Sunday, 19 March 2023

  ‌‌‌" ಕೈ ಹಿಡಿದು ನಡೆಸಿದ ಕರುಣಾಳು ಬೆಳಕು..."
      ನನ್ನ ತಂದೆಯವರು ಮೂಲತ: ಮಾಸೂರಿನವರು. ಆದರೂ, ನಾನು ಹುಟ್ಟಿ ಬೆಳೆದದ್ದು ನಮ್ಮ ಅಜ್ಜನ  (ತಾಯಿಯ ತಂದೆ) ಊರಾದ ರಟ್ಟಿಹಳ್ಳಿಯಲ್ಲಿ, ಹೀಗಾಗಿ ಆ ಮನೆಯವರೆಲ್ಲರ ಗುಣ ಹಾಗೂ ನಡತೆಗಳು, ವಿಶೇಷವಾಗಿ ಪಲ್ಲಣ್ಣ ಮಾಮಾನ ಉತ್ತಮವಾದ ಸಂಸ್ಕಾರ  ನನಗೆ ಸಹಕಾರಿ ಆದದ್ದು ನನ್ನ ಸೌಭಾಗ್ಯವೇ ಸರಿ.
            ಪ್ರತ್ಯಕ್ಷವಾಗಿ ಮಾವನ ನಡತೆಯನ್ನು ನೋಡಿ ಬದಲಾವಣೆ ಆದಂತಹ, ಉದಾಹರಣೆಗಳು ತೀರಾ... ಕಡಿಮೆ .ಆದರೆ ನನ್ನ ತಾಯಿ  ಸಮಯ ಸಿಕ್ಕಾಗಲೆಲ್ಲ ತಮ್ಮೆಲ್ಲರ  ಜೀವನದಲ್ಲಿ ನಡೆದ ಘಟನೆಗಳನ್ನು ಒಂದೊಂದಾಗಿ ವಿವರಿಸುವಾಗ ನನಗೇ ಗೊತ್ತಿಲ್ಲದೇ ಮನಸ್ಸಿನ ಮೇಲೆ ಗಾಢ ಪರಿಣಾಮ ವುಂಟಾಗಿ ನನ್ನ ಬದುಕು ಬದಲಾದ ಪರಿ ನನಗೇ ಒಂದು ಅಚ್ಚರಿ. ಏಕೆಂದರೆ, ನನ್ನ ಅವ್ವ ನನ್ನ ಮೇಲಿನ ಪ್ರೀತಿ ಹಾಗೂ ತನ್ನ ಅಣ್ಣನ ಮೇಲಿನ ಅಭಿಮಾನ ಎರಡೂ ಮೇಳೈಸಿ ಪ್ರತಿ  ಘಟನೆಯೂ ನನ್ನ ಸ್ಮೃತಿ ಪಟಲದಲ್ಲಿ
ಅಚ್ಚೊತ್ತಿ ಶಾಶ್ವತವಾಗಿ ಉಳಿಯು ವಂತೆ, ತಪ್ಪಾದರೆ  ಅವುಗಳನ್ನು ಸಂಕೋಚವಿಲ್ಲದೇ  ತಿದ್ದಿಕೊಳ್ಳಲು ಮನಪೂರ್ವಕವಾಗಿ ನಾನು ಸಿದ್ಧನಾಗುವಂತೆ  ಮಾಡುವುದೇ ಆಗಿತ್ತು ಎಂಬುದು ನನಗೆ ಸ್ಪಷ್ಟವಿತ್ತು.

