Monday, 13 March 2023


ಒಂದು ಬ್ರಹತ್ ಕಾದಂಬರಿಯಾಗ ಬಹುದಾದ ವಿಷಯವನ್ನು ಒಂದೆರಡು
ಪುಟಗಳಲ್ಲಿ ತುಂಬಿಸುವದಾದರೂ ಹೇಗೆ? ನಾವು ಸೋಲುವದೇ ಇಲ್ಲಿ. ಬದುಕು ಹಸನ ಮಾಡಲು ಬೇಕಾದ ಯಾವುದೊಂದರ ಬೆಂಬಲವೂ ಇಲ್ಲದಿದ್ದರೂ ಸಹನೆ/ ಸ್ವಪ್ರತಿಭೆಯ ಆಧಾರದ ಮೇಲೆಯೇ ಕಂಡ ಬ್ರಹತ್ ಕನಸೊಂದನ್ನು ನನಸು ಮಾಡಿದ ವ್ಯಕ್ತಿತ್ವವನ್ನು ನಾಲ್ಕಾರು ಪುಟಗಳಲ್ಲಿ ಹಿಡಿದಿಡುವದು ಅಸಂಭವವೇ... ಅಚ್ಚರಿಯ ವಿಷಯವೆಂದರೆ ಆ ಮಹಾಯಾನದ ಖುಶಿಯನ್ನಷ್ಟೇ ಎಲ್ಲರೊಂದಿಗೆ ಹಂಚಿಕೊಂಡು/ ನಂಜನ್ನೆಲ್ಲ ಸ್ವಂತಕ್ಕೆ ಇಟ್ಟುಕೊಳ್ಳುವದು ಸಾಧ್ಯ ಎಂದು ತೋರಿಸಿದ ವ್ಯಕ್ತಿಯಾದ ರಂತೂ ಯಾವ ಪೆನ್ನಿಗೂ ಅದನ್ನು ಪೂರ್ಣವಾಗಿ ದಾಖಲಿಸಲಾಗುವದಿಲ್ಲ.
         ಆದರೆ ಇಷ್ಟು ಮಾತ್ರ ಚನ್ನಾಗಿ ನೆನಪಿದೆ...ಅವನು ಊರಿಗೆ ಬರುತ್ತಾನೆಂದರೆ ನಮಗೆಲ್ಲ ಹಬ್ಬವೋ ಹಬ್ಬ. ಅವನು  ಬರುವಾಗ ತರುತ್ತಿದ್ಧ ಧಾರವಾಡ ಫೇಡಾ/  ಚಿಕ್ಕೂಹಣ್ಣುಗಳ ಆಕರ್ಷಣೆಯ ಜೊತೆಜೊತೆಗೆ ಅವನ ಅಂತಃಕರಣ/ ಪ್ರೀತಿ/ ಕಾಳಜಿಗಳೂ
ಸಮೃದ್ಧವಾಗಿ ಸಿಗುತ್ತಿದ್ದ  ದಿನಗಳವು.
"ಕೊಡುವದರಲ್ಲಿರುವಷ್ಟು  ಸುಖ ಪಡೆಯುವದರಲ್ಲಿಲ್ಲ "ಎಂಬುದನ್ನು ನಾವೆಲ್ಲಾ ಕಿಂಚಿತ್ತಾದರೂ ಕಲಿತದ್ದೇ
ಆದರೆ ಅದು ಅವನಿಂದ. ಅವನದು ಸದಾ ನೀಡುವ ಕೈ. ಹಟಮಾಡುವ ತಂಗಿಯರನ್ನು ಓಲೈಸುವ / ಅಳುವವ ರಿಗೆ ಸಾಂತ್ವನ ಹೇಳುವ ಅವನ ರೀತಿ
ಎಲ್ಲರಿಗೂ ಪ್ರಿಯ...
             " ಊಟ ಮಾಡುವದಿಲ್ಲ"- ಎಂದು ಹಟ ಮಾಡುವ ಒಬ್ಬ ತಂಗಿಗೆ
ನಾಲ್ಕಾಣೆಯ ಆಶೆ ತೋರಿಸಿ ಉಣಿಸುವ ಹಾಗೆಯೇ, " ನಿನ್ನ ಕೂದಲು ತುಂಬಾ ಉದ್ದ" - ಎಂದು ರೇಗಿಸಿ, ದೃಷ್ಟಿ ಬಿದ್ದರೆ ನನ್ನ  ಕೂದಲು ಉದುರುತ್ತದೆ"- ಎಂಬ ಆತಂಕ ಅವಳಲ್ಲಿ ಸೃಷ್ಟಿಸಿ ಎಲ್ಲರೂ ನಗುವಂತೆ
ಮಾಡುವದೂ ಗೊತ್ತಿತ್ತು.
