Monday, 28 January 2019

ಹಾಗೇ ಸುಮ್ಮನೇ...

ನಿಜವೋ...ಸುಳ್ಳೋ..ನೀವೇ ಹೇಳಿ...

ಕೆಲ ದಿನಗಳಿಂದ ಒಂದು ವಿಚಾರ ಬಾಧಿಸ್ತಾಯಿದೆ..ಹೆಣ್ಣು ಮಕ್ಕಳಿಗೆ ಐವತ್ತರ ಸನಿಹ ದೇಹದಲ್ಲಿ ಆಗುವ ಹಾರ್ಮೋನ್ ಗಳ ಸ್ಥಿತ್ಯಂತರದಿಂದಾಗಿ ಕೆಲವೊಂದು ಬದಲಾವಣೆಗಳು ಆಗಿ ಕೆಲಕಾಲ  ಕಾಡಿಸಿ,ಹಣ್ಣಾಗಿಸಿ ಕೊನೆಗೊಮ್ಮೆ menopause ಹೆಸರಲ್ಲಿ  ಮುಕ್ತಾಯವಾಗುತ್ತವೆ.ಆ ಕೆಲತಿಂಗಳು, ಕೆಲವೊಮ್ಮೆ ವರ್ಷವಿಡೀ ಆ ಸ್ಥಿತಿ  ಎಷ್ಟು ಹಣ್ಣಾಗಿಸುತ್ತದೆಂದರೆ  ಒಂದು ರೀತಿಯ ಮಾನಸಿಕ ವೇದನೆ,ಯಾತನೆ...ಕೆಲವೊಬ್ಬರು ಕ್ಷಣ ಕ್ಷಣಕ್ಕೆ ಬದಲಾಗುವ mood swing ಗಳಿಂದಾಗಿ depression ಗೆ ಹೋಗುವ ಸಾಧ್ಯತೆಗಳನ್ನೂ ಅಲ್ಲ ಗಳೆಯುವಂತಿಲ್ಲ..ಇಲ್ಲದ ಬೇಸರ,ಏಕಾಕಿತನ, ವಿನಾಕಾರಣ ಭಾವುಕರಾಗುವದು, ಜನರಿಂದ ದೂರಹೋಗುವದು , ಸುಮ್ಮ ಸುಮ್ಮನೇ ಅಳುವಂತಾಗುವದು , ಹೀಗೆ ಇನ್ನಿಲ್ಲದ  ಹೇಳಲಾಗದ,ಅನುಭವಿಸಲೂ ಆಗದ ಗೊಂದಲಗಳ ಸೃಷ್ಟಿ ಯಾರಿಗೂ  ಹೊಸದೇನೂ ಅಲ್ಲ..
                   ನಾನೀಗ ಕೇಳಹೊರಟ ಪ್ರಶ್ನೆ ಬೇರೆಯೇ...ಇಂಥದೇ ಅಥವಾ ಬೇರೆ ಬದಲಾವಣೆ ಒಂದು ವಯಸ್ಸಿನಲ್ಲಿ ಬುದ್ಧಿ,ಹಾಗೂ ಮನಸ್ಸಿಗೂ ಆಗುತ್ತದೆಯೇ? ಕಾರಣಗಳು ಬೇರೆಯಿರಬಹುದು..body cells ಅಶಕ್ತವಾಗಿ, ಅವುಗಳ ಬೆಳವಣಿಗೆ ಅಪೇಕ್ಷಿತಮಟ್ಟದಲ್ಲಿ ಇರಲಾರದೇ ಹೋದಾಗ, ಮೊದಲಿನ ಉತ್ಸಾಹ ಇಲ್ಲದಿರುವದು,ನಿರಾಸಕ್ತಿ, ಯಾವುದರಲ್ಲಿ ಏನಿದೆ ಎಂಬಂಥ ಉದಾಸೀನ,ಏನೂ ಇಲ್ಲ...ಬದುಕೆಂದರೆ ಇಷ್ಟೇ ಎಂಬಂಥ ಅನಾಥ ಭಾವ, ಬದುಕಿನ ಬಗ್ಗೆ ಒಂದು ದಿವ್ಯ ನಿರ್ಲಕ್ಷ ,ದಂತಹದನ್ನು ಕಾಣುತ್ತೇವೆ...ಯಾರಾದರೂ ಅದಕ್ಕೆ ಸಂಬಂಧಿತ post ಹಾಕಿದರೆ ಲೆಕ್ಕವಿಲ್ಲದಷ್ಟು ,likes,comments,ತಮಗೂ ಹಾಗೇ ಎಂಬ ಅನಿಸಿಕೆಗಳು,ಪರಿಚಯದ ಅಂತಹ ಘಟನೆಗಳ ಉದಾಹರಣೆಗಳು ಓತಪ್ರೋತವಾಗಿ ಹರಿದು ಬರುತ್ತವೆ..ಕೆಲವರು  ತೋರಿಕೆಗೆ  ಧೈರ್ಯ ತೋರಿಸುವ,ಧನಾತ್ಮಕವಾಗಿ ಪ್ರತಿಕ್ರಯಿಸುವ  ಉದಾಹರಣೆಗಳಿದ್ದರೂ ಅಂಥವು ಕಡಿಮೆಯೇ...
                  ನನಗೆ ಓದು,ಬರಹ ಅತಿ ಮೆಚ್ಚಿನ ಹವ್ಯಾಸ..ನಾನು ಹತ್ತನೇವರ್ಗದಲ್ಲಿ ಬರುವ ಹೊತ್ತಿಗೆ ಒಂದು ನೂರು,( ನೂರನೇಯದು- ಅ.ನ.ಕೃ ಅವರ ಗರುಡ ಮಚ್ಚೆ) ಪುಸ್ತಕಗಳನ್ನು  ಓದಿ ಮುಗಿಸಿದ್ದೆ( ನಮ್ಮ ದೂರದ ಬಂಧುಗಳದು ಹತ್ತು ಸಾವಿರಕ್ಕೂ ಮಿಕ್ಕಿದ ದೊಡ್ಡ ವಾಚನಾಲಯವಿತ್ತು...ಕೊಂಡು ಓದುವ ಯೋಗ್ಯತೆ ಇರಲಿಲ್ಲ). ಅವುಗಳಲ್ಲಿ ವಿ.ಕೃ.ಗೋಕಾಕರ ಸಮರಸವೇ ಜೀವನ,ಅ.ನ.ಕೃ ಅವರ ನಟ ಸಾರ್ವಭೌಮ ದಂಥ ಬ್ರಹತ್ ಕೃತಿಗಳಿದ್ದವು...ನಾನು ಒಬ್ಬಂಟಿಗಳಾಗಿ ಹೊರಗೆ ಹೋಗುವದು ನಿಲ್ಲಿಸಿದಾಗ ಓದುವ ಹವ್ಯಾಸವೇ ನನಗೆ ಜೀವ. ತುಂಬಿದ್ದು...
                    ಈಗ ಪೂರಾ ಉಲ್ಟಾ...ದಿನಪತ್ರಿಕೆ ಎರಡು ಬಾರಿ ಓದುತ್ತೇನೆ...ವಾರ.ಮಾಸಿಕ, ಪತ್ರಿಕೆಗಳ ಸೆಳೆತ ಕಡಿಮೆಯಾಗಿದೆ...ಕಾದಂಬರಿ,ಕಥೆ ಪುಸ್ತಕಗಳೂ ತಮ್ಮದೇ ವೇಗ ಬೇಡುತ್ತವೆ...ಓದಿದರೂ ಬುದ್ಧಿ ಕೆಲವೊಮ್ಮೆ ಓದಿದ್ದನ್ನು ಗ್ರಹಿಸುವದಿಲ್ಲ....ಕೆಲವೇ ಹೊತ್ತಿನ ನಂತರ ಓದಿದ್ದು ಮರೆತೇ ಹೋಗುತ್ತದೆ.ಗೆಳತಿಯರೊಂದಿಗಿನ ಸಾಹಿತ್ಯಿಕ ಚರ್ಚೆ ನಿಂತಿದೆ...ಈಗ ಸ್ವತಃ ಅಣ್ಣನದೇ ದೊಡ್ಡ ಲೈಬ್ರರಿಯಿದ್ದರೂ, ನಾವೆಲ್ಲ ಸೇರಿದಾಗ ಸಾಹಿತ್ಯ ಸಂಬಂಧಿತ ಹರಟೆಗಳೇ ಹೆಚ್ಚಾಗಿದ್ದರೂ, ಅಣ್ಣ ತಮ್ಮಂದಿರು ಪೇಟೆಗೆ ಬಂದ ಉತ್ತಮ ಪುಸ್ತಕಗಳನ್ನು ಕೊಂಡು ಓದಿದ ತಕ್ಷಣ ನಮಗೆ ತಿಳಿಸಿ ಓದಲೇಬೇಕೆಂದು ಹೇಳಿದಾಗಲೂ ಉತ್ಸಾಹದ ಗಾಡಿ ಓಡಲು ಎಣ್ಣೆ ಬೇಡುತ್ತದೆ..ಇಲ್ಲ ಇನ್ನಿಲ್ಲದಂತೆ ಕಿರುಗುಟ್ಟುತ್ತದೆ.
ಈ ಮನಸ್ಸಿಗೆ  ಈ ವ್ಯತ್ಯಾಸ ಚನ್ನಾಗಿ ಅರ್ಥವಾಗುತ್ತದೆ...ಅದನ್ನು ಸೋಮಾರಿಯಾಗಲು ಬಿಡಲೇಬಾರದೆಂಬ ಹಠದಿಂದ ಎಲ್ಲ ಪರಿಚಿತರ ಪುಸ್ತಕ ಬಿಡುಗಡೆ ,ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ..
ಆದರೂ ಮೊದಲಿನ ವೇಗ ಪಡೆಯಲಾಗುತ್ತಿಲ್ಲ..
                 ಇವತ್ತು ಆದದ್ದೂ ಇದೇ..ನಿನ್ನೆ ಎರಡು ಪುಸ್ತಕ ತಂದಿದ್ದೇನೆ. ಓದಿದರೆ ಒಂದೇ ದಿನದಲ್ಲಿ ಮುಗಿಸಬಹುದಾದದ್ದನ್ನು  ವಿನಾಕಾರಣ ವಿಲಂಬಿಸುತ್ತಿದ್ದೇನೆ..
        ‌         ‌ಇದು ಕಾಯಂ ರೋಗವಾಗಬಾರದೆಂಬ ಆಶೆ...ಎಲ್ಲರಿಗೂ ಹೀಗೇ ಆಗುತ್ತದಾ  ಎಂಬ ಕುತೂಹಲ..ಆಗಿಬಿಟ್ಟರೆ ಎಂಬ ಭಯ...'ಆಗುವದಿಲ್ಲ ಬಿಡಿ ' ಎಂಬ ಪುಟ್ಟ ಅಭಯ ಸಿಗಬಹುದೇ ಎಂಬ ನಿರೀಕ್ಷೆ..."ಕೆಲ ಕಾಲದ ನಂತರ ಸರಿಹೋಗುತ್ತೆ..ಇದೂ ಒಂದು ಅಲ್ಪಕಾಲಿಕ phase" ಎಂಬಂತಾಗಬಹುದೆಂಬ ದೂರದಾಸೆ...ಈ ಬರಹಕ್ಕೆ  ಮೂಲ ಕಾರಣಗಳು ಮೇಲೆ ಹೇಳಿದವುಗಳೇ ಆಗಿವೆ.
              ಇಲ್ಲಿಗೀ ಕಥೆ ಮುಗಿಯಿತು... boring ಅನಿಸಿದರೊಂದು ಕ್ಷಮೆ ಇರಲಿ...

