Thursday, 16 March 2023

*ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ !!!* 

ಹೆತ್ತ ತಂದೆತಾಯಿ ಇರುವವರೆಗೆ ಮಾತ್ರ ಊರು ಒಡಹುಟ್ಟಿದವರು ಬಂಧು ಮಿತ್ರರು ಎಂಬ ಕೊಂಡಿ ಬೆಸೆದುಕೊಂಡಿರುತ್ತದೆ, ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ದೂರಾಗುತ್ತಲೇ ಹೋಗುತ್ತಾರೆ. ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ. ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು.   ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ, ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣತಮ್ಮಂದಿರೊಂದಿಗೆ ಹಾಗೂ ಅಕ್ಕತಂಗಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ.

ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ನಿದರ್ಶನಗಳು ನೋಡಲು ಸಿಗುತ್ತದೆ. ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ ಪ್ರತ್ಯೇಕ ಸಂಸಾರಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು ಹಾಗೂ ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. 
  
ಇಂತಹ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನಮ್ಮವರೊಂದಿಗೇ ಅಪರಿಚಿತರಾಗುತ್ತಿರುವ ಸಂಶಯ ಮನಸ್ಸಿನಲ್ಲಿ ಮೂಡುವುದು ನಿಜವಲ್ಲವೇ ಸ್ನೇಹಿತರೆ.

ಹೆತ್ತವರು ಬದುಕಿರುವವರೆಗೂ ಕುಟುಂಬದಲ್ಲಿ ಒಂದು ಭದ್ರತೆ ಇರುತ್ತದೆ, ಯಾವುದೇ ವಿಚಾರವಾದರೂ ಸಮಯೋಚಿತವಾಗಿ ಯೋಚಿಸಿ ಬುದ್ದಿಹೇಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳನ್ನು ಆಗಾಗ ನೋಡಬೇಕೆಂಬ ಹಂಬಲದಿಂದ ಎಷ್ಟೇ ದೂರವಿದ್ದರೂ ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಬ್ಬಹರಿದಿನಗಳೆಂದರೆ ಎಲ್ಲರೂ ಜೊತೆಯಾಗಿಯೇ ಆಚರಿಸಿಕೊಳ್ಳಬೇಕೆನ್ನುವ ಅಪೇಕ್ಷೆಯಂತೆ ಸಾಧ್ಯವಾದಷ್ಟು ಕುಟುಂಬದ ಐಕ್ಯತೆಯನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಇದನ್ನು ಎಲ್ಲರೂ ತಮ್ಮ ಕಾಲಾನಂತರವೂ ನಡೆಸಿಕೊಂಡು ಹೋಗಬೇಕೆನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಅದರೆ ಇಂದಿನ ಜೀವನ ಶೈಲಿ ಈ ತಲೆಮಾರಿನ ತೋರಿಕೆಯ ಪ್ರೀತಿ ವಿಶ್ವಾಸ ಇಂತಹ ಒಂದು ಬಾಂಧವ್ಯದ ಕೊಂಡಿಬೆಸೆಯುವಲ್ಲಿ ವಿಫಲವಾಗಿದೆ ಎನ್ನಬಹುದು. ಬಹಳಷ್ಟು ಕುಟುಂಬಗಳು ಹಂಚಿಹರಡಿ ಪ್ರತ್ಯೇಕ ಸಂಸಾರಗಳಾಗಿ ಅಷ್ಟಕ್ಕೇ ಸೀಮಿತಗೊಂಡಿವೆ ಅವರ ಆಚರಣೆ ಹಾಗೂ ಬಾಂಧವ್ಯ...ತವರಿನ ಸಂಪರ್ಕಕಳೆದುಕೊಂಡು ಮನಸ್ಸಿನಲ್ಲೇ ದುಃಖಿಸುತ್ತಿರುವ ಎಷ್ಟೋ ಜನರನ್ನು ನಾವು ನೋಡುತ್ತಿದ್ದೇವೆ... ಇವತ್ತಿಗೂ ಜನಮಾನಸದಲ್ಲಿ ಉಳಿದಿರುವುದು ಮಾತ್ರ ತಂದೆತಾಯಿಗಳು ಬದುಕಿರುವವರೆಗೆ ಅನುಭವಿಸಿದ ಸಂಭ್ರಮದ ದಿನಗಳು ಹಾಗೂ ಆದರಾಥಿತ್ಯದ ಪ್ರೀತಿ ವಿಶ್ವಾಸದಿಂದ ಒಡಹುಟ್ಟಿದವರೊಂದಿಗೆ ನಕ್ಕುನಲಿದ ಕ್ಷಣಗಳು. 

ಎಲ್ಲಾ ಸದಸ್ಯರನ್ನೂ ಸಮಾನವಾಗಿ ಕಾಣುವ ಮನಸ್ಸು ಇರಬೇಕು ..‌ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸಂತೋಷವನ್ನು ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.

ಕುಟುಂಬ ಸದಸ್ಯರಿಗೆ ಪ್ರೀತಿಯಿಂದ ಕಾಣಿ ,ಗೌರವದಿಂದ ನೋಡಿ ಎಲ್ಲವೂ ಹಣದಿಂದ ತೂಗಬೇಡಿ ,ಹಳೆಯ ಮನಸ್ತಾಪದ ಬಗ್ಗೆ ಮೆಲಕು ಹಾಕಬೇಡಿ ,ನಾನು ಸರಿ ಅವರು ಕೆಟ್ಟವರು ಅನ್ನುವುದನ್ನು ಬಿಡಿ,ಉಳಿದ ಜೀವನವನ್ನು ಸಂತೋಷವಾಗಿರಿ, ಎಲ್ಲರನ್ನೂ ಖುಷಿ ಪಡಿಸುವ ಹಾಗೆ ಮಾತನಾಡಿ.🌷🌷🌷🌷