                 ಬದುಕಿನಲ್ಲಿ ಕೊಳ್ಳುವದ ಕ್ಕಿಂತ ಕೊಡುವದರಲ್ಲಿಯೇ ಹೆಚ್ಚು ಸುಖ - ಎಂಬುದು ಮೊದಲಿನಿಂದಲೂ 
ಅವನ ಸೂತ್ರ.ಕಾಯಲು ಇಟ್ಟ ಹಾಲು, 
ಗಮನವಿಲ್ಲದೇ ಹೆಚ್ಚು ಕುದ್ದು ಗಟ್ಟಿಯಾಗಿ ಬಿಟ್ಟರೆ, "ಒಳ್ಳೆಯದೇ ಆಯಿತು, ಎಷ್ಟು ದಿನ ಆಗಿತ್ತು, ಬಾಸುಂದಿ ತಿಂದು, ಸಕ್ಕರೆ ಹಾಕಿಬಿಡು- ಎಂದು ಹೇಳಿ ಇನ್ನೊಬ್ಬ ತಂಗಿಯ ಅಪರಾಧಿ ಪ್ರಜ್ಞೆ ತಪ್ಪಿಸಿ ಮುಖ ಅರಳುವಂತೆ ಮಾಡುವಷ್ಟು ಮಾತೃ ಹೃದಯ ಅವನದು...
   ‌‌         ತನ್ನ ಮಕ್ಕಳ ಬಾಲ್ಯದ ಚಿಕ್ಕ ಪುಟ್ಟ ಘಟನೆಗಳನ್ನೂ  ಸಂಭ್ರಮಿಸುವ,
ಮಕ್ಕಳೊಡನೆ ಮಕ್ಕಳಂತೆ ಗಹಗಹಿಸಿ
ನಕ್ಕು ನಲಿಯುವ ಪ್ರಸಂಗಗಳಿಗೂ
ಬರವಿರಲಿಲ್ಲ.ಏನಾದರೂ ವಿಷಯ ಗಂಭೀರ ಚರ್ಚೆಗೆ ತಿರುಗಿದರೆ ಚಾಣಾಕ್ಷ
ತನದಿಂದ ಅದಕ್ಕೊಂದು ಹಾಸ್ಯದ ತಿರುವು ಕೊಟ್ಟು ಎಲ್ಲರನ್ನೂ ನಗಿಸಿ
ಇಡೀ ಪರಿಸರವನ್ನೇ ಕ್ಷಣದಲ್ಲಿ ಬದಲಾಯಿಸುವ ಜಾಣ್ಮೆ ಅವನಲ್ಲಿತ್ತು. 
ಒಮ್ಮೆ ಅವನ ಕೊನೆಯ ಮಗ ಯಾವುದೋ ವಿಷಯಕ್ಕೆ ಕೋಪಿಸಿಕೊಂಡು ರಾದ್ಧಾಂತ  ಮಾಡಿದಾಗ ," ಇದು ' ಹಂಚಿನಮನಿ ರಾಮಾಚಾರ್ಯರು/ ಪೋತದಾರ್ ರಂಗಾಚಾರ್ ಇಬ್ಬರನ್ನೂ ಸೇರಿಸಿ ಮಾಡಿದ ತಳಿ"- ಎಂದು ಜೋರಾಗಿ ನಗತೊಡಗಿದಾಗ ಮೊದಲು ಏನಾಗಿತ್ತು
ಎಂದೇ ನೆನಪಾಗದಷ್ಟು ವಾತಾವರಣ ಬದಲಾದದ್ದು ಮರೆಯುವ ಮಾತೇಯಿಲ್ಲ.