        ನನ್ನದು ಆಗಿನ್ನೂ ತಾತ್ಕಾಲಿಕ ನೌಕರಿ, ಸಂಬಳ ಕಡಿಮೆ, ಮನೆ ನಡೆಸುವ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು.ಕೆಲವೊಂದು ಬಾರಿ ನಾನು
ಅಸಹಾಯಕತೆಯಿಂದ  ನನ್ನ  ತಂದೆಯವರಿಗೆ, ಕಠೊರ ನುಡಿಗಳನ್ನು. ಆಡುತ್ತಿದ್ದೆ, ಆ ಸಂದರ್ಭದಲ್ಲಿ ನನ್ನ ಅವ್ವ ಚಕಾರ ಮಾತನಾಡುತ್ತಿರಲಿಲ್ಲ, ರಾತ್ರಿ ಊಟಕ್ಕೆ ಕುಳಿತ ಸಂದರ್ಭದಲ್ಲಿ ನನ್ನ ಸೋದರಮಾವನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದ್ದಳು . ಚಿಕ್ಕಂದಿನಿಂದಲೂ ಗೋಲಿ ಆಡುವ ಚತುರತೆ/ಹವ್ಯಾಸ ಹೊಂದಿದ್ದ ನಮ್ಮ ಮಾವ ,ಒಂದು ದಿನ ಗೆದ್ದು ತಂದ ಗೋಲಿಗಳನ್ನು ಎರಡೂ ಜೇಬಿನಲ್ಲಿ ತುಂಬಿ ಕೊಂಡು ಬಂದು ಸಂಭ್ರಮಿಸುತ್ತಾ ನನ್ನ ಅಜ್ಜನ ಮುಂದೆ ನಿಂತಿದ್ದ. ಅಂದೇ ಅಕಸ್ಮಾತ್ ಮಳೆ ಸುರಿದು ನನ್ನ ಅಜ್ಜನ ಪೋಸ್ಟ್ ಆಫೀಸ್ ನ  ಮಾಳಿಗೆ ಸೋರಿ ದಾಖಲೆಗಳೆಲ್ಲ ನೆನೆದು  ಹಾಳಾಗಿದ್ದವು, ಆತಂಕದಲ್ಲಿದ್ದ ನನ್ನ ಅಜ್ಜನಿಗೆ ಸಹಜವಾಗಿಯೇ ಸಿಟ್ಟು ಬಂದು "ಪ್ರಹ್ಲಾದ, ಸಮಯವನ್ನು ವ್ಯರ್ಥ ಮಾಡುವುದನ್ನು ಬಿಟ್ಟು ಓದಿನ ಕಡೆ ಗಮನ ಹರಿಸು ಎಂದು ಬೈದಿದ್ದಲ್ಲದೆ, ಕಪಾಳಕ್ಕೆ ಜೋರಾಗಿ
ಹೊಡೆದುಬಿಟ್ಟಿದ್ದರು ."ಅಪ್ಪನದು ಮೃದು ಸ್ವಭಾವ.ಇವರ ಸಿಟ್ಟಿಗೆ ಬೇರೆ ಕಾರಣ ಇದೆ"- ಎಂದು ಅರಿತು ಒಂದೂ ಮಾತನಾಡದೇ ರಾತ್ರಿ ಎಲ್ಲಾ ಕುಳಿತು ಅವರ ದಾಖಲೆಗಳನ್ನು ಸರಿ ಮಾಡಿ ಕೊಟ್ಟಿದ್ದ, ಮಾಮಾ.ಅಜ್ಜನಿಗೆ ಮನನೊಂದು "ಪ್ರಹ್ಲಾದ ನನ್ನದು ತಪ್ಪಾಯ್ತು, ದಾಖಲೆಗಳು ಹಾಳಾಗಿದ್ದ ಆತಂಕದಲ್ಲಿ ಹೊಡೆದು ಬಿಟ್ಟೆನಪಾ" ಎಂದು ತಬ್ಬಿಕೊಂಡು ಅತ್ತಿದ್ದರಂತೆ.
ಇದನ್ನು ಮತ್ತೆ ಮತ್ತೆ ನೆನಪಿಸುತ್ತ ನನ್ನ ತಾಯಿ ದೊಡ್ಡವರೊಂದಿಗೆ ಅನುಚಿತ ವರ್ತನೆ ಮಾಡಬಾರದು. ಎಂಬುದನ್ನು ಪರೋಕ್ಷವಾಗಿ ಬುದ್ಧಿ ಹೇಳಿದ್ದಳು.
ನನ್ನ ಮಾಮಾ ಮುಖತಃ ಯಾವುದೇ ಸೂಚನೆ ಕೊಡಲಿಲ್ಲವಾದರೂ ಅವನು ನನ್ನನ್ನು ನೋಡುವ ದೃಷ್ಟಿಯೇ ಎಲ್ಲವನ್ನು ವಿವರಿಸುತ್ತಿತ್ತು. ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿ ದ  ನನ್ನಮಾವ ನನ್ನ ಆಪ್ತ ಸ್ನೇಹಿತನ ಬಳಿ "ಈ ತರಹದ ವರ್ತನೆ ತರವಲ್ಲ. ಅವನ ವರ್ತನೆ ನನಗೆ ಹಿಡಿಸಲಿಲ್ಲ. ಸಂದರ್ಭವನ್ನು ನೋಡಿ ಅವನಿಗೆ ನೀನೇ ತಿಳಿಸು "-ಎಂದು ಹೇಳಿದ್ದರು. ಇದನ್ನು ಕೇಳಿದ ನಾನು ನನ್ನನ್ನೇ ತಿದ್ದಿಕೊಂಡು ತಂದೆಯೊಂದಿಗೆ ಉತ್ತಮವಾದ ಬಾಂಧವ್ಯ ಬೆಳೆಸಿಕೊಂಡೆ.

