ನಮ್ಮ ಕಾಕಾ...ನಮ್ಮ ಹೆಮ್ಮೆ...
ಅದು ಬಹುಶಃ ೧೯೪೫ರಿಂದ ೧೯೫೫ರ ಸಮಯ. ರಟ್ಟೇಹಳ್ಳಿ ಕೋಟೆ ಬೀದಿಯಲ್ಲಿ ಗೆಳೆಯರೊಡನೆ ಸೇರಿಕೊಂಡು ಸದಾ ಆಟವಾಡುತ್ತಾ ಕಾಲಕಳೆದು, ಮುಂದೆ ಹೈಸ್ಕೂಲ ಶಿಕ್ಷಣವನ್ನು ರಾಣೇಬೆನ್ನೂರಿನಲ್ಲಿ ವಾರಾನ್ನದ ಬಲದ ಮೇಲೇಯೇ ಮುಗಿಸಿ ,ಕಾಲೇಜು ತಲುಪಿದರೂ ಬೆನ್ನು ಬಿಡದ ಬಡತನವನ್ನೂ/ ಅದು ತಂದೊಡ್ಡಿದ ಕಠಿಣ ಸವಾಲುಗಳನ್ನೂ ಮೀರಿ ಬೆಳೆದು ಸಾವಿರಾರು ಪ್ರತಿಭೆಗಳಿಗೆ ಅನ್ನ ನೀಡುವಂತಾಗಿ, ಉತ್ತರ ಕರ್ನಾಟಕದಲ್ಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕಟ್ಟಿ ೮೦ರ ಇಳಿವಯದಲ್ಲೂ ಓದು, ಜ್ಞಾನ ಪ್ರಸಾರ/ ಪಾಠ ಹೇಳುವ ಪರಿಪಾಠ ಇಟ್ಟುಕೊಂಡು, ವೃತ್ತಿಯಿಂದ ನಿವೃತ್ತಿಯಾಗಿದ್ದರೂ ಪ್ರವೃತ್ತಿ ಬಿಡಲೊಲ್ಲದ ನನ್ನ ಚಿಕ್ಕಪ್ಪ ಪಲ್ಲಣ್ಣ ಕಾಕಾ ಇವರಿಗೆ ೮೦ನೇ ಜನ್ಮದಿನಾಚರಣೆಯ ಶುಭ ಘಳಿಗೆಯಲ್ಲಿ ನನ್ನ ಗೌರವ ಪೂರ್ವಕ ನಮಸ್ಕಾರಗಳು.
ಮನೆಯವರಾಗಲಿ, ಹೊರಗಿನವರಾಗಲೀ ಎಂದೂ ಪ್ರತ್ಯೇಕಿಸಿ ಗೊತ್ತಿಲ್ಲದ/ ಪ್ರತಿಭೆಗೆ ಮನ್ನಣೆ ನೀಡುವ ಸ್ವಭಾವದಿಂದಲೇ ಜನ ಮನ್ನಣೆ/ ಅಗಾಧ ಪ್ರೀತಿ/ ಗೌರವಗಳನ್ನು ಸಂಪಾದಿಸಿದ್ದು ಈಗ ಇತಿಹಾಸ. ಸದಾ ಬಡಮಕ್ಕಳ ಬಗ್ಗೆ ಕಾಳಜಿ/ ಅವರಿಗೆ ಒಳ್ಳೆಯ ಮಾರ್ಗದರ್ಶನ/ ಸಮಾಜದಲ್ಲಿ ಒಳ್ಳೆಯ ಸ್ಥಾನ ಸಿಗಬೇಕು ಎಂಬ ತುಡಿತ ಹೊಂದಿದ ವ್ಯಕ್ತಿತ್ವ. ಎಷ್ಟೋ ಬಾರಿ ಆ ಗುರಿ ಸಾಧಿಸಲು ತನ್ನ ಹಾಗೂ ಮನೆಯ ಕಡೆ ಅನಿವಾರ್ಯವಾಗಿ ಆಗುತ್ತಿದ್ದ ಸ್ವಲ್ಪಮಟ್ಟಿಗಿನ ಅಲಕ್ಷ್ಯಕ್ಕೆ ನಮ್ಮ ಕಾಕು ಒದ್ದಾಡಿದ್ದೂ ಉಂಟು.
ಬಹುಶಃ ಇಂದಿನ ಈ ವೈಭವ ಈ ಬೆಳವಣಿಗೆಯನ್ನು ಕಾಕು ಇದ್ದು ನೋಡಿದ್ದರೆ ...ಎಂದು ಎಲ್ಲರಿಗೂ ಅನಿಸದೇ ಇಲ್ಲ... ಇಷ್ಟೆಲ್ಲ ಸಾಧಿಸಿ ಶಿಕ್ಷಣ ಸಂಸ್ಥೆ ಬೆಳೆಸಿ ಕಣ್ಣಳತೆ ಮೀರಿದ ಸಂಪತ್ತಿದ್ದರೂ ಸಹ, ಬಂಗಲೆಯಂತಹ ಮನೆಯಲ್ಲಿ ಇರದೆ ಹಾಸ್ಟೆಲ್ ನಲ್ಲಿ ಮಕ್ಕಳೊಂದಿಗೆ ಇರುವುದನ್ನು ನೋಡಿದರೆ ನಮಗೇ ಇಂಥದೊಂದು ವ್ಯಕ್ತಿತ್ವ ಇರಲು ಸಾಧ್ಯವೇ ಎಂಬ ಆಶ್ಚರ್ಯ! ಯಾವ ಶ್ರೀಮಂತಿಕೆಯ ಆಡಂಬರವೂ ಇಲ್ಲದ ಸರಳ ಜೀವನ/ ಪುಸ್ತಕ ಪ್ರೀತಿ / ಎಲ್ಲರೊಳಗೆ ಒಂದಾಗಿ ಬೆರೆವ ಅವರ ಸ್ವಭಾವ ಇವೆಲ್ಲವೂ ನಮ್ಮಂಥ ಯುವ ಪೀಳಿಗೆಗೆ ಅನುಕರಣೀಯ...