Wednesday, 23 January 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ...
ಅಬ್ಬಾ!! ಆ ಗಳಿಗೆಗಳು!!!
* ದಿನಾ ಸಮಯದ ಕೈಯಲ್ಲಿ ನಾವು..ಇಂದು ನಮ್ಮ ಕೈಯಲ್ಲಿ ಸಮಯ ಎಂದುಕೊಂಡು ಒಂದು ರವಿವಾರ ತಲೆಗೆ ಎಣ್ಣೆ ಬಡಿದುಕೊಂಡು ಬಟ್ಟೆ ಕಟ್ಟಿ ನೀವೇ ನೀವಾಗಿ ಧೂಳು ಹೊಡೆಯುತ್ತಿರುವಾಗ ಅಪರೂಪದ ಅತಿಥಿ ಸೀದಾ ಮನೆಯಲ್ಲಿ ಹಾಜರು...
* ಯಾವುದೋ ಕಾರ್ಯಕ್ರಮಕ್ಕೆಬಹಳಷ್ಟು plan ಮಾಡಿ ತಿಂಗಳು ಮೊದಲು ತಿಕೀಟುಕಾಯ್ದಿರಿಸಿ ಆ ದಿನಕ್ಕೆ ಕಾದಾಗ  ,ಧಿಡೀರನೇ ಅಡಚಣಿ ಬಂದು  ಹೋಗುವದನ್ನೇ cancel  ಮಾಡುವ ಪ್ರಸಂಗ...
* ತಿಂಗಳುಗಟ್ಟಲೇ ಮಗನೊಡನೆ ಗುದ್ದಾಡಿ ಎಲ್ಲ ಪರೀಕ್ಷೆ ಮುಗಿಸಿ ಒಂದೇ ಉಳಿದು ಮರುದಿನಕ್ಕೆ ಮಹಾಯಜ್ಞ ಮುಗಿಸುವ ಕಾತರದಲ್ಲಿದ್ದಾಗ ಯಾವುದೋ ಕಾರಣಕ್ಕೆ ಪೇಪರ್ ಮುಂದೂಡಿಕೆ...
* ಮನೆಯವರು ಊರಲ್ಲಿಲ್ಲ..ಏನೋ ಒಂದು ಬೇಯಿಸಿ ತಿಂದ ಶಾಸ್ತ್ರ ಮಾಡುವ plan ನಲ್ಲಿದ್ದಾಗ ಧಿಡೀರನೇ ಆಕಸ್ಮಿಕವಾಗಿ ಆಪ್ತೇಷ್ಟರ ಆಗಮನದ ಆಘಾತ???
* ಮನೆಯಲ್ಲಿ ಒಬ್ಬರೇ..ನಿಧಾನ ವಾಗಿ ತಲೆಸ್ನಾನದ ಆನಂದದ ಕನಸಿನಲ್ಲಿ ಸ್ನಾನದ ಮನೆಹೊಕ್ಕು ಮೊದಲ ತಂಬಿಗೆ ನೀರು ತಲೆಮೇಲೆ  ಬೀಳುತ್ತಲೇ calling bell ಶಬ್ದ...??
* ಸಿಲಿಂಡರಿಗೆ ಹೆಸರು ಹಚ್ಚಿ, ಚಿಲ್ಲರೆ ರೆಡಿ ಮಾಡಿಟ್ಟುಕೊಂಡು ಮೂರುದಿನ ಕಾದಿದ್ದೀರಿ..ಹತ್ತು ನಿಮಿಷ ಪಕ್ಕದ ಮನೆಗೆ ಹೋದಾಗ ಸಿಲಿಂಡರ್ boy ಬಂದು ಬಾಗಿಲು ತಟ್ಟಿ door closed ಅಂತಾ ಚೀಟಿ ಅಂಟಿಸಿ ಹೋಗುತ್ತಾನೆ...
* ಹಾಲು ಉಕ್ಕೀತೆಂದು gas stove ಬಳಿಯೇ ನಿಂತು,ಹುಟ್ಟಿದಾಗಿನಿಂದ ಹಾಲು ಕಾಸುತ್ತಲೇ ನಿಂತಿದ್ದೇನೆ ಎಂಬಷ್ಟು ಬೇಸತ್ತು ಹೋದಾಗ ಏನೋ ಸಪ್ಪಳಕ್ಕೆ ಒಂದು ಕ್ಷಣ ತಿರುಗುತ್ತೀರಿ...ಇತ್ತ ಒಲೆಗೆ ಕ್ಷೀರಾಭಿಷೇಕ..
* ಬಹಳ ದಿನಗಳ ಮೇಲೆ ಮನೆಯವರಿಗೆ surprise ಕೊಡಲು ವಿಶೇಷ ಅಡಿಗೆ ಮಾಡಿಕೊಂಡು ಅವರ ಬರುವನ್ನೇ ಕಾದಿದ್ದು, ನಂತರ ಸಿಗಬಹುದಾದ ಮೆಚ್ಚಗೆಗೆ ಮೊದಲೇ ಬೆಚ್ಚಗಾಗಿರುತ್ತೀರಿ...ಗಂಡ ಬಂದು ಆಫೀಸಿನಲ್ಲಿಯ  ಗೆಳೆಯನ ಅದ್ಧೂರಿ ಪಾರ್ಟಿ ಹೊಗಳಿ, ಒಂದು ತುತ್ತು ಬಾಯ್ಗಿಡಲೂ ಸಾದ್ಯವಿಲ್ಲ ಎಂದು ಗೋಗರೆಯುತ್ತಾನೆ...
* ಒಮ್ಮೆ ಲಿಸ್ಟ ಮಾಡಿಕೊಂಡು ತಿಂಗಳ ಸಾಮಾನೆಲ್ಲ ತಂದರಾಯಿತೆಂದು ಹಾಗ್ಹೀಗೆ ನಡೆಸುತ್ತಿರುವಾಗ. ಪಕ್ಕದ ಮನೆಯ ಆಂಟಿ, ಎಂದೂ ಏನೂ ಕೇಳದವರು ಇಲ್ಲದ ಸಾಮಾನನ್ನೇ  ಕೇಳಿ ಇಲ್ಲವೆಂದು ಹೇಳಲು ಮುಜುಗರ ಪಡುವಂತೆ  ಆದದ್ದುಂಟೇ??
*ಒಂದು function ಗೆ ಹೋಗುವ ಮೊದಲು ಎಲ್ಲ ಕೆಲಸಗಳನ್ನು ಮುಗಿಸಿ ತಯಾರಾಗುತ್ತೇವೆ..ಚಂದದಲ್ಲಿ ಸೀರೆ ಯುಟ್ಟು ಸೆರಗು pin ಮಾಡುವಾಗ  ಸರಿಯಾಗಿ ಎದುರು ಭಾಗದಲ್ಲೇ ಹಿಂದೆಂದೋ ಏನೋ ಚಲ್ಲಿ clean ಮಾಡಿದ್ದರೂ ಸರಿಯಾಗಿ ಹೋಗದ ಕಲೆ ಢಾಳಾಗಿ ಅಣಕಿಸುತ್ತದೆ....
       ‌‌‌‌    ( ಇಂಥ ಅನುಭವಗಳು ಲೆಕ್ಕಕ್ಕೆ ಸಿಗದಷ್ಟು...ನಿಮಗೂ ಹಾಗೇನಾ??? ನನ್ನ ಸಮಾಧಾನಕ್ಕಾದರೂ  ಹೌದೆನ್ನಿ....)