Wednesday, 15 March 2023

ನನಗೂ ಪಲ್ಲಣ್ಣನಿಗೂ ಕೇವಲ‌ ಮೂರು
ವರ್ಷ, ನಾಲ್ಕು ತಿಂಗಳ ವ್ಯತ್ಯಾಸ. ಅವನು ಏಳನೇ ಇಯತ್ತೆ ಮುಗಿಸಿ ಹೈಸ್ಕೂಲಿಗೆಂದು ರಾಣೆಬೆನ್ನೂರಿಗೆ ಹೋದಾಗ ಅವನಿಗೆ ಹದಿಮೂರು,  ನನಗೆ ಒಂಬತ್ತು ಮುಗಿದಿರಬಹುದು. ನಮ್ಮೂರಲ್ಲಿ ಹೈಸ್ಕೂಲ್ ಇಲ್ಲದ ಕಾರಣಕ್ಕೆ  ಅವನು ರಾಣೆಬೆನ್ನೂರು, ಅಲ್ಲಿಂದ ಕಾಲೇಜಿಗೆ ಬೆಳಗಾವಿ, ಬೆಳಗಾವಿಯಿಂದ post graduation ಗೆ ಧಾರವಾಡ ಹೀಗೆ ಸ್ಥಳ ಬದಲಾಯಿಸುತ್ತ ಹೋದ ಕಾರಣಕ್ಕೆ ಅವನ ಜೊತೆ ನನಗೆ ಸಂಪೂರ್ಣವಾಗಿ ದಕ್ಕಿದ್ದು ಕಾಲೇಜು ಸೇರಲು ಧಾರವಾಡಕ್ಕೆ ನಾನು ಬಂದಾಗಲೇ ಅಥವಾ ಅವನೇ ನನ್ನನ್ನು
ಕರೆಸಿಕೊಂಡಾಗಲೇ...ಹೀಗಾಗಿ ಸುಧೀಂದ್ರ, ನಂದಾ, ಮಿತ್ರವಿಂದಾರಿಗೆ ಸಿಕ್ಕಷ್ಟು ಮೋಜಿನ ದಿನಗಳು ನನಗೆ ಮೊದಮೊದಲು ದಕ್ಕಿರಲಿಲ್ಲ. ಅತ್ತ ಹಿರಿಯರ ಲೆಕ್ಕಕ್ಕೂ ಇಲ್ಲದ, ಇತ್ತ ಕಿರಿಯರ ಸಾಲಿಗೂ ಸಲ್ಲದ ವಯಸ್ಸು ನನ್ನದು ಆಗ. ಅವನ ಜೊತೆ ಸಿಗುವದು ರಜೆಗೆ ಬಂದಾಗ ಮಾತ್ರವಾಗಿತ್ತು. ಆಗ  ಎಲ್ಲರೂ ತಮ್ಮ ತಮ್ಮ ಗುಂಪುಗಳಲ್ಲಿ ತಮಗೆ ತಿಳಿದಂತೆ ವೇಳೆ ಕಳೆಯುತ್ತಿ ದ್ದುದರಿಂದ  ನಮಗೆ ಸಿಗುತ್ತಿದ್ದುದು ನಮಗಾಗಿಯೇ ಸಿಗುತ್ತಿದ್ದ ಕೆಲವೇ ಗಂಟೆಗಳು...ಒಮ್ಮೆ ಧಾರವಾಡಕ್ಕೆ ನಾವೆಲ್ಲ ಬಂದಮೇಲೆ ಅವನು ' ಅಣ್ಣ ಕಡಿಮೆ- ಅಪ್ಪನ ಜಾಗದಲ್ಲೇ- ' ಹೆಚ್ಚು ಇದ್ದದ್ದು...ಹೀಗಾಗಿ ಅವನಿಗೆ ನೌಕರಿ/ ನಮಗೆ ಓದು ಹೀಗೆ ಒಂದು ನಿಗದಿತ track ನ ಪಯಣವಾಗಿತ್ತು ನಮ್ಮದು. ಅವನು ಅಷ್ಟೊತ್ತಿಗೆ  ಕಷ್ಟಗಳೊಂದಿಗೆ ಅನಿಯಮಿತ ಒಪ್ಪಂದ ಮಾಡಿಕೊಂಡಾ ಗಿತ್ತು. ನಮಗೆ ಒಂಚೂರೂ ಅವುಗಳ ಸೂಚನೆ ಸಿಗದಂತೆ  ಪರಿಸ್ಥಿತಿ ನಿಭಾಯಿಸಿದ್ದರ ಪರಿಚಯ ನಂತರದಲ್ಲಿ ನಮಗೆ ನಮ್ಮ  ಮಾತುಕತೆಗಳಲ್ಲಿಯೇ  ದೊರೆಯುತ್ತ ಹೋದದ್ದು  ಮಾತ್ರ ಒಂದು ವಿಡಂಬನೆ. ಧಾರವಾಡಕ್ಕೆ ಬಂದಮೇಲೆ ನಮ್ಮ ಮನೆ ನಮಗೆ ಮಾತ್ರ ಆಗದೇ ನಮ್ಮೂರಿಂದ ಬಂದ ಎಲ್ಲರಿಗೂ ' ತೆರೆದ ಬಾಗಿಲು' ಆಗಿ ,ಎಂದೂ ಮನೆಯವರಷ್ಟೇ ಇದ್ದದ್ದು/ ಉಂಡದ್ದು ನನ್ನ ನೆನಪಿನಲ್ಲಿ  ಇಲ್ಲವೇ ಇಲ್ಲ.  ಆದರೂ ಮನೆಯಲ್ಲಿ ಮಾಡುವವರಿಗೆ ತೊಂದರೆ ಆಗಬಾರ ದೆಂಬ ಎಚ್ಚರಿಕೆ ಸದಾ..." ನನಗೆ ಇವತ್ತು ಅಷ್ಟು ಹಸಿವೆಯಿಲ್ಲ, ಎಂದು ಪೀಠಿಕೆ ಸುರುವಾದರೆ ಯಾರೋ ಊಟಕ್ಕೆ ಬರುವವರಿದ್ದಾರೆ ಎಂಬ ಚಿಕ್ಕ ಸುಳಿವು ಸಿಗುತ್ತಿತ್ತು.ಆದರೆ ಆತಂಕಕ್ಕೆ ಕಿಂಚಿತ್ತೂ ಅವಕಾಶವಿರುತ್ತಿರಲಿಲ್ಲ.ಏಕೆಂದರೆ ಬೇರೆಯವರು ಉಂಡಷ್ಟೂ ತಾನೇ ಸ್ವತಃ ಉಂಡಂತೆ  ಖುಶಿ ಅವನಿಗೆ...
"ಇನ್ನೂ ಪಗಾರ ಬಂದಿಲ್ಲ ಎಂದು ಸದಾ ಹೇಳುತ್ತಾರೆ, ಸದಾ ಅಷ್ಟೊಂದು ಅತಿಥಿಗಳು ಮನೆಯಲ್ಲಿ...ಹೇಗೆ ಸಾಧ್ಯ? ಎಂದು ನಮ್ಮ ಮಾಲಿಕರಿಗೆ ಅಚ್ಚರಿಯೋ ಅಚ್ಚರಿ.!!! ನಾನೇ ಆ ಮನೆಗೆ ಮದುವೆಯಾಗಿ ಹೋಗುವದು ಎಂದಾದಾಗ ಸ್ವಾಭಿಮಾನಿ ಅಣ್ಣ ನಿಂತ ಕಾಲಮೇಲೆ ಮನೆ ಬದಲಾಯಿಸಿದ- ತಿಂಗಳಿಗೇ ನಿಶ್ಚಯವಾದ  ಮದುವೆಯ
ವರೆಗೂ  ಸಹ ಕಾಯದೇ ಮನೆ ತೆರವು
ಮಾಡಿದ ಸೂಕ್ಷ್ಮತೆ ಅವನದು...
                 ಅವನದೂ 1972 ರಲ್ಲಿ ಮದುವೆಯಾಯಿತು, ಇನ್ನಾದರೂ 'ತಾನು- ತನ್ನದು' ಎಂದು ಇರಲಾದೀತು ಎಂದುಕೊಂಡರೆ ಹಾಗಾಗಲೇಯಿಲ್ಲ, ನನ್ನ ನಂತರದ ತಮ್ಮ ತಂಗಿಯರ ವಿದ್ಯಾಭ್ಯಾಸ/ ನನ್ನ ಬದುಕಿನಲ್ಲಿ ಆದ  ದುರಂತದಿಂದ ಯಾವ ಜವಾಬ್ದಾರಿ ಯೂ  minus ಆಗದೇ plus ಆಗುತ್ತಲೇ ಹೋಗಿ ನಮ್ಮೆಲ್ಲರ ಬದುಕನ್ನು ನೇರಗೊಳಿಸುವ 
ಹೊಣೆ ಅವನ ಬೆನ್ನಿನಿಂದ ಮುಂದೆಯೂ ಬಹುದಿನಗಳ ಕಾಲ ಇಳಿಯಲೇಯಿಲ್ಲ...
      ‌  ‌ಆದರೆ ಒಂದೇ ಸಮಾಧಾನ... ಏನನ್ನೋ  ಮಾಡಬೇಕು ಎಂಬ ಅವನ ಒತ್ತಾಶೆ ನಿಧಾನವಾಗಿ ಚಿಗುರಿ  ಹೂ ಬಿಡುತ್ತಿದ್ದ ಕಾಲ.ಅವನದೇ ಇಚ್ಛಾಶಕ್ತಿ / ಜೊತೆಗೆ ಪುಷ್ಪಾಳ ಸಂಪೂರ್ಣ ಸಹಕಾರ ಎರಡೂ ಸೇರಿ ಅವನಿಗೆ ಇಂಧನವಾಗಿ ಮುನ್ನಡೆಸುತ್ತಿದ್ದವು !!! ಕ್ರಮೇಣ ಕನಸುಗಳು ರೆಕ್ಕೆ ಪಡೆದು/ ಬಲಿತು ನನಸಾಗಿ ಅಂದುಕೊಂಡದ್ದನ್ನು ಸಾಧಿಸಿ, ಮಧ್ಯದಲ್ಲಿ ಬಂದ ಸವಾಲು ಗಳಿಗೆಲ್ಲ ಎದೆಯೊಡ್ಡಿ ನಿವಾರಿಸಿಕೊಂಡು ಇದೀಗ ಅವನು ಸಾಧಿಸಿರುವದನ್ನು ನೋಡುವದು ಅವನಂತೆಯೇ ಅವನನ್ನು ಪ್ರೀತಿಸುವ ಪ್ರತಿಯೊಂದು ಆಪ್ತ ಜೀವಕ್ಕೂ ಹೆಮ್ಮೆ/ ತೀರದ ಅಭಿಮಾನ...
           ‌‌ ‌‌ಅವನ ಬಗ್ಗೆ ಬರೆಯುವದೂ
ಒಂದು ಸವಾಲಿನ ಕೆಲಸವೇ...ಎಂಬತ್ತು ವರ್ಷಗಳಲ್ಲಿ ಸಾಧನೆಯ ಛಲ/ ಯಾವ ಆಮಿಷಕ್ಕೂ ಒಳಗಾಗದೇ ಗುರಿಯೊಂದನ್ನೇ ಹಿಂಬಾಲಿಸುವ ಜಿಗುಟುತನ/ ಕಷ್ಟ - ಸುಖಗಳನ್ನು ಏಕರೂಪವಾಗಿ ಸ್ವೀಕರಿಸುವ  ಅವ್ವನ ಗುಣ/ ಅಪ್ಪನ ಪರೋಪಕಾರ ಬುದ್ಧಿ/ ಋಣಾತ್ಮಕ ನಿಲುವನ್ನೂ ಸಮಚಿತ್ತದಿಂದ ಅರಗಿಸಿಕೊಳ್ಳುವ  ಧೀಮಂತತೆ/  ಬೇಕಷ್ಟು ಹಣ- ಹೆಸರು ಗಳಿಸಿಯೂ ಅವಕ್ಕೆ ಅಂಟಿಕೊಳ್ಳದ ಸ್ಥಿತಪ್ರಜ್ಞತೆ - ಇವುಗಳ ಬಗ್ಗೆ ಏನೂಂತ, ಎಷ್ಟೂಂತ ಬರೆಯುವದು!!! ಅದೆಂದಿಗೂ ಮುಗಿಯದ ಅಧ್ಯಾಯ. ಬರೆದಷ್ಟೂ ಬೆಳೆಯುತ್ತ ಹೋಗುವ  ಮಹಾಯಾನ...ಹಾಗೆ ಬರೆಯುವದು ಅವನಿಗೆ ಎಳ್ಳಷ್ಟೂ ಇಷ್ಟವಿಲ್ಲ ಎಂಬುದೂ ಒಂದು ಬಹು ಮುಖ್ಯ ಕಾರಣಗಳಲ್ಲಿ ಒಂದು ಹಾಗೂ ಅದೇ
ಮೊದಲನೇಯದು...

         
 


 

