" ನಿಮ್ಮ ಪಲ್ಲಣ್ಣನ ಬಗ್ಗೆ ಒಂದು ಪುಸ್ತಕವನ್ನು ಮೊದಲು ಬರೆ. ಅವರ ಸಾಧನೆಗಳ ದಾಖಲೆಯಾಗಲೇಬೇಕು. ಅವು ಅನೇಕರಿಗೆ ಮುಂದೆ ದಾರಿದೀಪ ಗಳಾಗಬಹುದು, ಬದುಕಿನಲ್ಲಿ ಸ್ಫೂರ್ತಿ ಯಾಗಬಹುದು.ಛಲವೊಂದಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು-ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಹುದು- "ಎಂಬುದು ನಮ್ಮ ಪರಿಚಯದ ಹಲವಾರು ಜನರು, ಹಲವಾರು ಬಾರಿ ನನಗೆ ಹೇಳಿದ/ ಹೇಳುತ್ತಲೇ ಇದ್ದ ಮಾತು.
ನಾನು ಹಾಗೆ ಮಾಡಲು ಹಿಂಜರಿದದ್ದಕ್ಕೆ ಹಲವಾರು ಕಾರಣಗಳಿವೆ. ಮೊದಲನೇಯದಾಗಿ
ಸ್ವತಃ ಅವನಿಗೇ ಅದರ ಬಗ್ಗೆ ಆಸಕ್ತಿ ಯಿಲ್ಲ.ಏನೋ ಮುಜುಗರ.ಸಂಕೋಚ. ಅವನ ಮಟ್ಟಿಗೆ ತಾನು ಮಾಡಿದ್ದು ತನ್ನ
ಮನಸ್ಸಿನ ಒತ್ತಾಸೆಗೊಂದು ಪ್ರಾಮಾಣಿಕ ಪ್ರಯತ್ನ...ಎಂದೋ ಕಂಡ ಒಂದು ಕನಸಿನ ಸಾಕ್ಷಾತ್ಕಾರಕ್ಕೆ
ನಿಷ್ಠೆಯಿಂದ ದುಡಿದ ಫಲ. ಮಾಡಿದ್ದೇನೋ ಹೌದು,ಆದರೆ ಮಾಡಬೇಕಾದದ್ದು ಬೆಟ್ಟದಷ್ಟಿದೆ.ಎಂಬ ಭಾವ.
ಎರಡನೇ ಕಾರಣವೆಂದರೆ ನಾನು ಅವನ ಬಗ್ಗೆ ಬರೆದರೆ ನಿಜವಾಗಿಯೂ ಅದಕ್ಕೆ ನ್ಯಾಯವನ್ನು ಸಲ್ಲಿಸಬಲ್ಲೆನೇ?
ಎಂಬುದು.ನನಗೂ / ಅವನಿಗೂ ಕೇವಲ ನಾಲ್ಕು ವರ್ಷಗಳ ಅಂತರ, ಇನ್ನೂ ನಾಲ್ಕು ತಿಂಗಳು ಕಡಿಮೆಯೇ...
