ಸವಿನೆನಪುಗಳು ಬೇಕು, ಸವಿಯಲೀ ಬದುಕು- ಎನ್ನುವುದು ಪ್ರತಿಯೊಬ್ಬರ ಅನುಭವ. ನಮ್ಮಂತಹ ಅತಿ ಭಾವುಕ ವ್ಯಕ್ತಿಗಳಿಗೆ ಅದೇ ಬದುಕಿನ ಅತಿ ದೊಡ್ಡ ಆಸ್ತಿ ಕೂಡ. ಆದರೆ ಬದುಕಿನಲ್ಲಿ ಸವಿನೆನಪುಗಳನ್ನು ಕಟ್ಟಿಕೊಡುವ ಜೊತೆಗೆ, ಬದುಕಿಗೆ ಅನಿವಾರ್ಯವಾದ ಕಹಿಘಟನೆಗಳ ಲ್ಲಿಯೂ ನಾನು ಸದಾ ನಿಮ್ಮೊಂದಿಗೆ ಇರುವೆ ಎನ್ನುವ ಭರವಸೆ ನೀಡುವ, ಆ ಭರವಸೆಯನ್ನು ಬದುಕಿಡೀ ನಿಭಾಯಿಸುವ ಒಬ್ಬ ವ್ಯಕ್ತಿ ನಮ್ಮ ಜೀವನದಲ್ಲಿದ್ದರೆ ಅದಕ್ಕಿಂತ ಬೇರೆ ಅದೃಷ್ಟ ಬೇಕೇ? ಇಂತಹ ಒಬ್ಬ ವ್ಯಕ್ತಿಯನ್ನು ನಮ್ಮ ಪೂರ್ಣ ಕುಟುಂಬಕ್ಕಾಗಿ ನೀಡಿದ ಆ ದೇವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಮ್ಮ ಪಲ್ಲಣ್ಣ ನಮ್ಮೆಲ್ಲರಿಗೂ ಬದುಕು ಕಟ್ಟಿಕೊಟ್ಟ ರೀತಿಯೇ ಅವಿಸ್ಮರಣೀಯ
ಬಡ ಕುಟುಂಬದಲ್ಲಿ ಹುಟ್ಟಿ, ತನ್ನ ಸಹನೆ ಸ್ವಪ್ರತಿಭೆಯಿಂದ ಎಲ್ಲಾ ಕಷ್ಟಗಳನ್ನು ಎದುರಿಸಿ, ಶಿಕ್ಷಣ ಮುಗಿದ ತಕ್ಷಣವೇ 22ರ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟು ನಿಂತ ಬಗ್ಗೆ ಎಲ್ಲರಿಗೂ ಗೊತ್ತು. ನಾನು ಮತ್ತೆ ಅದರ ಬಗ್ಗೆ ಬರೆಯಲೇ ಬೇಕಿಲ್ಲ. ಬದುಕಿನ ಪುಟ್ಟ ಪುಟ್ಟ ಕ್ಷಣಗಳನ್ನೂ ಅದು ಹೇಗೆ ಆನಂದಿಸ ಬಹುದು ಎಂಬುದನ್ನು ಕಲಿತ ಬಗ್ಗೆ ಮಾತ್ರ ಈ ಬರಹ.
ಪಲ್ಲಣ್ಣ ಧಾರವಾಡದಿಂದ
ರಟ್ಟೀಹಳ್ಳಿಗೆ ಬರುತ್ತಾನೆಂದರೆ ನಮಗೆಲ್ಲ ಬಾಲ್ಯದಲ್ಲಿ ಅತಿ ನಿರೀಕ್ಷೆ ತುಂಬಿದ ಕ್ಷಣಗಳವು. ಅವನು ತರುವ ಧಾರವಾಡ ಫೇಡಾ/ ಚಿಕ್ಕು ಹಣ್ಣುಗಳಿ ಗಿಂತ ಅವನ ಅಂತಃಕರಣ ,ಪ್ರೀತಿ ತುಂಬಿದ ನಗು,ಇವುಗಳೇ ಹೆಚ್ಚು ಸವಿ... ಪುಟ್ಟ ಮಿತ್ರವಿಂದಾ ರಾತ್ರಿ ಊಟಕ್ಕೆ ಹಟ ಮಾಡಿದರೆ, ನಾಲ್ಕಾಣೆ ಕೊಡುವೆ ಎಂದು ಓಲೈಸುವ ರೀತಿ,ಬೇಕೆಂತಲೇ ಅವಳ ಕೂದಲನ್ನು ಹೊಗಳಿ ಅವಳು ತನ್ನ ಕೂದಲಿಗೆ ದೃಷ್ಟಿ ಆಗಿ "ಕೂದಲು ಉದುರ್ತಾವ"- ಎಂದು ರೇಗಿದಾಗ ಎಲ್ಲರೂ ಜೋರಾಗಿ ನಗುವುದು, ಉಫ್, ಎಂತಹ ಸುಂದರ ಕ್ಷಣಗಳು !!!