Tuesday, 14 March 2023

              ಸವಿನೆನಪುಗಳು ಬೇಕು, ಸವಿಯಲೀ ಬದುಕು- ಎನ್ನುವುದು ಪ್ರತಿಯೊಬ್ಬರ ಅನುಭವ. ನಮ್ಮಂತಹ ಅತಿ ಭಾವುಕ ವ್ಯಕ್ತಿಗಳಿಗೆ ಅದೇ ಬದುಕಿನ ಅತಿ ದೊಡ್ಡ ಆಸ್ತಿ ಕೂಡ. ಆದರೆ ಬದುಕಿನಲ್ಲಿ ಸವಿನೆನಪುಗಳನ್ನು ಕಟ್ಟಿಕೊಡುವ ಜೊತೆಗೆ, ಬದುಕಿಗೆ ಅನಿವಾರ್ಯವಾದ ಕಹಿಘಟನೆಗಳ ಲ್ಲಿಯೂ ನಾನು ಸದಾ ನಿಮ್ಮೊಂದಿಗೆ ಇರುವೆ ಎನ್ನುವ ಭರವಸೆ ನೀಡುವ, ಆ ಭರವಸೆಯನ್ನು ಬದುಕಿಡೀ ನಿಭಾಯಿಸುವ ಒಬ್ಬ ವ್ಯಕ್ತಿ ನಮ್ಮ ಜೀವನದಲ್ಲಿದ್ದರೆ ಅದಕ್ಕಿಂತ ಬೇರೆ ಅದೃಷ್ಟ ಬೇಕೇ? ಇಂತಹ ಒಬ್ಬ ವ್ಯಕ್ತಿಯನ್ನು ನಮ್ಮ ಪೂರ್ಣ ಕುಟುಂಬಕ್ಕಾಗಿ ನೀಡಿದ ಆ ದೇವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಮ್ಮ ಪಲ್ಲಣ್ಣ ನಮ್ಮೆಲ್ಲರಿಗೂ ಬದುಕು ಕಟ್ಟಿಕೊಟ್ಟ ರೀತಿಯೇ ಅವಿಸ್ಮರಣೀಯ 
    ‌‌‌‌    ಬಡ  ಕುಟುಂಬದಲ್ಲಿ ಹುಟ್ಟಿ, ತನ್ನ ಸಹನೆ ಸ್ವಪ್ರತಿಭೆಯಿಂದ ಎಲ್ಲಾ ಕಷ್ಟಗಳನ್ನು ಎದುರಿಸಿ, ಶಿಕ್ಷಣ ಮುಗಿದ ತಕ್ಷಣವೇ 22ರ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟು ನಿಂತ ಬಗ್ಗೆ ಎಲ್ಲರಿಗೂ ಗೊತ್ತು. ನಾನು ಮತ್ತೆ ಅದರ ಬಗ್ಗೆ ಬರೆಯಲೇ ಬೇಕಿಲ್ಲ. ಬದುಕಿನ ಪುಟ್ಟ ಪುಟ್ಟ ಕ್ಷಣಗಳನ್ನೂ ಅದು ಹೇಗೆ ಆನಂದಿಸ ಬಹುದು ಎಂಬುದನ್ನು ಕಲಿತ ಬಗ್ಗೆ ಮಾತ್ರ ಈ ಬರಹ.
               ಪಲ್ಲಣ್ಣ ಧಾರವಾಡದಿಂದ  
ರಟ್ಟೀಹಳ್ಳಿಗೆ ಬರುತ್ತಾನೆಂದರೆ ನಮಗೆಲ್ಲ ಬಾಲ್ಯದಲ್ಲಿ ಅತಿ ನಿರೀಕ್ಷೆ ತುಂಬಿದ ಕ್ಷಣಗಳವು. ಅವನು ತರುವ ಧಾರವಾಡ ಫೇಡಾ/ ಚಿಕ್ಕು ಹಣ್ಣುಗಳಿ ಗಿಂತ ಅವನ ಅಂತಃಕರಣ ,ಪ್ರೀತಿ ತುಂಬಿದ ನಗು,ಇವುಗಳೇ ಹೆಚ್ಚು ಸವಿ... ಪುಟ್ಟ ಮಿತ್ರವಿಂದಾ ರಾತ್ರಿ ಊಟಕ್ಕೆ ಹಟ ಮಾಡಿದರೆ, ನಾಲ್ಕಾಣೆ ಕೊಡುವೆ ಎಂದು ಓಲೈಸುವ ರೀತಿ,ಬೇಕೆಂತಲೇ ಅವಳ ಕೂದಲನ್ನು ಹೊಗಳಿ ಅವಳು ತನ್ನ ಕೂದಲಿಗೆ ದೃಷ್ಟಿ ಆಗಿ "ಕೂದಲು ಉದುರ್ತಾವ"- ಎಂದು ರೇಗಿದಾಗ ಎಲ್ಲರೂ ಜೋರಾಗಿ ನಗುವುದು, ಉಫ್, ಎಂತಹ ಸುಂದರ ಕ್ಷಣಗಳು !!!
                 "ಕೊಡುವುದರಲ್ಲಿ ಇರುವ ಸಂತೋಷ ಮತ್ತೆ ಯಾವುದರಲ್ಲಿಯೂ ಇಲ್ಲ "- ಎನ್ನುವ ಅವನ ತತ್ವ ನಾವೆಲ್ಲ ಮೊದಲಿನಿಂದಲೂ ನೋಡಿದ್ದೇ. ಹೊಸದೇನೂ ಅಲ್ಲ. ಒಂದು ಬಾರಿ ನಾನು ಸ್ಟೋವ್ ಮೇಲೆ ಹಾಲು ಕಾಯಿಸಲಿಟ್ಟು ಮರೆತುಬಿಟ್ಟೆ. ಅದು ಕುದಿದು ಅರ್ಧದಷ್ಟು ಆಯಿತು. ರಾತ್ರಿ ಅವನಿಗೆ ಕುಡಿಯಲು ಕೊಟ್ಟಾಗ," ಇದು ಬಾಸುಂದಿ ಹಂಗ ರುಚಿ ಆಗೇದ. ಉಳಿದ ಹಾಲಿಗೂ ಸಕ್ಕರಿ ಹಾಕು, ಆನಂದನ್ನ ಕರೀತೀನಿ. ಅವನೂ ರುಚಿ ನೋಡಲಿ. ನಾಳೆ ಒಂದಿನಾ ಮೊಸರು ಇಲ್ಲಂದ್ರ ಏನೂ ಆಗುದಿಲ್ಲ "-ಎಂದು
ಗೆಳೆಯನನ್ನು ಕರೆಯಲು ಹೋದಾಗ ಆ ಸ್ನೇಹ ಪ್ರೀತಿಗೆ ತಲೆ  ತಾನಾಗಿಯೇ ಬಾಗಿತು...
         ಪುಟ್ಟ ಜಾನುವಿಗೆ ಅಂದು ಅಪ್ಪ ಸ್ನಾನ ಮಾಡಿಸಲಿ ಎನ್ನುವ ಆಶೆ. ಸರಿ ಖುಷಿಯಿಂದ ಸ್ನಾನ ಮಾಡಿಸುತ್ತಿರುವ ಅಪ್ಪನ ಬನಿಯನ್ ನಲ್ಲಿ ಒಂದೆರಡು ತೂತುಗಳು ಕಂಡವು. ಜಾನು ಭಾವುಕಳಾಗಿ 'ಅಪ್ಪ ನೀನು ಹರಿದ ಬನಿಯನ್ ಹಾಕ್ಕೋಬ್ಯಾಡ, ನಂಗ ಕೆಟ್ಟನಸ್ತದ 'ಎಂದಳು. ಒದ್ದೆ ಮೈಯಲ್ಲಿದ್ದ ಅವಳನ್ನು ಎದೆಗೆ ಒತ್ತಿ "ಇಲ್ಲ ಅವ್ವಿ , ಇನ್ನು ಮುಂದ ಹಾಕ್ಕೊಳ್ಳೋದಿಲ್ಲ " ಎಂದಾಗ ಅವನ ಮುಖದಲ್ಲಿನ ಸಂತಸ, ಧನ್ಯತೆ, ನಗು ವರ್ಣಿಸಲಾಗದ್ದು...
          ಒಂದು ದಿನ ರಾತ್ರಿ ಒಂದು ಗಂಟೆಗೆ ನಮ್ಮಣ್ಣ ಮಿಲಿಂದನನ್ನು ಹೆಗಲ ಮೇಲೆ ಮಲಗಿಸುವ ಪ್ರಯತ್ನ ಮಾಡುತ್ತಿದ್ದ. ನಡುವೆ ಬಂದು "ಅವನು ಕಣ್ಣು ಮುಚ್ಚಿರುವನೇ ನೋಡು"- ಎಂದು ನನ್ನನ್ನು ಕೇಳಿದ. ಮಿಲಿಂದ "ನಾ ಇನ್ನೂ ಮಲ್ಕೊಂಡಿಲ್ಲ, ನಾನsss ಹೇಳ್ತೇನಿ, ಅಕಿನ್ನೇನು ಕೇಳತಿ"-ಎಂದಾಗ ಬಿದ್ದು ಬಿದ್ದು ನಕ್ಕು ಕೆಮ್ಮಲಾರಾಂಭಿಸಿದ ಪಲ್ಲಣ್ಣನ ಆ ನಗುವನ್ನು ಮತ್ತೆ ಮತ್ತೆ ನೋಡುವ/ ಕೇಳುವ ಆಶೆ.
              ಮನೋಜ್ ನಾಲ್ಕು/ ಐದು ವರ್ಷಗಳಾದರೂ ಬಾಟಲಿಯಿಂದ ಹಾಲು ಕುಡಿಯುತ್ತಿದ್ದ.ಒಂದು ದಿನ 
ಅವನ ಹಾಲಿನ ವೇಳೆಯಾಗಿತ್ತು. ಅಂದು ಮನೆಯಲ್ಲಿ ಅತಿಥಿಗಳಿದ್ದರು.
ಮಿತ್ರವಿಂದಾ ಅವನಿಗೆ" ಹಾಲು ಕುಡೀತಿಯಾ?"- ಎಂದು ಅವರೆದುರೇ
ಕೇಳಿದ್ದಕ್ಕೆ ಅವನಿಗೆ ವಿಪರೀತ ಸಿಟ್ಟು ಬಂತು. " ಬೇಕಂತssನ ಬಂದ ಮಂದಿ ಮುಂದ ನನಗ ಹಾಲು ಕುಡಿ ಅಂತ ಹೇಳ್ತಾರ, ನನಗ ಅಪಮಾನ ಆಗ್ಲಿ ಅಂತ"- ಎಂದು ಕೂಗಾಡಿದ." ಇದು ಹಂಚಿನಮನಿ ರಾಮಾಚಾರು/ ಪೋತದಾರ ರಂಗಾಚಾರ್ ಇಬ್ಬರನ್ನೂ
ಸೇರಿಸಿ ತಯಾರು ಮಾಡಿದ model" ಅಂತ ಹೇಳಿ ಪಲ್ಲಣ್ಣ ನಕ್ಕಿದ್ದೇ ನಕ್ಕದ್ದು...

          ‌ಒಂದು ಬಾರಿ ನಾಲ್ಕು ತಿಂಗಳ ಪಗಾರವೇ ಬಂದಿರಲಿಲ್ಲ.ಅದು ಆಗ ಮಾಮೂಲು ಎಂಬಂಥ ಸ್ಥಿತಿ. ಮನೆ ಖರ್ಚುನ್ನೂ ತೂಗಿಸಿಕೊಂಡು ಊರಿಗೂ ಹಣ ಕಳಿಸಬೇಕಿತ್ತು.ಅಂದೇ ದೂರದ ನಳದಿಂದ  ನೀರು ತರಲು ಪಲ್ಲಣ್ಣ/ ನಾನು ಹೊರಟಿದ್ದೆವು.ಅವನ ಕೈಯಲ್ಲಿ ಜಡವಾದ ತಾಮ್ರದ ಬಿಂದಿಗೆ, ನನ್ನ ಕೈಯಲ್ಲಿ ಹಗುರವಾದ ತಗಡಿನ ಕೊಡಗಳಿದ್ದವು.ಕೆಲ ಹೆಜ್ಜೆಗಳನ್ನು ನಡೆದ ಅಣ್ಣ, ಗಕ್ಕನೇ ನಿಂತು ಕೊಡ ಬದಲಾಯಿಸಲು ಹೇಳಿದ.ನನಗೋ ಆಶ್ಚರ್ಯ!!!ಪ್ರಶ್ನಾರ್ಥಕವಾಗಿ ನೋಡಿದೆ." ಹೀಗೆ ಖಾಲಿಕೊಡ ನಾನು ಒಯ್ದರೆ, ಜನ ಅದನ್ನು ಒತ್ತೆಯಿಟ್ಟು
ಹಣ ತರಲು ಹೊರಟಿದ್ದೇನೆ " - ಅಂತ ತಿಳಿಯಬಹುದು ಎಂದು ಜೋರಾಗಿ
ನಕ್ಕ...ಅದು ಅವನಿಗೆ ಮಾತ್ರವೇ ಸಾಧ್ಯ.ನನ್ನ‌ ಕಣ್ಣುಗಳು ತೇವವಾದದ್ದು
ಅವನಿಗೆ ತೋರಗೊಡದೇ ಮುಂದೆ ಮುಂದೆ ನಡೆದದ್ದೂ ನಿನ್ನೆ ಎಂಬಂತೆ
ನೆನಪಿದೆ.
              ಆಗಾಗ ಅಣ್ಣ/ವೈನಿಯರ
ನಡುವೆ 'ಪೊಳ್ಳು ಮಾತಿನ ಸುಳ್ಳು ಕದನ 'ಗಳು ಸಾಮಾನ್ಯವೆಂಬಂತೆ ಬಂದು ಮರೆಯಾಗುತ್ತಿದ್ದವು." ಹಿರಿಯರು ಹೇಳೋದು ಸುಳ್ಳಲ್ಲ, ಏಳೇಳು ಜನ್ಮದ 
ಸಿಟ್ಟು ತೀರಿಸ್ಕೊಳ್ಳಿಕ್ಕೆ ಅಂತsssನ ಆ ದೇವರು ಹೀಂಗ ಗಂಡ/ ಹೆಂಡತಿಯನ್ನ
ಗಂಟು ಹಾಕ್ತಾನ"- ವೈನಿಯ ಧಿಡೀರ್
Comment ಬಂತು.ಅಣ್ಣ ಅಚ್ಚರಿ ಎಂಬಂತೆ ನಿರುತ್ತರ." ಏನಾತೀಗ ಹಿಂಗ ಕೂಡಲಿಕ್ಕೆ???"- ವೈನಿ ವಿವರಣೆಗೆ ಕಾದರು." ಏನಿಲ್ಲ, ನೀನು ನನ್ನ ಹೆಂಡತಿ
ಆಗಲಿಕ್ಕೆ ಇನ್ನೂ ಆರು ಜನ್ಮ  ಹಿಂದೆ ಬೀಳಬೇಕಾ ಅಂತ ಒಂದು ಕ್ಷಣ ಚಿಂತಿ ಆತು". ಆಮೇಲೆ ಆದದ್ದು ಎಲ್ಲರೂ ನಿರೀಕ್ಷಿಸಿದ್ದೇ...ವೈನಿಯನ್ನೂ ಒಳಗೊಂಡು ಎಲ್ಲರದೂ ನಗೆ ಸ್ಫೋಟ.
             ಈಗ ಎಲ್ಲರಿಗೂ ತಟ್ಟನೇ ಕಾಣುವದು ಅವನ ಸದ್ಯದ ಯಶೋಗಾಥೆ...ಆದರೆ ಆ ಗುರಿ ತಲುಪಲು ಅವನು ಹಾದು ಬಂದ
' ಅಗ್ನಿ ದಿವ್ಯ' ಗಳಿಗೆ ಕೊನೆಯಿಲ್ಲ.ಅವನ‌ ಸಾಹಿತ್ಯ ಪ್ರೇಮ/ ಜ್ಞಾನದಾಹ/ಬಂಧು ಪ್ರೀತಿ/ ಧನಾತ್ಮಕ ವಿಚಾರ ಧಾರೆ/ ಸಂಬಂಧಕ್ಕೆ ಕೊಡುವ ಬೆಲೆ/ ಅವನ ಜೀವನ್ಮುಖಿ ಧೋರಣೆ ಅವನನ್ನು  ದಡ ಕಾಣಿಸಿವೆ. ನಮಗೆಲ್ಲರಿಗೂ ದಾರಿ ದೀಪವಾಗಿವೆ.ಎಂಥದೇ ಕಠಿಣ ಪರಿಸ್ಥಿತಿಯಲ್ಲಿಯೂ ಒಮ್ಮೆ ಅವನನ್ನು/ ಅವನ ಬದುಕನ್ನು ನೆನೆದರೆ ಸಾಕು ಮೈ- ಮನಗಳಲ್ಲಿ ಸ್ಫುರಿಸುವ ಚೇತನವೇ ಬೇರೆ...