Monday, 14 January 2019

ಹಾಗೇ ಸುಮ್ಮನೇ...

ಸಂಕ್ರಾಂತಿ..

* " ಎಳ್ಳು- ಬೆಲ್ಲ ತೊಗೊಂಡು ಒಳ್ಳೆ ಮಾತಾಡೋಣ"...

* ತಿಳಗುಳ ಘ್ಯಾ...ಗೊಡ ಗೊಡ ಬೋಲಾ"...

* Take  sweet...and Be sweet..

                 ಭಾಷೆ ಬೇರೆ...ಭಾವನೆಗಳು ಒಂದೇ...ಧ್ವನಿಗಳು ಬೇರೆ..ಧ್ವನ್ಯಾರ್ರ್ಥ ಒಂದೇ..
ಬೆಳಿಗ್ಗೆ ಹತ್ತೂವರೆಗೆ ಶುರುವಾದ ಸಂಭ್ರಮ, ಹೆಡ್ ಮಾಸ್ತರರ ಭಯಂಕರ  ಗುಡುಗಿನೊಂದಿಗೆ ಸಮಾಪ್ತವಾಗಬೇಕು...ಈ ಹುಡುಗರ ಉತ್ಸಾಹ ಭಂಗವಾಗಬಾರದೆಂಬ ಕಾರಣಕ್ಕೇನೆ ಆ ದಿನ ಶಾಲೆ ಒಂದೂವರೆ ಎರಡು ಗಂಟೆ,ಅಂದರೆ ಎರಡು ಅವಧಿ ತಡವಾಗಿ ಇಟ್ಟರೂ ಅವುಗಳ ಉತ್ಸಾಹದ ಮುಂದೆ ಅದು ಲೆಕ್ಕಕ್ಕಿಲ್ಲ. ಕಡಿಮೆಯೇ ಎನ್ನಬೇಕು. ಅಧಿಕೃತವಾಗಿ ಸಿಕ್ಕ ವೇಳೆ ದಾಟಿ  ಗೈರು ಪೀರಿಯಡ್,drawing/ craft ಅನ್ನುವ ನೆವಗಳನ್ನು ಮುಂದೆಮಾಡಿ ಸದ್ದಿಲ್ಲದೇ ಹೆಚ್ಚಿನ ವೇಳೆ ಕಬಳಿಸುವದು ಮಾಮೂಲು..ಆ ದಿನ uniform ಸೂಟಿ. ಬಣ್ಣಬಣ್ಣದ ಬಟ್ಟೆ ತೊಟ್ಟು,ಕೈ ತುಂಬ ಬಳೆ ಇಟ್ಟು,ಮಯೂರ ಲಾಸ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತ ತಾವಿರುವದು ಶಾಲೆ ಎಂಬುದನ್ನು ಮರೆತು ಗುಂಪು ಗುಂಪಾಗಿ  ಮೆರೆಯುತ್ತಿದ್ದ ಚಂದದ  ಹುಡುಗಿಯರನ್ನು ಹಿಮ್ಮೆಟ್ಟಿಸುವದು ಅಸಾಧ್ಯದ ಕೆಲಸ ಎಂಬುದು ಎಲ್ಲರಿಗೂ ಗೊತ್ತು...ಅದರ ವಿರುದ್ಧ ಧ್ವನಿಯತ್ತುತ್ತಿದ್ದ  ಗಂಡು ಧ್ವನಿಗಳಲ್ಲಿಯೂ ಬಲವೇ ಇರುತ್ತಿರಲಿಲ್ಲ ಎಂಬುದು open secret..." ಸಾಕು..ಮುಗಸ್ರಿ ಇನ್ನ..ಹೋಗದಿದ್ರ punishment ಕೊಡಬೇಕಾಗ್ತದಾ  ಮತ್ತ..." ದಂಥ ಬೆದರಿಕೆಗಳಲ್ಲಿ, "ನೀ ಸ್ವಲ್ಪ ಸತ್ಹಂಗ ಮಾಡು....ನಾ ಇಷ್ಟ ಅತ್ಹಂಗ  ಮಾಡ್ತೇನಿ" ಅನ್ನೋ  ಸುಳ್ಳಾಟsssನ ಕಾಣ್ತಿತ್ತು...
              ಎಳ್ಳು ಕೊಡೋ ಬಗೀನೂ ನಾನಾ ಥರ...class teacher,favorite teacher ಇದ್ರ ಅವರಿಗೆ ಎಳ್ಳು ತುಂಬಿದ ದೊಡ್ಡ - ದೊಡ್ಡ ಪಾಕೀಟು,ಪುಟ್ಟ ಪುಟ್ಟ plastic ಡಬ್ಬಿ ಒಳಗ ಎಳ್ಳು ಕೊಡೋದುಮೇಲೆ ಚಂದದ ಸಕ್ಕರೆ ಅಚ್ಚುಗಳೊಂದಿಗೆ...ಉಳಿದವರಿಗೆ ಅವರ subject,ಉ ಕಲಿಸೋ ರೀತಿ, ಅವರೊಡನೆಯ ಆತ್ಮೀಯತೆಯ ಅಂದಾಜಿನ ಮೇಲೆ ಕೈಯಾಗ ಎಳ್ಳು ತೊಗೊಳೋದು..ಕೆಲವು ಹುಡುಗರಂತೂ ಬಾರಿಹಣ್ಣು ಮಾರೋ ಮುದುಕೀರ್ಹಂಗ ಆರು ಕೈಯಾಗ ಹಿಡಿದು, ಅಡ್ಡ ಗೋಣು ಅಲಗಾಡ್ಸಿ ಎರಡು ಪರತ ಹಾಕಿ,ಮತ್ತೊಮ್ಮೆ ಕೈ ನೋಡಿಕೊಂಡು ಇನ್ನೊಂದು ಎತಿಗೊಂಡು ಕೊಡ್ಲೋ ಬ್ಯಾಡೋ ಅಂತ ತಮ್ಮ 'ಆಸ್ತಿ will ' ಬರದಕೊಟ್ಹಾಂಗ ಕೊಡೋರು...ಕೆಲವು ಚಾಣಾಕ್ಷ ಹುಡುಗರು ಒಂದು ಗುಂಪು teacher ಮುಂದ ನಿಂತಿತ್ತಂದ್ರ ತಾವು ಕೊಡದsss ಗದ್ದಲದಾಗ
ಎಲ್ಲರ ಜೊತೆಗೆ ಕೈಯೊಡ್ಡಿ ನಮ್ಮಿಂದssನ ವಸೂಲಿ ಮಾಡಿ ಯುದ್ಧ ಗೆದ್ಹಂಗ ಕ್ಯಾಕಿ  ಹಾಕೋರು...ಹುಡುಗಿಯರ ಜೊತೆ ಬೆರೆಯಲಿಕ್ಕೆ ಅವಕಾಶ ಸಿಗುವ ಏಕೈಕ ದಿನ ಅದು..ಅವತ್ತೊಂದು ದಿವಸ " ಬಾರಾಖೂನ್ ಮಾಫ್" ಅವರಿಗೆ...ತಮ್ಮ ಎಂದಿನ ಬದ್ಮಾಶ್ತನಕ್ಕ,ಸಭ್ಯತೆಯ ತೆರೆ ಎಳೆದು only gentleman of d world ಅನ್ನೋಹಂಗ pose ಕೊಟ್ಟು ಎಳ್ಳುಕೊಡೋ ದೃಶ್ಯ ಯಾವ ಸಿನೆಮಾದಾಗೂ ಸೆರೆ ಹಿಡಿಲಿಕ್ಕೆ ಆಗಿಲ್ಲ...ಅನಸ್ತದ ಇದುವರೆಗೂ...