"ಕೊಡುವುದರಲ್ಲಿ ಇರುವ ಸಂತೋಷ ಮತ್ತೆ ಯಾವುದರಲ್ಲಿಯೂ ಇಲ್ಲ "- ಎನ್ನುವ ಅವನ ತತ್ವ ನಾವೆಲ್ಲ ಮೊದಲಿನಿಂದಲೂ ನೋಡಿದ್ದೇ. ಹೊಸದೇನೂ ಅಲ್ಲ. ಒಂದು ಬಾರಿ ನಾನು ಸ್ಟೋವ್ ಮೇಲೆ ಹಾಲು ಕಾಯಿಸಲಿಟ್ಟು ಮರೆತುಬಿಟ್ಟೆ. ಅದು ಕುದಿದು ಅರ್ಧದಷ್ಟು ಆಯಿತು. ರಾತ್ರಿ ಅವನಿಗೆ ಕುಡಿಯಲು ಕೊಟ್ಟಾಗ," ಇದು ಬಾಸುಂದಿ ಹಂಗ ರುಚಿ ಆಗೇದ. ಉಳಿದ ಹಾಲಿಗೂ ಸಕ್ಕರಿ ಹಾಕು, ಆನಂದನ್ನ ಕರೀತೀನಿ. ಅವನೂ ರುಚಿ ನೋಡಲಿ. ನಾಳೆ ಒಂದಿನಾ ಮೊಸರು ಇಲ್ಲಂದ್ರ ಏನೂ ಆಗುದಿಲ್ಲ "-ಎಂದು
ಗೆಳೆಯನನ್ನು ಕರೆಯಲು ಹೋದಾಗ ಆ ಸ್ನೇಹ ಪ್ರೀತಿಗೆ ತಲೆ ತಾನಾಗಿಯೇ ಬಾಗಿತು...
ಪುಟ್ಟ ಜಾನುವಿಗೆ ಅಂದು ಅಪ್ಪ ಸ್ನಾನ ಮಾಡಿಸಲಿ ಎನ್ನುವ ಆಶೆ. ಸರಿ ಖುಷಿಯಿಂದ ಸ್ನಾನ ಮಾಡಿಸುತ್ತಿರುವ ಅಪ್ಪನ ಬನಿಯನ್ ನಲ್ಲಿ ಒಂದೆರಡು ತೂತುಗಳು ಕಂಡವು. ಜಾನು ಭಾವುಕಳಾಗಿ 'ಅಪ್ಪ ನೀನು ಹರಿದ ಬನಿಯನ್ ಹಾಕ್ಕೋಬ್ಯಾಡ, ನಂಗ ಕೆಟ್ಟನಸ್ತದ 'ಎಂದಳು. ಒದ್ದೆ ಮೈಯಲ್ಲಿದ್ದ ಅವಳನ್ನು ಎದೆಗೆ ಒತ್ತಿ "ಇಲ್ಲ ಅವ್ವಿ , ಇನ್ನು ಮುಂದ ಹಾಕ್ಕೊಳ್ಳೋದಿಲ್ಲ " ಎಂದಾಗ ಅವನ ಮುಖದಲ್ಲಿನ ಸಂತಸ, ಧನ್ಯತೆ, ನಗು ವರ್ಣಿಸಲಾಗದ್ದು...