ಬಾಳ ಹಳಿವುದದೇಕೆ? 
ಗೋಳ ಕರೆವುದದೇಕೆ? ।
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ ।
ಪಾಲುಗೊಳಲಳಬೇಡ -  ಮಂಕುತಿಮ್ಮ 
          
ಕಗ್ಗಗಳು...

೧) ಬಾಳ ಹಳಿವುದದೇಕೆ? 
ಗೋಳ ಕರೆವುದದೇಕೆ? ।
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ ।
ಪಾಲುಗೊಳಲಳಬೇಡ -  ಮಂಕುತಿಮ್ಮ 

೨) ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು ।
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ॥
ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ ।
ಒಟ್ಟುಬಾಳ್ವುದ ಕಲಿಯೊ - ಮಂಕುತಿಮ್ಮ ॥ 

೩)
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ।
ಹಿತವಿರಲಿ ವಚನದಲಿ, ಋತವ ಬಿಡದಿರಲಿ ॥
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ ।
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ॥ ೭೨೪ ॥

4)
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ।
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ॥
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ।
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ॥ ೬೫ ॥



Monday, 13 March 2023


ಒಂದು ಬ್ರಹತ್ ಕಾದಂಬರಿಯಾಗ ಬಹುದಾದ ವಿಷಯವನ್ನು ಒಂದೆರಡು
ಪುಟಗಳಲ್ಲಿ ತುಂಬಿಸುವದಾದರೂ ಹೇಗೆ? ನಾವು ಸೋಲುವದೇ ಇಲ್ಲಿ. ಬದುಕು ಹಸನ ಮಾಡಲು ಬೇಕಾದ ಯಾವುದೊಂದರ ಬೆಂಬಲವೂ ಇಲ್ಲದಿದ್ದರೂ ಸಹನೆ/ ಸ್ವಪ್ರತಿಭೆಯ ಆಧಾರದ ಮೇಲೆಯೇ ಕಂಡ ಬ್ರಹತ್ ಕನಸೊಂದನ್ನು ನನಸು ಮಾಡಿದ ವ್ಯಕ್ತಿತ್ವವನ್ನು ನಾಲ್ಕಾರು ಪುಟಗಳಲ್ಲಿ ಹಿಡಿದಿಡುವದು ಅಸಂಭವವೇ... ಅಚ್ಚರಿಯ ವಿಷಯವೆಂದರೆ ಆ ಮಹಾಯಾನದ ಖುಶಿಯನ್ನಷ್ಟೇ ಎಲ್ಲರೊಂದಿಗೆ ಹಂಚಿಕೊಂಡು/ ನಂಜನ್ನೆಲ್ಲ ಸ್ವಂತಕ್ಕೆ ಇಟ್ಟುಕೊಳ್ಳುವದು ಸಾಧ್ಯ ಎಂದು ತೋರಿಸಿದ ವ್ಯಕ್ತಿಯಾದ ರಂತೂ ಯಾವ ಪೆನ್ನಿಗೂ ಅದನ್ನು ಪೂರ್ಣವಾಗಿ ದಾಖಲಿಸಲಾಗುವದಿಲ್ಲ.
         ಆದರೆ ಇಷ್ಟು ಮಾತ್ರ ಚನ್ನಾಗಿ ನೆನಪಿದೆ...ಅವನು ಊರಿಗೆ ಬರುತ್ತಾನೆಂದರೆ ನಮಗೆಲ್ಲ ಹಬ್ಬವೋ ಹಬ್ಬ. ಅವನು  ಬರುವಾಗ ತರುತ್ತಿದ್ಧ ಧಾರವಾಡ ಫೇಡಾ/  ಚಿಕ್ಕೂಹಣ್ಣುಗಳ ಆಕರ್ಷಣೆಯ ಜೊತೆಜೊತೆಗೆ ಅವನ ಅಂತಃಕರಣ/ ಪ್ರೀತಿ/ ಕಾಳಜಿಗಳೂ
ಸಮೃದ್ಧವಾಗಿ ಸಿಗುತ್ತಿದ್ದ  ದಿನಗಳವು.
"ಕೊಡುವದರಲ್ಲಿರುವಷ್ಟು  ಸುಖ ಪಡೆಯುವದರಲ್ಲಿಲ್ಲ "ಎಂಬುದನ್ನು ನಾವೆಲ್ಲಾ ಕಿಂಚಿತ್ತಾದರೂ ಕಲಿತದ್ದೇ
ಆದರೆ ಅದು ಅವನಿಂದ. ಅವನದು ಸದಾ ನೀಡುವ ಕೈ. ಹಟಮಾಡುವ ತಂಗಿಯರನ್ನು ಓಲೈಸುವ / ಅಳುವವ ರಿಗೆ ಸಾಂತ್ವನ ಹೇಳುವ ಅವನ ರೀತಿ
ಎಲ್ಲರಿಗೂ ಪ್ರಿಯ...
             " ಊಟ ಮಾಡುವದಿಲ್ಲ"- ಎಂದು ಹಟ ಮಾಡುವ ಒಬ್ಬ ತಂಗಿಗೆ
ನಾಲ್ಕಾಣೆಯ ಆಶೆ ತೋರಿಸಿ ಉಣಿಸುವ ಹಾಗೆಯೇ, " ನಿನ್ನ ಕೂದಲು ತುಂಬಾ ಉದ್ದ" - ಎಂದು ರೇಗಿಸಿ, ದೃಷ್ಟಿ ಬಿದ್ದರೆ ನನ್ನ  ಕೂದಲು ಉದುರುತ್ತದೆ"- ಎಂಬ ಆತಂಕ ಅವಳಲ್ಲಿ ಸೃಷ್ಟಿಸಿ ಎಲ್ಲರೂ ನಗುವಂತೆ
ಮಾಡುವದೂ ಗೊತ್ತಿತ್ತು.
                 ಬದುಕಿನಲ್ಲಿ ಕೊಳ್ಳುವದ ಕ್ಕಿಂತ ಕೊಡುವದರಲ್ಲಿಯೇ ಹೆಚ್ಚು ಸುಖ - ಎಂಬುದು ಮೊದಲಿನಿಂದಲೂ 
ಅವನ ಸೂತ್ರ.ಕಾಯಲು ಇಟ್ಟ ಹಾಲು, 
ಗಮನವಿಲ್ಲದೇ ಹೆಚ್ಚು ಕುದ್ದು ಗಟ್ಟಿಯಾಗಿ ಬಿಟ್ಟರೆ, "ಒಳ್ಳೆಯದೇ ಆಯಿತು, ಎಷ್ಟು ದಿನ ಆಗಿತ್ತು, ಬಾಸುಂದಿ ತಿಂದು, ಸಕ್ಕರೆ ಹಾಕಿಬಿಡು- ಎಂದು ಹೇಳಿ ಇನ್ನೊಬ್ಬ ತಂಗಿಯ ಅಪರಾಧಿ ಪ್ರಜ್ಞೆ ತಪ್ಪಿಸಿ ಮುಖ ಅರಳುವಂತೆ ಮಾಡುವಷ್ಟು ಮಾತೃ ಹೃದಯ ಅವನದು...
   ‌‌         ತನ್ನ ಮಕ್ಕಳ ಬಾಲ್ಯದ ಚಿಕ್ಕ ಪುಟ್ಟ ಘಟನೆಗಳನ್ನೂ  ಸಂಭ್ರಮಿಸುವ,
ಮಕ್ಕಳೊಡನೆ ಮಕ್ಕಳಂತೆ ಗಹಗಹಿಸಿ
ನಕ್ಕು ನಲಿಯುವ ಪ್ರಸಂಗಗಳಿಗೂ
ಬರವಿರಲಿಲ್ಲ.ಏನಾದರೂ ವಿಷಯ ಗಂಭೀರ ಚರ್ಚೆಗೆ ತಿರುಗಿದರೆ ಚಾಣಾಕ್ಷ
ತನದಿಂದ ಅದಕ್ಕೊಂದು ಹಾಸ್ಯದ ತಿರುವು ಕೊಟ್ಟು ಎಲ್ಲರನ್ನೂ ನಗಿಸಿ
ಇಡೀ ಪರಿಸರವನ್ನೇ ಕ್ಷಣದಲ್ಲಿ ಬದಲಾಯಿಸುವ ಜಾಣ್ಮೆ ಅವನಲ್ಲಿತ್ತು. 
ಒಮ್ಮೆ ಅವನ ಕೊನೆಯ ಮಗ ಯಾವುದೋ ವಿಷಯಕ್ಕೆ ಕೋಪಿಸಿಕೊಂಡು ರಾದ್ಧಾಂತ  ಮಾಡಿದಾಗ ," ಇದು ' ಹಂಚಿನಮನಿ ರಾಮಾಚಾರ್ಯರು/ ಪೋತದಾರ್ ರಂಗಾಚಾರ್ ಇಬ್ಬರನ್ನೂ ಸೇರಿಸಿ ಮಾಡಿದ ತಳಿ"- ಎಂದು ಜೋರಾಗಿ ನಗತೊಡಗಿದಾಗ ಮೊದಲು ಏನಾಗಿತ್ತು
ಎಂದೇ ನೆನಪಾಗದಷ್ಟು ವಾತಾವರಣ ಬದಲಾದದ್ದು ಮರೆಯುವ ಮಾತೇಯಿಲ್ಲ.
             ಆರ್ಥಿಕ ಸಂಕಷ್ಟ ಅವನಿಗೆ
ಹೊಸದಲ್ಲ.ಕಾಲಿಗೆ ಎಳೆದರೆ ತಲೆಗೆ, ತಲೆಗೆ ಎಳೆದರೆ ಕಾಲಿಗೆ ಇಲ್ಲದ ಪರಿಸ್ಥಿತಿ
ಸದಾ. ದೂರದಿಂದ ನೀರು ಹೊತ್ತು ತರಬೇಕೆಂದು ತಾಮ್ರದ ಕೊಡ ಹಿಡಿದು
ರಸ್ತೆಗೆ ಬಂದಾಗಲೆಲ್ಲ," ಇದನ್ನು ನಾನು ಒತ್ತೆಯಿಡಲು ಹೊರಟಿದ್ದೇನೆ" ಎಂದು 
ತಿಳಿಯುತ್ತಾರೆ ನೋಡಿದವರು ಎಂದು
ಜೋರಾಗಿ ನಗುವದು ಅವನಂಥ  ' ನಂಜುಂಡ ' ರಿಗೆ ಮಾತ್ರ ಸಲ್ಲುವ ಮಾತು ಎಂದು ಮಾತ್ರ ಹೇಳಬಲ್ಲೆ...
         " ಏಳೇಳು ಜನ್ಮದ ಸಿಟ್ಟು  ತೀರಿಸಿಕೊಳ್ಳಲೆಂದೇ  ದೇವರು ' ಗಂಡ- ಹೆಂಡತಿ- ಅಂತ ಗಂಟು ಹಾಕ್ತಾನ ಅನಸ್ತದ ನಂಗ "- ಎಂಬುದು ನಮ್ಮ ವೈನಿ ಕಾಯಂ ಹೇಳಿ ಕೆಣಕುತ್ತಿದ್ದ ಮಾತು. ಹಾಗೆ ಅಂದಾಗಲೆಲ್ಲ, ಅಣ್ಣ 
ಚಿಂತೆಯಲ್ಲಿದ್ದಂತೆ ಮುಖ ಮಾಡಿ," ದೇವರೇ, ನೀನು ನನ್ನ ಹೆಂಡತಿಯಾಗ ಲಿಕ್ಕೆ ಇನ್ನೂ ಆರು ಜನ್ಮ  ಹೀಗೇ ಕಾಯಬೇಕಾ???- " ಇದು ನಮ್ಮ ಅಣ್ಣ ಎಂಥ ಬದುಕನ್ನೂ ಸುಲಭವಾಗಿ ಹಸನಾಗಿಸುತ್ತಿದ್ದ ರೀತಿ...
          ಇಂದು ಅವನ ಯಶೋಗಾಥೆ ಯನ್ನಷ್ಟೇ ಬಲ್ಲವರಿಗೆ ಅವನು ಹಾದು ಬಂದ ದಾರಿಯ ಪೂರ್ಣ ಪರಿಚಯ ವಿಲ್ಲ. ಅವನದು ಸಮುದ್ರದ ' ಆಳ - ಅಗಲ' ದ ಬದುಕು. ಹಗುರವಾದ ದ್ದನ್ನೆಲ್ಲ ದಂಡೆಗೆ ದೂಡಿ, ಹೊರಲಾರ ದಷ್ಟು ಭಾರವಾದದ್ದನ್ನೆಲ್ಲ ತಳಕ್ಕೆ ಹಾಕಿ, ಬೇಕೆಂದವರಿಗೆ ತನ್ನೊಳಗಿನ ಮುತ್ತು
ಗಳನ್ನಷ್ಟೇ ಹಂಚಿದವ...
            ಅವನದು ಇಂದು ಎಂಬತ್ತನೇ
ಹುಟ್ಟುಹಬ್ಬ.ಅವನುಂಡ ಕಷ್ಟಗಳು/ ಎದುರಿಸಿದ ಸವಾಲುಗಳು/ ಮನದಲ್ಲೇ
ಹುದುಗಿಸಿಟ್ಟ ಬಿಕ್ಕುಗಳು/ ಮಂದಿಗೆ
ಉದಾರವಾಗಿ ಹಂಚಿದ ಸುಖದ ಗಳಿಗೆಗಳು/ ಎಂಥ ಕಷ್ಟಕ್ಕೂ ಧೃತಿಗೆಡದ
ಮನೋಸ್ಥೈರ್ಯ/ ಎಲ್ಲಕ್ಕಿಂತಲೂ 
ಅವನಂಥ ಅಜಾತಶತ್ರುವಿನ ಉದಾತ್ತ ತೆ ನಮನ್ನು ಸದಾ ಎಚ್ಚರವಾಗಿಸಿ
ಕಾಯುವ ದಾರಿ ದೀಪಗಳಾಗಲಿ...