ಏಳನೇ ಇಯತ್ತೆ ಮುಗಿಸಿ ಮುಂದಿನ ಓದಿಗೆ ರಾಣೆಬೆನ್ನೂರಿಗೆ ಅವನು ಹೋದಾಗ ನನಗಾಗಷ್ಟೇ ಎಂಟು ವರ್ಷಗಳಾಗಿರಬಹುದು. ಆಗಾಗ ಅವನು ಊರಿಗೆ ಬರುತ್ತಿದ್ದರೂ ನಮಗೆಂದು ಅವನು ದಕ್ಕಿದ್ದು ಅವನಿಗೆ
ನೌಕರಿ ಸಿಕ್ಕು ಧಾರವಾಡದಲ್ಲಿ ಮನೆ ಮಾಡಿದ ಮೇಲೆಯೇ...ಆಗಲೂ ತಂದೆಯ ಜವಾಬ್ದಾರಿಯನ್ನು ತನ್ನದೇ ಹೆಗಲಿಗೇರಿಸಿಕೊಂಡು ಸದಾ ಬದುಕಿನ ಹೋರಾಟ ನಡೆಸಿದ್ದ ಅವನ ಬಗ್ಗೆ
ಭಯ,ಗೌರವ ಸಾಕಷ್ಟು ಇದ್ದುದು ನಿಜವಾಗಿದ್ದರೂ ಮನಸ್ಸನ್ನು ಬಿಚ್ಚಿಟ್ಟು
ಹರಟಿ ನಿರಾಳವಾಗುವುದಕ್ಕೆ ವೇಳೆ/ ಆ
ರೀತಿಯ ಮನೆಯ ವಾತಾವರಣ ಎರಡೂ ಆ ಕಾಲದಲ್ಲಿ ಇರಲಿಲ್ಲ. ಅಂಥದರಲ್ಲಿ ಒಬ್ಬರ ಬಗ್ಗೆ ಏನನ್ನಾದರೂ ಬರೆಯುವಷ್ಟನ್ನು ನಾನು ಖಚಿತವಾಗಿ ತಿಳಿದುಕೊಂಡಿದ್ದೇನೆ ಎಂಬುದೇ ಉದ್ಧಟತನದ ಮಾತಾಗುವ
ಸಾಧ್ಯತೆಯೇ ಹೆಚ್ಚು.
ಮೂರನೆಯದಾಗಿ ಪಲ್ಲಣ್ಣ ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಅವನ ಸಾಹಿತ್ಯಾಸಕ್ತಿ ತೀವ್ರ.ಅವನ ಮಾತಿನ ಆಳ/ ಅರ್ಥ/ ಗಳಿಗೆಗೊಮ್ಮೆ
ಉದಹರಿಸುವ ದೃಷ್ಟಾಂತಗಳು/ ಮಾತು ಮಾತಿಗೆ ಮಂಕು
ಕಗ್ಗಗಳು/ ಸಂಸ್ಕೃತ ಶ್ಲೋಕಗಳು/
ಓದಿದ- ಅನುಭವಿಸಿದ ಘಟನೆಗಳ
ನೆನಪುಗಳು ,ಇವುಗಳನ್ನು ನೆನೆದರೆ
ಅವನೆದುರು ಬಾಯಿ ತೆರೆಯಲೂ ಆಗದೇ ಕೇವಲ ಕೇಳುತ್ತಿರಬೇಕು ಎನಿಸಿದ್ದೇ ಹೆಚ್ಚು. ಹೀಗಾಗಿ 'ಅವನ ಬಗ್ಗೆ ಬರೆಯಬಾರದೇಕೆ? ಎಂದು ಹಲವು ಬಾರಿ ಅನಿಸಿದರೂ ಅದು ಸುಲಭವಾಗಿ ಕಾರ್ಯರೂಪಕ್ಕೆ ಬರಲೇಯಿಲ್ಲ.
ನಾನು ನೌಕರಿಯಿಂದ ನಿವೃತ್ತಳಾಗುವ ಹೊತ್ತಿಗೆ ಅವನ ಕನಸಿನ ಸಾಮ್ರಾಜ್ಯ ರೂಹು ಪಡೆದಾಗಿತ್ತು.ನಿವೃತ್ತಿಯ ನಂತರ ಧಾರವಾಡಕ್ಕೆ ಬಂದ ತಮ್ಮ ಸುಧೀಂದ್ರ ನ ನಿರಂತರ ಬೆಂಬಲ- ಸಹಕಾರದಿಂದ,
ತನ್ನ Software ನೌಕರಿ ಬಿಟ್ಟು ಹಂಚಿನಮನಿ ಕಾಲೇಜಿನ ಉಸ್ತುವಾರಿ