ಕಾಕಾರ ಹಾಸ್ಯಪ್ರಜ್ಞೆ*
ಬಹುಶಃ ಇದು ನಡೆದದ್ದು 1990 ರಲ್ಲಿ ನಾನು ಆಗ ಧಾರವಾಡದಲ್ಲಿದ್ದೆ ... ಒಂದು ದಿನ ರಾತ್ರಿ ಊಟಕ್ಕೆಂದು ನಾನು, ಕಾಕಾ, ಜಾನ್ಹವಿ, ಡೈನಿಂಗ್ ಟೇಬಲ್ ನಲ್ಲಿ ಕುಳಿತಿದ್ದೆವು ಯಾವುದೋ ಕಾರಣದಿಂದ ಅವತ್ತು ಮನೆ ಗಂಭೀರವಾಗಿತ್ತು, ಯಾರೊಂದಿಗೂ ಮಾತಿಲ್ಲ .... ಕಾರಣವೂ ಈಗ ನನಗೆ ನೆನಪಿಲ್ಲ.. ಜಾನ್ಹವಿ ಮಾತಿನ ಮಧ್ಯ 'ಥೂ' ಎಂದಿದ್ದಕ್ಕೆ ಕಾಕು ರವರ ಕಡೆಯಿಂದ ಬೈಸಿಕೊಂಡು ಅವಳೂ ಗಂಭೀರವಾಗಿದ್ದಳು..... ಮನೋಜ ಟಿ. ವಿ ಮುಂದೆ ಕುಳಿತಿದ್ದನ್ನು ನೋಡಿ ಕಾಕು ಊಟಕ್ಕೆ ಕರೆದರು ... ಅವನಿಗೆ ಈ ಗಂಭೀರತೆ ಇಷ್ಟವಾಗುತ್ತಿರಲಿಲ್ಲ. ಬೇಸರದಿಂದಲೇ ಬಂದು ಒಂದು ತುತ್ತು ಭಕ್ರಿ ಬೀನ್ಸ ಪಲ್ಲೆ ಬಾಯಿಗೆ ಇಟ್ಟೊಡನೇ ಅಮ್ಮಾ SSSS ........ ಎಂದು ಬೇರಿಕೊಂಡ... ಕಾಕುಬಂದು ಯಾಕ ಚೀರತಿ ಅಂತಾ ಕೇಳಿದರು. ಆಗ ಮನೋಜ ಈ ಪಲ್ಯಾ ಛೊಲೋ ಇಲ್ಲ ..... ಎಂದು ಬೇಸರದಿಂದ ಮುಖ ಕಿವುಚಿ ಹೇಳಿದ .... ತಕ್ಷಣ ಕಾಕಾ ಯಾಕಲೇ ಮಗನ ... ಹೆಂಗದ ಮೈಯಾಗ ಅಂತ ಕೇಳಿದರು. ಎಲ್ಲರೂ ಅವರನ್ನು ನೋಡುವಾಗಲೇ ನಸುನಕ್ಕು ಹೇಳಿದರು ನನಗ ಪಲ್ಯಾ ಅಂತ ಕರಿತೀ.... ನಾ ಛೊಲೋ ಇಲ್ಲಾ ಅಂತೀ.. ಅಂದ್ರು .... ಗಂಭೀರವಾಗಿದ್ದ ಮನೆ ಒಮ್ಮೆಲೇ ನಗೆಗಡಲಿನಲ್ಲಿ ಮಳುಗಿತು.
ಇಂತಹ ಸಾಧಕರು ನನ್ನ ಚಿಕ್ಕಪ್ಪ ಎಂಬುದೇ ಒಂದು ಹೆಮ್ಮೆ. ಇಂತಹ ವ್ಯಕ್ತಿತ್ವದ ಅಡಿಯಲ್ಲಿ ಬೆಳೆಯುತ್ತಿರುವ ಚಿಕ್ಕ ಸಸಿ ನಾನು. ಇನ್ನೂ ನೂರ್ಕಾಲ ಬಾಳಿ ನಮಗೆ ವಾರ್ಗದರ್ಶನ ನೀಡುತ್ತಿರಲಿ ಎಂಬುದೊಂದೇ ನನ್ನ ಕೋರಿಕೆ.
Happy 80th birthday KAKA...
No comments:
Post a Comment