    





ಸಮಾ( ಜ) ಸೇವೆ...
               ಇಂದು ಬೆಳಿಗ್ಗೆ ಅಡಿಗೆಮನೆ ಯಲ್ಲಿದ್ದೆ. ಬೆಳಗಿನ ತಿಂಡಿಯ ತಯಾರಿ
ನಡೆದಿತ್ತು.calling bell ಹಾಡಿತು. ಹೋದೆ, ನೋಡಿದೆ, ಪಕ್ಜದ ಮನೆಯ ಮನೆಗೆಲಸದ ಸಹಾಯಕಿ." ಅಮ್ಮಾ, ರದ್ದಿ ಪೇಪರ್..." ಅಂದು ತೊದಲಿದಳು. ಇಲ್ಲೊಂದು ಪದ್ಧತಿಯಿದೆ. ತಿಂಗಳು/ ಎರಡು ತಿಂಗಳಿಗೊಮ್ಮೆ  ಕೆಲಸದವರು
ಮನೆಮನೆಗೆ ಹೋಗಿ ರದ್ದಿ ಕೇಳುತ್ತಾರೆ. ಕೊಟ್ಟವರು ಕೊಟ್ಟರು...ಇಲ್ಲದಿದ್ದವರು
ಇಲ್ಲ. ಕೆಲಸದವರು ಅವನ್ನು ಮಾರಿ 
ಸಿಕ್ಕಷ್ಟು ಹಣ ಪಡೆಯುತ್ತಾರೆ.
                  ಹೀಗಾಗಿ ನಾನು ಅವಳಿಗೆ
ಗಡಿಬಿಡಿಯಲ್ಲೂ ಕರೆದು ರದ್ದಿ ಇಟ್ಟ ಜಾಗ ತೋರಿಸಿದೆ.ಒಯ್ದಳು. " ಅಮ್ಮಾ ,ಕಟ್ಟಿಕೊಳ್ಳಲು ಒಂದು ಹಗ್ಗ ಬೇಕಿತ್ತು."- ನನಗೆ ಗಡಿಬಿಡಿಯಿತ್ತು. ನಾಳೆ ಬಾ ಎಂದರೆ, ಅದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ.ಬರಿ, postponement
ಎಂದು ನೆನಪಾಗಿ ಏನೋ ಒಂದು ಕೊಟ್ಟೆ." ಅಮ್ಮಾ, ಒಂದು ಚೀಲ ಇದ್ದರೆ 
ಬೇಕಿತ್ತು."- ತಲೆ ಪರಚಿಕೊಳ್ಳುವುದೊಂ ದೇ ಬಾಕಿ. ಕೂಗಿದರೆ ಇದ್ದಷ್ಟೂ energy  loss.!!! ಹಾಂ...ಹೂಂ ಅನ್ನದೇ ಒಂದು ಚೀಲ ಹುಡುಕಿ ಕೊಟ್ಟೆ.
"ಮತ್ತೆ ಅಮ್ಮಾ..." ಕಣ್ಣಿನಲ್ಲೇ ಕೇಳಿದೆ. "???" " ಸೆಕ್ಯೂರಿಟಿ ಚೀಟಿ ಇಲ್ಲದೇ ಒಯ್ಯಗೊಡುವದಿಲ್ಲ, ಚೀಟಿ ಬರೆದು ಕೊಡಿ..." " ಇಟ್ಟು ಹೋಗು, ಮಧ್ಯಾನ್ಹ
ಬರೆದಿಟ್ಟಿರುತ್ತೇನೆ, ನಾಳೆ ಒಯ್ಯಿ, ಈಗ ಕೆಲಸವಿದೆ, ಎಂದು ಮುಖ ತಿರುಗಿಸಿದೆ.
ಬಿಟ್ಟು ಹೋಗಲು ಅವಳಿಗೆ ಮನಸ್ಸಿಲ್ಲ.
ಒಯ್ದಳು...ಬೇರೆಯವರಿಂದ ಒಂದು ಸಾಲು ಬರೆಸಿಕೊಂಡು ಹೋಗಿರಬೇಕು.
           ಹೀಗೇ ಹಿಂದೊಮ್ಮೆ ಆದಾಗ ಅಳಿಯ ತಮಾಷೆ ಮಾಡಿದ್ದ," ನಾಳೆಯಿಂದ ನಮ್ಮ ಪೇಪರ ಅವಳ ಮನೆಗೇ ಹಾಕಲು ಹೇಳಿದರೆ ಉತ್ತಮ, ಇಬ್ಬರಿಗೂ ತ್ರಾಸಿಲ್ಲ..."
                 ನನಗೆ ಸನ್ಯಾಸಿಗೆ ' ಆಕಳು ದಾನ ' ಕೊಟ್ಟ ಕಥೆ ನೆನಪಾಯ್ತು. ಆಕಳು ಕಾಯಲು ಒಬ್ಬ ಹುಡುಗ/ ಹುಡುಗನಿಗೆ ರೊಟ್ಟಿ ಬಡಿಯಲು‌ ಒಬ್ಬ
ಮುದುಕಿ/ ಮುದುಕಿಯ ಸಹಾಯಕ್ಕೆ ಒಬ್ಬ ಹುಡುಗಿ/ ಹುಡುಗಿಯ ಕಾವಲಿಗೊಂದು ನಾಯಿ..."ಇತ್ಯಾದಿ...
              ಇದು ಹೊಸದಲ್ಲ, ಪ್ರತಿಸಲ ಮುಂದೆ ಹೀಗಾಗಲು ಬಿಡಬಾರದು/ 
ಬಿಡಕೂಡದು ಎಂಬ ಪ್ರತಿಜ್ಞೆ ಖಂಡಿತ...
ಆದರೆ 'ಪಾಲಿಸಲು' ಅಲ್ಲ, ' ಪ್ರತಿಜ್ಞೆ ಮುರಿಯಲು'...
               ಇದೇ ಕಾರಣಕ್ಕೆ ಬಹಳ ಜನ
ಅಂಥ ಉಸಾಬರಿಗೆ ಸರ್ವಥಾ ಹೋಗು ವದೇಯಿಲ್ಲ - ಎನಿಸುತ್ತದೆ...
            ‌‌‌‌     






Sunday, 12 March 2023

ಗೆಳೆಯರು ಬಂದು ಕರೆದರೂ ಹೊರ ಹೋಗಲು ಮನಸ್ಸಾಗದಿದ್ದರೆ...

