ.ಅದಕ್ಕೆ ಇಂದಿನ ವಿದ್ಯಮಾನ ಗಳೇ ಸಾಕ್ಷಿ...ಎಲ್ಲರಲ್ಲೂ ಸಾಕಷ್ಟು ದುಡ್ಡಿದೆ...ಮನುಷ್ಯನ ಹೃದಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ತೆರೆದ ಹೃದಯ ಚಿಕಿತ್ಸೆ  ಮಾಡುವಷ್ಟು ವಿಜ್ಞಾನ ಮುಂದುವರೆದಿದೆ...ಹೆಜ್ಜೆಗೊಂದು multi speciality hospitals ಕಾಣ ಸಿಗುತ್ತವೆ.
             ಆದರೂ ಹುಡುಗರು/ ಮುದುಕರು ಎನ್ನದೇ  ನಿಂತಲ್ಲೇ ಕುಸಿದು ಬೀಳುತ್ತಾರೆ.ಈಗ ಇದ್ದವರು ಕ್ಷಣವೊಂದು ಕಳೆಯುವದರಲ್ಲಿ  ಇಲ್ಲವಾಗುತ್ತಿದ್ದಾರೆ. Golden hour ದಲ್ಲೂ ಉಪಚಾರ ಫಲಪ್ರದವಾಗುತ್ತಿಲ್ಲ
" ಹೃದಯಾಘಾತಗಳನ್ನು ತಡೆಯುವದು ಹೇಗೆ ಎಂಬ ಬಗ್ಗೆ ಅಂತರ್ ರಾಷ್ಟೀಯ ಮಟ್ಟದಲ್ಲಿ ಉಪನ್ಯಾಸ ಕೊಡಬೇಕಾಗಿದ್ದವರು ಭಾಷಣದ ವೇಳೆಯಲ್ಲಿಯೇ/ ವೇದಿಕೆಯ ಮೇಲೆಯೇ ಇಲ್ಲವಾದ ಸುದ್ದಿಗಳನ್ನು ಓದುತ್ತಿದ್ದೇವೆ. ಪತ್ರಿಕೆಗಳಲ್ಲಿ/ ಫೋನುಗಳಲ್ಲಿ/ face book ನಲ್ಲಿ ಇಂಥವೇ ಸುದ್ದಿಗಳ ಸದ್ದು
ಹೆಚ್ಚಾಗುತ್ತಿವೆ.ಬದುಕಿನ ಶೈಲಿ/ ವಿಶ್ರಾಂತಿ ರಹಿತ ಜೀವನ/ ಸುಲಭ ಸಾಧ್ಯವಲ್ಲದ ಕುಟುಂಬದ ಬೆಂಬಲ/ 
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ  ಇಂಥ
ಹಲವಾರು ಕಾರಣಗಳೇನೇ ಕೊಡಲು ಇದ್ದರೂ ಅಂತಿಮ ಸತ್ಯ ಒಂದೇ...

" ನಾವು ' ಕೇವಲ‌' ಮನುಷ್ಯರು"-ಬದುಕಿನ ಜಟಕಾ ಬಂಡಿಯ ' ಸಾಹೇಬ ಬೇರೆಯೇ ಇದ್ದಾನೆ".

                
  
 

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...