ಒಂದು ದಿನ ರಾತ್ರಿ ಒಂದು ಗಂಟೆಗೆ ನಮ್ಮಣ್ಣ ಮಿಲಿಂದನನ್ನು ಹೆಗಲ ಮೇಲೆ ಮಲಗಿಸುವ ಪ್ರಯತ್ನ ಮಾಡುತ್ತಿದ್ದ. ನಡುವೆ ಬಂದು "ಅವನು ಕಣ್ಣು ಮುಚ್ಚಿರುವನೇ ನೋಡು"- ಎಂದು ನನ್ನನ್ನು ಕೇಳಿದ. ಮಿಲಿಂದ "ನಾ ಇನ್ನೂ ಮಲ್ಕೊಂಡಿಲ್ಲ, ನಾನsss ಹೇಳ್ತೇನಿ, ಅಕಿನ್ನೇನು ಕೇಳತಿ"-ಎಂದಾಗ ಬಿದ್ದು ಬಿದ್ದು ನಕ್ಕು ಕೆಮ್ಮಲಾರಾಂಭಿಸಿದ ಪಲ್ಲಣ್ಣನ ಆ ನಗುವನ್ನು ಮತ್ತೆ ಮತ್ತೆ ನೋಡುವ/ ಕೇಳುವ ಆಶೆ.
ಮನೋಜ್ ನಾಲ್ಕು/ ಐದು ವರ್ಷಗಳಾದರೂ ಬಾಟಲಿಯಿಂದ ಹಾಲು ಕುಡಿಯುತ್ತಿದ್ದ.ಒಂದು ದಿನ
ಅವನ ಹಾಲಿನ ವೇಳೆಯಾಗಿತ್ತು. ಅಂದು ಮನೆಯಲ್ಲಿ ಅತಿಥಿಗಳಿದ್ದರು.
ಮಿತ್ರವಿಂದಾ ಅವನಿಗೆ" ಹಾಲು ಕುಡೀತಿಯಾ?"- ಎಂದು ಅವರೆದುರೇ
ಕೇಳಿದ್ದಕ್ಕೆ ಅವನಿಗೆ ವಿಪರೀತ ಸಿಟ್ಟು ಬಂತು. " ಬೇಕಂತssನ ಬಂದ ಮಂದಿ ಮುಂದ ನನಗ ಹಾಲು ಕುಡಿ ಅಂತ ಹೇಳ್ತಾರ, ನನಗ ಅಪಮಾನ ಆಗ್ಲಿ ಅಂತ"- ಎಂದು ಕೂಗಾಡಿದ." ಇದು ಹಂಚಿನಮನಿ ರಾಮಾಚಾರು/ ಪೋತದಾರ ರಂಗಾಚಾರ್ ಇಬ್ಬರನ್ನೂ
ಸೇರಿಸಿ ತಯಾರು ಮಾಡಿದ model" ಅಂತ ಹೇಳಿ ಪಲ್ಲಣ್ಣ ನಕ್ಕಿದ್ದೇ ನಕ್ಕದ್ದು...
ಒಂದು ಬಾರಿ ನಾಲ್ಕು ತಿಂಗಳ ಪಗಾರವೇ ಬಂದಿರಲಿಲ್ಲ.ಅದು ಆಗ ಮಾಮೂಲು ಎಂಬಂಥ ಸ್ಥಿತಿ. ಮನೆ ಖರ್ಚುನ್ನೂ ತೂಗಿಸಿಕೊಂಡು ಊರಿಗೂ ಹಣ ಕಳಿಸಬೇಕಿತ್ತು.ಅಂದೇ ದೂರದ ನಳದಿಂದ ನೀರು ತರಲು ಪಲ್ಲಣ್ಣ/ ನಾನು ಹೊರಟಿದ್ದೆವು.ಅವನ ಕೈಯಲ್ಲಿ ಜಡವಾದ ತಾಮ್ರದ ಬಿಂದಿಗೆ, ನನ್ನ ಕೈಯಲ್ಲಿ ಹಗುರವಾದ ತಗಡಿನ ಕೊಡಗಳಿದ್ದವು.ಕೆಲ ಹೆಜ್ಜೆಗಳನ್ನು ನಡೆದ ಅಣ್ಣ, ಗಕ್ಕನೇ ನಿಂತು ಕೊಡ ಬದಲಾಯಿಸಲು ಹೇಳಿದ.ನನಗೋ ಆಶ್ಚರ್ಯ!!!ಪ್ರಶ್ನಾರ್ಥಕವಾಗಿ ನೋಡಿದೆ." ಹೀಗೆ ಖಾಲಿಕೊಡ ನಾನು ಒಯ್ದರೆ, ಜನ ಅದನ್ನು ಒತ್ತೆಯಿಟ್ಟು
ಹಣ ತರಲು ಹೊರಟಿದ್ದೇನೆ " - ಅಂತ ತಿಳಿಯಬಹುದು ಎಂದು ಜೋರಾಗಿ
ನಕ್ಕ...ಅದು ಅವನಿಗೆ ಮಾತ್ರವೇ ಸಾಧ್ಯ.ನನ್ನ ಕಣ್ಣುಗಳು ತೇವವಾದದ್ದು
ಅವನಿಗೆ ತೋರಗೊಡದೇ ಮುಂದೆ ಮುಂದೆ ನಡೆದದ್ದೂ ನಿನ್ನೆ ಎಂಬಂತೆ
ನೆನಪಿದೆ.
