Wednesday, 15 March 2023

ನನಗೂ ಪಲ್ಲಣ್ಣನಿಗೂ ಕೇವಲ‌ ಮೂರು
ವರ್ಷ, ನಾಲ್ಕು ತಿಂಗಳ ವ್ಯತ್ಯಾಸ. ಅವನು ಏಳನೇ ಇಯತ್ತೆ ಮುಗಿಸಿ ಹೈಸ್ಕೂಲಿಗೆಂದು ರಾಣೆಬೆನ್ನೂರಿಗೆ ಹೋದಾಗ ಅವನಿಗೆ ಹದಿಮೂರು,  ನನಗೆ ಒಂಬತ್ತು ಮುಗಿದಿರಬಹುದು. ನಮ್ಮೂರಲ್ಲಿ ಹೈಸ್ಕೂಲ್ ಇಲ್ಲದ ಕಾರಣಕ್ಕೆ  ಅವನು ರಾಣೆಬೆನ್ನೂರು, ಅಲ್ಲಿಂದ ಕಾಲೇಜಿಗೆ ಬೆಳಗಾವಿ, ಬೆಳಗಾವಿಯಿಂದ post graduation ಗೆ ಧಾರವಾಡ ಹೀಗೆ ಸ್ಥಳ ಬದಲಾಯಿಸುತ್ತ ಹೋದ ಕಾರಣಕ್ಕೆ ಅವನ ಜೊತೆ ನನಗೆ ಸಂಪೂರ್ಣವಾಗಿ ದಕ್ಕಿದ್ದು ಕಾಲೇಜು ಸೇರಲು ಧಾರವಾಡಕ್ಕೆ ನಾನು ಬಂದಾಗಲೇ ಅಥವಾ ಅವನೇ ನನ್ನನ್ನು
ಕರೆಸಿಕೊಂಡಾಗಲೇ...ಹೀಗಾಗಿ ಸುಧೀಂದ್ರ, ನಂದಾ, ಮಿತ್ರವಿಂದಾರಿಗೆ ಸಿಕ್ಕಷ್ಟು ಮೋಜಿನ ದಿನಗಳು ನನಗೆ ಮೊದಮೊದಲು ದಕ್ಕಿರಲಿಲ್ಲ. ಅತ್ತ ಹಿರಿಯರ ಲೆಕ್ಕಕ್ಕೂ ಇಲ್ಲದ, ಇತ್ತ ಕಿರಿಯರ ಸಾಲಿಗೂ ಸಲ್ಲದ ವಯಸ್ಸು ನನ್ನದು ಆಗ. ಅವನ ಜೊತೆ ಸಿಗುವದು ರಜೆಗೆ ಬಂದಾಗ ಮಾತ್ರವಾಗಿತ್ತು. ಆಗ  ಎಲ್ಲರೂ ತಮ್ಮ ತಮ್ಮ ಗುಂಪುಗಳಲ್ಲಿ ತಮಗೆ ತಿಳಿದಂತೆ ವೇಳೆ ಕಳೆಯುತ್ತಿ ದ್ದುದರಿಂದ  ನಮಗೆ ಸಿಗುತ್ತಿದ್ದುದು ನಮಗಾಗಿಯೇ ಸಿಗುತ್ತಿದ್ದ ಕೆಲವೇ ಗಂಟೆಗಳು...ಒಮ್ಮೆ ಧಾರವಾಡಕ್ಕೆ ನಾವೆಲ್ಲ ಬಂದಮೇಲೆ ಅವನು ' ಅಣ್ಣ ಕಡಿಮೆ- ಅಪ್ಪನ ಜಾಗದಲ್ಲೇ- ' ಹೆಚ್ಚು ಇದ್ದದ್ದು...ಹೀಗಾಗಿ ಅವನಿಗೆ ನೌಕರಿ/ ನಮಗೆ ಓದು ಹೀಗೆ ಒಂದು ನಿಗದಿತ track ನ ಪಯಣವಾಗಿತ್ತು ನಮ್ಮದು. ಅವನು ಅಷ್ಟೊತ್ತಿಗೆ  ಕಷ್ಟಗಳೊಂದಿಗೆ ಅನಿಯಮಿತ ಒಪ್ಪಂದ ಮಾಡಿಕೊಂಡಾ ಗಿತ್ತು. ನಮಗೆ ಒಂಚೂರೂ ಅವುಗಳ ಸೂಚನೆ ಸಿಗದಂತೆ  ಪರಿಸ್ಥಿತಿ ನಿಭಾಯಿಸಿದ್ದರ ಪರಿಚಯ ನಂತರದಲ್ಲಿ ನಮಗೆ ನಮ್ಮ  ಮಾತುಕತೆಗಳಲ್ಲಿಯೇ  ದೊರೆಯುತ್ತ ಹೋದದ್ದು  ಮಾತ್ರ ಒಂದು ವಿಡಂಬನೆ. ಧಾರವಾಡಕ್ಕೆ ಬಂದಮೇಲೆ ನಮ್ಮ ಮನೆ ನಮಗೆ ಮಾತ್ರ ಆಗದೇ ನಮ್ಮೂರಿಂದ ಬಂದ ಎಲ್ಲರಿಗೂ ' ತೆರೆದ ಬಾಗಿಲು' ಆಗಿ ,ಎಂದೂ ಮನೆಯವರಷ್ಟೇ ಇದ್ದದ್ದು/ ಉಂಡದ್ದು ನನ್ನ ನೆನಪಿನಲ್ಲಿ  ಇಲ್ಲವೇ ಇಲ್ಲ.  ಆದರೂ ಮನೆಯಲ್ಲಿ ಮಾಡುವವರಿಗೆ ತೊಂದರೆ ಆಗಬಾರ ದೆಂಬ ಎಚ್ಚರಿಕೆ ಸದಾ..." ನನಗೆ ಇವತ್ತು ಅಷ್ಟು ಹಸಿವೆಯಿಲ್ಲ, ಎಂದು ಪೀಠಿಕೆ ಸುರುವಾದರೆ ಯಾರೋ ಊಟಕ್ಕೆ ಬರುವವರಿದ್ದಾರೆ ಎಂಬ ಚಿಕ್ಕ ಸುಳಿವು ಸಿಗುತ್ತಿತ್ತು.ಆದರೆ ಆತಂಕಕ್ಕೆ ಕಿಂಚಿತ್ತೂ ಅವಕಾಶವಿರುತ್ತಿರಲಿಲ್ಲ.ಏಕೆಂದರೆ ಬೇರೆಯವರು ಉಂಡಷ್ಟೂ ತಾನೇ ಸ್ವತಃ ಉಂಡಂತೆ  ಖುಶಿ ಅವನಿಗೆ...
"ಇನ್ನೂ ಪಗಾರ ಬಂದಿಲ್ಲ ಎಂದು ಸದಾ ಹೇಳುತ್ತಾರೆ, ಸದಾ ಅಷ್ಟೊಂದು ಅತಿಥಿಗಳು ಮನೆಯಲ್ಲಿ...ಹೇಗೆ ಸಾಧ್ಯ? ಎಂದು ನಮ್ಮ ಮಾಲಿಕರಿಗೆ ಅಚ್ಚರಿಯೋ ಅಚ್ಚರಿ.!!! ನಾನೇ ಆ ಮನೆಗೆ ಮದುವೆಯಾಗಿ ಹೋಗುವದು ಎಂದಾದಾಗ ಸ್ವಾಭಿಮಾನಿ ಅಣ್ಣ ನಿಂತ ಕಾಲಮೇಲೆ ಮನೆ ಬದಲಾಯಿಸಿದ- ತಿಂಗಳಿಗೇ ನಿಶ್ಚಯವಾದ  ಮದುವೆಯ
ವರೆಗೂ  ಸಹ ಕಾಯದೇ ಮನೆ ತೆರವು
ಮಾಡಿದ ಸೂಕ್ಷ್ಮತೆ ಅವನದು...
                 ಅವನದೂ 1972 ರಲ್ಲಿ ಮದುವೆಯಾಯಿತು, ಇನ್ನಾದರೂ 'ತಾನು- ತನ್ನದು' ಎಂದು ಇರಲಾದೀತು ಎಂದುಕೊಂಡರೆ ಹಾಗಾಗಲೇಯಿಲ್ಲ, ನನ್ನ ನಂತರದ ತಮ್ಮ ತಂಗಿಯರ ವಿದ್ಯಾಭ್ಯಾಸ/ ನನ್ನ ಬದುಕಿನಲ್ಲಿ ಆದ  ದುರಂತದಿಂದ ಯಾವ ಜವಾಬ್ದಾರಿ ಯೂ  minus ಆಗದೇ plus ಆಗುತ್ತಲೇ ಹೋಗಿ ನಮ್ಮೆಲ್ಲರ ಬದುಕನ್ನು ನೇರಗೊಳಿಸುವ 
ಹೊಣೆ ಅವನ ಬೆನ್ನಿನಿಂದ ಮುಂದೆಯೂ ಬಹುದಿನಗಳ ಕಾಲ ಇಳಿಯಲೇಯಿಲ್ಲ...