                ‌   ಬೇರೆ ಬೇರೆ  teacher ಗೆ ಕೊಡುವಾಗಲೂ ಯಾವ ಸಿನೆಮಾಕ್ಕೂ ಕಡಿಮೆಯಿಲ್ಲದ ಸೀನುಗಳು..ಅತಿ ಮೆಚ್ಚಿನ teacher ಗೆ ಒತ್ತಾಯದಿಂದ ಬಾಯಾಗನ ಹಾಕಲಿಕ್ಕೆ ಹಟಮಾಡುವದು,strict teacher ಇದ್ರ ಹತ್ತು ಹುಡುಗರ ಜೊತೆ ಸದ್ದಿಲ್ಲದೇ  ಗುಂಪಿ ನಲ್ಲಿ ನುಸುಳಿ ಹೋಗಿ ಕೈಯಿಷ್ಟ ಮುಂದ ಮಾಡಿ ಕೊಟ್ಟ ಶಾಸ್ತ್ರ ಮಾಡೋದು, ತಮ್ಮನ್ನ  ತುಂಟರ ಗುಂಪಿನೊಳಗ ಗುರುತಿಕೊಂಡವರು ಅಂದು ಅತೀ ವಿಧೇಯರಾಗಿ ಶಿಕ್ಷಕರ ಕಾಲಿಗೆರಗಿ,ಕೈಕಟ್ಟಿನಿಂತುಕೊಂಡು,ಅವರಿಗೇ ತಾವೇ ತಪ್ಪು ಮಾಡಿದೆವೇನೋ ಎಂ ಬ ಭಾವ ಬರುವಂತೆ ಗೋಲ್ ಮಾಲ್ ಸಿನೆಮಾದ ,' ಲಕ್ಷ್ಮಣ ಪ್ರಸಾದ' ',ರಾಮಪ್ರಸಾದ' ನಾಗಿ ಎಲ್ಲರನ್ನೂ fool ಮಾಡಿ, ಅವರೆಲ್ಲ ಹೋದಮ್ಯಾಲ ಜೋರು ಧ್ವನಿಯಲ್ಲಿ ಕೇಕೇ ಹಾಕಿ ಸಂಭ್ರಮಿಸುವದೂ ಇತ್ತು...
                   ಚಂಡ ಮದ್ದಳೆಯಲ್ಲಿ ಕೊಳಲಿನ ಧ್ವನಿ ಎಲ್ಲಿ ಕೇಳಬೇಕು? ನಿಜವಾಗಿ  ಸಜ್ಜನ ವಿದ್ಯಾರ್ಥಿಗಳು ಇವರೆಲ್ಲರ ಅಬ್ಬರ ಮುಗಿಯುವದಕ್ಕಾಗಿ ಕಾದು ಕಾದು ಸದ್ದಿಲ್ಲದೇ class ಗಳನ್ನು ಸೇರಿ, ಶಾಲೆ ಮುಗಿದು ಮನೆಗೆ ಹೋಗುವಾಗ ಮೆತ್ತಗೇ ಬಂದು,wish ,ಮಾಡಿ ಮರೆಯಾಗುತ್ತಿದ್ದರು...
     ‌‌           ‌‌‌ಇಡೀ ದಿನ ಮುಗಿಸಿ ಮನೆಗೆ ಹೋಗುವ ಹೊತ್ತಿಗೆ ಮೈ,ಕೈ ಜಿಡ್ಡೋ ಜಿಡ್ಡು..
ಬೆಲ್ಲ,ಸಕ್ಕರೆಯ ಜಿಗಿ...ಆದರೆ ಮನಸ್ಸು ಮಾತ್ರ ಮುಂದಿನ ಒಂದು ವಾರದ ವರೆಗೆ fresh...fresh...ಮಕ್ಕಳನ್ನು ನೋಡಿಯೋ...ನಮ್ಮ ಬಾಲ್ಯ ನೆನೆದೋ..ಅದು ಹಬ್ಬ ಹುಣ್ಣಿವೆಗಳಲ್ಲಿಯ ಪವಾಡವೋ..ಇಂದಿಗೂ ಗೊಂದಲ...
    ‌    ‌‌‌   ‌     ಮುಂದಿನ ತಿಂಗಳಿಗೆ ನಾನು ನಿವೃತ್ತಳಾಗಿ ಪೂರಾ ಹದಿನೈದು ವರ್ಷ.೨೦೦೪ ರಲ್ಲಿ ..ಐವತ್ತೆಂಟಕ್ಕೆ...ಇಂದು ಬೆಂಗಳೂರು ಮಹಾನಗರದ concrete jungle ನಲ್ಲಿ ಅದರಲ್ಲೂ software hub ಎನಿಸಿರುವ ಎಲೆಕ್ರಾನಿಕ್ city ಯಲ್ಲಿ..ಎಡಕ್ಕೆ ತಮಿಳರು,ಎದುರಿಗೆ ಮುಸ್ಲಿಮ್ family ಬಲಕ್ಕೆ ಮಲೆಯಾಳಿ... ಹಿಂದೆ ಗುಜರಾತಿ ..ಭಾಷೆ,ಆಚರಣೆ,ಜೀವನ ಶೈಲಿ, ಎದರಲ್ಲಿಯೂ ಸಾಮ್ಯವಿಲ್ಲ..ಎಲ್ಲರೂ ತಮ್ಮ ತಮ್ಮ ಹಬ್ಬಾ ಆಚರಿಸುತ್ತಾರೆ.ಆದರೆ ಏಕ ಕಾಲದಲ್ಲಿ ಅಲ್ಲ..ಎಲ್ಲ ಭಣ ಭಣ...ರಜೆಯೂ ಬೇರೆ ಬೇರೆ..ಮನೆಯಲ್ಲಿಯೇ ಎಲ್ಲರೂ ಇರುವದಿಲ್ಲವೆಂದ ಮೇಲೆ, ಯಾರಿಗಾಗಿ
    ಹಬ್ಬ? ಎಳ್ಳು ಬೀರುವವರು ಯಾರು? ಕರಿ   ಎರೆಯುವದು ಯಾರಿಗೆ? ಉಡಿಯಲ್ಲಿ ಬೀಳುವ ಬೆಂಡು ,ಬತ್ತಾಸು, ಕಾಸಿಗೆ ಕಿತ್ತಾಡುವ ಮಕ್ಕಳೆಲ್ಲಿದ್ದಾರೆ? ಕಬ್ಬು ಸಿಗಿದು ತಿಂದು ತಿಪ್ಪೆಯಾದ ಮನೆ ಸ್ವಚ್ಛ ಮಾಡುವ ಗೋಜೆಲ್ಲಿ? ಜರದ ಪರಕಾರ,ಕುಪ್ಪುಸ ಧರಿಸಿ ಕಡಲೆಗಿಡ,ಕಬ್ಬು,ಬದನೆ, ಎಳ್ಳು ಎಲ್ಲ ಬೀರಲು( ಬೀರಿಸಲು)  ' ಪುಟ್ಟಗೌರಿ' ಯರು ಎಲ್ಲಿ ?? ಎಳ್ಳುಹಬ್ಬದ ಅಡಿಗೆ ಮಾಡಿ ಒಟ್ಟಿಗೆ ಉಣ್ಣುವದು ಯಾವಾಗ? ಹಿರಿಯರು ನಮಸ್ಕಾರ  ಮಾಡಲು ಎಲ್ಲಿ ಸಿಗುತ್ತಾರೆ?
ಏನೆಲ್ಲ ಪ್ರಶ್ನೆಗಳು?   ಆದರೆ ಉತ್ತರ?..
            ಮತ್ತೊಬ್ಬ ಬೇತಾಳ ನನ್ನು  ಹೆಗಲೇರಿಸಿಕೊಂಡ  ವಿಕ್ರಮನೇ ಹುಟ್ಟಿ ಬರಬೇಕು..

ಹಾಗೇ  ಸುಮ್ಮನೇ...

ಆರು ಹಿತವರು ನಿನಗೆ ಈ " ಮೂವರೊಳಗೆ"

          ‌‌        ‌‌  ಮನುಷ್ಯ ಸಂಘ ಜೀವಿ..ನಡಿಗೆ,ಮಾತು ಬರುತ್ತಿದ್ದಂತೆಯೇ ಗುಂಪಿನೊಳಗಿರಲು ಬಯಸುತ್ತಾನೆ...ಸ್ನೇಹಿತರ ಗುಂಪು ಬೆಳೆಯುತ್ತ ಹೋಗುತ್ತದೆ..ಮೊದಮೊದಲು 'ಸಮಾನ ವಯಸ್ಕರು' ಗೆಳೆಯರೆನಿಸಿಕೊಳ್ಳುತ್ತಾರೆ.ಕ್ರಮೇಣ 'ಸಮಾನ ಮನಸ್ಕರ' ಗುಂಪು ಆಪ್ತವೆನಿಸುತ್ತದೆ.ಎಲ್ಲರಲ್ಲಿಯೂ ಸ್ವಲ್ಪು ಮಟ್ಟಿನ  ego ಇದ್ದೇಯಿರುತ್ತದೆ.ಅದಕ್ಕೆ ಪುಷ್ಟಿಕೊಡುವ,ಪ್ರಶಂಸಿಸುವ,ಪ್ರಾಶಸ್ತ್ಯ ಸಿಗುವ ಕಡೆಗೆ ಮನುಷ್ಯ ಸೆಳೆಯಲ್ಪಡುತ್ತಾನೆ.ಹೀಗಾಗಿ ಆ ಹಂತದವರ ಸ್ನೇಹವನ್ನು ಸರಿಯಾಗಿ ಅಳೆಯಲಾಗುವದಿಲ್ಲ..ಅದು ಪ್ರೇಮಕ್ಕೂ ಮೊದಲಿನ infatuation ಇದ್ದಹಾಗೆ..ಮನಸ್ಸಿಗೆ ಹಿತವೆನಿಸುತ್ತದೆ..boosting ಅನಿಸುತ್ತದೆ..ಕೊಂಚಮಟ್ಟಿಗೆ ಅದೂ ಬೇಕು..ಆದರೆ ಆ ಹಂತದಲ್ಲಿ ನಿಮ್ಮನ್ನು ಹೊಗಳಿ,ತಮ್ಮ ಕಾರ್ಯಸಾಧಿಸಿಕೊಂಡು ನಂತರ ನಿಮ್ಮನ್ನು ಅಲಕ್ಷಿಸುವವರ ಸ್ವಾರ್ಥಿಗಳ ಸಂಖ್ಯೆ ಜಾಸ್ತಿ..ಇದು ಮೊದಲ ವರ್ಗ...
   ‌‌‌‌‌‌‌‌‌‌      ‌‌‌‌‌‌   ‌‌ ‌ಎರಡನೇ ವರ್ಗದವರು," ನೀ ನನಗಾದರೆ ನಾ ನಿನಗೆ "- ಎಂಬ ವ್ಯಾಪಾರೀ ಬುದ್ಧಿಯವರು..ಅಳೆದು ತೂಗಿ ಸ್ನೇಹ ಸಂಪಾದಿಸಿ  ನೀವೆಷ್ಟು ಅವರಿಗೆ ಪ್ರಯೋಜನಕಾರಿ ಎಂಬುದರ ಮೇಲೆ ಗೆಳೆತನದ expiry date fix ಮಾಡುವವರು..ಅವರಿಗೆ ನಿಮ್ಮಿಂದ ," returns" ಇಲ್ಲವೆಂದು  ಎಂದು ಗೊತ್ತಾಯ್ತೋ  ಅಂದೇ ಅಲ್ಲಿಗೆ ಸಂಪರ್ಕ ಕಡಿತ..Business ಬಂದ್ ..ಎಲ್ಲಿಯಾದರೂ ಭೇಟಿಯಾದರೂ ಸಹ  ನಿಮಗೆ ಒಂದು ಮುಗುಳ್ನಗೆಯೂ ದಕ್ಕಲಿಕ್ಕಿಲ್ಲ...ನಿಮ್ಮೊಡನೆ ಮಾತಾಡುವದೂ ಮರ್ಯಾದೆಗೆ ಕಡಿಮೆ ಎನಿಸುವಂತೆ ನಡೆದುಕೊಂಡಾರು...ಮತ್ತೆ ಅನಿವಾರ್ಯ ಪ್ರಸಂಗ ಬಂದಾಗ  ಏನೂ ಆಗಿಯೇಯಿಲ್ಲ ಎಂಬಂತೆ ನಿಮ್ಮೆದುರು ಹಾಜರಾದಾರು...ಒಂದು ತರಹ ಅಧಿಕಾರದಲ್ಲಿರುವವರ ಬೆಂಬಲಿಗರ ಹಾಗೆ..ಸಂಖ್ಯೆಗೆ ನೂರಾರು..ಗೆಳೆತನದ ನಿಜಾರ್ಥದಲ್ಲಿ  ಲೆಕ್ಕಕ್ಕೆ ಹಿಡಿಯುವಂತಿಲ್ಲ..
            ‌   ‌‌‌‌        ಮೂರನೇ ವರ್ಗ ಬಲು ಅಪರೂಪ,...ತುಂಬಾ ವಿರಳ...ಅವರದು ಸ್ನೇಹಕ್ಕಾಗಿ ಸ್ನೇಹ...ಅದಕ್ಕೆ ಬದ್ಧರಾಗಿರುವದು ಅವರು ಅವರಿಗೇ ಹಾಕಿಕೊಂಡ ನಿಯತ್ತು...ಪೊಳ್ಳು ತೋರಿಕೆ, ಅಸಹಜವಾಗಿ ಅನುನಯಿಸುವದು  ಅವರಿಗೆ ಗೊತ್ತಿರುವದಿಲ್ಲ..ತಮಗಾದಷ್ಟು ಮಾಡಲು ಸದಾ ಸಿದ್ಧ..ಯಾವ ಹಂತಕ್ಕೂ ಹೋಗಿ ಸಹಾಯ ಮಾಡಿಯಾರು...ಬದಲಿಗೆ ಪ್ರತ್ಯುಪಕಾರ ಬಯಸುವದು ಅವರಿಂದ ಆಗದ ಮಾತು.
ಅವರ ಮೊದಲ ಗುರಿ,ಅಂತಿಮಗುರಿ ಎರಡೂ ಒಂದೇ...ಸ್ನೇಹ..ಸ್ನೇಹ...ಸ್ನೇಹ...ಅಂಥ ಸ್ನೇಹ ನಿಭಾಯಿಸುವದೂ ಸುಲಭ ಸಾಧ್ಯವಲ್ಲ..
ಅದೊಂದು ದೊಡ್ಡ ಆಲದಮರದ ನೆರಳು...ಬೇಕೆಂದಾಗ ಅದರಡಿ ನಿಮಗೆ ನೆಮ್ಮದಿ ಗ್ಯಾರಂಟಿ..
      ‌‌  ‌     ‌‌‌‌ ‌ಇಂಥದೇ ಸ್ನೇಹ ಬೇಕು ಎನ್ನುವುದು ಸುಲಭ..ಅದನ್ನು ನಿಭಾಯಿಸುವದು ಸುಲಭವಲ್ಲ....ಪಡೆದುದಕ್ಕಿಂತ ಕೊಡುವದು ಹೆಚ್ಚಾಗಬೇಕು ಅಂತಾರೆ ತಿಳಿದವರು..ಹೆಚ್ಚು ಕೊಡದಾಗದಿದ್ದರೂ ಬರಿ ತೆಗೆದುಕೊಳ್ಳುವದನ್ನು ಮಾಡಬಾರದೆಂಬ ಅರಿವಾದರೂ ಇರಬೇಕು.
               ‌‌‌ಹಾಗಿದ್ದರೆ:-
social to all,
familiar to few..
friend (at least) to one,
enemy to none...
              ಎಂಬಂತಿರುವದು ಕ್ಷೇಮ...ಏನಂತೀರಿ?

Friday, 11 January 2019

ಹಾಗೇ ಸುಮ್ಮನೇ...

ಬಾಲಾ ಹೋಗಿ ಬಾಚಿ ಬಂತು ಡುಂಡುಂ...

        ‌ ‌‌‌       ಕನಿಷ್ಟ ಹತ್ತು ವರ್ಷಗಳಿಗೊಮ್ಮೆ ಈ ಜಗತ್ತು ಮಗ್ಗಲು ಬದಲಾಯಿಸುತ್ತದಂತೆ...ಆ ಲೆಕ್ಕಕ್ಕೆ ಎಪ್ಪತ್ಮೂರಕ್ಕೆ ಏಳು ಮಗ್ಗಲುಗಳನ್ನು ನಾನು ಕಂಡಿದ್ದೇನೆ ಅಂದಹಾಗಾಯ್ತು
ನನ್ನ ತಿಳುವಳಿಕೆ ಬಂದಾಗಿನಿಂದ ಆದ ಬದಲಾವಣೆಗಳನ್ನು ನೆನೆಸಿದರೆ ದಿಕ್ಕುತಪ್ಪಿದಂತೆ ಆಗುತ್ತದೆ. ಆಶ್ಚರ್ಯ,ಸಂತೋಷ, ವಿಷಾದಗಳ ಮಿಶ್ರ ಭಾವವೊಂದು ಅನುಭವಕ್ಕೆ ಬರುತ್ತದೆ...ಬದುಕೊಂದು ಪ್ರವಾಹ..ಅದರ ಹರಹನ್ನು ,ದಿಕ್ಕನ್ನು, ಬದಲಿಸಲಾಗುವದಿಲ್ಲ...ಒಪ್ಪಿಕೊಳ್ಳುವದೊಂದೇ ದಾರಿ...
     ‌  ‌‌‌        ನಾನು ಹುಟ್ಟಿದ್ದು ಅತಿ ಸಣ್ಣ ಹಳ್ಳಿ. ಸಾರಿಗೆ ವ್ಯವಸ್ಥೆ ಕಡಿಮೆ. ಹೆಚ್ಚು ಹೊರಸಂಪರ್ಕವಿರದ ಕಾರಣ ನಡೆದುಹೋಗಬಹುದಾದ ಊರುಗಳದೇ  ಒಂದು ಪುಟ್ಟ ದ್ವೀಪಗಳ ನಡುಗಡ್ಡೆ ಇದ್ದಹಾಗೆ....ಎಲ್ಲರೂ ಏನಿದೆಯೋ ಅದರಲ್ಲೇ ತೃಪ್ತರು..ಹೆಚ್ಚಿನ ಕನಸುಗಳಿಲ್ಲದ ಪುಟ್ಟ ದೃಷ್ಟಿಕೋನ..ಕ್ರಮೇಣ ಡಾರ್ವಿನ್ ನ ' ವಿಕಾಸವಾದ'  ಎಲ್ಲ ಕಡೆಯಾಗತೊಡಗಿದಂತೆ  ನಮ್ಮಲ್ಲಿಯೂ ಶುರುವಾಗಿದ್ದು ಇದೀಗ ಯಾವ ಹಂತ ಮುಟ್ಟಿದೆಯೆಂದರೆ ಒಬ್ಬಳೇ ಕುಳಿತಾಗ ನೆನೆದರೆ ಅದರಲ್ಲಿ  ಮುಳುಗಿಯೇ ಹೋಗಿರುತ್ತೇನೆ..ಮೂಲ ಸ್ಥಾನ   ಅಡುಗೆ ಮನೆಯಿಂದ  ಶುರುವಾದ ಕ್ರಾಂತಿಯ ಬಗ್ಗೆ  ಒಂದೇ ಹೇಳಬೇಕೆಂದರೆ ಅದೇ ಒಂದು ಸಂಪುಟವಾಗುವಷ್ಟು...