             ಆರ್ಥಿಕ ಸಂಕಷ್ಟ ಅವನಿಗೆ
ಹೊಸದಲ್ಲ.ಕಾಲಿಗೆ ಎಳೆದರೆ ತಲೆಗೆ, ತಲೆಗೆ ಎಳೆದರೆ ಕಾಲಿಗೆ ಇಲ್ಲದ ಪರಿಸ್ಥಿತಿ
ಸದಾ. ದೂರದಿಂದ ನೀರು ಹೊತ್ತು ತರಬೇಕೆಂದು ತಾಮ್ರದ ಕೊಡ ಹಿಡಿದು
ರಸ್ತೆಗೆ ಬಂದಾಗಲೆಲ್ಲ," ಇದನ್ನು ನಾನು ಒತ್ತೆಯಿಡಲು ಹೊರಟಿದ್ದೇನೆ" ಎಂದು 
ತಿಳಿಯುತ್ತಾರೆ ನೋಡಿದವರು ಎಂದು
ಜೋರಾಗಿ ನಗುವದು ಅವನಂಥ  ' ನಂಜುಂಡ ' ರಿಗೆ ಮಾತ್ರ ಸಲ್ಲುವ ಮಾತು ಎಂದು ಮಾತ್ರ ಹೇಳಬಲ್ಲೆ...
         " ಏಳೇಳು ಜನ್ಮದ ಸಿಟ್ಟು  ತೀರಿಸಿಕೊಳ್ಳಲೆಂದೇ  ದೇವರು ' ಗಂಡ- ಹೆಂಡತಿ- ಅಂತ ಗಂಟು ಹಾಕ್ತಾನ ಅನಸ್ತದ ನಂಗ "- ಎಂಬುದು ನಮ್ಮ ವೈನಿ ಕಾಯಂ ಹೇಳಿ ಕೆಣಕುತ್ತಿದ್ದ ಮಾತು. ಹಾಗೆ ಅಂದಾಗಲೆಲ್ಲ, ಅಣ್ಣ 
ಚಿಂತೆಯಲ್ಲಿದ್ದಂತೆ ಮುಖ ಮಾಡಿ," ದೇವರೇ, ನೀನು ನನ್ನ ಹೆಂಡತಿಯಾಗ ಲಿಕ್ಕೆ ಇನ್ನೂ ಆರು ಜನ್ಮ  ಹೀಗೇ ಕಾಯಬೇಕಾ???- " ಇದು ನಮ್ಮ ಅಣ್ಣ ಎಂಥ ಬದುಕನ್ನೂ ಸುಲಭವಾಗಿ ಹಸನಾಗಿಸುತ್ತಿದ್ದ ರೀತಿ...
          ಇಂದು ಅವನ ಯಶೋಗಾಥೆ ಯನ್ನಷ್ಟೇ ಬಲ್ಲವರಿಗೆ ಅವನು ಹಾದು ಬಂದ ದಾರಿಯ ಪೂರ್ಣ ಪರಿಚಯ ವಿಲ್ಲ. ಅವನದು ಸಮುದ್ರದ ' ಆಳ - ಅಗಲ' ದ ಬದುಕು. ಹಗುರವಾದ ದ್ದನ್ನೆಲ್ಲ ದಂಡೆಗೆ ದೂಡಿ, ಹೊರಲಾರ ದಷ್ಟು ಭಾರವಾದದ್ದನ್ನೆಲ್ಲ ತಳಕ್ಕೆ ಹಾಕಿ, ಬೇಕೆಂದವರಿಗೆ ತನ್ನೊಳಗಿನ ಮುತ್ತು
ಗಳನ್ನಷ್ಟೇ ಹಂಚಿದವ...
            ಅವನದು ಇಂದು ಎಂಬತ್ತನೇ
ಹುಟ್ಟುಹಬ್ಬ.ಅವನುಂಡ ಕಷ್ಟಗಳು/ ಎದುರಿಸಿದ ಸವಾಲುಗಳು/ ಮನದಲ್ಲೇ
ಹುದುಗಿಸಿಟ್ಟ ಬಿಕ್ಕುಗಳು/ ಮಂದಿಗೆ
ಉದಾರವಾಗಿ ಹಂಚಿದ ಸುಖದ ಗಳಿಗೆಗಳು/ ಎಂಥ ಕಷ್ಟಕ್ಕೂ ಧೃತಿಗೆಡದ
ಮನೋಸ್ಥೈರ್ಯ/ ಎಲ್ಲಕ್ಕಿಂತಲೂ 
ಅವನಂಥ ಅಜಾತಶತ್ರುವಿನ ಉದಾತ್ತ ತೆ ನಮನ್ನು ಸದಾ ಎಚ್ಚರವಾಗಿಸಿ
ಕಾಯುವ ದಾರಿ ದೀಪಗಳಾಗಲಿ...

    





No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...