      ‌  ‌ಆದರೆ ಒಂದೇ ಸಮಾಧಾನ... ಏನನ್ನೋ  ಮಾಡಬೇಕು ಎಂಬ ಅವನ ಒತ್ತಾಶೆ ನಿಧಾನವಾಗಿ ಚಿಗುರಿ  ಹೂ ಬಿಡುತ್ತಿದ್ದ ಕಾಲ.ಅವನದೇ ಇಚ್ಛಾಶಕ್ತಿ / ಜೊತೆಗೆ ಪುಷ್ಪಾಳ ಸಂಪೂರ್ಣ ಸಹಕಾರ ಎರಡೂ ಸೇರಿ ಅವನಿಗೆ ಇಂಧನವಾಗಿ ಮುನ್ನಡೆಸುತ್ತಿದ್ದವು !!! ಕ್ರಮೇಣ ಕನಸುಗಳು ರೆಕ್ಕೆ ಪಡೆದು/ ಬಲಿತು ನನಸಾಗಿ ಅಂದುಕೊಂಡದ್ದನ್ನು ಸಾಧಿಸಿ, ಮಧ್ಯದಲ್ಲಿ ಬಂದ ಸವಾಲು ಗಳಿಗೆಲ್ಲ ಎದೆಯೊಡ್ಡಿ ನಿವಾರಿಸಿಕೊಂಡು ಇದೀಗ ಅವನು ಸಾಧಿಸಿರುವದನ್ನು ನೋಡುವದು ಅವನಂತೆಯೇ ಅವನನ್ನು ಪ್ರೀತಿಸುವ ಪ್ರತಿಯೊಂದು ಆಪ್ತ ಜೀವಕ್ಕೂ ಹೆಮ್ಮೆ/ ತೀರದ ಅಭಿಮಾನ...
           ‌‌ ‌‌ಅವನ ಬಗ್ಗೆ ಬರೆಯುವದೂ
ಒಂದು ಸವಾಲಿನ ಕೆಲಸವೇ...ಎಂಬತ್ತು ವರ್ಷಗಳಲ್ಲಿ ಸಾಧನೆಯ ಛಲ/ ಯಾವ ಆಮಿಷಕ್ಕೂ ಒಳಗಾಗದೇ ಗುರಿಯೊಂದನ್ನೇ ಹಿಂಬಾಲಿಸುವ ಜಿಗುಟುತನ/ ಕಷ್ಟ - ಸುಖಗಳನ್ನು ಏಕರೂಪವಾಗಿ ಸ್ವೀಕರಿಸುವ  ಅವ್ವನ ಗುಣ/ ಅಪ್ಪನ ಪರೋಪಕಾರ ಬುದ್ಧಿ/ ಋಣಾತ್ಮಕ ನಿಲುವನ್ನೂ ಸಮಚಿತ್ತದಿಂದ ಅರಗಿಸಿಕೊಳ್ಳುವ  ಧೀಮಂತತೆ/  ಬೇಕಷ್ಟು ಹಣ- ಹೆಸರು ಗಳಿಸಿಯೂ ಅವಕ್ಕೆ ಅಂಟಿಕೊಳ್ಳದ ಸ್ಥಿತಪ್ರಜ್ಞತೆ - ಇವುಗಳ ಬಗ್ಗೆ ಏನೂಂತ, ಎಷ್ಟೂಂತ ಬರೆಯುವದು!!! ಅದೆಂದಿಗೂ ಮುಗಿಯದ ಅಧ್ಯಾಯ. ಬರೆದಷ್ಟೂ ಬೆಳೆಯುತ್ತ ಹೋಗುವ  ಮಹಾಯಾನ...ಹಾಗೆ ಬರೆಯುವದು ಅವನಿಗೆ ಎಳ್ಳಷ್ಟೂ ಇಷ್ಟವಿಲ್ಲ ಎಂಬುದೂ ಒಂದು ಬಹು ಮುಖ್ಯ ಕಾರಣಗಳಲ್ಲಿ ಒಂದು ಹಾಗೂ ಅದೇ
ಮೊದಲನೇಯದು...

         
 


 

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...