ಮಕ್ಕಳು ಮೋಜು ಮಾಡುತ್ತ  ಖುಶಿಯಾಗಿ  ಮಸ್ತಿಯಲ್ಲಿರುವಾಗ
ಕೂಗಾಡಲು ಮನಸ್ಸಾದರೆ...
.
ಹೊಸಹೊಸ ವಸ್ತುಗಳನ್ನು  ಕಂಡಾಗ
ಕೊಳ್ಳುವ ಮನಸ್ಸಾಗದಿದ್ದರೆ...

ಯಾವುದೋ ಒಂದು ಸಂಭ್ರಮದಲ್ಲಿರುವಾಗ
ಯುವಜನರ fashion ಕುರಿತು
ಉಪದೇಶಕ್ಕಿಳಿದರೆ...

ಅದೇ ಅರಳಿದ ಹೂವಿನ ಮೇಲಿನ 
ದುಂಬಿಯನ್ನು ನೋಡಿದಾಗ
ಪ್ರೇಮ ಗೀತೆಯ ಸಾಲನೊಂದ ಗುಣಗುಣಿಸದಿದ್ದರೆ...

ಹೋಟೆಲ್ ಟೇಬಲ್ ಮೇಲೆ ಕುಳಿತು ಮನೆಯ ಊಟವನ್ನು
ಹೊಗಳತೊಡಗಿದರೆ...

ನಿಶ್ಚಿಂತರಾಗಿ ಬದುಕು
ಅನುಭವಿಸದೇ ತಲೆಯ ತುಂಬ ಸಲ್ಲದ್ದು ತುಂಬಿಕೊಂಡಿದ್ದರೆ...

ಹೊರಗೆ ಮಳೆ ಸುರಿವಾಗ ಬಿಸಿಬಿಸಿ
ಪಕೋಡಾಗಳ ಬದಲಿಗೆ
ಛತ್ರಿಯ ನೆನಪಾಗತೊಡಗಿದರೆ...

ನಗುನಗುತ್ತಲೇ ಬೆಳಗನ್ನು ಸ್ವಾಗತಿಸುತ್ತಿದ್ದ ನಾವುಗಳು, 
ದಿನವಿಡೀ ಒಂದು ಮುಗುಳ್ನಗಲೂ
ಆಗದೆ ಸಂಜೆಯನ್ನು ಕಳೆಯತೊಡಗಿದರೆ...

ನಾವುಗಳು ಮುದುಕರಾದಂತೆ...

ಕಾರಣ,

ದೇಹದ ಮೇಲೆ  ನೆರಿಗೆಗಳೆಷ್ಟೇ
ಬೀಳಲಿ ,
ಮನಸ್ಸಿಗೆ ಒಂದೂ ಸಹ ಬೀಳದಂತೆ ಬದುಕುವದನ್ನು ಕಲಿಯಬೇಕು...

( ಹಿಂದಿ ವಾಟ್ಸ್ಯಾಪ್ ಮೆಸೇಜೊಂದರ
ಕನ್ನಡ ಭಾವ...)

Saturday, 11 March 2023

Ignorance is bliss - ಅಂತೊಂದು
ಮಾತಿದೆ.ನೀವು ಹೇಳಿದ ಹಾಗೆ ಅಪಾಯ ರಹಿತ ನಂಬಿಗೆಗಳು ಈ ಸಾಲಿಗೆ ಸೇರುತ್ತವೆ.ನೀವು ಕೊಟ್ಟ ಉದಾಹರಣೆಗಳೂ ಪರಿಚಿತವೇ.ಅದಕ್ಕೆ ಮತ್ತೆ ಅಷ್ಟು ಸೇರಿಸಬಹುದು ಎಂಬಷ್ಟು ಅಂಥ ನಂಬಿಕೆಗಳು ಈಗಲೂ ಬಳಕೆಯಲ್ಲಿವೆ.
೧) ಮಗು ಹೆಚ್ಚು ಹೊತ್ತು ಮಲಗಿದರೆ/ ಚಿಲಕ ಬಾರಿಸಿದರೆ/ ಕಾಗೆ ಸೂರಿನ ಮೇಲೆ  ಕುಳಿತು ಕೂಗಿದರೆ ಅತಿಥಿಗಳ ಆಗಮನ.
೨) ಒಳ್ಳೆಯ ಕೆಲಸಕ್ಕೆ ಮೂವರು ಹೋಗಬಾರದು/ ಹೋಗಲೇ ಬೇಕಾದ ಪ್ರಸಂಗ ಬಂದರೆ ಅಡಿಕೆ ಬೆಟ್ಟ/ ಚಿಕ್ಕ ಕಲ್ಲು  ಏನಾದರೂ ಇಟ್ಟುಕೊಳ್ಳಬೇಕು
೩)  ಕೆಳಗೆ ಬಿದ್ದ / ಎಡಗೈಯಲ್ಲಿ ಇಟ್ಟು ಕೊಂಡ ಹೂಗಳು ದೇವರ ಪೂಜೆಗೆ
ನಿಷಿದ್ಧ.
೪) ರತ್ನ‌ಪಕ್ಷಿ ( ಸಾಂಬಾರ ಕಾಗೆ) ನೋಡಿ ದರೆ ಶುಭ ಸುದ್ದಿ.
೫) ಬಲಗಣ್ಣು ಹಾರಿದರೆ ಕೆಟ್ಟಸುದ್ದಿ.
೬) ಹೊಸ್ತಿಲ ಮೇಲೆ ಕುಳಿತುಕೊಳ್ಳ ಬಾರದು( ಹಿರಣ್ಯಕಶ್ಶಪನ‌ case).
೭) ವಿಧವೆಯರು ಎದುರು ಬಂದರೆ ನಿಂತು ಸ್ವಲ್ಪು ಹೊತ್ತು ಬಿಟ್ಟು ಹೊರಡ ಬೇಕು.
೮)ಮೊದಲ ಮಗು ಗಂಡಾಗಿದ್ದರೆ  ಅವನ ಮದುವೆಯವರೆಗೂ ತಾಯಿ ಹಸಿರು ಸೀರೆ/ ಹಸಿರು ಬಳೆ ಬಳಸಬಾರದು.
೯) ಅಂಗೈ ಕಡಿದರೆ ಧನ ಲಾಭ/ ಕಾಲು ಕಡಿದರೆ ಪ್ರವಾಸ ಭಾಗ್ಯ...
೧೦) ಹೆಂಗಳೆಯರು ಗಂಡನ ಹೆಸರು ಕರೆದರೆ ಅವನ ಆಯುಷ್ಯ ಕಡಿಮೆ.
೧೧) ಪ್ರಸವದ ಸಮಯದಲ್ಲಿ ಕತ್ತರಿಸಿದ ಮಗುವಿನ  ಹೊಕ್ಕಳ ಹುರಿ ಕಾಯ್ಡಿರಿಸ  ಬೇಕು.
೧೨) ಮೂವರು ಹೆಣ್ಣುಮಕ್ಕಳ ನಂತರ ಒಂದು ಗಂಡು ಮಗುವಾದರೆ lucky.
೧೩) ಹೊರಗೆ ಹೋಗುವಾಗ ಎಂದೂ ಹೋಗುತ್ತೇನೆ ಅನ್ನದೇ, ಹೋಗಿ ಬರುತ್ತೇನೆ ಅಥವಾ ಬರುತ್ತೇನೆ ಎಂದೇ ಹೇಳಬೇಕು.
೧೪) ದ್ವಾದಶಿಯ ದಿನ  ಹೆಂಗಳೆಯರು ತಲೆಸ್ನಾನ ಮಾಡಿದರೆ ' ಮಕ್ಕಳಿಲ್ಲದ ಬಾಣಂತಿ'ಯರಾಗುತ್ತಾರೆ.
೧೫)ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬಾರದು...
೧೬) ಮನೆಯ ತಲೆಬಾಗಿಲು ದಕ್ಷಿಣ ದಿಕ್ಕಿಗೆ ಇರಬಾರದು...
೧೭)  ದೇವರ ಮನೆಬಾಗಿಲು ಎತ್ತರವಿರ ಕೂಡದು...
೧೮) ತಂದೆ- ತಾಯಿಗಳಿರುವ ಗಂಡು ಮಕ್ಕಳು ಶವಕ್ಕೆ ಹೆಗಲು ಕೊಡಬಾರದು
೧೯) ಮೊದಲ ಮಗುವಾಗುವವರೆಗೂ 
ಮಗಳ ತಂದೆ- ತಾಯಿಗಳು ಅವಳ ಮನೆಯಲ್ಲಿ ಊಟ ಮಾಡಬಾರದು.
೨೦) ಹೆಣ್ಣಿನ ಕುಂಡಲಿಯಲ್ಲಿ ' ಮಂಗಳ' ವಿದ್ದರೆ ಗಂಡ/ ಅತ್ತೆ/ ಮಾವ ಎಲ್ಲರಿಗೂ ಆಪಶಕುನ...
೨೧) ಹೊರಗೆ ಹೊರಟಾಗ," ಎಲ್ಲಿಗೆ ಹೊರಟೆ"- ಎಂದು ಕೇಳಿದರೆ ಶುಭವಲ್ಲ...
೨೨) ದೇವರಿಗೆ ಒಡೆದ ಕಾಯಿ ಕೆಟ್ಟಿದ್ದರೆ ಒಳ್ಳೆಯದು...
೨೩) ಗುಡಿ ಪ್ರದಕ್ಷಿಣೆ ಹಾಕಿದ ಮೇಲೆ
ಐದು ನಿಮಿಷವಾದರೂ ಕಟ್ಟೆಯ ಮೇಲೆ ಕುಳಿತೇ ಹೋಗಬೇಕು.
೨೪)ಶುಭ ಸಂದರ್ಭಗಳಲ್ಲಿ ಬಲಗಾಲು
ಮುಂದಿಟ್ಟು ಮನೆ ಪ್ರವೇಶಿಸಬೇಕು...
೨೫) ಗಂಡನ ಮನೆಗೆ ವಧು"ಕಾಲಿನಿಂದ ಧಾನ್ಯ ಚಿಮ್ಮಿಸಿ " ಬಂದರೆ ಮನೆಯ ಸಮೃದ್ಧಿ ಹೆಚ್ಚುತ್ತದೆ...
             ಸದ್ಯ ಇಷ್ಟು ಸಾಕು...ಏಕೆಂದರೆ ಸಧ್ಯಕ್ಕೆ ಇವುಗಳು ಅಲ್ಪಾಯುಷಿಗಳು... ಇವಕ್ಕೆ ಇರುವದು ಭೂತಕಾಲ ಮಾತ್ರ.ವರ್ತಮಾನ/ ಭವಿಷ್ಯ ಮಸುಕು...ಮಸುಕು...