    ‌     ‌‌‌      ‌ಅಡಿಗೆಕೆಲಸಕ್ಕೆ  ಆಗ ಬಳಸುತ್ತಿದ್ದುದು  ತೊಗರಿಕಟ್ಟಿಗೆ, ಜೋಳದ ದಂಟು,ಹತ್ತಿಕಟ್ಟಿಗೆ ಮುಂತಾದ, ಸುಲಭಕ್ಕೆ ದೊರೆಯುತ್ತಿದ್ದ ಉರುವಲು...ನಂತರ ಕಾಡುಕಟ್ಟಿಗೆಯಂಥ ಕಚ್ಚಾ ಉರುವಲು...ಆಮೇಲೆ ಇದ್ದಿಲು ಒಲೆ,ಹೊಟ್ಟು ತುಂಬುವ ಒಲೆಗಳ ಸರದಿ. ಒಲೆಯ ಮಧ್ಯದಲ್ಲಿ ಒಂದು ಕೊಳವೆಯಿಟ್ಟು ಒತ್ತಿ ಒತ್ತಿ ಹೊಟ್ಟು ತುಂಬಿ ಒಂದು ಬೆಂಕಿಯ ಕಿಡಿ ಹಾಕಿದರೆ ಆಯಿತು..ಕ್ರಮೇಣ ಒಳಗೊಳಗೆ ಹೊತ್ತಿಕೊಂಡು ಶಾಖ ಉತ್ಪತ್ತಿಯಾಗುವ ರೀತಿ ಪರಿಸರ ಸ್ನೇಹಿಯೇನೂ ಆಗಿರಲಿಲ್ಲ.ಒಕ್ಕಲುತನವಿದ್ದವರ ಮನೆಯಿಂದ ದನದ ಸಗಣಿ ಸಂಗ್ರಹಿಸಿ  ಹಿತ್ತಲು ಗೋಡೆಗೆ ಚಲುವಿನ ಚಿತ್ತಾರ ಬಿಡಿಸಿ ಒಣಗಿದ ಮೇಲೆ  ಉರುವಲಾಗಿಸುತ್ತಿದ್ದ  ' ಕುಳ್ಳುಗಳ' ರೀತಿಯಂತೂ "ಅವಶ್ಯಕತೆಯು ಸಂಶೋಧನೆಯ ತಾಯಿ" ಎಂಬುದನ್ನು ದಿನಾಲೂ ನೆನೆಸುತ್ತಿತ್ತು.ಇವುಗಳಲ್ಲಿ ಇದ್ದುದರಲ್ಲಿ ಕಬ್ಬಿಣದ ಇದ್ದಿಲು ಒಲೆಗಳೇ ಎಷ್ಟೋ ವಾಸಿ...
         ‌‌‌     ಮುಂದೆ ಈ ಪದ್ಧತಿಯನ್ನು ಹಿಂದೆ ಹಾಕಿದ್ದು ಬತ್ತಿ ಸ್ಟೋಗಳು. ಸ್ಟೋ ದ ಚಿಮಣಿ ಎಣ್ಣೆಯ tank ನಲ್ಲಿ ಎಣ್ಣೆ ತುಂಬಿಸಿ ಸಾಲು ದೀಪದ ಬದಲು ವೃತ್ತಾಕಾರದ ದೀಪೋತ್ಸವ...ಹತ್ತು,ಹದಿನೈದು ಬತ್ತಿಗಳ ಸ್ಟೋಗಳು ,pump stove ಗಳು ತಕ್ಕಮಟ್ಟಿಗೆ  ಪರಿಸರವನ್ನು ಹೊಗೆ ಮುಕ್ತ ಮಾಡುತ್ತಿದ್ದರೂ ಸಮಸ್ಯೆ ಪರಿಹಾರವಾಯಿತು ಎಂಬಷ್ಟೇನೂ ಆಗಲಿಲ್ಲ..
                         ಇದಕ್ಕೆ ಪರ್ಯಾಯವಾಗಿ ಬಂದ ಎಲೆಕ್ಟ್ರಿಕ್ ಒಲೆಗಳಾಗಲೀ,ಉಕ್ಕಿನ gas stove ಗಳಾಗಲೀ
ಸಂಪ್ರದಾಯಿಕ ಜನರ ಮನವನ್ನು ಒಲಿಸದಿದ್ದರೂ ( ಮಡಿ- ಹುಡಿ) ಆಧುನಿಕತೆ ಒಪ್ಪಿಕೊಂಡ ಮನಸ್ಸುಗಳಿಗೆ  ಅಷ್ಟರಮಟ್ಟಿಗೆ ಉತ್ತಮ ಪರಿಹಾರವಾಗಿ ಕಂಡಿರಲು ಸಾಕು..
                ಇಷ್ಟು ಹೊತ್ತಿಗಾಗಲೇ ಆಧುನಿಕತೆಯ ಗಾಳಿ ಬೀಸಿ, ಬದಲಾದ ಸಾರಿಗೆಯಿಂದಾಗಿ ನಾಲ್ಕು ನಗರಗಳ ಪರಿಚಯವಾಗಿ  ಸುಲಭ  ಸುಧಾರಣೆಯ ಮಾರ್ಗಗಳು ತೆರೆದಂತೆ ಜನರೂ  ಬದಲಾಗುತ್ತ ಹೋಗಿ Solar gas,,ಗಳಂಥ ಪರಿಸರ ಸ್ನೇಹೀ  ಪದ್ಧತಿಗಳವರೆಗೆ ಬಂದು ತಲುಪಿದ್ದು ಒಂದು ವಿಕಾಸವಾದದ ಕಥೆಯೇ ಅನ್ನಬಹುದು..
                  ಐದು ತಲೆಮಾರಿಗಳಿಗೆ ಸಾಕ್ಷಿಯಾದ, ಎಲ್ಲ ಬದಲಾವಣೆಗಳಿಗೂ ಸ್ವತಃ  ಪ್ರತ್ಯಕ್ಷ ದರ್ಶಿಯಾದ ನನ್ನ ಅನುಭವಗಳೇ  ಇಷ್ಟೊಂದು ಇರುವಾಗ , ಆಹಾರ ಬೇಯಿಸದೇ ,ಕಚ್ಚಾ ತಿನ್ನುತ್ತಿದ್ದ, ಕಲ್ಲಿಗೆ ಕಲ್ಲು ತಿಕ್ಕಿ ಬೆಂಕಿ ಉತ್ಪಾದಿಸುತ್ತಿದ್ದ  ದಿನಗಳ ಕಥೆ ಎಷ್ಟು ರೋಮಾಂಚನಕಾರಿಯಾಗಿ ಇದ್ದಿರಬಹುದು???

" ಭೂತ"ವನ್ನು 'ಬದುಕು'ವದೂ  ಒಂದು ರೋಮಾಂಚಕಾರೀ ಅನುಭವವೇ ಅಲ್ಲವೇ??!!

Thursday, 10 January 2019

ಹಾಗೇ ಸುಮ್ಮನೇ...

ಬಿಟ್ಟೇನೆಂದರೂ ಬಿಡದೀ ಮಾಯೆ...
      ‌
                        ಬಿಟ್ಟುಕೊಡುವದು, ಹಿಡಿದಿಟ್ಟುಕೊಳ್ಳುವದು  ಎರಡೂ ಈ ಬದುಕಿನ ಅವಿಭಾಜ್ಯ ಅಂಗಗಳು..ನಮಗೇ ಬೇಕಾಗಿಯೋ, ಬೇಕಾಗಿದ್ದರೂ ಕೂಡ ಅನಿವಾರ್ಯವಾಗಿಯೋ  ಏನೇನನ್ನೋ ಬದುಕಿನಲ್ಲಿ ಬಿಡುತ್ತ ಹೋಗುತ್ತೇವೆ. ನಮ್ಮಮ್ಮ,ಅಪ್ಪನಿಗೆ ಎರಡೆರಡು ವರ್ಷಗಳ ಅಂತರದಲ್ಲಿ  ಎಂಟ್ಹತ್ತು ಜನ ಮಕ್ಕಳು..ಎರಡು ವರ್ಷಗಳಾಗುತ್ತಲೇ ಕ್ರಮೇಣ ಬಗಲಿನಿಂದ ತೊಡೆಗೆ,ತೊಡೆಯಿಂದ ಅಂಗಳಕ್ಕೆ  ಸರಿದು ಬರುವದು ಒಂದು ನಿಯಮವಾಗಿತ್ತು...ನಂತರ ಆ ಅಂಗಳ ಬಿಟ್ಟು ಶಾಲೆಯಂಗಳಕ್ಕೆ ಬಂದದ್ದು,ಹೈಸ್ಕೂಲಿಗಾಗಿ ಪ್ರಾಥಮಿಕ ಶಾಲೆ,ಕಾಲೇಜಿಗಾಗಿ ಹೈಸ್ಕೂಲು ಬಿಡುವದು, ಬಿಡಿ ಎಲ್ಲರೂ ಮಾಡಿದ್ದೇ.. PUC ಗೆ ನಮ್ಮೂರು ಬಿಟ್ಟು ಧಾರವಾಡಕ್ಕೆ ಬಂದದ್ದು ಇತಿಹಾಸ.ಇಪ್ಪತ್ನಾಲ್ಕು ವರ್ಷಗಳಿಗೆ ಅಪ್ಪನ ಮನೆ ಬಿಟ್ಟು  ಬೇರೇ ಮನೆ ಸೇರಿದ್ದು, ಐವತ್ತರ ಅಂಚಿನಲ್ಲಿ ಒಬ್ಬೊಬ್ಬರೇ ಮಕ್ಕಳು ನನ್ನನ್ನು ಬಿಟ್ಟು ತಮ್ಮ ತಮ್ಮ ಗೂಡು 
ಕಟ್ಟಿಕೊಂಡು ಹೋದದ್ದೂ ಬದುಕಿನ ಭಾಗವಾಗಿಯೇ..