ಕೆಲಸಕ್ಕೆಂದೇ ಬಂದು ನಿಂತ ಮನೋಜನ ಸಹಾಯದ ಬೆಂಬಲದಿಂದ ಕಾಲೇಜು ತನ್ನ ರೆಕ್ಕೆ- ಪುಕ್ಕಗಳನ್ನು ಬಲಿಸಿಕೊಂಡು/ ಬೆಳಸಿಕೊಂಡು ಹೆಚ್ಚಿನ ಹಾರಾಟಕ್ಕೆ
ಆಕಾಶದತ್ತ ನೆಗೆಯುವ ಹಂತದಲ್ಲಿದ್ದು
ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಆದರೆ ಇಷ್ಟನ್ನು ಸಾಧಿಸಲು
ಅವನು ಪಟ್ಟ ಪಾಡನ್ನೇ ಬರಹ ರೂಪದಲ್ಲಿ ಬರೆಯುವ ವಿಚಾರದ ಒತ್ತಡ ಸುರುವಾದಾಗಲೇ ನಾನು ನನ್ನೆರಡು ಪುಸ್ತಕಗಳನ್ನು ಬರೆದೆ. ಅದರಲ್ಲಿ ಅವನ ಬಗ್ಗೆಯೂ ಒಂದೆರಡು
ಲೇಖನಗಳನ್ನು ಸೇರಿಸಿದೆ, -ನನಗೆ ತಿಳಿದದ್ದು/ ತಿಳಿದಂತೆ. ಆದರೆ ಅದು ಅವನನ್ನು ಕುರಿತು ನನ್ನ ಬುದ್ಧಿಯ ಗ್ರಹಿಕೆಯಷ್ಟೇ ಹೊರತು ಅದರ ಹೊರತಾಗಿ ಇದ್ದದ್ದೇ ಹೆಚ್ಚು...ನಾವು ಮಹಾಸಾಗರದೆಡೆ ಮುಖ ಮಾಡಿ ನಿಂತರೂ ನಮಗೆ ದಕ್ಕುವದು ನಮ್ಮ ಬೊಗಸೆಯ ಅಳತೆಯಷ್ಟೇ...
ಕೊನೆಗೆ ಒಂದೇ ಮಾತು... ಹೂವಿನ ಪರಿಮಳ/ ಶ್ರೀಗಂಧದ
ಸುವಾಸನೆಗಳಿಗೆ ಯಾವುದೇ/ ಯಾರದೇ ಹಂಗಿಲ್ಲ.ಅವು ತಂತಾನೇ ಹರಡುತ್ತವೆ.ಹಾಗೆಯೇ ಸತ್ಕಾರ್ಯ ಗಳೂ ಸಹ.ನಮ್ಮ ಅಣ್ಣ ಏನೆಂದು
ನಾವು ಹೇಳಬೇಕಾಗಿಲ್ಲ, ಅವನ ಸಾಧನೆಗಳೇ ಆ ಕೆಲಸ ಮಾಡುತ್ತವೆ. ಅವನಿಂದ ಉಪಕೃತರಾದವರ ಸಂಖ್ಯೆ
ದೊಡ್ಡದು.ಅವರೆಲ್ಲರ ಶುದ್ಧ ಮನಗಳ ಹಾರೈಕೆ ಅವನ ಬೆಂಬಲಕ್ಕಿದೆ.ಎಂಬತ್ತರ
ವಯಸ್ಸಿನಲ್ಲೂ/ ತನ್ನದೇ ಅನಾರೋಗ್ಯದ ಸಮಸ್ಯೆಗಳ ಮಧ್ಯದಲ್ಲಿಯೂ ಎದೆಗುಂದದೇ ಸದಾಕಾಲ ಕಾಲೇಜು/ ಮಕ್ಕಳು ಎಂದೇ
ಜಪಿಸುವ ಶುದ್ಧಾತ್ಮವನ್ನು ಭಗವಂತನೂ ಬೆಂಬಲಿಸುತ್ತಿದ್ದಾನೆ.
ಅವನಿಗೆ ಇನ್ನಿಷ್ಟು/ ಮತ್ತಷ್ಟು/ ಮಗದಷ್ಟು ಸಾಧಿಸಲು ಬೇಕಾದ ಆಯುರಾರೋಗ್ಯ/ ಅಗಾಧ ಶಕ್ತಿಯನ್ನು
ಆ ಸಾತೇನಹಳ್ಳಿಯ ಶಾಂತೇಶ ಕರುಣಿಸಲೆಂಬುದೇ ನಮ್ಮೆಲ್ಲರ ಮನದ
ಏಕೈಕ ಹಾರೈಕೆ...
No comments:
Post a Comment