Tuesday, 7 March 2023

         ೧೯೬೦ ನೇ ಇಸ್ವಿ‌.ನನಗಾಗ ಹದಿನಾಲ್ಕು ವಯಸ್ಸು.ಮನೆತುಂಬ ಜನ. ಹಿರಿಯರ ಮಡಿ- ಮೈಲಿಗೆ ಕಾರಣವೋ/ ಕೆಲಸಕ್ಕೆ ಜನರಿದ್ದರೆಂ
ದೋ ಮಕ್ಕಳು ' ಊಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಭಾವ.ಹೀಗಾಗಿ ನಾವು ಯಾವಾಗಲೂ ' ಕೇರ್ ಆಫ್ ಬಯಲು'. ಗುಂಪು ಕಟ್ಟಿಕೊಂಡು ಹಿಂಡು ಹಿಂಡಾಗಿ ಅಲೆಯತೊಡಗಿದರೆ
ಮನೆ ನೆನಪಾಗಲು ಹೊಟ್ಟೆ ಹಸಿಯಬೇಕು.ಹೀಗಿದ್ದವರಿಗೆ ಮೂಗು ದಾರ ಹಾಕಿ ಒಂದೆಡೆ ಕಟ್ಟಿ ಹಾಕಿದ್ದು
ಅಸೇ ಆಗ ಶುರುವಾದ ಕುಮಾರೇಶ್ವರ
ರಟ್ಟೀಹಳ್ಳಿಯ ಶ್ರೀ ಕುಮಾರೇಶ್ವರ ಮಾಧ್ಯಮಿಕ ಶಾಲೆ.ನಮಗೆ ಕಲಿಯುವದು ಬೇಕಿತ್ತೋ ಇಲ್ಲವೋ
ಲೆಕ್ಕಿಸದೇ ಆಡುವ ಮಕ್ಕಳನ್ನು ಎಳೆದುಕೊಂಡು ಹೋಗಿ ದಾಖಲಿಸಿದ್ದು
ಮಕ್ಕಳ ಸಂಖ್ಯೆ ಹೆಚ್ಚು ಬೇಕೆಂಬ ಕಾರಣಕ್ಕೆ.ನಮಗೆ ವ್ಯತ್ಯಾಸ
ನಾವಾಡುತ್ತಿದ್ದ  ಆಟದ ಬಯಲು ಮಾತ್ರ...ಶಾಲೆ ಹೊಸದಾದದ್ದರಿಂದ ಶಿಕ್ಷಕರೂ ಯುವಕರು, ಹೊಸಬರು, ನೂರಾರು ಕನಸುಗಳನ್ನು ಕಟ್ಟಿಕೊಂಡು
ಬಂದಿದ್ದರು.ತಮ್ಮನ್ನು ತಾವೇ prove ಮಾಡಿಕೊಳ್ಳುವ ಹಂಬಲ.ಹೀಗಾಗಿ
ಅದಕ್ಕಾಗಿ ಸದಾ ಪ್ರಯತ್ನ.ಮಕ್ಕಳೂ ಕಡಿಮೆ.ಹೀಗಾಗಿ ವಿದ್ಯಾರ್ಥಿ/ ಶಿಕ್ಷಕರ ಬಾಂಧವ್ಯ ತಂದೆ- ಮಕ್ಕಳದಿದ್ದಂತೆ  ಇತ್ತು. ಶಾಲೆಯ ಅವಧಿ ಮುಗಿದ ಮೇಲೂ ಹತ್ತಾರು ಮಾರು ದೂರದಲ್ಲಿದ್ದ ಅವರ ಮನೆಗಳಲ್ಲಿ ನಮ್ಮ ದಾಂಗುಡಿ ಮುಂದುವರಿಯುತ್ತಿತ್ತು.
            ಹಾಗೆ ನಮ್ಮ ಕುಟುಂಬಕ್ಕೆ ಹತ್ತಿರವಾದವರಲ್ಲಿ ಮೊದಲಿಗರು ನಮ್ಮ
ಇಂಗ್ಲಿಷ/ ಹಿಂದಿ ಶಿಕ್ಷಕರಾದ ಶ್ರೀ, ಮಧುಕರ ಕೋಣನತಂಬಗಿಯವರು.
ಅವರ ಶ್ರೀಮತಿಯವರೂ ಸಣ್ಣವರೇ 
ಆದ್ದರಿಂದ ನಮ್ಮ ಗುಂಪಿಗೂ ಹತ್ತಿರದವರಾದದ್ದು ಆಶ್ಚರ್ಯಕರ ವೇನೂ ಆಗಿರಲಿಲ್ಲ.
     ‌         ಗುರುಗಳ ಸಾಹಿತ್ಯಾಸಕ್ಕಿ/ ಅವರ ವಿದ್ವತ್ಪೂರ್ಣ ಮಾತುಗಳು/ 
ಅವರು ಬರೆದ ಬರಹಗಳು ಅದೇ ಬೌದ್ಧಿಕವಾಗಿ ಅರಳುತ್ತಿರುವ ನಮಗೆಲ್ಲ ಒಂದು ತೀರದ ಅಚ್ಚರಿ.ಸ್ಕೂಲ್ magazine ಗಳಿಗೆ, ಇನ್ನಿತರ cultural activities ಗೆ ಬೇಕಾಗುವ ಅರ್ಹತೆ/ ಧೈರ್ಯ ತುಂಬಿ ನಮಗೆ ಆಕಾರ. ಕೊಟ್ಟವರೂ ಅವರೇ...ಅವರ ಪ್ರಭಾವ ಎಷ್ಟಿತ್ತೆಂದರೆ ನಾವು college ಗೆ ಸೇರಿ,ಅವರೂ ನೌಕರಿ ಬದಲಿಸಿ ನಮ್ಮೂರು ಬಿಟ್ಟಮೇಲೂ  ನಮ್ಮ ಸಂಬಂಧಗಳಲ್ಲಿ ವ್ಯತ್ಯಾಸವಾಗಲೇ ಯಿಲ್ಲ. ಅವರ ಸಂಬಂಧಿಕರೂ ಧಾರವಾಡದಲ್ಲಿ ಇದ್ದುದರಿಂದ ಆಗಾಗ ಭೇಟಿಗೂ ಯಾವುದೇ ವ್ಯತ್ಯಾಸ ವಾಗಲಿಲ್ಲ.
                 ಹೋದ ವರ್ಷ ಅವರು ಕುಟುಂಬ ಸಮೇತ ಧಾರವಾಡದಲ್ಲಿ 
ಇದ್ದಾಗ ನಾನೂ ಹೋಗಿದ್ದೆ. ಮೂರು/ ನಾಲ್ಕು ಬಾರಿ ಭೇಟಿ/ ಫೋನ್ ಸಂಭಾಷಣೆಯಾಗಿತ್ತು.ಒಂದು ದಿನ ಮನೆಗೆ ಬನ್ನಿ ಎಂದು ತುಂಬ ಒತ್ತಾಯ ಮಾಡಿ ಕರೆದರು.ನನ್ನ ಗೆಳತಿ ಊರಲ್ಲಿ
ಇರಲಿಲ್ಲ. ಮರುದಿನ ಖಂಡಿತ ಬರುತ್ತೇವೆ ಎಂದು  ಹೇಳಿದ್ದಾಯಿತು.
ಅಂದೇ ಏಳು ಗಂಟೆಗೆ ನನಗೊಂದು ಫೋನ್ ಬಂತು. ಹೃದಯಾಘಾತದಿಂದ ಸರ್‌ ತೀರಿಕೊಂಡಿದ್ದರು- ನಂಬಲಾಗಲೇಯಿಲ್ಲ...ನಂಬದಿರೆ ವಿಧಿಯಿಲ್ಲ... ಅರ್ಧಗಂಟೆಯಲ್ಲಿ ಗೆಳತಿಯೊಂದಿಗೆ ಅವರ ಮನೆ ಸೇರಿದಾಗ ನಮ್ಮ ನೆಚ್ಚಿನ ಗುರುಗಳು
ಚಿರನಿದ್ರೆಯಲ್ಲಿ ಚಿರಮೌನಿಯಾಗಿದ್ದರು
               ಆ ಮಾತಿಗೆ ಇಂದಿಗೆ ಒಂದು ವರ್ಷ...ಈಗ ಅವರ ಫೋಟೋಕ್ಕೆ
ನಮಸ್ಕರಿಸಬೇಕು...ಅವರ ಪ್ರಸಾದ ದಲ್ಲಿಯೇ ಧನ್ಯತೆ ಕಾಣಬೇಕು. ನಮ್ಮ ಕುಟುಂಬಮಿತ್ರರಾದ  ಅವರ ಮನೆಯ ಸದಸ್ಯರಲ್ಲಿಯೇ ಅವರನ್ನು ಕಾಣಬೇಕು...

