Monday, 20 March 2023

 ಒಂದು ದಿನದ ಮಟ್ಟಿಗೆ ' ಹೆಣವಾದ'
ಕಥೆ...        
     ‌ ನನಗಾಗ ಹತ್ತು/ ಹದಿನೈದು ವರ್ಷಗಳು ಮಾತ್ರ.ನಾವು ಹೈಸ್ಕೂಲಿಗೇನೇ ಸೀರೆಯುಡಲು ಪ್ರಾರಂಭಿಸಿದ್ದು,
ಅದೂ ಅಪ್ಪ ತಂದುಕೊಟ್ಟದ್ದು...ಆಗೆಲ್ಲ ಒಂದೇ ಥಾನಿನ ಬಟ್ಟೆಯಲ್ಲಿ ನಾಲ್ಕೂ ಜನ ಅಕ್ಕ-ತಂಗಿಯರಿಗೆ ಒಂದೇ ರೀತಿಯ frocksಗಳನ್ನೇ ಹೊಲಿಸುವ ಪರಿಪಾಠವಿತ್ತು. ಅಂಗಡಿಗೆ ಹೋಗಿ
ಆರಿಸಿಕೊಳ್ಳುವ ಆಯ್ಕೆ ಕಲ್ಪನೆಯಲ್ಲಿ ಯೂ ಬಾರದ ಬದುಕು ನಮ್ಮದು.
ಒಬ್ಬಳು ಎತ್ತರವಾಗಿ frock ಗಿಡ್ಡವಾದರೆ ಅದೇ ಮುಂದಿನವಳಿಗೆ...
ಕೊನೆಯವಳಿಗೂ ಬಾರದ ಹಾಗಾದ 
ಮೇಲೆಯೇ ಅದು ' ಮುಕ್ತ ಮುಕ್ತ.' ಸೀರೆಗಂತೂ ಆ ನಿರ್ಬಂಧವೂ ಇರಲಿಲ್ಲ. ಒಂದು ಮೈಮೇಲೆ, ಇನ್ನೊಂದು ಗಳದ ಮೇಲೆ. ಮೂರನೆಯದಿದ್ದರೆ ಅದೇ ' ಗಂಟಿನ್ಯಾಗಿನ ಸೀರೆ- ಅಂದರೆ spare/ extra/ ಹೆಚ್ಚಿನ ಸೀರೆ etc...
              ಇಂಥ ಪರಿಸ್ಥಿತಿಯಲ್ಲಿ ಯಾರಾದರೂ ಹತ್ತು ರೂಪಾಯಿಗೆ
ಒಳ್ಳೆಯ ಸೀರೆ ಸಿಗುತ್ತದೆ ಅಂದರೆ ಎಂಥ ಮೂರ್ಖಳೂ ಅವಕಾಶ ಬಿಟ್ಟು ಕೊಟ್ಟಾ ಳೆಯೇ!!! ನಮ್ಮ ಗೆಳತಿಯರ ಹಿಂಡು
Surgical strike ಗೆ ತಯಾರಾಗಿ ಅದರ ಮೂಲ/ ಸತ್ಯಾಸತ್ಯತೆ/ ಲಭ್ಯತೆ ಇವುಗಳನ್ನು ಅರಿಯಲು ಹೊರಟೇ ಬಿಟ್ಟೆವು.ಅದಾಗಲೇ ಎರಡು ದಿನಗಳಿಂದ ಲಭ್ಯವಿದ್ದ ಕಾರಣಕ್ಕೆ ಹುಡುಕುವ ಕೆಲಸ ಕಷ್ಟವೇನೂ ಆಗಲಿಲ್ಲ.ಸರಿ ,ಕೂಡಿಟ್ಟದ್ದು/ ಕಡ ತಂದದ್ದು/  ಅಷ್ಟಿಷ್ಟು ಉದಾರ ದಾನ ಹೀಗೆ ಸಾಧ್ಯವಿದ್ದ ಎಲ್ಲ ಮೂಲಗಳಿಂದ ಹಣ ಸಂಗ್ರಹಿಸಿ( ಆಗ ನಮ್ಮ ಹತ್ತಿರವೇನು, ನಮ್ಮಪ್ಪಂದಿರ ಹತ್ತಿರವೇ ಹಣವಿರುತ್ತಿರಲಿಲ್ಲ) ಒಂದೆರೆಡು ಸೀರೆಗಳ ಖರೀದಿಯೂ ಆಯಿತು. ಮನೆಯಲ್ಲಿ ಒಪ್ಪಿಗೆಯಾಗದಿದ್ದರೆ ಬದಲಾಯಿಸಿಕೊಡುವ " ಪ್ರಾಣ ಜಾಯೆ,ಪರ್ ವಚನ ನ ಜಾಯೇ"- range ನ ಆಣೆ ಮಾಡಿಸಿಕೊಂಡು ಮನೆಗೆ ಬಂದು ಯಾರಿಗೂ ಗೊತ್ತಾಗದ ಹಾಗೆ ಮೈಮೇಲೆ ಹಾಕಿಕೊಂಡು ಕನ್ನಡಿ
ನೋಡಿಕೊಂಡು ಎಲ್ಲರೂ ಸಂಭ್ರಮಿಸಿ ಯಾರಿಗೂ ಕಾಣದ ಹಾಗೆ ಮುಚ್ಚಿಟ್ಟು ಸಂಭ್ರಮಿಸಿದ್ದು ಮಾತ್ರ ಒಂದೇ ದಿನ.