     ‌ ‌            ಐವತ್ತೆಂಟಕ್ಕೆ ನೌಕರಿಯ ಗೋಜು ಬಿಟ್ಟದ್ದು,ಮುಂದೆ ಮಧುಮೇಹವೆಂದು ಸಕ್ಕರೆ, ಬಿ.ಪಿ ಯಂದು ಉಪ್ಪು ಬಿಟ್ಟದ್ದು ,ಕಾಲು ನೋವೆಂದು walking ಬಿಟ್ಟದ್ದು, vertigo ಎಂದು ತಿರುಗಾಟ ಬಿಟ್ಟದ್ದು ಸುದ್ದಿಯಾಗಲೇಯಿಲ್ಲ..ಯಾಕಂದರೆ  ಇಂಥವು ಸಾಮಾನ್ಯವಾಗಿ ನಮ್ಮೊಬ್ಬರದೇ ಸಮಸ್ಯೆಯಾಗಿರದೇ ನಮ್ಮಂಥ ಬಹುತೇಕರ ಸಮಸ್ಯೆಯಾಗಿರುವದು  ನಮಗೆ ಸಮಾಧಾನ ತರುವ ವಿಷಯವಾಗಿರಲೂ ಬಹುದು......
                        ಒಂದನ್ನು ಬಿಟ್ಟಾಗ ಅರಿವಿಲ್ಲದೇ ಇನ್ನೊಂದನ್ನು ಗಂಟು ಹಾಕಿಕೊಂಡಿರುತ್ತೇವೆ.ಹಾಗೆಯೇ ಗಂಟುಬಿದ್ದದ್ದು ಈ FACE BOOK ಎಂಬ ಮಾಯೆ..ಎಲ್ಲದರಂತೆ ಇದನ್ನು ಸುಲಭವಾಗಿ ಬಿಡಲಾಗುತ್ತಿಲ್ಲ...ಬೇಸರಕ್ಕೆ  Time pass ಗಾಗಿ ಎಂಬ   hash tag  ಅಂಟಿಸಿಕೊಂಡು ನನ್ನನ್ನು ಒಲಿಸಿಕೊಂಡ ಈ ವಾಮನರೂಪಿ mobile ಇದೀಗ ತ್ರಿವಿಕ್ರಮಾಕಾರ ಬೆಳೆದು ,
ಬೆಳಗು,ಮದ್ಯಾನ್ಹ ,ರಾತ್ರಿ  ಎಂಬ  ಮೂರೇ ಹೊತ್ತಿನಲ್ಲಿ  ಹೆಜ್ಜೆಯಿಡಲು  ಅನುಮತಿ ಕೇಳುತ್ತಿದೆ..ಅದಕ್ಕೆ 'ಹೂ' ಎಂದ
ಬಲಿ ಚಕ್ರವರ್ತಿಯ ಗತಿಯೇ ನನ್ನದು ...ಸೀದಾ ಪಾತಾಳ..
                       ಫೋನು,ಮೆಸೇಜು,e- mail ಎಂದು ಸುರುವಾದ ಇದರ ಪ್ರೇಮ  ಎಲ್ಲಿ ಹದ ತಪ್ಪಿತೋ ಗೊತ್ತಿಲ್ಲದೇ  ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಮೇಲೇಯೇ  ನನಗೆ ಅನಾಹುತದ ಅರಿವಾದದ್ದು...ಇಷ್ಟೆಲ್ಲ ಬಿಟ್ಟು  ಬಂದ  ನನಗೆ ಇದನ್ನು ಬಿಡುವದು ಸುಲಭಸಾಧ್ಯವಾಗುತ್ತಿಲ್ಲ....ಏನಾದರೂ ಬರೆದದ್ದನ್ನು ಮೆಚ್ಚಿ ನಾಲ್ಕು ಜನ ' ಜೈ ಜೈ' ಅಂದರೋ
ಸುರು...' ಹದಿನಾರರ ಹದಿಹರೆಯದ ಹುಡುಗನಿಗೆ ಸೆರೆ ಕುಡಿಸಿ,ಚೇಳು ಕಚ್ಚಿಸಿ ಕುಣಿಯಲು ಹಚ್ಚಿದಂತೆ..' ಎದೆಯುಬ್ಬಿ ಮೋದಿಯವರ ೫೪ ಇಂಚಿನ 'ಛಾತಿ' ಯನ್ನೂ ಮೀರಿದಂತೆಯೇ...ಗಳಿಗೆಗೊಮ್ಮೆ likes,comments, ನೋಡುವದು,ಬಂದಿದ್ದರೆ ಅತ್ಯಂತ ಪ್ರೀತಿಯಿಂದ   ಧನ್ಯತೆಯಿಂದ ಅವರೆಲ್ಲರಿಗೆ ಉಪಕೃತಳಾಗುವದು, ಒಂದು ವೇಳೆ ಸಂಖ್ಯೆ ಕಡಿಮೆಯಾದರೆ ಖಿನ್ನತೆಗೆ ಜಾರಿ ದೀಪಿಕಾ ಪಡುಕೋಣೆಯಂತಾಡುವದು,ಊಟ,ನಿದ್ರೆಗಳಿಲ್ಲದ ಚಡಪಡಿಕೆ ಏನು ಹೇಳಲಿ ಅದರ  ಬಗ್ಗೆ...ಯಾವುದೋ ಗಳಿಗೆಯಲ್ಲಿ,ಒಂದಿಷ್ಟು ಹೆಚ್ಚು ಪ್ರತಿಕ್ರಿಯೆಗಳು ಬಂದಾಗಲೆಲ್ಲ ನನಗೆ ನಾನೇ '"ಇನ್ನು ಸಾಕು...ಬಿಟ್ಟುಬಿಡೋಣ...ಅಂಗೈಯಲ್ಲಿ ಮುದ್ದು ಮುದ್ದಾಗಿ ಮಲಗುವಂಥ, ಪುಟ್ಟದೊಂದು mobile ಖರೀದಿಸಿ  Hi...Bye..ಗೆ ಸೀಮಿತಗೊಳಿಸೋಣ " ಎಂದು...
                      ಕಷ್ಟಪಟ್ಟು ಅಷ್ಟನ್ನು ಮಾಡಬಹುದು..ಮುಂದೆ? ನನ್ನನ್ನೇನು ಮಾಡ್ತೀಯಾ ಎಂದು ಎದುರಿಗೆ ನಿಂತು ದುರುಗುಟ್ಟುವ ಸಮಯಕ್ಕೇನು ಹೇಳಲಿ...ತಮ್ಮ ತಮ್ಮ  routine ಗೇನೆ  ವೇಳೆ ಸಿಗದೆ  busy ಇರುವ  ಕಾರಣಕ್ಕೆ ಮಕ್ಕಳ,ಮೊಮ್ಮಕ್ಕಳ ಸಮಯ ಎರವಲು ಪಡೆಯಲಾರದ  ಬಡತನ...ಯಾರನ್ನಾದರೂ ಕರೆಯೋಣ ಇಲ್ಲವೇ ನಾನೇ ಹೋಗೋಣ ಅಂದರೆ ಬೆಂಗಳೂರಿನ ಸಂದಣಿಯಲ್ಲಿ ಕನಿಷ್ಟ ನಾಲ್ಕು ತಾಸು....taxi ಗೆ  minimum 600 ರೂ.ದಕ್ಷಿಣೆ..
.ಇಂಥ ದುರ್ಭರ ಆಯ್ಕೆಯಲ್ಲಿ ಮತ್ತೆ ಸಂಕಟಹಾರಕವೆಂದರೆ  FACE BOOK ಒಂದೇ..
           ‌‌ಹೀಗಾಗಿ ಸಧ್ಯಕ್ಕೆ ' ಬಿಟ್ಟೇನೆಂದರೂ ಬಿಡದೀ  ಮಾಯೆ...'ಎಂಬಂತಾಗಿದೆ ನನ್ನ ಹಣೆ ಬರಹ...

Wednesday, 9 January 2019

ಹಾಗೇ ಸುಮ್ಮನೇ....

ನಾನೇಕೆ ಅನುವಾದಿಸುತ್ತೇನೆ....???

         ‌‌‌   ‌  ನನ್ನ ಲೇಖನಗಳನ್ನು ಓದಿದವರಿಗೆ ಒಂದು ಮಾತು ಸ್ಪಷ್ಟವಾಗಿ ಗೊತ್ತಿದೆ.: ನನ್ನ ಸ್ವಂತ ಲೇಖನಗಳಷ್ಟೇ
, ಕೆಲವೊಮ್ಮೆ ಅದನ್ನೂ ಮೀರಿ ಅನುವಾದಿತ ಲೇಖನಗಳಿವೆ..ಅದಕ್ಕೆ ಕಾರಣವನ್ನೂ ಆಗಾಗ ಹೇಳುತ್ತಲೇ ಬಂದಿದ್ದೇನೆ..
    ‌‌‌‌‌‌‌‌‌‌    ‌‌‌‌        ‌‌‌‌‌‌‌‌‌‌   ಪದವಿಗೆ, ನಂತರದ BEdಗೆ, ಆ ನಂತರದ  ಶಿಕ್ಷಕ ವೃತ್ತಿಗೆ ಆಯ್ದುಕೊಂಡ ವಿಷಯಗಳು ಮೂರು...English _ Major,/Hindi_ minor,/ ಆಸಕ್ತಿಯ
ಭಾಷೆ ಮಾತೃಭಾಷೆ ಕನ್ನಡ... ಮೂರರಲ್ಲೂ ಸಾಹಿತ್ಯ ಓದಿದಾಗ ಸ್ವಾಭಾವಿಕವಾಗಿ  ವಿಷಯಗಳ ಸಾಮ್ಯ,ವೈಷಮ್ಯ ಗಳ ಅರಿವಾಗ ತೊಡಗಿತು.ಉತ್ತಮವಾದುದನ್ನು ಇನ್ನೊಂದು ಭಾಷೆಯಲ್ಲಿ ಪುನರ್ಸೃಷ್ಟಿಸುವ  ಆರೋಗ್ಯಕರ ಹವ್ಯಾಸ ಬೆಳೆಯಿತು...ಕಲಿಸುವ ಭಾಷೆಗಳ ಕೊನೆಗೆ ಅಂಥ ಭಾಷಾಂತರ ಚಟುವಟಿಕೆಗಳನ್ನು ಸೇರಿಸಿದ್ದೂ ಒಂದು plus point ಆಗಿ ಮಕ್ಕಳಿಗೆ ತುಲನಾತ್ಮಕ ಅಭ್ಯಾಸಕ್ಕೆ ಸಹಾಯಕವಾಯಿತು...IN LONDON TOWN  ಕವಿತೆಯನ್ನು ' ಹೀಗೋಂದು ಊರಾಗ ' ಎಂದು ಅನುವಾದಿಸಿದ್ದನ್ನು ಆಕಾಶವಾಣಿಯವರು ಆಯ್ದ ಕಾರ್ಯಕ್ರಮಗಳಡಿ ತಮ್ಮ ವಾರ್ಷಿಕ ಕಾರ್ಯಕ್ರಮದಂದು ಶ್ರೀ ಇಂದುಹಾಸ ಜೇವೂರವರ ನಿರ್ದೇಶನದಲ್ಲಿ ರಂಗಕ್ಕೆ ತಂದುದು ಮುಖ್ಯ ಹೆಜ್ಜೆಯಾಯಿತು.ಪ್ರಥಮ ಸಲದ ನನ್ನ' ಅಮೇರಿಕಾ ಪ್ರವಾಸದ ಅನುಭವದ ಇಂಗ್ಲಿಷ  ಕವನ ' ಮಂಥನ' ದ ಕನ್ನಡ ಅನುವಾದ ' ಅಕ್ಕ'  (America Kannad KootA)  ಹೊರತಂದ ಸ್ಮರಣಸಂಚಿಕೆಯಲ್ಲಿ
ಸ್ಥಾನ ಪಡೆದುದು,' ಶಾಂತತಾ ಕೋರ್ಟ ಚಾಲೂ ಆಹೆ '
ನಾಟಕಕ್ಕೆ ಅನುವಾದಿಸಿದ ಇಂಗ್ಲಿಷ ಕವನದ ಅನುವಾದ ಶ್ರೀ ಶ್ರೀನಿವಾಸ ಜೋಶಿ ಯವರ 'ರಂಗನಾದ' ಧ್ವನಿಸುರುಳಿಗೆ ಆಯ್ಕೆಯಾದದ್ದು ಮತ್ತೆರಡು ಮೈಲುಗಲ್ಲುಗಳು.