                
            

Thursday, 2 March 2023

ಮನದಾಳದ ಮಾತುಗಳು...
      ‌‌‌‌‌" ನಿಮ್ಮ ಪಲ್ಲಣ್ಣನ ಬಗ್ಗೆ ಒಂದು ಪುಸ್ತಕವನ್ನು ಮೊದಲು ಬರೆ. ಅವರ ಸಾಧನೆಗಳ ದಾಖಲೆಯಾಗಲೇಬೇಕು. ಅವು ಅನೇಕರಿಗೆ ಮುಂದೆ ದಾರಿದೀಪ ಗಳಾಗಬಹುದು, ಬದುಕಿನಲ್ಲಿ ಸ್ಫೂರ್ತಿ ಯಾಗಬಹುದು.ಛಲವೊಂದಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು-ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಹುದು- "ಎಂಬುದು ನಮ್ಮ ಪರಿಚಯದ ಹಲವಾರು ಜನರು, ಹಲವಾರು ಬಾರಿ ನನಗೆ ಹೇಳಿದ/ ಹೇಳುತ್ತಲೇ ಇದ್ದ ಮಾತು.
              ನಾನು ಹಾಗೆ ಮಾಡಲು ಹಿಂಜರಿದದ್ದಕ್ಕೆ ಹಲವಾರು  ಕಾರಣಗಳಿವೆ. ಮೊದಲನೇಯದಾಗಿ
ಸ್ವತಃ ಅವನಿಗೇ ಅದರ ಬಗ್ಗೆ ಆಸಕ್ತಿ ಯಿಲ್ಲ.ಏನೋ ಮುಜುಗರ.ಸಂಕೋಚ. ಅವನ ಮಟ್ಟಿಗೆ ತಾನು ಮಾಡಿದ್ದು ತನ್ನ  
ಮನಸ್ಸಿನ ಒತ್ತಾಸೆಗೊಂದು ಪ್ರಾಮಾಣಿಕ  ಪ್ರಯತ್ನ...ಎಂದೋ ಕಂಡ ಒಂದು ಕನಸಿನ ಸಾಕ್ಷಾತ್ಕಾರಕ್ಕೆ
ನಿಷ್ಠೆಯಿಂದ ದುಡಿದ ಫಲ. ಮಾಡಿದ್ದೇನೋ  ಹೌದು,ಆದರೆ ಮಾಡಬೇಕಾದದ್ದು ಬೆಟ್ಟದಷ್ಟಿದೆ.ಎಂಬ ಭಾವ. 
       ಎರಡನೇ ಕಾರಣವೆಂದರೆ ನಾನು ಅವನ ಬಗ್ಗೆ ಬರೆದರೆ ನಿಜವಾಗಿಯೂ ಅದಕ್ಕೆ ನ್ಯಾಯವನ್ನು ಸಲ್ಲಿಸಬಲ್ಲೆನೇ?
ಎಂಬುದು.ನನಗೂ / ಅವನಿಗೂ ಕೇವಲ ನಾಲ್ಕು ವರ್ಷಗಳ ಅಂತರ, ಇನ್ನೂ ನಾಲ್ಕು ತಿಂಗಳು ಕಡಿಮೆಯೇ...
ಏಳನೇ ಇಯತ್ತೆ ಮುಗಿಸಿ ಮುಂದಿನ ಓದಿಗೆ ರಾಣೆಬೆನ್ನೂರಿಗೆ ಅವನು ಹೋದಾಗ ನನಗಾಗಷ್ಟೇ ಎಂಟು ವರ್ಷಗಳಾಗಿರಬಹುದು. ಆಗಾಗ ಅವನು ಊರಿಗೆ ಬರುತ್ತಿದ್ದರೂ ನಮಗೆಂದು ಅವನು ದಕ್ಕಿದ್ದು ಅವನಿಗೆ
ನೌಕರಿ ಸಿಕ್ಕು ಧಾರವಾಡದಲ್ಲಿ ಮನೆ ಮಾಡಿದ ಮೇಲೆಯೇ...ಆಗಲೂ ತಂದೆಯ ಜವಾಬ್ದಾರಿಯನ್ನು ತನ್ನದೇ ಹೆಗಲಿಗೇರಿಸಿಕೊಂಡು ಸದಾ ಬದುಕಿನ ಹೋರಾಟ ನಡೆಸಿದ್ದ ಅವನ ಬಗ್ಗೆ
ಭಯ,ಗೌರವ ಸಾಕಷ್ಟು ಇದ್ದುದು ನಿಜವಾಗಿದ್ದರೂ ಮನಸ್ಸನ್ನು ಬಿಚ್ಚಿಟ್ಟು
ಹರಟಿ ನಿರಾಳವಾಗುವುದಕ್ಕೆ ವೇಳೆ/ ಆ
ರೀತಿಯ ಮನೆಯ ವಾತಾವರಣ ಎರಡೂ ಆ ಕಾಲದಲ್ಲಿ ಇರಲಿಲ್ಲ. ಅಂಥದರಲ್ಲಿ ಒಬ್ಬರ ಬಗ್ಗೆ ಏನನ್ನಾದರೂ ಬರೆಯುವಷ್ಟನ್ನು ನಾನು ಖಚಿತವಾಗಿ ತಿಳಿದುಕೊಂಡಿದ್ದೇನೆ ಎಂಬುದೇ ಉದ್ಧಟತನದ ಮಾತಾಗುವ
ಸಾಧ್ಯತೆಯೇ ಹೆಚ್ಚು.
     ‌    ‌‌   ಮೂರನೆಯದಾಗಿ ಪಲ್ಲಣ್ಣ ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಅವನ ಸಾಹಿತ್ಯಾಸಕ್ತಿ ತೀವ್ರ.ಅವನ ಮಾತಿನ‌ ಆಳ/ ಅರ್ಥ/ ಗಳಿಗೆಗೊಮ್ಮೆ
ಉದಹರಿಸುವ ದೃಷ್ಟಾಂತಗಳು/ ಮಾತು ಮಾತಿಗೆ ಮಂಕು 
 ಕಗ್ಗಗಳು/ ಸಂಸ್ಕೃತ ಶ್ಲೋಕಗಳು/
ಓದಿದ- ಅನುಭವಿಸಿದ ಘಟನೆಗಳ 
ನೆನಪುಗಳು ,ಇವುಗಳನ್ನು ನೆನೆದರೆ
ಅವನೆದುರು ಬಾಯಿ ತೆರೆಯಲೂ ಆಗದೇ ಕೇವಲ‌ ಕೇಳುತ್ತಿರಬೇಕು ಎನಿಸಿದ್ದೇ ಹೆಚ್ಚು. ಹೀಗಾಗಿ 'ಅವನ‌ ಬಗ್ಗೆ ಬರೆಯಬಾರದೇಕೆ? ಎಂದು ಹಲವು ಬಾರಿ ಅನಿಸಿದರೂ  ಅದು ಸುಲಭವಾಗಿ ಕಾರ್ಯರೂಪಕ್ಕೆ ಬರಲೇಯಿಲ್ಲ.
               ನಾನು ನೌಕರಿಯಿಂದ‌ ನಿವೃತ್ತಳಾಗುವ ಹೊತ್ತಿಗೆ ಅವನ ಕನಸಿನ ಸಾಮ್ರಾಜ್ಯ ರೂಹು ಪಡೆದಾಗಿತ್ತು.ನಿವೃತ್ತಿಯ ನಂತರ ಧಾರವಾಡಕ್ಕೆ ಬಂದ ತಮ್ಮ ಸುಧೀಂದ್ರ ನ ನಿರಂತರ ಬೆಂಬಲ- ಸಹಕಾರದಿಂದ,
ತನ್ನ Software ನೌಕರಿ ಬಿಟ್ಟು ಹಂಚಿನಮನಿ ಕಾಲೇಜಿನ ಉಸ್ತುವಾರಿ
ಕೆಲಸಕ್ಕೆಂದೇ ಬಂದು ನಿಂತ ಮನೋಜನ ಸಹಾಯದ ಬೆಂಬಲದಿಂದ ಕಾಲೇಜು ತನ್ನ ರೆಕ್ಕೆ- ಪುಕ್ಕಗಳನ್ನು ಬಲಿಸಿಕೊಂಡು/ ಬೆಳಸಿಕೊಂಡು ಹೆಚ್ಚಿನ ಹಾರಾಟಕ್ಕೆ 
ಆಕಾಶದತ್ತ  ನೆಗೆಯುವ ಹಂತದಲ್ಲಿದ್ದು
ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
     ‌        ಆದರೆ ಇಷ್ಟನ್ನು ಸಾಧಿಸಲು
ಅವನು ಪಟ್ಟ ಪಾಡನ್ನೇ ಬರಹ ರೂಪದಲ್ಲಿ ಬರೆಯುವ ವಿಚಾರದ ಒತ್ತಡ ಸುರುವಾದಾಗಲೇ ನಾನು ನನ್ನೆರಡು ಪುಸ್ತಕಗಳನ್ನು ಬರೆದೆ. ಅದರಲ್ಲಿ ಅವನ ಬಗ್ಗೆಯೂ ಒಂದೆರಡು
ಲೇಖನಗಳನ್ನು ಸೇರಿಸಿದೆ, -ನನಗೆ ತಿಳಿದದ್ದು/ ತಿಳಿದಂತೆ. ಆದರೆ ಅದು ಅವನನ್ನು ಕುರಿತು ನನ್ನ ಬುದ್ಧಿಯ ಗ್ರಹಿಕೆಯಷ್ಟೇ ಹೊರತು ಅದರ ಹೊರತಾಗಿ ಇದ್ದದ್ದೇ ಹೆಚ್ಚು...ನಾವು ಮಹಾಸಾಗರದೆಡೆ ಮುಖ ಮಾಡಿ ನಿಂತರೂ ನಮಗೆ ದಕ್ಕುವದು ನಮ್ಮ ಬೊಗಸೆಯ ಅಳತೆಯಷ್ಟೇ...
            ಕೊನೆಗೆ ಒಂದೇ ಮಾತು... ಹೂವಿನ ಪರಿಮಳ/ ಶ್ರೀಗಂಧದ  
ಸುವಾಸನೆಗಳಿಗೆ ಯಾವುದೇ/ ಯಾರದೇ ಹಂಗಿಲ್ಲ.ಅವು ತಂತಾನೇ ಹರಡುತ್ತವೆ.ಹಾಗೆಯೇ ಸತ್ಕಾರ್ಯ ಗಳೂ ಸಹ.ನಮ್ಮ ಅಣ್ಣ ಏನೆಂದು
ನಾವು ಹೇಳಬೇಕಾಗಿಲ್ಲ, ಅವನ ಸಾಧನೆಗಳೇ ಆ ಕೆಲಸ ಮಾಡುತ್ತವೆ. ಅವನಿಂದ ಉಪಕೃತರಾದವರ ಸಂಖ್ಯೆ
ದೊಡ್ಡದು.ಅವರೆಲ್ಲರ ಶುದ್ಧ ಮನಗಳ ಹಾರೈಕೆ ಅವನ ಬೆಂಬಲಕ್ಕಿದೆ.ಎಂಬತ್ತರ
ವಯಸ್ಸಿನಲ್ಲೂ/ ತನ್ನದೇ  ಅನಾರೋಗ್ಯದ ಸಮಸ್ಯೆಗಳ ಮಧ್ಯದಲ್ಲಿಯೂ ಎದೆಗುಂದದೇ ಸದಾಕಾಲ ಕಾಲೇಜು/ ಮಕ್ಕಳು ಎಂದೇ
ಜಪಿಸುವ ಶುದ್ಧಾತ್ಮವನ್ನು ಭಗವಂತನೂ ಬೆಂಬಲಿಸುತ್ತಿದ್ದಾನೆ.
ಅವನಿಗೆ ಇನ್ನಿಷ್ಟು/ ಮತ್ತಷ್ಟು/ ಮಗದಷ್ಟು ಸಾಧಿಸಲು ಬೇಕಾದ ಆಯುರಾರೋಗ್ಯ/ ಅಗಾಧ ಶಕ್ತಿಯನ್ನು
ಆ ಸಾತೇನಹಳ್ಳಿಯ  ಶಾಂತೇಶ ಕರುಣಿಸಲೆಂಬುದೇ ನಮ್ಮೆಲ್ಲರ ಮನದ 
ಏಕೈಕ ಹಾರೈಕೆ...     ‌
    
     ‌        
               

     
                 

How to treat wet cough?

🟣 How to Treat Wet Cough (Productive Cough) A wet cough is a cough that produces mucus or phlegm. It is the body’s natural way of clearing ...