               ಮರುದಿನ ನಮ್ಮ ಮನೆಗೆ ಬಂದ ನನ್ನ ಕೊನೆಯ ಮೌಶಿ ಅಲಿಯಾಸ್ ಆಪ್ತ ಗೆಳತಿಯನ್ನು ರೂಮಿಗೆ ಕರೆದೊಯ್ದು ಬಾಗಿಲ ಹಾಕಿ
ತೋರಿಸಿದೆ. ಧಿಡೀರ್ ಎಂದು ಭೂಕಂಪವಾಯ್ತು.ಬೆಚ್ಚಿ ಬಿದ್ದು ಅವಳು ಹೇಳಿದ್ದಿಷ್ಟು," ಛೆ, ಮೊದಲು ಅದನ್ನು
ಹೊರಗೆ ಬೀಸಾಡು...ನಿನಗೆ ಗೊತ್ತಿಲ್ಲವೇ, ಹೊಸಯಲ್ಲಾಪುರದ ಸ್ಮಶಾನದಲ್ಲಿ ಹೆಣಗಳ ಮೇಲೆ ಹೊಚ್ಚಿದ ಸೀರೆಗಳನ್ನು ತಂದು ಇಸ್ತ್ರಿ ಮಾಡಿಸಿ
ಕಡಿಮೆ ಬೆಲೆಗೆ ಮಾರುವ  gang ಒಂದು ಇದೆಯಂತೆ.ಕೆಲ ದಿನಗಳಿಂದ ಈ ಧಂದೆ ನಡೀತಿದೆಯಂತೆ.ಇಲ್ಲದಿದ್ದರೆ
ಇಷ್ಟು ಕಡಿಮೆ ದರಕ್ಕೆ ಯಾರಾದರೂ ಸೀರೆ ಕೊಡುತ್ತಾರೆಯೇ, ಬುದ್ಧಿ ಬೇಡವಾ ನಿಮಗೆ"-? ಹುಟ್ಟಿಲ್ಲ ಅನಿಸುವ ಧಾಟಿಯಲ್ಲಿ ದಾಳಿ ಮಾಡಿದಳು ಮೌಶಿ.
             ನನಗೆ ' ಆ ಹೆಣದ ಬಗ್ಗೆ'- ಹೆದರಿಕೆಯಾಗಲೇಯಿಲ್ಲ. ಸ್ಮಶಾನದ ಸುತ್ತುಮುತ್ತ ಸುತ್ತುವದೂ ನಮ್ಮಂಥ ಮುಗ್ಧ/ ನಿರ್ಭೀತ 'ದಂಡಿ'ಗೆ ಹೊಸದೂ
ಆಗಿರಲೇಯಿಲ್ಲ, ಹೆದರಿದ್ದು ಜೀವಂತವಿದ್ದ ನಮ್ಮೆಲ್ಲರ  'ದೂರ್ವಾಸ/ ವಿಶ್ವಾಮಿತ್ರರನ್ನು ಹೋಲುವ ಅಪ್ಪಂದಿರು, ದುರ್ಗೆ/ಕಾಳಿಯರಾಗ
ಬಹುದಾದ ಅವ್ವಂದಿರ ಬಗ್ಗೆ...
           ಹೇಗೋ ನಮ್ಮ ಮೌಶಿಯನ್ನೂ
ಮುಂದಿಟ್ಟುಕೊಂಡು ಸೀರೆ ಕೊಟ್ಟವ ರನ್ನು ಭೇಟಿಯಾಗಿ ಮೊದಲೇ  ಹೇಳಿದ್ದನ್ನು ಅವರಿಗೆ ನೆನಪಿಸಿ ಸೀರೆಗಳನ್ನು ಕೊಟ್ಟು ಪಾರಾದದ್ದೂ ಆಯಿತು.ಆದರೆ ನನ್ನ ಒಂದು ಸಂದೇಹ
ಇಂದಿಗೂ ಪರಿಹಾರವಾಗಿಲ್ಲ. ನಮ್ಮ ಮೌಶಿ ಹೇಳಿದ್ದು ನಿಜವಾ? ಅಥವಾ ಹಾಗೆ ಕೊಳ್ಳಲಾಗದವರ ಅಸಹಾಯಕತೆ ಹಬ್ಬಿಸಿದ 'ಗಾಳಿ ಸುದ್ದಿಯಾ?




No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...