‌‍       ‌      ಹಾಗೆಯೇ ಇನ್ನೊಂದು ಘಟನೆಯೆಂದರೆ - ಒಮ್ಮೆ ನಮ್ಮ ಮನೆಯಲ್ಲಿ ಮಾಮಾನೊಂದಿಗೆ ಊಟಕ್ಕೆ ಕುಳಿತಿದ್ದೆ. ನನ್ನ ಅವ್ವ ಯಾವುದೋ ಒಂದಕ್ಕೆ ಅಡುಗೆಯಲ್ಲಿ ಉಪ್ಪನ್ನು ಹಾಕುವುದು ಮರೆತಿದ್ದಳು. ಊಟ ಮಾಡುತ್ತಿದ್ದ ನಾನು "ಏನವ್ವ ಉಪ್ಪನ್ನೇ ಹಾಕಿಲ್ಲ ಹಿಂಗ ಅಡಿಗೆ ಮಾಡಿಯಲ್ಲ ,ಹೆಂಗ್ ಊಟ ಮಾಡಬೇಕು "-ಎಂದು ಮನಸ್ಸಿಗೆ ನೋವಾಗುವಂತೆ ಹೇಳಿದ್ದೆ.
ಜೊತೆಗೆ ಕುಳಿತ ಪಲ್ಲಣ್ಣ ಮಾಮಾ ತಕ್ಷಣವೇ ಪ್ರತಿಕ್ರಿಯಿಸಿ," ಎಲಿ ಒಳಗ ಉಪ್ಪು ಅದಲ್ಲ, ಸರಿಮಾಡಿಕೊಂಡು ಊಟ ಮಾಡಬೇಕು" ಕಷ್ಟ ಪಟ್ಟು ಅಡುಗೆ ಮಾಡಿದ  ತಾಯಿಯ ಮನಸ್ಸಿಗೆ ನೋವು ಮಾಡಬಾರದು."- ಎಂದು ನನಗೆ ಬೈದಿದ್ದರು.
       ಇಂತಹ ಅನೇಕ  ಘಟನೆಗಳು
ನಮ್ಮಂಥ ಕಿರಿಯರಲ್ಲಿ ಶಾಶ್ವತವಾಗಿ ತಂದ ಬದಲಾವಣೆಗಳು/ ಸೂಕ್ಷ್ಮತೆಗಳು ನಾವುಗಳೆಲ್ಲ ಉತ್ತಮ ಸಂಸ್ಕಾರವಂತ ರಾಗಲು ಸಾಕಷ್ಟು ಜೀವನದಲ್ಲಿ ಪ್ರಭಾವ ಬೀರಿವೆ ಎಂಬುದು ಸತ್ಯ.

      ‌‌‌ಇಂತಹ ಸಜ್ಜನ/ ಸದ್ಗುಣಿ ವ್ಯಕ್ತಿಯು  ನಮ್ಮ ಮಾಮಾ ಎಂಬುದು ನಮಗೆಲ್ಲ ದೊಡ್ಡ ಹೆಮ್ಮೆ. ಹತ್ತಿರದಿಂದ ಅವರನ್ನು ನೋಡಿ ಕಲಿಯುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸೌಭಾಗ್ಯವೇ ಎಂದು ನಾನು ಭಾವಿಸಿದ್ದೇನೆ .

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...