ಆಗಾಗ ಅಣ್ಣ/ವೈನಿಯರ
ನಡುವೆ 'ಪೊಳ್ಳು ಮಾತಿನ ಸುಳ್ಳು ಕದನ 'ಗಳು ಸಾಮಾನ್ಯವೆಂಬಂತೆ ಬಂದು ಮರೆಯಾಗುತ್ತಿದ್ದವು." ಹಿರಿಯರು ಹೇಳೋದು ಸುಳ್ಳಲ್ಲ, ಏಳೇಳು ಜನ್ಮದ
ಸಿಟ್ಟು ತೀರಿಸ್ಕೊಳ್ಳಿಕ್ಕೆ ಅಂತsssನ ಆ ದೇವರು ಹೀಂಗ ಗಂಡ/ ಹೆಂಡತಿಯನ್ನ
ಗಂಟು ಹಾಕ್ತಾನ"- ವೈನಿಯ ಧಿಡೀರ್
Comment ಬಂತು.ಅಣ್ಣ ಅಚ್ಚರಿ ಎಂಬಂತೆ ನಿರುತ್ತರ." ಏನಾತೀಗ ಹಿಂಗ ಕೂಡಲಿಕ್ಕೆ???"- ವೈನಿ ವಿವರಣೆಗೆ ಕಾದರು." ಏನಿಲ್ಲ, ನೀನು ನನ್ನ ಹೆಂಡತಿ
ಆಗಲಿಕ್ಕೆ ಇನ್ನೂ ಆರು ಜನ್ಮ ಹಿಂದೆ ಬೀಳಬೇಕಾ ಅಂತ ಒಂದು ಕ್ಷಣ ಚಿಂತಿ ಆತು". ಆಮೇಲೆ ಆದದ್ದು ಎಲ್ಲರೂ ನಿರೀಕ್ಷಿಸಿದ್ದೇ...ವೈನಿಯನ್ನೂ ಒಳಗೊಂಡು ಎಲ್ಲರದೂ ನಗೆ ಸ್ಫೋಟ.
ಈಗ ಎಲ್ಲರಿಗೂ ತಟ್ಟನೇ ಕಾಣುವದು ಅವನ ಸದ್ಯದ ಯಶೋಗಾಥೆ...ಆದರೆ ಆ ಗುರಿ ತಲುಪಲು ಅವನು ಹಾದು ಬಂದ
' ಅಗ್ನಿ ದಿವ್ಯ' ಗಳಿಗೆ ಕೊನೆಯಿಲ್ಲ.ಅವನ ಸಾಹಿತ್ಯ ಪ್ರೇಮ/ ಜ್ಞಾನದಾಹ/ಬಂಧು ಪ್ರೀತಿ/ ಧನಾತ್ಮಕ ವಿಚಾರ ಧಾರೆ/ ಸಂಬಂಧಕ್ಕೆ ಕೊಡುವ ಬೆಲೆ/ ಅವನ ಜೀವನ್ಮುಖಿ ಧೋರಣೆ ಅವನನ್ನು ದಡ ಕಾಣಿಸಿವೆ. ನಮಗೆಲ್ಲರಿಗೂ ದಾರಿ ದೀಪವಾಗಿವೆ.ಎಂಥದೇ ಕಠಿಣ ಪರಿಸ್ಥಿತಿಯಲ್ಲಿಯೂ ಒಮ್ಮೆ ಅವನನ್ನು/ ಅವನ ಬದುಕನ್ನು ನೆನೆದರೆ ಸಾಕು ಮೈ- ಮನಗಳಲ್ಲಿ ಸ್ಫುರಿಸುವ ಚೇತನವೇ ಬೇರೆ...
ಬಾಳ ಹಳಿವುದದೇಕೆ?
ಗೋಳ ಕರೆವುದದೇಕೆ? ।
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ ।
ಪಾಲುಗೊಳಲಳಬೇಡ - ಮಂಕುತಿಮ್ಮ ॥
No comments:
Post a Comment