  ‌‌‌ ‌     ‌       ‌‌‌‌       ಇದರಿಂದ ಪ್ರೇರಿತಳಾಗಿ ಹೆಚ್ಚು ಕಡಿಮೆ ನಾನು ಕಲಿತ,ಕಲಿಸಿದ ಎಲ್ಲ ಕವನಗಳನ್ನೂ ಅನುವಾದಿಸಿ ಇನ್ನೇನು print ಗೆ ( ಪೂರ್ವ- ಪಶ್ಚಿಮ) ಹಾಕಬೇಕೆಂದು ಹೋಗುವಾಗ  Railway  Station  ಬಸ್ನಲ್ಲಿ ಕಳೆದುಕೊಂಡೆ...ಪುನಃ ದೊರಕಿಸಲು ಮಾಡಿದ ಪ್ರಯತ್ನಗಳು ಫಲಿಸದ ಹಿನ್ನೆಲೆಯಲ್ಲಿ ಆದ ತೀವೃ  ನಿರಾಶೆ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಕೆಲದಿನ ಬರೆಯುವದನ್ನೇ ಬಿಟ್ಟೆ..

              ನನಗೂ ಒಮ್ಮೊಮ್ಮೆ ಅನಿಸುವದಿದೆ.  ನಾನೇಕೆ ಅನುವಾದಕ್ಕೆ  ಬೆನ್ನು ಬಿದ್ದಿದ್ದೇನೆ ,ಅದು ಎಷ್ಟರ ಮಟ್ಟಿಗೆ ಸರಿ ಎಂದು..ಆದರೆ ಇಂದು ನೋಡಿದ ಸಂದರ್ಶನವೊಂದು ನನ್ನ ಅನುಮಾನವನ್ನು ಬೇರು ಸಮೇತ ಕಿತ್ತೆಸೆದು ನನ್ನನ್ನು ನಿರಾಳವಾಗಿಸಿದ್ದು ಸುಳ್ಳಲ್ಲ...

  ‌‌‌‌          ' ಮಾಧ್ಯಮ ಅನೇಕ'ದ ಸಾಹಿತಿಗಳ ಸಂದರ್ಶನದ ನಾಲ್ಕನೇ ಕಂತಿನಲ್ಲಿ ಶ್ರೀ ,ಕೆ, ನಲ್ಲತಂಬಿಯವರ  ಸಂದರ್ಶನವೆಷ್ಟು convincing ಆಗಿತ್ತೆಂದರೆ ಅನುವಾದ ಸಾಹಿತ್ಯವೂ ಒಂದು ಬಲವಾದ ಸಾಹಿತ್ಯ ಎಂಬುದನ್ನು ವಿಶದವಾಗಿ,ವಿವರವಾಗಿ, ವಿವೇಚನಾ ದೃಷ್ಟಿಯಿಂದ ಹೇಳಿದ್ದು ಆ ಬಗೆಗಿನ ನನ್ನೆಲ್ಲ ಅನುಮಾನಗಳಿಗೂ ಪೂರ್ಣವಿರಾಮ ಸಿಕ್ಕಂತಾಯಿತು...ಅವರಿಗೆ, ಸೂಕ್ತ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಹೊರಡಿಸಿದ ಸಂದರ್ಶನಕಾರ ರಾಜಕುಮಾರ ಮಡಿವಾಳರ ಅವರಿಗೆ ನಾನು ಆಭಾರಿ...

ಸಂದರ್ಶನದ ಮುಖ್ಯಾಂಶಗಳು:

     ‌‌‌‌‌   *ಅನುವಾದವೆಂದರೆ ಬೇರೆ ಬೇರೆ ಭಾಷಿಕರಿಗೆ ಪರಸ್ಪರ ಸಾಹಿತ್ಯ ದಕ್ಕುವಂತೆ ಮಾಡುವ ಪ್ರಮಾಣಿಕ ಪ್ರಯತ್ನ...

* ಅದು ಒಂದು ಸಂಸ್ಕೃತಿಯನ್ನು ಇನ್ನೊಂದು ಸಂಸ್ಕೃತಿಗೆ ಪರಿಚಯಿಸುವ  ಪರಿ.....

* ಒಂದು ಜೀವನ ಪದ್ಧತಿಯನ್ನು ಇನ್ನೊಂದರ ಜೊತೆಗೆ ಹೆಣೆಯುವ ಕೆಲಸ..

* ಅನುವಾದವೆಂದರೆ ಶಬ್ದಗಳ ವಿನಿಮಯವಲ್ಲ...ಹಾಗಾಗಲೂ ಬಾರದು...

* ಹಟಕ್ಕೆ ಬಿದ್ದಂತೆ ಅನುವಾದ ಮಾಡುವದು ಸಲ್ಲ..ಬೇಕೆನಿಸಿದಾಗ,ಬೇಕೆನಿಸಿದಷ್ಟು,ಬೇಕೆಂದ ರೀತಿಯಲ್ಲಿ ಮಾಡುವ ಪ್ರಯತ್ನ ಸ್ತುತ್ಯ..

* ಮಾತೃಭಾಷೆ, ನಮ್ಮ ಕಾರ್ಯಕ್ಷೇತ್ರದ ಸ್ಥಾನಿಕ ಭಾಷೆ,  ಒಂದು ದೇಶಿಯ,ಇನ್ನೊಂದು ಅಂತರ್ದೇಶಿಯ ಹೀಗೆ  ಕನಿಷ್ಟ ನಾಲ್ಕು ಭಾಷೆಗಳ ಪರಿಚಯ ಅಪೇಕ್ಷಣೀಯ..

* ಎಲ್ಲ ಭಾಷೆಗಳಿಗೂ ತನ್ನದೇ ಆದ ಸೌಂದರ್ಯವಿದೆ...ನಮ್ಮದನ್ನು ಖಂಡಿತಕ್ಕೂ ಪ್ರೀತಿಸೋಣ...ಯಾವುದೇ ಭಾಷೆಯ ಬಗ್ಗೆ  ದ್ವೇಷ ಕೂಡದು...

* ಬದುಕು ಒಂದು ತೂತಿನ ಕೊಡ...ತುಂಬ್ತಾನೇ ಇರಬೇಕು..
ಯಾಕೆಂದರೆ ಅದು ಸೋರ್ತಾನೇ  ಇರುತ್ತೆ...

* ಹಾಗಂತ ನಮ್ಮತನ  ಸರ್ವಥಾ ಬಿಟ್ಟುಕೊಡಬಾರದು...ಪ್ರಸಿದ್ಧ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನರಿಗೆ ಅಮೇರಿಕಾ ಆಹ್ವಾನವಿತ್ತು ,ಸಕಲ ಅನುಕೂಲಗಳನ್ನೂ ಮಾಡಿಕೊಡುತ್ತೇವೆ..ಇಲ್ಲಿಗೆ ಬಂದುಬಿಡಿ ಎಂದು  ಆಹ್ವಾನ ಕೊಟ್ಟಾಗ ಅವರು ಹೇಳಿದರಂತೆ, " ನನ್ನ ' ಗಂಗೆಯನ್ನು' ಅಲ್ಲಿ ಹರಿಸುತ್ತೀರಾ"?!
   ‌
  ‌‌‌‌‌‌          ‌‌‌  ‌ ಇಷ್ಟು ಇಂದಿಗೆ ಸಾಕು....

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...