ತಿಂಗಳೊಂದಕ್ಕೆ ಪಗಾರ ಕೇವಲ ಮೂವತ್ತು ರೂಪಾಯಿಗಳು. ವರುಷಕ್ಕೆ ಒಂದೇ ಸಾವಿರ ಲಾವಣಿ... ಪಡೆದು, ದತ್ತಕ ತಾಯಿ, ಹೆಂಡತಿ, ಮೂರು ಗಂಡು, ನಾಲ್ಕು ಹೆಣ್ಣುಮಕ್ಕಳ ಕುಟುಂಬ ನಡೆಸುತ್ತ, ಮಕ್ಕಳಿಗೆ ತಮ್ಮ ಶಕ್ತಿಮೀರಿ ಕಲಿಸಿ, ಧರ್ಮಪಥದಲ್ಲಿ ನಡೆದು, ಮಕ್ಕಳಿಗೂ ಧರ್ಮಬುದ್ಧಿ ಕಲಿಸಿ, ತಮ್ಮ ಅಪೇಕ್ಷೆಯ ಮೇರೆಗೆ ಬೆಳೆದುದ್ದನ್ನು ಕಂಡು, ತೃಪ್ತಿಪಟ್ಟು, ತಾಯಿಯ ಋಣವನ್ನು ತೀರಿಸಿದ, ಧರ್ಮವಂತನ ಮಗನಾಗಿ, ಕುಟುಂಬ ದಿಂದ ಪಡೆದುದಕ್ಕಿಂತ, ಕುಟುಂಬದ ಸದಸ್ಯರಿಗೆ, ಕುಟುಂಬಕ್ಕೆ ಮರು ಸಂದಾಯ ಮಾಡಿ, ಸಾರ್ಥಕತೆಯನ್ನು ಹೊಂದಿದ ಸಹೋದರ ಪ್ರಲ್ಹಾದ ಇಂದು ೮೦ನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿರುವುದು ಸಂತೋಷದ ಸಂಗತಿ. ಬಾಳಿನುದ್ದಕ್ಕೂ ಬಿಸಿಲ ಹಣ್ಣು ತಿಂದು, ಬೆಳದಿಂಗಳನ್ನೂ ಕಂಡು, ತನ್ನ ಶಿಕ್ಷಣಕ್ಕಾಗಿ ಪಡಬಾರದ ಕಷ್ಟಪಟ್ಟು, ಅದರಲ್ಲಿಯೂ ಸಾರ್ಥಕತೆಯನ್ನು ಹೊಂದಿ, ಮುಂದಿನ ಪೀಳಿಗೆಗೆ ಆ ತೊಂದರೆ ಆಗದಿರಲಿ ಎಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಅದನ್ನು ಒಂದು ಯಶಸ್ವಿ ಸಂಸ್ಥೆಯನ್ನಾಗಿ ಬೆಳೆಸಿ, ಅದನ್ನು ಕಂಡು ತೃಪ್ತಿ ಪಡುತ್ತಿರುವ ಚೇತನದ ಕನಸು ನನಸಾಗಲಿ! ಸಂಸ್ಥೆ ಹೆಮ್ಮರವಾಗಿ ಅವನ ಆಸೆಯಂತೆ ಬೆಳೆದುದನ್ನು ಕಂಡು ಸಮಾಧಾನ ಹೊಂದಲಿ! ಇನ್ನೂ ಏನೇನು ಆಸೆಗಳು, ಕನಸುಗಳು ಇವೆಯೋ ಅವೆಲ್ಲವನ್ನೂ ಮನೆಯ ಕುಲದೈವ ತಿರುಪತಿ ತಿಮ್ಮಪ್ಪ ಪೂರ್ಣಗೊಳಿಸಲಿ, ಸಾತೇನಹಳ್ಳಿ ಶಾಂತೇಶನ ಹೆಸರಿನಲ್ಲಿ ನಡೆಸುತ್ತಿರುವ ಸಂಸ್ಥೆಯ ಮೇಲೆ 'ಶಾಂತೇಶ'ನ ಅನುಗ್ರಹ ಸದಾಕಾಲವೂ ಇರಲಿ.
ಸಂಸ್ಥೆಯ ರೂವಾರಿ ಚಿ.ಪ್ರಲ್ಹಾದ ನಿಗೆ ಭಗವಂತ ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸುವೆ. ಸರ್ವರಿಗೂ ಶುಭವಾಗಲಿ...
ಹಗುರಾಗಿಹ ಮೈ| ಕೆಸರಿಲ್ಲದ ಮನ|
ಹಂಗಿಲ್ಲದ ಬದುಕು|
ಕೇಡಿಲ್ಲದ ನುಡಿ | ಕೇಡೆಣಿಸದ ನಡೆ|
ಸಾಕಿವು ಇಹಕೂ, ಪರಕೂ|
ಮೇಲೇನಿದೆ ಇದಕೂ? (– ಪುತಿನ)
-*-
No comments:
Post a Comment